• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಟಲಿಯ ಅಮಾಲ್ಫೆ ಕರಾವಳಿಯ ಚೆಲುವಿನ ಚಿತ್ತಾರ

By * ಡಾ. ಉಮಾ ವೆಂಕಟೇಶ್, ಸೌತ್ ವೇಲ್ಸ್, ಯುಕೆ
|

ಪಶ್ಚಿಮ ಯೂರೋಪಿನ ಸುಂದರ ಆಲ್ಫ಼್ ಪರ್ವತ ಮತ್ತು ಇನ್ನಿತರ ಆಕರ್ಷಕ ಭೌಗೋಳಿಕ ಪರಿಸರಗಳಿಂದ ಸುತ್ತುವರಿದ ಇಟಲಿ ದೇಶ ತನ್ನ ಚರಿತ್ರೆ, ಕಲೆ, ಸಂಗೀತ, ಶಿಲ್ಪಕಲೆ ಹೀಗೆ ಅನೇಕ ಉನ್ನತ ಪರಂಪರೆಗಳಿಗೆ ಪ್ರಸಿದ್ಧವೆಂಬುದು ಜನವಿದಿತ. ಲಿಯನಾರ್ಡೋ ಡಾ ವಿಂಚಿ, ಮೈಕೆಲ್ ಏಂಜಲೋ ಮತ್ತು ಗೆಲೆಲಿಯೋರಂತಹ ಮಹಾ ಮೇಧಾವಿಗಳ ಜನ್ಮಸ್ಥಾನವಾದ ಈ ದೇಶ, ತನ್ನ ಭೌಗೋಳಿಕ ಸುಂದರತೆ ಮತ್ತು ಪ್ರಕೃತಿ ವೈಪರೀತ್ಯ ಶಕ್ತಿಗಳಾದ ವೆಸೂವಿಯಸ್, ಎತ್ನಾ, ಸ್ಟ್ರಾಂಬೋಲಿಯಂತಹ ಅಗ್ನಿ ಪರ್ವತಗಳ ಬೀಡೆಂಬುದೂ ನಮಗೆಲ್ಲ ತಿಳಿದ ವಿಷಯ. ಯುನೈಟೆಡ್ ಕಿಂಗ್ ಡಮ್ ದೇಶದಲ್ಲಿ ಈಗ 17 ವರ್ಷಗಳಿಂದ ವಾಸಿಸುತ್ತಿರುವ ನಮಗೆ ಇಟಲಿಯ ಎಲ್ಲಾ ಪ್ರದೇಶಗಳೂ ಕೇವಲ 2 ಘಂಟೆಗಳ ಹಾದಿ ವಿಮಾನಯಾನದ ಮೂಲಕ. ಕಳೆದ ವಾರದಲ್ಲಿ ಈಸ್ಟರ್ ರಜಾದಿನಗಳಲ್ಲಿ ನಾನು ಮತ್ತು ನನ್ನ ಕುಟುಂಬ ಈ ಮಹಾನ್ ದೇಶದ ದಕ್ಷಿಣ ಕರಾವಳಿಯ ಸುಂದರ ಸೊರೆಂತೋ ಪರ್ಯಾಯ ದ್ವೀಪಕ್ಕೆ ನೀಡಿದ ಭೇಟಿ ನಮ್ಮ ಜೀವನದ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದು.

