ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದ ಹಸಿರೆಲೆಗಳ ನಡುವಿನಿಂದ ಚಿಕ್ಕವ್ವಾ ಚಿಕ್ಕವ್ವಾ

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Dayanand and BK Sumitra
ಗಾನ-ವಿನೋದ ಕಾರ್ಯಕ್ರಮ ಇದೇ ಏಪ್ರಿಲ್ 24ರಂದು ಸಿಂಗಪುರದ ಪಾಲಿಟೆಕ್ನಿಕ್ ಸಭಾಂಗಣದಲಿ ನಡೆಯಿತು. ಅಂದು ಸಭಿಕರ ಮಾತಿನಲಿ ಯುಗಾದಿ ಶುಭಾಶಯ, ಕ್ರಿಕೆಟ್ ವಿಜಯೋತ್ಸವದ ಹರುಷದೊಂದಿಗೆ, ಅಂದೇ ಬೆಳಿಗ್ಗೆ ನಿಧನರಾದ ಸತ್ಯ ಸಾಯಿಬಾಬಾ ಹಾಗೂ ಕೆಲದಿನಗಳ ಹಿಂದೆ ನಮ್ಮನ್ನು ಅಗಲಿದ ಹಿಂದೂಸ್ತಾನಿ ಸಂಗೀತಗಾರ ಮಾಧವ ಗುಡಿ ಅವರ ನಿಧನದ ಸಂತಾಪ ಮಾತುಗಳು ಕೇಳಿ ಬಂದಿತು. ಇದೇ ಅಲ್ಲವೇ ಜೀವನದ ಸುಖ-ದುಃಖ, ಬೇವು-ಬೆಲ್ಲ ನಿಜಾರ್ಥ. ಜೀವನದಲ್ಲಿ ಸಮರಸವೇ ಬಾಳ್ವೆ ಎಂಬ ಬದುಕಿನ ಸಂದೇಶ.

ಸಿಂಗಪುರದಲಿ ನಡೆದ ಗಾನ-ವಿನೋದ ಕಾರ್ಯಕ್ರಮಕ್ಕೆ ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ, ಸಂಪಿಗೆ ಮರದ ಹಸಿರೆಲೆ ನಡುವೆ, ಚೆಲ್ಲಿದರೊ ಓಕುಳಿಯಾ, ಮುಂಜಾನೆದ್ದು ಕುಂಬಾರಣ್ಣ, ಎದೆಯೆಂಬ ಗುಡಿಯೊಳಗೆ... ಈ ಹಾಡುಗಳನ್ನು ಬಹುತೇಕರೂ ಹಾಡಿದ್ದರೂ ಸಹ ತಮ್ಮದೇ ವಿಶಿಷ್ಠ ಛಾಪನ್ನು ಮೂಡಿಸಿರುವ ಬಿ.ಕೆ.ಸುಮಿತ್ರ ಅವರ ಗಾನ. ಮಿಮಿಕ್ರಿ ದಯಾನಂದ್ ಅವರ ವಿನೋದ ಜೊತೆಗೆ ಬೋನಸ್ ಡಾ.ರಾಜ್ ಅವರ ಜನ್ಮದಿನೋತ್ಸವದ ಅಂಗವಾಗಿ ರಾಜ್ ಅವರ ಸಿರಿಕಂಠದ ಹೋಲಿಕೆ ಇರುವ ಗಂಗೋತ್ರಿ ರಂಗಸ್ವಾಮಿ ಅವರ ಡಾ.ರಾಜ್ ಹಾಡುಗಳ ಚಿತ್ರಗೀತೆಗಳ ಕಾರ್ಯಕ್ರಮ ಇದ್ದಿತು.

