ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಸೋತ್ಸವದಲ್ಲಿ ಮಿಂದ ನ್ಯೂ ಜೆರ್ಸಿ ಕನ್ನಡಿಗರು

By Prasad
|
Google Oneindia Kannada News

Dasotsava in New Jersey, USA
ಕರ್ನಾಟಕದ ದಿವ್ಯ ಪರಂಪರೆಯನ್ನು ಎಲ್ಲರಿಗೂ ನೆನಪಿಸಿಕೊಡುವ ಉದ್ದೇಶದಿಂದ ಹಾಗೂ ದಾಸ ಪರಂಪರೆಗೆ ನೀಡುವ ಗೌರವ ಸೂಚಕವಾಗಿ ಮಾ.10ರಂದು ಶ್ರೀ ಕೃಷ್ಣ ವೃಂದಾವನದ ಸಭಾಂಗಣದಲ್ಲಿ ನ್ಯೂ ಜೆರ್ಸಿಯ ಬೃಂದಾವನ ಕನ್ನಡ ಸಂಘದವರು ದಾಸೋತ್ಸವವನ್ನು ಏರ್ಪಡಿಸಿದ್ದರು. ಇತ್ತೀಚೆಗಷ್ಟೇ ನಡೆದ ಸ್ವರ ಸಂಜೀವಿನಿ ಕಾರ್ಯಕ್ರಮದ ನೆನಪು ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಸಂಗೀತದ ಕಾರ್ಯಕ್ರಮದಲ್ಲಿ ಶ್ರೋತೃಗಳನ್ನು ಸೆಳೆಯಿತು. ಸ್ಥಳೀಯ ಕಲಾವಿದರು ಹಾಗೂ ಅತಿಥಿ ಕಲಾವಿದರು ನಡೆಸಿಕೊಟ್ಟ "ಕರ್ನಾಟಕ ದಾಸ ಪರಂಪರೆಗೆ ಸಂಗೀತ ಸಮರ್ಪಣೆ" ಕಾರ್ಯಕ್ರಮ ಸೊಗಸಾಗಿ ಮೂಡಿ ಬಂತು. ಅತಿಥಿ ಕಲಾವಿದರಾಗಿ ಅನಿತಾ ಅನಂತಸ್ವಾಮಿ ಮತ್ತು ತಂಡದವರು ಸುಮಾರು ಒಂದು ಘಂಟೆಯ ಕಾಲ ಶ್ರೋತೃಗಳನ್ನು ಗಾನಗಂಗೆಯಲ್ಲಿ ತೇಲಿಸಿದರು.

ಸುಮಾರು ನೂರೈವತ್ತು ಮಂದಿ ಸೇರಿದ್ದ ಸಬಾಂಗಣದಲ್ಲಿ ಮೊದಲು ಕುಮಾರಿ ಅಮೂಲ್ಯ ಕಟ್ಟಿಮನಿ ಅವರ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡವು. ಬೃಂದಾವನದ ಸಂಕೇತಗೀತೆಯ ನಂತರ, ಸ್ವಾಗತ ಭಾಷಣದಲ್ಲಿ ಸತೀಶ್ ಹೊಸನಗರ ಅವರು ಕಲಾವಿದರು ಹಾಗೂ ಅತಿಥಿಗಳನ್ನು ಆಹ್ವಾನಿಸುವುದರ ಜೊತೆಗೆ ಸಂಕ್ಷಿಪ್ತವಾಗಿ ಕರ್ನಾಟಕದ ದಾಸ ಪರಂಪರೆ ಮತ್ತು ಭಕ್ತಿ ಪಂಥದ ವೈಶಿಷ್ಠ್ಯಗಳನ್ನು ವಿವರಿಸಿದರು. ಈ ಕಾರ್ಯಕ್ರಮ ಕಳೆದ ವರ್ಷದ ಜೆನರಲ್ ಬಾಡಿ ಮೀಟಿಂಗ್‌ನಲ್ಲಿ ಡಾ. ಎಂ.ಜಿ.ಪ್ರಸಾದ್ ಅವರು ಸೂಚಿಸಿದ ಪ್ರಕಾರ ಹಾಗೂ ಅವರ ಮಾರ್ಗದರ್ಶನದಲ್ಲಿ ಮೂಡಿಬಂದು ನಿಮ್ಮೆಲ್ಲರ ಎದುರಿಗೆ ಸಾಕಾರಗೊಂಡಿದೆ ಎಂದು ವಿವರಿಸಿದರು.

ಮುಂದಿನ ಕಾರ್ಯಕ್ರಮಗಳು ಮುರಳಿ ಗೌಡ ಅವರ ನಿರೂಪಣೆಯಲ್ಲಿ ಮೂಡಿಬಂದವು. ದಾಸರ ಪದಗಳಿಗೆ ಪ್ರಾಮುಖ್ಯತೆ ನೀಡಲಾಗಿತ್ತು. ಬೃಂದಾವನದ ಸದಸ್ಯರು ಮತ್ತು ಅವರ ಮಕ್ಕಳು ವಾದ್ಯಗಳ ಜೊತೆಗೆ ಪ್ರಸ್ತುತ ಪಡಿಸಿದ ಅನೇಕ ಹಾಡುಗಳು ಹಾಗೂ ನೃತ್ಯ ಪ್ರಶಂಸನೀಯವಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು : ಮುರಳಿಕೃಷ್ಣ ಪಟ್ಟಾಜೆ, ನಿಶಾಂತ್, ಸ್ನೇಹ ಮತ್ತು ಮೀರಾ ಭಾರ್ಗವ್, ಅನಘ ಮಲ್ಲಿಕ್ ಮತ್ತು ನವ್ಯ, ಎಂ.ಆರ್. ಮಹೇಶ್, ತೇಜಸ್ ಕಡೂರ್, ಗಹನಾ ಕಡೂರ್, ಗುರು ಪ್ರಸಾದ್, ರೋಶನ್.