ಲಂಡನ್ ನಗರದ ಸ್ಟಾನ್ ಸ್ಟೀಡ್ ವಿಮಾನ ನಿಲ್ದಾಣದಿಂದ ಸೀದಾ ನೇಪಲ್ಸ್ ನಗರಕ್ಕೆ 2 ತಾಸುಗಳಲ್ಲಿ ಹಾರಿದ ನಾವು, ನಮ್ಮ ವಾಸ್ತವ್ಯವನ್ನು ಸೊರೆಂತೋ ಪಟ್ಟಣದ ಚೊಕ್ಕವಾದ ಹೋಟೆಲ್ ಒಂದರಲ್ಲಿ ನಿಗದಿಪಡಿಸಿದ್ದೆವು. ಒಂದು ವಾರದ ನಮ್ಮ ಈ ಸಂತೋಷ ವಿಹಾರ, ನೇಪಲ್ಸ್, ವೆಸೂವಿಯಸ್, ಪಾಂಪೆ, ಎರ್ಕೊಲಾನ, ಕಾಪ್ರಿ ದ್ವೀಪ ಮತ್ತು ಅಮಾಲ್ಫ಼ಿ ಕರಾವಳಿಯ ಭೇಟಿಯನ್ನು ಒಳಗೊಂಡಿದ್ದಿತು. ಮೆಡಿಟರೇನಿಯನ್ ಸಾಗರದ ತೀರದಲ್ಲಿರುವ ಈ ಸೊರೆಂತೋ ಪರ್ಯಾಯ ದ್ವೀಪ, ಕಣ್ಣಿಗೆ ಹಬ್ಬ. ವಿಶಾಲವಾದ ಉಜ್ವಲ ನೀಲಿಯ ವರ್ಣದ ಮೆಡಿಟರೇನಿಯನ್ ಸಾಗರ ಮೂರು ಕಡೆ, ಒಂದೆಡೆ ಉನ್ನತ ಪರ್ವತಗಳ ಆಗಸ ಮುಟ್ಟುವ ಶಿಖರಗಳ ಆಸರೆಯಲ್ಲಿರುವ ಅಮಾಲ್ಫ಼ಿ ಕರಾವಳಿ, ಚಿತ್ರಕಾರರ ಸ್ವರ್ಗವೆಂದೇ ಹೇಳಬಹುದು. ಸುಮಾರು 40 ಮೈಲಿಗಳ ವ್ಯಾಪಕ ಈ ಕರಾವಳಿ ತೀರ, ತನ್ನ ಉದ್ದಕ್ಕೂ ಅನೇಕ ಸಣ್ಣ ಸಣ್ಣ ಹಳ್ಳಿ ಮತ್ತು ಪಟ್ಟಣಗಳನ್ನೊಳಗೊಂಡಿದೆ. ಪೂರ್ಣವಾಗಿ ತಿರುವುಗಳಿಂದ ಕೂಡಿದ ಈ ಪರ್ವತ ರಸ್ತೆ ಅನೇಕ ಸುರಂಗ ಮಾರ್ಗಗಳ ಮೂಲಕ ನಮ್ಮನ್ನು ಕರೆದೊಯ್ಯುತ್ತದೆ. ಹಾದಿಯುದ್ದಕ್ಕೂ ಕೊಡೆಯ ಆಕಾರದ ಪೈನ್ ವೃಕ್ಷಗಳು, ಆಲೀವ್ ಮರಗಳು, ಬಣ್ಣ ಬಣ್ಣದ ವಿಸ್ಟೀರಿಯಾ ಬಳ್ಳಿಗಳು ಮತ್ತು ಅನೇಕ ಸುಂದರ ಗಿಡ ಮರಗಳ ತಪ್ಪಲು ನಮ್ಮ ಕಣ್ಣಿಗೆ ಹಬ್ಬ.

