ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲದಲ್ಲಿ ಏರ್‌ಟೆಲ್‌ಗೆ ಹಿಡಿದ ವೈರಲ್ ಜ್ವರ (ಭಾಗ 2)

By * ವಿಜಯ ರಂಗ ಪ್ರಸಾದ್ ಎನ್.ಎಸ್, ಸಿಂಗಪುರ
|
Google Oneindia Kannada News

Vijaya Ranga Prasad, Singapore
ಅಂತೂ ಎಲ್ಲಾ ಔಪಚಾರಿಕ ಕಾರ್ಯಗಳನ್ನು ಮುಗಿಸಿ ಅರ್ಜಿಸಹಿತ ನನ್ನ ಪಾಸ್ಪೋರ್ಟ್ ಪ್ರತಿ ಮತ್ತು ಫೋಟೋವನ್ನು ಆ ಅಷ್ಟಾವಧಾನಿಗೆ ಕೊಟ್ಟೆ. ಅದನ್ನು ಪರಿಶೀಲಿಸಿ "ಸರಿಯಾಗಿದೆ ಸಾರ್...ದುಡ್ದು ಕಟ್ಟಿ 5 ನಿಮಿಷ ಕುಳಿತುಕೊಳ್ಳಿ ಆಕ್ಟಿವೇಟ್ ಮಾಡಿಕೊಡುತ್ತೇನೆ" ಅಂದ. “ಎಲಾ ಇವನ... 48 ಗಂಟೆ ಅಂದವನು 5 ನಿಮಿಷ ಅಂತಾನಲ್ಲ? ಓಹೋ ಬಹುಶಃ ಎನ್ಆರ್‌ಐ ಪ್ರಭಾವ ಇರಬಹುದೇನೋ” ಅಂದುಕೊಂಡೆ. ಆಗ ನನಗೆ ಕೆಲವು ವರ್ಷಗಳ ಹಿಂದೆ ಇದ್ದ ಫೋನ್ ಕನೆಕ್ಷನ್ ವ್ಯವಸ್ಥೆ ನೆನಪಿಗೆ ಬಂತು. ದೂರವಾಣಿ ಪಡೆಯಲು 6 ತಿಂಗಳು, ವರ್ಷಗಟ್ಟಲೆ ಕಾಯಬೇಕಿತ್ತು. ಆಗ 3-4 ಬೀದಿಗೆ ಇದ್ದದ್ದು ನಮ್ಮ ಮನೆಯ ಕಪ್ಪು ಬಣ್ಣದ ದೂರವಾಣಿಯೊಂದೇ. "ಲೋ ಜಯಮ್ಮರ ಮಗಳು ಕರೆಮಾಡಿದ್ದಳು... ಮತ್ತೆ 30 ನಿಮಿಷ ಬಿಟ್ಟು ಮಾಡುತ್ತಾಳಂತೆ ಹೇಳಿ ಬಾರೋ..." ಅಂತ ಹೀಗೇ ಹೇಳಿ ನಮ್ಮಮ್ಮ ದಿನಕ್ಕೆ 10 ಬಾರಿಯಾದರೂ ನನ್ನನ್ನು ಜಯಮ್ಮ, ಕಮಲಮ್ಮ, ಸುಬ್ಬಮ್ಮರ ಮನೆಗೆ ಕಳುಹಿಸುತ್ತಿದ್ದಳು. ಹೀಗೆ 'ಫೋನ್ ಆಪರೇಟರ್' ಆಗಿದ್ದ ನನಗೆ ಈಗಿನ 5 ನಿಮಿಷದ ಕನೆಕ್ಷನ್ ಕೇಳಿ ನಮ್ಮ ಭಾರತದ ಪ್ರಗತಿಯ ಬಗ್ಗೆ ಹೆಮ್ಮೆಯಾಯಿತು.

15 ನಿಮಿಷ ಆಯಿತು. ಅಷ್ಟಾವಧಾನಿ ನನ್ನ ಕಡೆ ನೋಡುತ್ತಾನೆ, ಯಾರಿಗೋ ಕರೆಮಾಡುತ್ತಾನೆ, "ಎಲ್ಲಾ ಡಾಕ್ಯುಮೆಂಟ್ ಕಳಿಸಿದ್ದೀನಿ ಕಸ್ಟಮರ್ ಕಾಯುತ್ತಿದ್ದಾರೆ ಬೇಗ ಆಕ್ಟಿವೇಟ್ ಮಾಡಿ" ಅಂತಾನೆ, ಮತ್ತೆ ಅಲ್ಲಿದ್ದ ಗ್ರಾಹಕರನ್ನ ತೊಡಕನ್ನು ನಿವಾರಿಸಲು ಸಂವಾದ ಮುಂದುವರೆಸುತ್ತಾನೆ. ಹೀಗೆ 30 ನಿಮಿಷಗಳಾದನಂತರ "ಸಾರ್ ಎಲ್ಲಾ ರೆಡಿಯಾಗಿದೆ. ನೀವು ಮನೆಗೆ ಹೋಗಿ 10 ನಿಮಿಷದಲ್ಲಿ ಆಕ್ಟಿವೇಟ್ ಆಗುತ್ತೆ" ಅಂದ. ನನಗೋ ನನ್ನ ಕಣ್ಮುಂದೆ 30 ನಿಮಿಷಗಳಿಂದ ಆಗದ ಕೆಲಸ 10 ನಿಮಿಷದಲ್ಲಿ ನಾನು ಮನೆಗೆ ಹೋದಮೇಲೆ ಹೇಗಾದೀತು ಎಂಬ ಅನುಮಾನವಾದರೂ ಆಗಬಹುದೇನೋ ಅಂತ ಮನೆಕಡೆ ನಡೆದೆ.

