ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಸಂಗೀತ ಪಿತಾಮಹ ಪುರಂದರ ನಮನ

By * ವೆಂಕಟ್, ಸಿಂಗಪುರ
|
Google Oneindia Kannada News

Purandara Namana 2012 in Singapore
ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಪುರಂದರ ದಾಸರ ಆರಾಧನೆಯನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡ ಕನ್ನಡ ಸಂಘ (ಸಿಂಗಪುರ) ಮತ್ತು ಶ್ರೀ ಸೆಂಪಗ ವಿನಾಯಕ ದೇವಸ್ಥಾನದ ಸಂಗೀತ ಮತ್ತು ನೃತ್ಯ ಅಕಾಡೆಮಿ ಜಂಟಿ ಆಯೋಗದಲ್ಲಿ ಪೆಬ್ರವರಿ 5, 2012ರಂದು ದೇಗುಲದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದ ಸಂಘದ ಸಹ ಕಾರ್ಯದರ್ಶಿ ರಾಮನಾಥ, ವಿಶಾಲಾಕ್ಷಿ ವೈದ್ಯ ಮತ್ತು ಜಯಶ್ರೀ ಅವರ ನಿರೂಪಣೆಯಲ್ಲಿ ಒಂದು ಸುಂದರ ಶಾಸ್ತ್ರೀಯ ಸಂಗೀತದ ಹಾಡಿನಂತೆ ಸುಗಮವಾಗಿ ಕಾರ್ಯಕ್ರಮ ಮೂಡಿಬಂದಿತು.

ಸತತವಾಗಿ 15 ವರ್ಷಗಳಿಂದ ಈ ಕಾರ್ಯಕ್ರಮದ ರೂವಾರಿಯಾಗಿ ಶಾಸ್ತ್ರೀಯ ಸಂಗೀತದ ಸೊಗಡನ್ನು ಸಿಂಗಪುರದಲ್ಲಿ ಹರಡುವಲ್ಲಿ ತಮ್ಮ ತನು-ಮನಗಳನ್ನು ಮುಡಿಪಾಗಿಟ್ಟು ಶ್ರಮಿಸುತ್ತಿರುವ ಗಾನ ಕೋಗಿಲೆ, ನಾದನಿಧಿ, ಕಲಾರತ್ನ ಭಾಗ್ಯಮೂರ್ತಿಯವರು ಈ ಕಾರ್ಯಕ್ರಮದ ಕೇಂದ್ರ ಬಿಂದುವೆಂದರೂ ಅತಿಶಯೋಕ್ತಿಯಾಗಲಾರದು. ಭಾಗ್ಯಮೂರ್ತಿಯವರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು : ಕನ್ನಡ ಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ್, ಶ್ರೀ ಸೆಂಪಗ ವಿನಾಯಕ ದೇವಸ್ಥಾನದ ಸಂಗೀತ ಹಾಗು ನೃತ್ಯ ಅಕಾಡೆಮಿಯ ಮುಖ್ಯ ಸಲಹಗಾರರಾದ ಇಲೆಯತಂಬಿ ನರಸಿಂಗನ್ ಮತ್ತು ಭಾಗ್ಯಮೂರ್ತಿಯವರು ಪುರಂದರ ದಾಸರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಮನಾಥ ಅವರ ಸ್ವಾಗತ ಭಾಷಣ ಮತ್ತು ಜಯಶ್ರೀ ಅವರ ಪುರಂದರದಾಸರ ಕಿರು ಪರಿಚಯದ ನಂತರ ವೇದಿಕೆ ಸಂಗೀತಮಯವಾಗಲು ಸಜ್ಜಾಯಿತು. ವೃಂದಗಾನದಡಿಯಲ್ಲಿ ಸ್ವರಾವಳಿ ಮತ್ತು ಪಿಳ್ಳಾರಿ ಗೀತೆಗಳಿಂದ ಆರಂಭಗೊಂಡು, ಶೃತಿ ಆನಂದ್ ಮತ್ತು ಹೇಮ ಅವರು ರಾಮಮಂತ್ರವ ಜಪಿಸೋ, ಕರವ ಮುಗಿದ, ಜಗದೋದ್ಧಾರನ, ಚಂದ್ರಚೂಡ, ಶರಣೆಂಬೆ ವಾಣಿ, ಅಲ್ಲಿ ನೋಡಲು ರಾಮ, ನರಸಿಂಹನ ಪಾದ ಮತ್ತು ತಂಬೂರಿ ಮೀಟಿದವ ಕೀರ್ತನೆಗಳನ್ನು ಹಾಡಿದರು. ಇವರ ಜೊತೆಗೆ ವಾದ್ಯಗಳನ್ನು ನುಡಿಸಿದ ಸಂಜೀವ್ ಸಕ್ಸೇನ(ತಬಲ), ರಾಮ್‌ಕುಮಾರ್ (ವೀಣೆ), ಸರವಣನ್ (ಕೊಳಲು) ಮತ್ತು ಗಜನ್ (ಮೃದಂಗ)ಗಳನ್ನು ನುಡಿಸಿ ಎಲ್ಲರಿಗೂ ಗಾನಸುಧೆಯನ್ನು ಹರಿಸಿದರು.