ಮೆಡಿಟರೇನಿಯನ್ ಪ್ರಾಂತದ ವಿಶಿಷ್ಟವಾದ ಸಿಟ್ರಸ್ ಜಾತಿಯ ನಿಂಬೆ, ಕಿತ್ತಳೆ, ಗಜನಿಂಬೆ, ಚಕ್ಕೋತ, ಟೊಮೆಟೊ, ಕೆಂಪು ಮೆಣಸಿನಕಾಯಿ, ಹೀಗೆ ಹಲವಾರು ಬೆಳೆಗಳ ತೋಟಗಳನ್ನು ದಾರಿಯುದ್ದಕ್ಕೂ ನೋಡಬಹುದು. ಅಲ್ಲಲ್ಲೇ ರೈತರು ರಸ್ತೆಯ ಬದಿಯಲ್ಲಿ ಸಣ್ಣ ಅಂಗಡಿಗಳಲ್ಲೋ ಅಥವಾ ತಮ್ಮ ಕಾರುಗಳಲ್ಲೋ ಈ ಹಣ್ಣು ತರಕಾರಿಗಳನ್ನಿಟ್ಟುಕೊಂಡು ಮಾರುವ ದೃಶ್ಯ ಸರ್ವೇ ಸಾಮಾನ್ಯ. ಅಗ್ನಿ ಪರ್ವತಗಳ ಕೆರಳುವಿಕೆಯಿಂದ ಉತ್ಪನ್ನವಾದ ಫಲವತ್ತಾದ ಭೂಮಿಯಲ್ಲಿನ ಈ ಪ್ರದೇಶ ವ್ಯವಸಾಯಕ್ಕೆ ಸೂಕ್ತವಾಗಿದೆ. ಇಲ್ಲಿನ ಹಳ್ಳಿಗಳು ಮತ್ತು ಪಟ್ಟಣಗಳು ಚಿತ್ರಕಾರನ ವರ್ಣಚಿತ್ರದಲ್ಲಿರುವಂತೆ ಚೆಲುವಿನ ಚಿತ್ತಾರ. ಬಿಳಿ ಮತ್ತು ನಸು ಗುಲಾಬಿ ವರ್ಣದ ಮನೆಗಳು, ಇಗರ್ಜಿಗಳು ನೋಡಲು ಎರಡು ಕಣ್ಣು ಸಾಲವು. ಅಲ್ಲಲ್ಲಿರುವ ಸಮುದ್ರ ದಂಡೆ, ಬಂದರುಗಳು ನಯನ ಮನೋಹರ. ಸಮುದ್ರದ ತೀರದಲ್ಲಿ, ಪರ್ವತಗಳ ತುದಿಯಲ್ಲಿ ಕಡೆದಂತೆ ನಿಂತಿರುವ ಈ ಪಟ್ಟಣಗಳು ಜೀವನದಲ್ಲೊಂದು ಬಾರಿ ನೋಡಲೇ ಬೇಕಾದ ದೃಶ್ಯ. ಚಳಿಗಾಲದಲ್ಲಿ ಹಿತವಾದ ಹವೆ, ಬೇಸಿಗೆಯಲ್ಲಿ ಸುಡುವ ಸೂರ್ಯ ಮತ್ತು ವಸಂತದಲ್ಲಿ ಬರುವ ಮಳೆ ಮೆಡಿಟರೇನಿಯನ್ ತೀರದ ವೈಶಿಷ್ಟ್ಯತೆ. ಆಲಿವ್ ಎಣ್ಣೆಯ ಸೇವನೆಯಿಂದ ದೀರ್ಘ ಕಾಲ ಬದುಕುವರಂತೆ ಇಲ್ಲಿನ ಸುಂದರ ಜನತೆ. ಇಲ್ಲಿನ ಊಟ ತಿಂಡಿಗಳೂ ಬಹು ರುಚಿ. ಪಿಜ್ಜಾ, ಪಾಸ್ತಾ, ರಿಸೋತ್ತೋ, ಸೂಪ್, ಕನೋಲಿ ಮತ್ತು ಅನೇಕ ಬಗೆಯ ಐಸ್ ಕ್ರೀಮ್ ನಮ್ಮ ಜಿಹ್ವಾಚಾಪಲ್ಯವನ್ನು ಕೆರಳಿಸುತ್ತವೆ.

