ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರ್ ಮರ್ಡೂರ್ ಸಿಂಗಪುರದಲ್ಲಿ ಹರಿಸಿದ ಸಂಗೀತಸುಧೆ

By * ಸುರೇಶ ಭಟ್ಟ ಮತ್ತು ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

Hindustani singer Kumar Mardur, Dharwad
ಗುಡ್ ಫ್ರೈಡೆ ರಜೆಯ ನಿಮಿತ್ತ ದೀರ್ಘ ವಾರಾಂತ್ಯ, ಹೊರಗಡೆ ಮಳೆ ಸುರಿಯುತ್ತಿದ್ದರೆ ಸಭಾಂಗಣದ ಒಳಗಡೆ ಹಿಂದೂಸ್ತಾನಿ ಸಂಗೀತದ ಹೊಳೆ. ಯುವ ಪ್ರತಿಭಾವಂತ ಶಾಸ್ತ್ರೀಯ ಗಾಯಕ ಕುಮಾರ್ ಮರ್ಡೂರ್ ಅವರು, ಸಿಂಗಪುರ್ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ (SIFAS) ಹಾಗೂ ಮಾಣಿಕ್ ಶಹಾನಿ ಆರ್ಟ್ಸ್ ಫೌಂಡೇಶನ್‌ನವರು SIFAS Festival 2012ನ ಪ್ರಯುಕ್ತವಾಗಿ ಏ.7ರಂದು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕಿಕ್ಕಿರಿದು ತುಂಬಿದ ಜನರನ್ನು ಸಂಗೀತ ಸಾಗರದಲ್ಲಿ ಮುಳುಗಿಸಿದರು. ಮಾರ್ಚ್ 2ರಂದು ಹುಬ್ಬಳ್ಳಿ-ಧಾರವಾಡದ ಉದಯೋನ್ಮುಖ ಹಿಂದೂಸ್ತಾನಿ ಗಾಯಕ ಜಯತೀರ್ಥ ಮೇವುಂಡಿ ಅವರ ಗಾನಸುಧೆ ಹರಿಸಿದ್ದರು.

ಕಾರ್ಯಕ್ರಮವನ್ನು ವಿಲಂಬಿತ ಲಯದಲ್ಲಿ ರಾಗ್ ಪೂರಿಯಾ ಧನಶ್ರೀಯ "ಆವತೊ ರಿತು ಮನ್" ಚೀಜ಼್‌ನೊಂದಿಗೆ ಪ್ರಾರಂಭಿಸಿದ ಮರ್ಡೂರ್ ಅವರು ನಂತರ ತೀನ್ ತಾಲ್‌ನಲ್ಲಿ "ಪಾಯಲಿಯಾ ಝನಕಾರ್" ಎಂಬ ಪ್ರಖ್ಯಾತ ಸಾಂಪ್ರದಾಯಿಕ ಬಂದಿಶ್ ಅನ್ನು ಪ್ರಸ್ತುತಪಡಿಸಿದರು. ಎರಡನೆಯದಾಗಿ ರಾಗ ನಾಯಕಿ ಕಾನಡಾದ ಸುಂದರ ರಚನೆಯೊಂದನ್ನು ಹಾಡಿದರು. ನಂತರ "ಮನ್ ಪೂಲಾ ಪೂಲಾ, ಕೈಸಾ ನಾತಾರೆ" ಎಂಬ ಕಬೀರ್ ಭಜನೆಯೊಂದನ್ನು ಮಾಂಡ್ ರಾಗದಲ್ಲಿ ದಿವ್ಯವಾಗಿ ಗಾಯನ ಮಾಡಿದ ಕುಮಾರ್, ಕಾರ್ಯಕ್ರಮವನ್ನು "ಹರೀ ಮೇರೋ ಜೀವನ್ ಪ್ರಾಣಾಧಾರ್" ಎಂಬ ಭಟಿಯಾರ್ ರಾಗದ ಸಂತ ಮೀರಾಳ ಭಕ್ತಿ ಪೂರ್ವಕ ಕೀರ್ತನೆಯೊಂದಿಗೆ ಸಂಪೂರ್ಣಗೊಳಿಸಿದರು.

