ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಸ್ಟನ್ ನಲ್ಲಿ ಅಮೋಘ ಅಭಿಜ್ಞಾನ ಶಾಕುಂತಲ

By ಮಧುಸೂದನ್ ಅಕ್ಕಿಹೆಬ್ಬಾಳ್
|
Google Oneindia Kannada News

Abhijnana Shakuntala ballet in Boston America
ಬೋಸ್ಟನ್ ನ ಕನ್ನಡಿಗರಾದ ಪೂರ್ಣಿಮಾ ರಿಸ್ಬುಡ್ ಅವರ "ರಸರಂಗ್" ಭರತನಾಟ್ಯ ಶಾಲೆ ಪ್ರದರ್ಶಿಸಿದ ಮೇರು ಕವಿ ಕಾಳಿದಾಸನ "ಅಭಿಜ್ಞಾನ ಶಾಕುಂತಲ" ಸಂಗೀತ ನೃತ್ಯ ರೂಪಕದ ಒಂದು ವೈಶಿಷ್ಟ್ಯ, ಅಂದರೆ ಅದು ಸಂಸ್ಕೃತ ಭಾಷೆಯಲ್ಲಿತ್ತು. ನವೆಂಬರ್ 3ರಂದು ಬೋಸ್ಟನ್ ಹತ್ತಿರದ ವೆಸ್ಟನ್ ನಗರದ ರೀಜಿಸ್ ಕಾಲೇಜ್ ನ ಕೇಸೀ ಥಿಯೇಟರ್ನಲ್ಲಿ, ಕಣ್ಣು, ಕಿವಿ ಮತ್ತು ಮನಕ್ಕೆ ಹಿತ ನೀಡುವಂಥಾ ವರ್ಣರಂಜಿತ ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಾರು 500 ಜನ ಪ್ರೇಕ್ಷಕರ ಮುಂದೆ ಪ್ರದರ್ಶನಗೊಂಡ ಈ ನೃತ್ಯ ರೂಪಕ ಪ್ರೇಕ್ಷಕರ ಮನ ಗೆದ್ದಿತು.

ಅತ್ಯಂತ ಜನಪ್ರಿಯ ಹಾಗು ಶ್ರೇಷ್ಠ ಕೃತಿಗಳಲ್ಲಿ ಒಂದಾದ "ಅಭಿಜ್ಞಾನ ಶಾಕುಂತಲ" ಸಂಸ್ಕೃತ ನಾಟಕವನ್ನು ಒಂದು ಭರ್ಜರಿ ನೃತ್ಯ ರೂಪಕವನ್ನಾಗಿ ಹೊರ ತರುವುದು ಸುಲಭದ ಮಾತಲ್ಲ. "ಸಾಹಿತ್ಯದಲ್ಲಿ ನಾಟಕ ಕಲೆ ರಮ್ಯವಾದದ್ದು, ಅದರಲ್ಲಿ ಶಾಕುಂತಲ ನಾಟಕ ಅತಿ ರಮ್ಯವಾದದ್ದು" ಎಂಬ ಒಂದು ಸಂಸ್ಕೃತ ವಾಕ್ಯದಂತೆ, ಈ ರಮ್ಯ ಸಂಸ್ಕೃತ ಕೃತಿಯನ್ನು ನೃತ್ಯದ ಮೂಲಕ, ಅದರಲ್ಲೂ ಅಮೆರಿಕಾದಲ್ಲಿ ಪ್ರೇಕ್ಷಕರನ್ನು ಮುಟ್ಟುವುದು ಒಂದು ಪರಿಶ್ರಮದ ಕೆಲಸ. ಶೇಖರ್ ಶಾಸ್ತ್ರಿ ಅವರು ಸೂತ್ರಧಾರನ ಪಾತ್ರದಲ್ಲಿ ಕಥೆಯ ಸಾರಾಂಶ ತಿಳಿಸಿದ್ದು, ಸಂಸ್ಕೃತ ತಿಳಿಯದೆ ಇದ್ದವರೂ ರೂಪಕವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿತು.

