ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಸ್ಟನ್ ನಲ್ಲಿ ಕನ್ನಡತಿಯ ಭರತನಾಟ್ಯ ರಂಗಪ್ರವೇಶ

By ಮಧುಸೂದನ್ ಅಕ್ಕಿಹೆಬ್ಬಾಳ್
|
Google Oneindia Kannada News

ಬೇಸಿಗೆ ಬಂತೆಂದರೆ ಅಮೆರಿಕಾದಲ್ಲಿ ಯುವ ಕಲಾವಿದರು ರಂಗಪ್ರವೇಶ ಮಾಡುವ ಕಾಲ. ಪಾಶ್ಚಾತ್ಯ ದೇಶದಲ್ಲಿ ಹುಟ್ಟಿ ಬೆಳೆದು, ಭಾರತೀಯ ಕಲೆಯನ್ನು ಕಲಿತು, ಅದರಲ್ಲಿ ಪರಿಣಿತಿ ಗಳಿಸಿ ರಂಗಪ್ರವೇಶ ಮಾಡುವುದು ಚಿಕ್ಕ ಸಾಧನೆಯೇನು ಅಲ್ಲ.

ಅಮೆರಿಕಾದ ಬೋಸ್ಟನ್ ನ ಕನ್ನಡದ ಹುಡುಗಿಯಾದ ಶೃಣೋತ್ರ ಸ್ಯಾನ್ ಕಳೆದ ಸೆಪ್ಟೆಂಬರ್ ನಲ್ಲಿ ಇಲ್ಲಿನ ವೆಸ್ಟನ್ ಕಾಲೇಜ್ ನ ರಂಗಮಂಚದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದಳು. ನೃತ್ಯ ಕಲಾವಿದೆಯಾದ ಮೀನಾ ಸುಬ್ರಮಣ್ಯಮ್ ಅವರ ಶಿಷ್ಯೆಯಾದ ಶೃಣೋತ್ರ, ಈ ಕಾರ್ಯಕ್ರಮದಲ್ಲಿ ತನ್ನ ಅಚ್ಚುಕಟ್ಟಾದ ನೃತ್ಯ ಪ್ರದರ್ಶನದಿಂದ ಎಲ್ಲರ ಪ್ರಶಂಸೆ ಗಳಿಸಿದಳು. ನೃತ್ಯ ಕಲೆಯ ಬಗ್ಗೆ ಶ್ರದ್ಧೆ ಮತ್ತು ಸತತ ಅಭ್ಯಾಸದ ಫಲ ಪ್ರದರ್ಶನದುದ್ದಕ್ಕೂ ಕಂಡುಬಂತು.

Bharatanatya arangetram by Kannadati in Boston

ಶೃಣೋತ್ರಳ ತಮ್ಮ ಶ್ರುಜಲ್ ನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬೋಸ್ಟನ್ ನ ಪ್ರಖ್ಯಾತ ಸಂಗೀತಗಾರರು ಮತ್ತು ಸಂಗೀತ ಶಿಕ್ಷಕರೂ ಆದ ತಾರಾ ಬೆಂಗಳೂರು ಅವರ ವಯೊಲಿನ್, ದುರ್ಗಾ ಕೃಷ್ಣನ್ ಅವರ ವೀಣೆ, ಗೌರಿಶಂಕರ್ ಚಂದ್ರಶೇಖರ್ ಅವರ ಮೃದಂಗ, ಭುವನ ಗಣೇಶ ಅವರ ಗಾಯನ ಮತ್ತು ನಟುವಾಂಗದಲ್ಲಿ ಮೀನಾ ಸುಬ್ರಮಣ್ಯಮ್ ಮತ್ತು ಅವರ ಸಹೋದರಿ, ನೃತ್ಯ ಪಟು ರೋಜ ಕಣ್ಣನ್ - ಇವರೆಲ್ಲರ ಅತ್ಯುತ್ತಮ ಸಂಗೀತ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.

