ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಡಿತ್ ಜಯತೀರ್ಥ ಮೇವುಂಡಿ ಸಂದರ್ಶನ (ಭಾಗ 2)

By * ವಸಂತ್ ಕುಲಕರ್ಣಿ, ಸುರೇಶ್ ಭಟ್
|
Google Oneindia Kannada News

Pandit Jayateertha Mevundi and others
ಪ್ರಶ್ನೆ : ನಾಕೋಡ್ ಕುಟುಂಬ ಉತ್ತರ ಕರ್ನಾಟಕದಲ್ಲಿ ಪ್ರಖ್ಯಾತ ಸಂಗೀತಗಾರ ಕುಟುಂಬ. ಪಂಡಿತ್ ಅರ್ಜುನ್‍ಸಾ ನಾಕೋಡ್, ಪಂಡಿತ್ ರಘುನಾಥ ನಾಕೋಡ್ ಮತ್ತು ಪಂಡಿತ್ ಬಾಲಚಂದ್ರ ನಾಕೋಡ್ ಮುಂತಾದವರು ಆಕಾಶವಾಣಿ ಕಲಾವಿದರು ಮತ್ತು ಸಂಗೀತಾಸಕ್ತರಿಗೆ ತುಂಬಾ ಪರಿಚಿತರು. ನೀವು ಕೂಡ ನಾಕೋಡ್‍ರ ಗರಡಿಯಿಂದ ಬಂದವರು ಎಂದು ಕೇಳಿದೆ. ಅದರ ಬಗ್ಗೆ ಸ್ವಲ್ಪ ವಿವರಿಸುತ್ತೀರಾ?

ಜಯತೀರ್ಥ :
ಹೌದು, ಸತ್ಯವಾದ ಮಾತು. ಪಂಡಿತ್ ಅರ್ಜುನ್‍ಸಾ ನಾಕೋಡ್ ಅವರು ನನ್ನ ಸಂಗೀತಕ್ಕೆ ಭದ್ರ ಬುನಾದಿ ಹಾಕಿದವರು ಎಂಬುದು ಸತ್ಯವಾದ ಮಾತು. ಸ್ವಲ್ಪ ಸ್ವಲ್ಪ ಕಲಿತಿದ್ದ ನಾನು ಅವರನ್ನು ಕಲಿಸಲು ಕೇಳಿದಾಗ, ಮೊದಮೊದಲು ಅವರು ಒಪ್ಪಲಿಲ್ಲ. ಅವರಿಗೆ ಧ್ವನಿಯ ತೊಂದರೆ ಇದ್ದುದರಿಂದ ಅವರು ಹೆಚ್ಚಿಗೆ ಶ್ರಮ ಮಾಡಿಕೊಳ್ಳುತ್ತಿರಲಿಲ್ಲ. ನಂತರ ನನ್ನ ಹಾಡು ಕೇಳಿದ ಮೇಲೆ ಅವರಿಗೆ ನನ್ನಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯಗಳ ಬಗ್ಗೆ ನಂಬಿಕೆ ಹುಟ್ಟಿತು ಎನಿಸುತ್ತದೆ. ಅವರು ಒಪ್ಪಿದರು. ನಂತರ ನಿರಂತರವಾಗಿ ಹತ್ತು ವರ್ಷಗಳವರೆಗೆ ಅವರ ಹತ್ತಿರ ನನ್ನ ಅಭ್ಯಾಸ ಮುಂದುವರೆಯಿತು. ಯಾವುದೇ ಬಗೆಯ ಅಪೇಕ್ಷೆಗಳಿಲ್ಲದೇ ನನಗೆ ಅವರು ವಿದ್ಯೆಯನ್ನು ಧಾರೆಯೆರೆದರು. ಅವರಿಂದ ನಾನು ಕಲಿತದ್ದು ಇವತ್ತಿನ ನನ್ನ ಸಂಗೀತದ ಮೂಲ ತಳಹದಿ ಎನ್ನಬಹುದು.