ಮನೆಗೆ ಬಂದಾಗ ನೋಡಿದರೆ ನನ್ನ ಮಗನಿಗೆ ಚಳಿ, ಜ್ವರ ಬಂದಿತ್ತು. ಈ viral ನಮ್ಮಂತಹ NRIಗಳಿಗಾಗಿ ಕಾಯುತ್ತಿರುತ್ತದೆ ಅನ್ನಿಸುತ್ತದೆ, ಯಾಕೆ ಹೇಳಿ? ದೇಸೀಯರನ್ನು ಆಕ್ರಮಣ ಮಾಡಿದರೆ ಅದಕ್ಕೆ ನಿರಾಸೆಯೇ ಸರಿ. ಅದಕ್ಕೆ ಗೊತ್ತು ನಮ್ಮಂಥವರ ಮೇಲೆ ಅದರ ಪರಿಣಾಮ ಅತಿ ಶೀಘ್ರ ಅಂತ. ಸರಿ ಮನೆಯಲ್ಲೇ ಇದ್ದ ವೈದ್ಯರಾದ ನನ್ನ ಭಾವನವರು "ಈಗತಾನೆ ಜ್ವರ ಬಂದಿದ್ದರಿಂದ ಕ್ರೋಸಿನ್ ಸಾಕು ಕಣೋ” ಅಂದರು. ಮಾಗಿ ಚಳಿಯ ಜೊತೆಗೆ, ಈ ವೈರಲ್ ಚಳಿ, ಜ್ವರವೂ ಸೇರಿ ಕೆಂಡದ ಮೇಲೆ ತುಪ್ಪ ಹಾಕಿದಂತಾಯಿತು.

ಮಾರನೇ ದಿನ ಭಾನುವಾರ, ಸರಿ ಸಿಮ್‌ಕಾರ್ಡ್ activate ಆಗಿರುತ್ತೆ, ಮಗನ ಜ್ವರದಿಂದ ಹೇಗೂ ಮನೆಯಿಂದ ಹೊರಕ್ಕೆ ಹೋಗಲು ಆಗದು, ಸ್ನೇಹಿತರಿಗಾದರೂ ಕರೆ ಮಾಡೋಣ ಅಂತ ಡಯಲ್ ಮಾಡಿದರೆ "Currently all calls from this number are barred" ಅಂತ ರಾಗವಾಗಿ ಉಲಿದ pre-recorded ಧ್ವನಿ ಕೇಳುವಷ್ಟರಲ್ಲಿ ನನಗೆ ತಿಳಿಯಿತು ನನ್ನ ಸಿಮ್ ಕಾರ್ಡ್ ಇನ್ನೂ ಚಾಲನೆಯಲ್ಲಿಲ್ಲ ಅಂತ. ಭಾನುವಾರ ಬೇರೆ ಎಲ್ಲಾ ಏರ್ ಟೆಲ್ ಅಂಗಡಿಗಳು ಮುಚ್ಚಿರುತ್ತೆ. ಸರಿ ಕಾಲ್‌ಸೆಂಟರ್ ನಮ್ಮ ರಾಜಧಾನಿಯಲ್ಲಿ ಇದ್ದಿದ್ದರಿಂದ Airtel customer careಗೆ ಫೋನಾಯಿಸಿದೆ. "ರಿಂಬ ರಿಂಬ ರೊ ರೊ " ಅಂತ ಆಫ್ರಿಕನ್ ಶೈಲಿಯ ರಿಂಗ್ ಟೋನ್... ನಂತರ "press 1 for English…" ಕನ್ನಡಕ್ಕಾಗಿ 2ನ್ನು ಒತ್ತಿ"... ಅಬ್ಬಾ ಅಂತೂ ಕನ್ನಡದಲ್ಲೂ ಆಯ್ಕೆ ಇದೆಯಲ್ಲಾ, ಇಲ್ಲದ್ದಿದರೆ "ಕರವೇ"ನವರು ಬಿಡ್ತಾರಾ ಅನಿಸಿತು!

English summary
When leading telecom operator company Airtel itself is infected with virus, what kind of antibiotic should be administered? Vijaya Ranga Prasad from Singapore narrates true and horrifying experience he had with Airtel in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X