ಸ್ವಾಗತ ಭಾಷಣ ಸಿಂಗಪುರ ಕನ್ನಡ ಸಂಘದ ಅಧ್ಯಕ್ಷರಾದ ಡಾ.ವಿಜಯ್‌ಕುಮಾರ್ ಅವರಿಂದ. ಯುಗಾದಿಯ ಶುಭಾಶಯಗಳೊಂದಿಗೆ ಅಗಲಿದ ಮಹಾನ್ ಆತ್ಮ ಬಾಬಾ ಹಾಗೂ ಪಂಡಿತ್ ಮಾಧವಗುಡಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದರು.

ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು ಎನ್ನುತ್ತಾ ಡಾ.ರಾಜ್ ಅವರ ಧ್ವನಿಯ ಅನುಕರಣೆಯಲಿ ಹಾಡುತ್ತಾ ಬಂದ ರಂಗಸ್ವಾಮಿ ಅವರು ಹೊರನಾಡಿನಲಿ ಕನ್ನಡ ಸಂಸ್ಕೃತಿ, ಭಾಷೆ ಉಳಿಸಿ, ಬೆಳೆಸುತ್ತಿದ್ದೀರಾ. ಅದಕ್ಕಾಗಿ ನಿಮಗೆಲ್ಲರಿಗೂ ನನ್ನ ವಂದನೆಗಳು. ಡಾ.ರಾಜ್ ಅವರ ಧ್ವನಿ ನನಗೆ ಭಿಕ್ಷೆಯಾಗಿ ದೊರೆತಿದೆ ಎಂದರು. ಡಾ.ರಾಜ್ ಅವರ ಜನ್ಮದಿನೋತ್ಸವದಂದು ರಾಜ್ ಹಾಡಿದ ಬಹುತೇಕ ಹಾಡುಗಳನ್ನು ಹಾಡಿ ಸಭಿಕರನು ರಂಜಿಸಿದರು.

ಗಂಟೆಗಟ್ಟಲೆ ಸಭಿಕರನು ನಗಿಸುವುದು ಒಂದು ಸಾಹಸವೇ ಹೌದು. ಸುಮಾರು ಹತ್ತು ಸಾವಿರದ ಆರನೂರ ಎಂಬತ್ತೊಂಬತ್ತು ಮಿಮಿಕ್ರಿ ಕಾರ್ಯಕ್ರಮಗಳ ಸರದಾರ ದಯಾನಂದ್ ಅವರು "ನಗುವನ್ನು ನಾವು ಮರೆಯುತ್ತಿದ್ದೇವೆ, ಜೋಬಲ್ಲಿ ದುಡ್ದು ಇದೆ, ತಿನ್ನೋಕ್ಕೆ ಅನ್ನ ಇಲ್ಲ". ಬದುಕಿರುವಾಗ ಒಳ್ಳೆಯದನ್ನು ಮಾಡಿ ಎಂಬ ಸಂದೇಶದೊಂದಿಗೆ, ಬಾಲಣ್ಣ, ಡಾ.ರಾಜ್, ವಿಷ್ಣು, ಅಂಬರೀಶ್, ಮಲ್ಲಿಕಾರ್ಜುನ ಖರ್ಗೆ, ಟೈಗರ್ ಪ್ರಭಾಕರ್, ಮುಖ್ಯಮಂತ್ರಿ ಚಂದ್ರು, ದಿನೇಶ್, ಮುಸುರಿ, ಮಾ ಹಿರಣ್ಣಯ್ಯ, ಶಂಕರ್‌ನಾಗ್ ಅವರ ಧ್ವನಿಗಳ ಅನುಕರಣೆ, ಡೈಲಾಗ್ ಮೂಲಕ ಸಭಿಕರನು ನಗೆಗಡಲಲಿ ಮುಳುಗಿಸಿದರು. ಮೂರು ಗಂಟೆಗಳ ಕಾಲ ಸತತವಾಗಿ ತಮ್ಮ ಮಾತು, ನಡೆ, ವ್ಯಂಗ್ಯ, ನಗೆ, ಅನುಕರಣೆಗಳಲಿ ಮಿಮಿಕ್ರಿಗಳಲಿ ಪ್ರೇಕ್ಷಕರ ಗಮನ ಕೇಂದ್ರೀಕೃತವಾಗುವಂತೆ ನಡೆಸುವ ಈ ವಿದೂಷಕ ವೃತ್ತಿ ಬಲು ದೊಡ್ಡದು ಹಾಗೂ ಕಷ್ಟದ್ದು. ಬಹುತೇಕ ಜೋಕ್ಸ್ ಹಿಂದಿನ ಪ್ರೋಗ್ರಾಂನಲ್ಲಿ ಹೇಳಿದ್ರು ಎಂದೆನಿಸುದು ನಿಜ. ಆದರೆ ಜೋಕ್ಸ್ ಹಳೆಯದಾದರೂ ಪ್ರತಿಬಾರಿ ಜೀವನದ ಕಟು ಸತ್ಯಗಳನ್ನು, ಸಲಹೆ-ಸಂದೇಶಗಳನ್ನು ಒಳಗೊಂಡು ಆ ಚಣ ನಮ್ಮನ್ನು ನಾವು ಮರೆತು ನಗೆಯ ಅಲೆಯಲ್ಲಿ ತೇಲುವ ಅನುಭವ ನೀಡುವ ಇಂತಹ ಕಲಾವಿದರಿಗೆ ನಮ್ಮೆಲ್ಲರ ನಮನ.