ಸಾಂಪ್ರದಾಯಿಕ ಪುಷ್ಪಾಂಜಲಿಯಿಂದ ಆರಂಭವಾದ ಶೃಣೋತ್ರಳ ನೃತ್ಯ ಅಭಿನಯಪೂರ್ವಕವಾದ "ಸುಬ್ರಮಣ್ಯ ಕೌತುಕಂ" ಮತ್ತು ಅದರ ನಂತರ ಮಿಶ್ರಛಾಪು ತಾಳದ ಜತಿ ಸ್ವರಕ್ಕೆ ಮುಂದುವರೆಯಿತು. ವಸ್ತ್ರ ಬದಲಾವಣೆ ನಂತರ ಶೃಣೋತ್ರ ದೇವಿಯ ಹಲವು ಭಾವವನ್ನು ಅರ್ಧ ಘಂಟೆಗೂ ಮೀರಿದ ಒಂದು ವರ್ಣಂನ ಮೂಲಕ ಪ್ರದರ್ಶಿಸುವಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದಳು. ಕೀರ್ತನೆ ಮತ್ತು ದೇವರನಾಮ ಭಾಗದಲ್ಲಿ ನಾದ ಮುರಳಿ, ಲಕ್ಷ್ಮಿ, ಭಕ್ತ - ಹೀಗೆ ನಾನಾ ಪಾತ್ರಗಳನ್ನು ಸರಾಗವಾಗಿ ಅಭಿನಯಿಸಿದಳು. ಅಮೋಘವಾದ ತಿಲ್ಲಾನ ಪ್ರದರ್ಶನವನ್ನು ಕಲಾಕ್ಷೇತ್ರ ನಾಟ್ಯಶಾಲೆಯ ಸ್ಥಾಪಕಿ ಹಾಗು ಪ್ರಸಿದ್ಧ ನೃತ್ಯ ಕಲಾವಿದೆ ರುಕ್ಮಿಣಿ ದೇವಿ ಅವರಿಗೆ ಅರ್ಪಿಸಿದ್ದು ಪ್ರಶಂಸನೀಯ.

ನಿಖಿಲ ಮತ್ತು ಶ್ರೀನಿವಾಸುಲು ಅಂಬಾಟಿ ಅವರ ಪುತ್ರಿ, 14 ವರ್ಷದ ಮೃದು ಸ್ವಭಾವದ ಶೃಣೋತ್ರ ಆಗಮಿಸಿದ ಅತಿಥಿಗಳು ತಂದ ಉಡುಗೊರೆಯನ್ನು A I F ಸಂಸ್ಥೆಗೆ ದಾನ ಮಾಡಿದ್ದು ಉಲ್ಲೇಖಾರ್ಹ. ನವರಸಗಳಿಂದ ಕೂಡಿದ ಪ್ರದರ್ಶನದಲ್ಲಿ ಪ್ರೇಕ್ಷಕರು ಮಧುರ ರಸದಲ್ಲಿ ಮಿಂದು ಸಂತೋಷ ವ್ಯಕ್ತಪಡಿಸಿದರು. ಇಂಥ ಕಾರ್ಯಕ್ರಮಗಳಿಂದ, ಹೊರದೇಶದಲ್ಲಿ ಭಾರತೀಯ ಕಲೆಯನ್ನು ಮುಂದಿನ ಪೀಳಿಗೆಯವರು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸುವರು ಮತ್ತು ಪುರಸ್ಕರಿಸುವರು ಎಂಬ ಭರವಸೆ ಪ್ರಬಲವಾಗುತ್ತದೆ.

English summary
Bharatanatya rangapravesha (arangetram) of a Kannada girl growing up in Boston, USA. 14-years-old Shrunotra exhibited wonderful dancing skills to the packed audience. A report by Madhusudhan Akkihebbal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X