ಡಾ. ಎಂ.ಜಿ. ಪ್ರಸಾದ್ ಅವರು ಕರ್ನಾಟಕದ ದಾಸ ಪರಂಪರೆಯನ್ನು ಕುರಿತು ವಿವರಣೆ ನೀಡಿದರು. ಸುಮಾರು ಹತ್ತನೇ ಶತಮಾನದಿಂದ ಇಂದಿನವರೆಗೂ ಬೆಳೆದುಕೊಂಡು ಬಂದಿರುವ ನಮ್ಮ ದಾಸ ಸಂಸ್ಕೃತಿ ಅತ್ಯಂತ ವಿಶೇಷವಾದುದು. ದೇಶದ ಉದ್ದಗಲಕ್ಕೂ ಭಕ್ತಿ ಪಂಥದ ಹಿರಿಮೆಯನ್ನು ಹುಟ್ಟು ಹಾಕಿ ಬೆಳೆಸಿದ ಅನೇಕ ಐತಿಹ್ಯಕಾರರನ್ನು ಸ್ಮರಿಸಿದರು. ಎಲ್ಲರಲ್ಲೂ "ದಾಸತನ" ಬೆಳೆದು ಮನಸ್ಸಿನ ಕ್ಷೋಭೆಗಳು ಕಡಿಮಾಯಾಗುವುದರ ಜೊತೆಗೆ ಭಕ್ತಿ ಪಥದ ಮುಖಾಂತರ ಪರಮಾತ್ಮನಿಗೆ ಹತ್ತಿರವಾಗುವ ಸುಲಭ ಸಾಧನವನ್ನು ವಿವರಿಸಿದರು.

ಅನಿತಾ ಅನಂತಸ್ವಾಮಿಯವರು ಗಣೇಶ ಸ್ತುತಿಯೊಂದಿಗೆ ಆರಂಭಿಸಿ, ಅಂಬಿಗಾ ನಾನಿನ್ನ ನಂಬಿದೆ, ತಾರಕ್ಕ ಬಿಂದಿಗೆ, ತಾಂಬೂಲವ ಕೊಳ್ಳೋ, ತೂಗಿರೆ ರಂಗನ... ಮೊದಲಾದ ಹಾಡುಗಳನ್ನು ಬಹಳ ಸೊಗಸಾಗಿ ಹಾಡಿ ಶ್ರೋತೃಗಳ ಮೆಚ್ಚುಗೆಗಳಿಸಿದರು. ಪಕ್ಕವಾದ್ಯದಲ್ಲಿ ತಬಲಾ ಸಾಥಿಯಾಗಿ ಅನಿಲ್ ಖರೆ ಮತ್ತು ಹಾರ್ಮೋನಿಯಮ್‌ನಲ್ಲಿ ಚಿಂತನ್ ಮೆಹ್ತಾ ಇದ್ದರು. ಸ್ಥಳೀಯ ಸಭಿಕರಿಂದ ಬಂದ ಕೋರಿಕೆಗಳಷ್ಟೇ ಅಲ್ಲದೇ ಡೆಟ್ರಾಯಿಟ್ ಮೊದಲಾದ ಸ್ಥಳಗಳಿಂದಲೂ ಹಾಡಿನ ಕೋರಿಕೆಗಳು ಬಂದಿದ್ದು ವಿಶೇಷ. ಪದ್ಮಿನಿ ಅವರು ಕಲಾವಿದರನ್ನು ಶ್ರೋತೃಗಳಿಗೆ ಪರಿಚಯಿಸಿ, ಕಲಾವಿದರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಕಲಾವಿದರಿಗೆ ಸ್ಮರಣಫಲಕವನ್ನು ಬೆನ್ ಕಾಂತರಾಜು, ಡಾ.ರಾಜು ಮುತ್ತು ಹಾಗೂ ಮಲ್ಲಿಕ್ ಪ್ರಸಾದ್ ಅವರು ನೀಡಿದರು.

ಹೀಗೆ ಕೃಷ್ಣನ ಗಾಯನದಲ್ಲಿ ತಲ್ಲೀನರಾದ ಶ್ರೋತೃಗಳು ಮುಂದೆ ಮಹಾಮಂಗಳಾರತಿ ಹಾಗೂ ಪ್ರಸಾದ ಸೇವನೆಯಲ್ಲಿ ಭಾಗವಹಿಸಿ ಈ ಒಂದು ಹೊಸ ಬಗೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದುದು ಮೈತ್ರಿ ತಂಡದ ಹೆಚ್ಚುಗಾರಿಕೆ. ಶ್ರೀಕೃಷ್ಣ ಬೃಂದಾವನದ ಸಭಾಭವನದಲ್ಲಿ ನಡೆದ ಈ ವರ್ಷದ ದಾಸೋತ್ಸವ ಕಾರ್ಯಕ್ರಮವನ್ನು ಪ್ರತಿವರ್ಷವೂ ಹೀಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಈ ಪರಂಪರೆಗೆ ಗೌರವ ಸೂಚಸಿಲಿ ಎಂಬುದು ಎಲ್ಲರ ಆಶಯ.

English summary
Dasotsava was celebrated by Brindavana Kannada Sangha in New Jersey, USA on March 10. Anitha Ananthaswamy was the chief guest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X