ಕೊನೆಯಲ್ಲಿ ಹಾಡಿದ ತಂಬೂರಿ ಮೀಟಿದವ ಹಾಡು ಇಡೀ ಸಭಾಂಗಣವನ್ನು ಭಕ್ತಿಯ ಭಾವದ ಶಿಖರದ ಶೃಂಗಕ್ಕೆ ನಿಲ್ಲಿಸಿತ್ತು. ಸಾಧನ ಅವರ ನೃತ್ಯ ಸಂಯೋಜನೆಯಲ್ಲಿ ಶ್ರೀಲೇಖ, ಅದಿತಿ ರಾಮದಾಸ್, ಪ್ರಿಯ ನಟರಾಜ್, ನಿಖಿತ ದಿವೇಕರ್, ಶ್ವೇತ ಅನಂತಲಿಂಗಮ್‌ ಮತ್ತು ನಿಖಿತ ಪ್ರಸಾದ್ "ಕಡಗೋಲ ತಾರೆನ್ನ ಚಿನ್ನವೆ" ಮತ್ತು ಕುಮಾರಿಯರಾದ ಪಂಚಮಿ ಚಂದುಕೂಡ್ಲು, ಪೂರ್ಣಿಮ ನಟರಾಜ್ ಹಾಗು ಸ್ಟೆಫ್ನಿ ಮೇರಿ " ಮೆಲ್ಲ ಮೆಲ್ಲನೆ ಬಂದನೆ" ಹಾಡುಗಳಿಗೆ ಭರತನಾಟ್ಯದಲ್ಲಿ ಭಾವಪೂರ್ಣವಾಗಿ ನೃತ್ಯ ಪ್ರದರ್ಶಿಸಿದರು. ದಾಸಕೂಟದವರಿಂದ ಜಿಪುಣಾಗ್ರೇಸರನಾದ "ಶ್ರೀನಿವಾಸ ನಾಯಕ"ನು ತಂಬೂರಿ ಹಿಡಿಯುವ ಪುರಂದರ ವಿಠಲನಾಗಿ ಪರಿವರ್ತಿತವಾದ ವೃತ್ತಾಂತದ ಪ್ರಸಂಗ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮ ಮುಗಿದ ನಂತರ ಯಥಾಪ್ರಕಾರ ಪ್ರಸಾದ ವಿತರಿಸಲಾಯಿತು.

English summary
Purandara Namana 2012 was held in Singapore on February 5, 2012. Smt Bhagya Murthy, the force behind this program for the past 15 years, was felicitated by Kannada Sangha (Singapore). A report by Venkat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X