ಕಾರ್ಯಕ್ರಮದ ವೈಶಿಷ್ಟ್ಯವೆಂದರೆ ಸುಮಾರು 40 ಜನ ನೃತ್ಯಗಾರರು ಮತ್ತು ನೃತ್ಯಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಪಾಲ್ಗೊಂಡದ್ದು. ಇನ್ನೊಂದು ವಿಶೇಷ ಎಂದರೆ ಬೆಂಗಳೂರಿನ ಪ್ರವೀಣ್ ಡಿ. ರಾವ್ ಅವರ ಸಂಗೀತ ಸಂಯೋಜನೆಯಲ್ಲಿ ಅಜಯ್ ವಾರಿಯರ್, ಪೂಜಾ ಮತ್ತು ಸ್ನೇಹಜ ಪ್ರವೀಣ್ ಅವರ ಕಂಠದಲ್ಲಿ ಮೂಡಿ ಬಂದ ಧ್ವನಿಮುದ್ರಿತ, ಸುಶ್ರಾವ್ಯ ಸಂಗೀತಮಯ ನಿರೂಪಣೆ ಈ ರೂಪಕಕ್ಕೆ ಅತ್ತ್ಯುತ್ತಮ ಬುನಾದಿ ಒದಗಿಸಿತ್ತು. ಪ್ರತಿ ಹಂತದಲ್ಲೂ ಅಚ್ಚುಕಟ್ಟು ನಿರ್ವಹಣೆ ಕಂಡು ಬಂದಿತು.

ಪಾತ್ರಗಳಿಗೆ ತಕ್ಕ ಉಡುಗೆ, ರಂಗ ಸಜ್ಜಿಕೆ, ದೀಪ ವ್ಯವಸ್ಥೆ, ಸಂದರ್ಭಕ್ಕೆ ತಕ್ಕಂತೆ ಹಿಂದಿನ ಪರದೆಯ ಮೇಲೆ ಮೂಡಿದ ಚಿತ್ರಗಳು, ಉತ್ತಮ ನೃತ್ಯ ಪ್ರದರ್ಶನ - ಇವೆಲ್ಲಾ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದವು. ನೃತ್ಯ ರೂಪಕದ ನಿರ್ದೇಶನ ಜವಾಬ್ದಾರಿ ಅಲ್ಲದೆ ದುಷ್ಯಂತ ರಾಜನ ಪಾತ್ರವನ್ನೂ ಪೂರ್ಣಿಮಾ ರಿಸ್ಬುಡ್ ಅವರು ನಿರ್ವಹಿಸಿದರು. ಮೇನಕೆ ಪಾತ್ರದಲ್ಲಿ "ರಸರಂಗ್"ನ ಮತ್ತೊಬ್ಬ ನೃತ್ಯ ಕಲಾವಿದೆ ಪಲ್ಲವಿ ನಾಗೇಶ, ಶಾಕುಂತಲ ಪಾತ್ರದಲ್ಲಿ ಯುವ ಪ್ರತಿಭೆ ಶಚಿ ರಿಸ್ಬುಡ್, ಇಂದ್ರ/ದೂರ್ವಾಸ ಮುನಿ/ಬೆಸ್ತನ ಪಾತ್ರಗಳಲ್ಲಿ ಇನ್ನೊಬ್ಬ ಯುವ ಪ್ರತಿಭೆ ಅನಿರುದ್ ನಾಗೇಶ ಮತ್ತು ಹಲವಾರು ಇತರ ನೃತ್ಯಗಾರರು ಗಮನ ಸೆಳೆದರು.

ಸಂಸ್ಕೃತದಲ್ಲಿ ಜನಪ್ರಿಯ ಕಾರ್ಯಕ್ರಮಗಳು ವಿರಳವಾಗಿರುವ ಈ ಕಾಲದಲ್ಲಿ ಪ್ರೇಕ್ಷಕರ ಮನ ಗೆದ್ದ "ಅಭಿಜ್ಞಾನ ಶಾಕುಂತಲ" ಒಂದು ಸಫಲ ಪ್ರಯೋಗ. ಈ ಪ್ರದರ್ಶನದಿಂದ, ರಸರಂಗ್ ನಾಟ್ಯ ಶಾಲೆಯವರು ಇನ್ನು ಮುಂದೆ ಇನ್ನೂ ಹೆಚ್ಚಿನ ಕಲಾತ್ಮಕ, ವರ್ಣರಂಜಿತ ಪ್ರಯೋಗಗಳನ್ನು ಹೊರತರುವರು ಎಂಬ ಭರವಸೆ ಮೂಡಿದೆ. ರಸರಂಗ್ ನಾಟ್ಯ ಶಾಲೆಗೆ ಹಾರ್ದಿಕ ಅಭಿನಂದನೆಗಳು!

English summary
Abhijnana Shakuntala ballet was performed by Americannadati Poornima's Rasrang troup in Boston in America on November 3rd. It was witnessed by packed theatre with 500 audience. A report by Madhusudhan Akkihebbal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X