ಕೈಕೆಲಸ, ಕಲೆ, ಶಿಲ್ಪಕಲೆಗೆ ಹೆಸರುವಾಸಿಯಾದ ಇಟಲಿ, ಚರ್ಮದ ಕೈಚೀಲಗಳು, ಕಾಲಿನ ಪಾದರಕ್ಷೆಗಳು, ಗಾಜಿನ ಸಾಮಾನುಗಳು ಹೀಗೆ ಅನೇಕ ವಸ್ತುಗಳಿಗೆ ತವರೂರು. ಈ ಪ್ರದೇಶ ಅಂದರೆ "ಗಲ್ಫ಼್ ಆಫ಼್ ನೇಪಲ್ಸ್ " ಹವಳಕ್ಕೆ ಬಲು ಪ್ರಸಿದ್ಧಿ. ದಾರಿಯುದ್ದಕ್ಕೂ ಹವಳದ ಆಭರಣಗಳ ಅಂಗಡಿಗಳನ್ನು ಕಾಣಬಹುದು. ಹೆಂಗಳೆಯರಿಗಂತೂ ಆಕರ್ಷಣೆಯ ಕೇಂದ್ರಬಿಂದು. ಸುಮಾರು 50 -60 ಲಕ್ಷ ಜನಗಳು ವಾಸಿಸುವ ಈ ಪ್ರದೇಶ, ಇಟಲಿಯ ಇನ್ನಿತರ ಭಾಗಗಳಂತೆ ಶ್ರೀಮಂತವಲ್ಲ. 50 ಮತ್ತು 60ರ ದಶಕದ ಹಾಲಿವುಡ್ ಚಲನಚಿತ್ರಗಳ ತಯಾರಿಕೆ ಈ ಪ್ರದೇಶದಲ್ಲಿ ಆಗುತ್ತಿದ್ದರಿಂದ, ಆಗಿನ ಹಲವು ವೈಭವ ಸ್ವಲ್ಪ ಮಟ್ಟಿಗೆ ಈಗಲೂ ಕಂಡುಬರುತ್ತದೆ. ಇಟಾಲಿಯನ್ ಅಲ್ಲದೆ, ಇಂಗ್ಲಿಷ್, ಫ್ರೆಂಚ್, ರಷ್ಯನ್, ಸ್ಪಾನಿಶ್ ಭಾಷೆಗಳನ್ನು ಆಡುವ ಜನತೆ ಇಲ್ಲಿ ಸುಮಾರು ಮಧ್ಯ ಯುಗದಿಂದಲೂ ಇರುವರಂತೆ. ರೋಮನ್ ಸಾಮ್ರಾಜ್ಯದಲ್ಲಿ ಉನ್ನತ ಸ್ಥಾನದಲ್ಲಿದ್ದ ಈ ಪ್ರದೇಶ ಈಗಲೂ ತನ್ನ ಹಲವು ವೈಭವಗಳನ್ನು ಕಾಪಾಡಿಕೊಳ್ಳಲು ಹೆಣಗುತ್ತಿದೆ. ಒಟ್ಟಿನಲ್ಲಿ ಪಚ್ಚೆ ಮತ್ತು ನೀಲ ವರ್ಣದ ಸಾಗರದಿಂದ ಆವೃತ್ತವಾಗಿ, ಗಗನ ಮುಟ್ಟುವ ಪರ್ವತಗಳ ಬೆನ್ನೆಲುಬಿನ ಆಸರೆಯಲ್ಲಿ ನಿಂದು, ಸಸ್ಯಗಳ ಸಂಪತ್ತಿನಿಂದ ನಳನಳಿಸುತ್ತಿರುವ "ಅಮಾಲ್ಫ಼ಿ ಕರಾವಳಿ" ಪ್ರವಾಸಿಗರ ಮಟ್ಟಿಗೆ ಸ್ವರ್ಗವೆಂದೇ ನನ್ನ ಭಾವನೆ. ಅವಕಾಶವಾದಲ್ಲಿ ಈ ಮೆಡಿಟರೇನಿಯನ್ ತಪ್ಪಲನ್ನು ಒಮ್ಮೆ ತಪ್ಪದೇ ನೋಡಿ.

English summary
Amalfi coast in South Italy is one of the finest places in Europe. the Amalfi Coast was listed as a UNESCO World Heritage Site as a cultural landscape. Travelogue by Dr Uma Venkatesh, New South Wales, UK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more