ದಯಾನಂದ್ ಅವರು ತಮ್ಮ ಅನುಭವಗಳನ್ನು ಹಂಚುತ್ತಾ, ತೆಲುಗಿನ ಹೆಸರಾಂತ ನಟ ಚಿರಂಜೀವಿ ಯಾರು ಬಂದು ಮಾತನಾಡಿದರೂ ಕುಳಿತಿದ್ದರೆ ಎದ್ದು ನಿಂತು ಅವರೊಂದಿಗೆ ಮಾತನಾಡುತ್ತಾರೆ. ನಾವು ಸರಿ-ಸಮಾನರು ಎಂಬ ಭಾವ ಮೂಡುತ್ತದೆ. ಈ ದೊಡ್ಡತನವನ್ನು ಅವರು ಕಲಿತದ್ದು ಉತ್ತಮ ನಟ ರಾಜ್‌ಕುಮಾರ್ ಅವರಿಂದ ಎಂದು ತಿಳಿಸಿದರು. ಡಾ.ರಾಜ್ ಎಲ್ಲರ ಮನದಲಿ ಇಂದೂ ನಿಂತಿರುವುದು ನಟನೆ ಒಂದಕ್ಕೇ ಅಲ್ಲ, ಭಾಷಾ ಪ್ರೇಮ, ನಡೆ, ನುಡಿ, ವಿನಯಗಳು ಎಂಬುದರಲಿ ಸಂದೇಹವೇ ಇಲ್ಲ. ಡಾ.ರಾಜ್ ಹುಟ್ಟುಹಬ್ಬದ ಅಂಗವಾಗಿ ಸಿಂಗಪುರದವರಾದ ಗಿರೀಶ್ ಜಮದಗ್ನಿ ಮತ್ತು ಸುರೇಶ್ ಎಚ್.ಸಿ. ಅವರಿಂದ ರಾಜ್ ಅವರ ಹಳೆಯ ಚಿತ್ರಗಳ ಕೆಲವು ದೃಶ್ಯಾವಳಿಗಳು ಮುದನೀಡಿದವು.

ಸಂಪಿಗೆ ಮರದ ಹಸಿರಲೆ ನಡುವೆ...ಚಿಕ್ಕವ್ವಾ...ಚಿಕ್ಕವ್ವಾ...ಈ ಹಾಡು ಕೇಳದವರಾರು. ಇದೀಗ 70 ವಸಂತಗಳನ್ನು ಕಾಣುತ್ತಿರುವ ಪ್ರಸಿದ್ಧ ಗಾಯಕಿ ಅವರ ಕಂಠಸಿರಿಯಲಿ ವಯೋಗುಣಕ್ಕೆ ತಕ್ಕಂತೆ ಬದಲಾವಣೆ ತಂದಿದೆ. ನಿನ್ನೊಲುಮೆ, ಬೆಣ್ಣೆ ಕದ್ದ, ಮುಂಜಾನೆದ್ದು, ನಿಂಬಿಯಾ ಬನದ ಮ್ಯಾಗ, ಒಡಲೆಂಬ ಗುಡಿಯೊಳಗೆ ಹಾಡುಗಳು ಮೂಡಿ ಬಂದಿತು.

