ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದ ಕನ್ನಡಿಗರನ್ನು ಬೆಚ್ಚಗಾಗಿಸಿದ ಹೇಮಂತ ಗಾನ

By * ನಾಗರಾಜ್ ಎಂ., ಕನೆಕ್ಟಿಕಟ್
|
Google Oneindia Kannada News

Hemantha Gaana 2012
ಎತ್ತ ನೋಡಿದರೂ ಬಿಳಿ ಹಿಮದ ಗುಡ್ಡೆಗಳು, ಮೈ ಕೊರೆಯುತ್ತಿರುವ ಚಳಿಗಾಳಿ, ಬಿಳಿ ಹಿಮದ ಮೇಲೆ ಬಿದ್ದು ಕಣ್ಣು ಕೋರೈಸುತ್ತಿರುವ ಸೂರ್ಯನ ಕಿರಣಗಳು... ಇವೆಲ್ಲದರ ಮಧ್ಯೆ ಎಲ್ಲಿಂದಲೋ ಕೇಳಿ ಬರುತ್ತಿರುವ "ನೆರಳನು ಕಾಣದ ಲತೆಯಂತೆ, ಬಿಸಿಲಿಗೆ ಬಾಡಿದ ಹೂವಂತೆ.. ಏನು ನಿನ್ನ ಚಿಂತೆ? ಹೇಳೇ ನನ್ನ ಕಾಂತೆ..." ಎಂಬ ಧ್ವನಿ ಸುರಳಿ ... ಯಾರಪ್ಪ ಇದು ... ಈ ದೂರದ ಅಮೆರಿಕಾದಲ್ಲಿ ಅದರಲ್ಲೂ ಈ ನಡುಗುವ ಚಳಿಯಲ್ಲಿ ಹಾಡುತ್ತಾ ಬೇಸರಿಸಿಕೊಂಡಿರುವ ನಲ್ಲೆಯನ್ನು ಸಂತೈಸುತ್ತಿರುವುದು? ಅಂತ ಯೋಚಿಸುತ್ತಾ ನೋಡಿದರೆ.. ಈ ಹಾಡು ಕೇಳಿ ಬಂದಿದ್ದು ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟ ಆಯೋಜಿಸಿದ್ದ "ಹೇಮಂತ ಗಾನ" ಸಂಗೀತ ಸಂಜೆಯಲ್ಲಿ!

ಜನವರಿ 22, ಶನಿವಾರದಂದು ಕನೆಕ್ಟಿಕಟ್ನಲ್ಲಿರುವ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದ ಆಡಿಟೋರಿಯಮ್ನಲ್ಲಿ ನಡೆದ ಈ ಗಾನ ಸಂಜೆಗೆ ನೂರಾರು ಹೊರನಾಡ ಕನ್ನಡಿಗರು ತಮ್ಮ ಪರಿವಾರ ಸಮೇತ ತೀವ್ರ ಚಳಿಯಲ್ಲೂ (0 ಡಿಗ್ರಿ ಸೆಲ್ಸಿಯಸ್) ಉತ್ಸಾಹದಿಂದ ಭಾಗವಹಿಸಿದ್ದು ನೋಡಿದರೆ ಕನ್ನಡದ ಅಭಿಮಾನ ಎದ್ದು ಕಾಣುತ್ತಿತ್ತು.

ರಘು ಸೋಸಲೆ ಹೇಮಂತ ಗಾನದ ಬಗ್ಗೆ ವಿವರಣೆ ಕೊಡುತ್ತ ಎಲ್ಲರನ್ನು ಸ್ವಾಗತಿಸಿದರು. ಅನಿತಾ ಜೋಯಿಸ್ ಅವರು ಹಾಡಿದ ಶ್ರೀಗಣೇಶ ಸ್ತುತಿಯೊಂದಿಗೆ ಈ ಗಾನ ಸಂಜೆ ಸರಿಯಾಗಿ 4 ಗಂಟೆಗೆ ಪ್ರಾರಂಭವಾಯಿತು. ನಂತರ ಯಶವಂತ್ ಗಡ್ಡಿಯವರು ಹಾಡಿದ ಕನ್ನಡ ನಾಡ ಗೀತೆ "ಜೈ ಭಾರತ ಜನನಿಯ ತನುಜಾತೆ.. ಜಯಹೇ ಕರ್ನಾಟಕ ಮಾತೆ.." ಕೇಳಿಬಂದ ಕೂಡಲೇ ಸಭಿಕರೆಲ್ಲ ಎದ್ದು ನಿಂತು ತಾವೂ ಹಾಡತೊಡಗಿದರು.

ಈ ಹೇಮಂತ ಗಾನದ ವಿಶೇಷವೇನೆಂದರೆ, ಹಾಡು ಹೇಳಲು ಮಕ್ಕಳಿಗೂ ಹಾಗೂ ದೊಡ್ಡವರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದು, ಮಕ್ಕಳ ಹಾಡು ಆದಮೇಲೆ ದೊಡ್ಡವರ ಹಾಡು. ಹೀಗೆ ಸರಿಸಮನಾಗಿ ನಡೆದ ಈ ಸಮಾರಂಭದಲ್ಲಿ ಮಕ್ಕಳೂ ನಾವೇನೂ ಕಡಿಮಯಿಲ್ಲಎಂಬಂತೆ ಅಚ್ಚ ಕನ್ನಡದಲ್ಲಿ ಶುಶ್ರಾವ್ಯವಾಗಿ ಹಾಡಿದ್ದು ಎಲ್ಲರ ಮನಸೆಳೆಯಿತು. 7ರ ಪೋರ ಮಾ| ಕಶ್ಯಪ್ ಹಾಡಿದ "ತೇರಾ ಏರಿ ಅಂಬರದಾಗೆ ನೇಸರ ನಗುತಾನೆ" , 9ರ ಕು| ನಿಷಿತ "ಜೋ ಜೋ ಲಾಲಿ ನಾ ಹಾಡುವೆ .." ಅಂತ ಹಾಡತೊಡಗಿದಾಗ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸಂತೋಷಪಟ್ಟರು.

ನಂತರ ಮೋಹನ್ ತಮ್ಮ ಮಗಳೊಂದಿಗೆ ಹೇಳಿದ ನಮ್ಮ ಆಟೋರಾಜ ಶಂಕರ್ ನಾಗ್ ರವರ ಪ್ರಸಿದ್ದ "ಜೊತೆ ಜೊತೆಯಲಿ ..ಇರುವೆನು ಹೀಗೆ ಎಂದು", ದಿಲೀಪ್ ರವರು ಶುಭಮಂಗಳ ಚಿತ್ರದ "ಹೂವೊಂದು ಬಳಿಬಂದು ತಾಕಿತು ಎನ್ನೆದೆಯ" ಎಂದು ತಮ್ಮ ಪ್ರೀತಿಯ ಮಡದಿಗಾಗಿ ಕೈಯಲ್ಲಿ ಹೆಂಡತಿ ಕೊಟ್ಟ ಪ್ರೀತಿಯ ಗುಲಾಬಿ ಹೂ ಹಿಡಿದು ಸುಶ್ರಾವ್ಯವಾಗಿ ಹೇಳಿದ್ದು ಎಲ್ಲರನ್ನು ಪ್ರೀತಿಯ ಭಾವುಕತೆಯಲ್ಲಿ ತೇಲಿಸಿತು.

ಹೀಗೆ ಸಾಲು ಸಾಲಾಗಿ ಹಳೆಯ ಹಾಗು ಹೊಸ ಕನ್ನಡಗೀತೆಗಳ ಜೊತೆಗೆ ಆಶಾ ಗಡ್ಡಿಯವರಿಂದ ಒಂದು ಭಾವಗೀತೆ "ನಿಂತಲ್ಲೇ ನೀರು ನಿಲ್ಲುವುದಿಲ್ಲ, ಹಳ್ಳ ಸಿಕ್ಕಿದ ಕಡೆ ನಡೆಯುವುದಲ್ಲಾ", "ಅಂಜು ಅವರಿಂದ ಪುರಂದರ ದಾಸರ "ರಾಮ ನಾಮ ಪಾಯಸಕ್ಕೆ, ಕೃಷ್ಣ ನಾಮ ಸಕ್ಕರೆ" ದಾಸರ ಪಾದ, ಅನಿತಾ -ಕೃಷ್ಣಮೂರ್ತಿರವರಿಂದ "ಬೆಳದಿಂಗಳ" , ಮಕ್ಕಳಿಂದ ವಾದ್ಯ ಸಂಗೀತ ಎಲ್ಲರ ಮನಸೆಳೆದವು.

ಜೋ ಕಣ್ಣೂರು ಅವರು ಮಕ್ಕಳಿಗಾಗಿ ನಡೆಸಿಕೊಟ್ಟ ಒಂದು ಚಿಕ್ಕ ಮ್ಯಾಜಿಕ್ ಶೋ ಎಲ್ಲ ಮಕ್ಕಳನ್ನು ಸೆಳೆಹಿಡಿದ ಮೇಲೆ ಕೊನೆಗೆ ವೇಣು ಗುಡೇರ ಹಾಡಿದ "ಕೊಲವೆರಿ ಕೊಲವೆರಿ ಡಿ" ಹಾಡಿಗೆ ಎಲ್ಲರು ಕುಣಿಯಲು ಆರಂಭಿಸಿದ್ದನ್ನು ನೋಡಿ, ಈ ಕೊಲವೆರಿಯಾ ಮ್ಯಾಜಿಕ್ ಅಮೆರಿಕಾವನ್ನು ಬಿಡಲಿಲ್ಲವಲ್ಲ ಅಂತಾ ಅಂದುಕೊಂಡು.

ಎಲ್ಲ ಕನ್ನಡಿಗರು ಮನೆಯಿಂದ ಮಾಡಿ ತಂದಿದ್ದ ವಿವಿದ ಬಗೆಯ ರುಚಿಯಾದ ಊಟ ಮಾಡಿ ಹೊಯ್ಸಳ ಕನ್ನಡ ಕೂಟದವರಿಗೆ ಧನ್ಯವಾದಗಳನ್ನು ಹೇಳಿ ಮನೆ ಕಡೆ ಹೊರಟಾಗ ರಾತ್ರಿ 8ರ ಮೇಲಾಗಿತ್ತು. ಹೀಗೆ ಸರಿಸುಮಾರು 4 ಗಂಟೆಗಳ ತನಕ ನಡೆದ ಈ ಗಾನ ಸಂಜೆ ಎಲ್ಲರ ಕಿವಿ , ಮನ ತಣಿಸಿದ್ದಲ್ಲದೆ ಎಲ್ಲರಲ್ಲೂ ಗುಪ್ತವಾಗಿ ಅಡಗಿದ್ದ ಹಾಡುವ ಕಲೆಯನ್ನು ಹೊರಹೊಮ್ಮಿಸಿದ್ದಂತು ಅಕ್ಷರಶ: ನಿಜ.

English summary
Hemantha Gaana 2012 : Hoysala Kannada Koota, Connecticut, USA celebrated arrival of spring on 22nd January, 2012. Report by Nagaraja Maheswarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X