ನಂತರ ವಯಸ್ಸಾದಂತೆ ಅವರ ಧ್ವನಿಯ ತೊಂದರೆ ಇನ್ನೂ ಹೆಚ್ಚಾಗತೊಡಗಿತು. ಅದರಿಂದ ನನ್ನ ಅಭ್ಯಾಸಕ್ಕೆ ವ್ಯತ್ಯಯ ಬರತೊಡಗಿತು. ಅದರಿಂದ ನಾನು ಗುರುಗಳ ಸಲಹೆಯಂತೆ ಮುಂದಿನದನ್ನು ಅಭ್ಯಸಿಸಲು, ಭಾರತರತ್ನ ಭೀಮಸೇನ್ ಜೋಶಿಯವರ ಶಿಷ್ಯ ಪಂಡಿತ್ ಶ್ರೀಪತಿ ಪಾಡೇಗಾರ್ ಅವರನ್ನು ಸಂಪರ್ಕಿಸಿ, ಗುರುಗಳ ಧ್ವನಿಯ ಪರಿಸ್ಥಿತಿಯನ್ನು ವಿವರಿಸಿ, ಅವರನ್ನು ನನಗೆ ಮುಂದಿನ ಮಾರ್ಗದರ್ಶನ ಮಾಡಲು ಕೇಳಿಕೊಂಡೆ. ಅವರು ಒಪ್ಪಿಕೊಂಡರು ಮತ್ತು ಮುಂದೆ ಹದಿನೈದು ವರ್ಷಗಳವರೆಗೆ ಕಿರಾಣಾ ಘರಾಣಾದ ಪದ್ಧತಿಯ ಸೂಕ್ಷ್ಮಗಳನ್ನು ಮತ್ತು ರಾಗ ವಿಸ್ತಾರದ ಶೈಲಿಯನ್ನು ವಿವರವಾಗಿ ಹೇಳಿಕೊಟ್ಟರು. ಬೇರೆ ಕಲಾವಿದರುಗಳನ್ನು ಕೇಳಿ ಅವರಲ್ಲಿಯ ಒಳ್ಳೆಯ ಅಂಶಗಳನ್ನು ಹೇಗೆ ನಮ್ಮ ಹಾಡುಗಾರಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಒಟ್ಟಿನಲ್ಲಿ ಒಬ್ಬ ಒಳ್ಳೆಯ ಸಂಗೀತಗಾರನಾಗಬೇಕು ಎಂಬುದನ್ನು ಬಹಳ ಮುತುವರ್ಜಿಯಿಂದ ಕಲಿಸಿದರು.

ಪ್ರಶ್ನೆ :
ಕಿರಾಣಾ ಘರಾಣ ಸಂಗೀತಲೋಕದಲ್ಲಿ ಬಹಳ ಪ್ರಖ್ಯಾತವಾಗಿದೆ. ಅದರ ವೈಶಿಷ್ಟ್ಯವೇನು ಎಂಬುದನ್ನು ತಿಳಿಸುತ್ತೀರಾ?

ಜಯತೀರ್ಥ : ಎಲ್ಲ ಘರಾಣೆಗಳದ್ದೂ ಅವುಗಳದೇ ಆದ ಸುಂದರ ವೈಶಿಷ್ಟ್ಯಗಳಿವೆ. ಹಾಗೆಯೇ ಕಿರಾಣಾ ಘರಾಣಾದ್ದೂ ಸಹ. ಸ್ವರಪ್ರಧಾನ ಗಾಯಕಿ ನಮ್ಮದು, ಹಾಡುಗಾರಿಕೆಯಲ್ಲಿ ಭಾವನೆಗಳನ್ನು ಎತ್ತಿ ತೋರಿಸುವ ಪದ್ಧತಿಯನ್ನು ಹಾಕಿ ಕೊಟ್ಟವರು ಘರಾಣಾದ ಮೂಲ ಪ್ರವರ್ತಕ ಉಸ್ತಾದ್ ಅಬ್ದುಲ್ ಕರೀಮ್ ಖಾನರು. ಅವರು ಮೈಸೂರು ಆಸ್ಥಾನದಲ್ಲಿ ಕಚೇರಿ ಕೊಡಲು ಹೋಗುತ್ತಿದ್ದಾಗ ಅಲ್ಲಿನ ಕರ್ನಾಟಕ ಸಂಗೀತದ ಪಂಡಿತರಿಂದ ಪ್ರಭಾವಿತರಾದರು. ಕರ್ನಾಟಕ ಸಂಗೀತದ ಭಕ್ತಿಭಾವಗಳನ್ನು ತಮ್ಮ ಹಿಂದುಸ್ತಾನಿ ಪದ್ಧತಿಯಲ್ಲಿ ಅಳವಡಿಸಿದರು. ನಮ್ಮ ಹಾಡುಗಾರಿಕೆಯಲ್ಲಿ ಒಂದೊಂದೇ ಸ್ವರಗಳನ್ನೆತ್ತಿಕೊಂಡು ಅವುಗಳ ಬಗ್ಗೆ ವಿಸ್ತಾರಮಾಡಿ, ಯೋಚಿಸಿ ಭಾವವನ್ನು ಸ್ಪಷ್ಟಗೊಳಿಸಿ ಹಾಡುವ ಕಲೆ ಕಿರಾಣಾ ಘರಾಣಾದ ಮೂಲ ಶೈಲಿ. ನಮ್ಮ ಗಾಯನ ಮೀಂಡ್‍ಯುಕ್ತ ಗಾಯನ. ಸ್ವರಗಳಲ್ಲಿ ಜೀವ ತುಂಬುವದು ನಮ್ಮ ಮುಖ್ಯ ಉದ್ದೇಶ. ಅದರಿಂದಲೇ ನಮ್ಮದು ಸ್ವರ ಪ್ರಧಾನ ಗಾಯಕಿ ಎನಿಸಿದೆ.

English summary
An interview with hindustani singer Pandit Jayateertha Mevundi from Dharwad. Jayateertha Mevundi was in Singapore to participate in Vocal Traditions of India musical program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X