ಗಾನ-ವಿನೋದ ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ಸಿಂಗಪುರ ಕನ್ನಡ ಸಂಘದ ಸಿಂಗಾರ ವಾರ್ಷಿಕ ಪತ್ರಿಕೆ ಸಿಂಗಪುರ ಕನ್ನಡ ಸಂಘದ ಮೊದಲನೆಯ ಹಾಗೂ ಹಿರಿಯ ಅಧ್ಯಕ್ಷರಾದ ಎ.ಎನ್. ರಾವ್ ಅವರಿಂದ ಬಿಡುಗಡೆ ಮಾಡಲಾಯಿತು. ಈ ಬಾರಿಯ ಪತ್ರಿಕೆಯ ಪ್ರಧಾನ ಸಂಪಾದಕ ಸುರೇಶ್ ಎಚ್.ಸಿ. ಇದೇ ಸುಸಮಯದಲಿ ವಿದೂಷಕ ದಯಾನಂದ್ ಅವರ ಕುರ್ಚಿಗಾಗಿ ಕುಸ್ತಿ ಎಂಬ ಸಿಡಿ ಕೂಡ ಎ.ಎನ್. ರಾವ್ ಅವರು ಅನಾವರಣಗೊಳಿಸಿದರು. ಗಾನ-ವಿನೋದ ಕಾರ್ಯಕ್ರಮದ ಪ್ರಾಯೋಜಕರು ಆನಂದ್ ಆಡಿಯೋ ಹಾಗೂ ರುಚಿಕರ ಊಟದ ವ್ಯವಸ್ಥೆ ನಕ್ಷತ್ರಿ ಅವರಿಂದ. ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಅವರಿಂದ ವಂದನಾರ್ಪಣೆ.

ಕಾರ್ಯಕ್ರಮದ ನಗೆ ಚಟಾಕಿ, ಗಾಯನಗಳೊಂದಿಗೆ ವರುಷದ ನೆನಪುಗಳನ್ನು ಮೆಲುಕು ಹಾಕುತ್ತಾ ಮುಂದೇನು ಸಾಧಿಸಬೇಕೆಂಬ ಸಂಕಲ್ಪ ತೊಡುವಂತೆ ಮಾಡುವ ಯುಗಾದಿ ಹಬ್ಬದ ಗಾನ-ವಿನೋದ ಕಾರ್ಯಕ್ರಮ ಮುಗಿದಂತೆ....ನೆನಪಾದದ್ದು ಕವಿ ಪು.ತಿ.ನ ಹೇಳಿದಂತೆ ಹಳೆಯದೆಲ್ಲವ(ದುಃಖಗಳ) ಮರೆಯಿರೈ, ಹೊಸತು (ಸುಖಗಳ) ಬಾಳ ತೆರೆಯಿರೈ. ಖರ ಸಂವತ್ಸರದ ಶುಭಾಶಯಗಳು....ಮನ-ಮನೆಗಳಲಿ ಬೇವಿನ ಕಹಿ ನಿಲ್ಲದಿರಲಿ, ಮನೆ ಮನಗಳಲಿ ಬೆಲ್ಲದ ಸವಿ ನೆಲೆಸಿರಲಿ.

English summary
Singapore Kannada Sangha celebrated Ugadi, hindu new year on April 24. Famous Singer BK Sumitra and mimicri Dayanand enthralled the audience with excellent singing and imitation of famous actors. Report by Vani Ramdas, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X