ಸುಮಾರು ಒಂದೂವರೆ ತಾಸು ನಡೆದ ಈ ಕಾರ್ಯಕ್ರಮದಲ್ಲಿ ಧಾರವಾಡದ ಫಲವತ್ತಾದ ರಸ ಭೂಮಿಯಿಂದ ಬಂದ ಸಂಗೀತ ರತ್ನ, ಕಿರಾಣಾ ಘರಾನಾದ ಕುಮಾರ್ ಮರ್ಡೂರ್ ಅವರು ತಮ್ಮ ಸಿಹಿ ಕಂಠದಿಂದ ಅನೇಕ ತಾನ್‌ಗಳನ್ನು ಸುಲಲಿತವಾಗಿ ಪ್ರಸ್ತುತಪಡಿಸಿ, ಪ್ರೇಕ್ಷಕರ ಮನ ತಣಿಸಿದರು. ಪ್ರೇಕ್ಷಕರ ಅಮೋಘ ಕರತಾಡನ ಕುಮಾರ್ ಮರ್ಡೂರ್ ಅವರ ಪಾಂಡಿತ್ಯಕ್ಕೆ ಹಾಗೂ ಸಿಂಗಪುರದ ಕಲಾರಸಿಕರ ಕಲಾಪ್ರೇಮಕ್ಕೆ ಹಿಡಿದ ಕನ್ನಡಿಯಾಗಿತ್ತು. ಈ ಕಾರ್ಯಕ್ರಮದಲ್ಲಿ ಕುಮಾರ್ ಮರ್ಡೂರ್ ಅವರಿಗೆ ಪಕ್ಕವಾದ್ಯದಲ್ಲಿ ಜೊತೆ ನೀಡಿದವರು ಮಿಹಿರ್ ಕುಂಡು (ತಬಲ), ಜಸ್‌ರಾಜ್ ಶಿಂತ್ರೆ (ಹಾರ್ಮೋನಿಯಮ್) ಮತ್ತು ಕುಮಾರಿ ಪ್ರಿಯಾಂಕ (ತಾನ್ಪುರ).

ಕುಮಾರ್ ಮರ್ಡೂರ್ ಕಿರುಪರಿಚಯ : ಧಾರವಾಡದ ಕುಮಾರ್ ಮರ್ಡೂರ್ ಅವರಿಗೆ ಅವರ ತಂದೆ ಪಂಡಿತ್ ಸೋಮನಾಥ್ ಮರ್ಡೂರ್ ಅವರೇ ಮೊದಲ ಗುರು. ಪದ್ಮಭೂಷಣ ಡಾ. ಪುಟ್ಟರಾಜ್ ಗವಾಯಿ ಹಾಗೂ ಡಾ. ಬಸವರಾಜ್ ರಾಜಗುರು ಅವರ ಅಗ್ರ ಶಿಷ್ಯರಾದ ಸೋಮನಾಥ್ ಮರ್ಡೂರ್ ಅವರ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಮಾಡಿದ ಯುವಗಾಯಕರಾದ ಕುಮಾರ್ ಮರ್ಡೂರ್ ಅವರು ನಂತರ ದಿ. ಸವಾಯಿ ಗಂಧರ್ವರ ಶಿಷ್ಯ ಪಂಡಿತ್ ಫಿರೋಜ಼್ ದಸ್ತೂರ್ ಅವರ ಬಳಿ ವಿಧ್ಯುಕ್ತವಾಗಿ ಸಂಗೀತಾಭ್ಯಾಸ ಮಾಡಿದರು.

ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡದಲ್ಲಿ ಸಂಗೀತದ ಮಾಸ್ಟರ್ಸ್ ಡಿಗ್ರಿಯನ್ನು ಮುಗಿಸಿದ ಕುಮಾರ್ ಮರ್ಡೂರ್ ಅವರು ಪ್ರಸಕ್ತ ಕೋಲ್ಕತ್ತಾದ ಐ.ಟಿ.ಸಿ. ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಕಿರಿಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ ಸಮ್ಮತ ಕಲಾವಿದರಾದ ಮರ್ಡೂರ್ ಅವರು ಸವಾಯಿ ಗಂಧರ್ವ ಭೀಮಸೇನ್ ಮಹೋತ್ಸವ 2011, ಸವಾಯಿ ಗಂಧರ್ವ ಹಬ್ಬ (ಕುಂದಗೋಳ, ಕರ್ನಾಟಕ), ಪಂಡಿತ್ ವಿಷ್ಣು ದಿಗಂಬರ್ ಜಯಂತಿ ಸಮಾರೋಹ (ನ್ಯೂಡೆಲ್ಲಿ) ಸೇರಿದಂತೆ ಹಲವಾರು ಪ್ರಮುಖ ಹಬ್ಬಗಳಲ್ಲಿ ಪ್ರದರ್ಶನ ನೀಡಿದ್ದು, ಅಮೇರಿಕ, ಮಲೇಶಿಯ ಮತ್ತು ಥೈಲ್ಯಾಂಡ್‌ಗಳಲ್ಲಿ ಕೂಡ ಸಂಗೀತ ಕಚೇರಿಗಳನ್ನು ನೀಡಿದ್ದಾರೆ. (ಛಾಯಾಚಿತ್ರ: ವಸಂತ ಕುಲಕರ್ಣಿ, ಸಿಂಗಪುರ)

English summary
Singapore Indian Fine Arts Society (SIFAS) in collaboration with Manik Shahani Arts Foundation had organised hindustani music concert by young singer from Dharwad Kumar Murdur in Singapore on April 7, 2012. Last month on March 2 another hindustani singer from Dharwad Jayateertha Mevundi had sung in Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X