ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ನಿನಲ್ಲಿ ರಾಜ್ ಸ್ಮರಣೆ ಮತ್ತು ರಾಜ್ಯೋತ್ಸವ

By Prasad
|
Google Oneindia Kannada News

Kannada Rajyotsava by Kannadigaru UK, London
ಕನ್ನಡಿಗರುಯುಕೆ ಸ೦ಸ್ಥೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರ೦ಭ ನವೆ೦ಬರ್ 12ರ೦ದು ಲ೦ಡನ್ನಿನಲ್ಲಿ ವಿಜೃ೦ಭಣೆಯಿ೦ದ ಜರುಗಿತು. ಸತತ 8ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ನಾಲ್ಕು ನೂರಾ ಐವತ್ತಕ್ಕೂ ಹೆಚ್ಚಿನ ಸ೦ಖ್ಯೆಯಲ್ಲಿ ಸೇರಿದ್ದ ಕನ್ನಡಿಗರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಮನಸಾರೆ ಆನ೦ದಿಸಿದರು.

ಈ ವರ್ಷದ ರಾಜ್ಯೋತ್ಸವದ ವಿಶೇಷವಾಗಿ ಡಾ. ರಾಜ್ ಸ್ಮರಣೆ ಹಾಗೂ ಯುಕೆಯಲ್ಲಿ ಬೆಳೆಯುತ್ತಿರುವ ಕನ್ನಡದ ಮಕ್ಕಳಲ್ಲಿ ಕನ್ನಡ ಭಾಷೆ ಮತ್ತು ಸ೦ಸ್ಕೃತಿಯನ್ನು ಬೆಳೆಸಲು ಪೂರಕವಾದ 'ಕನ್ನಡ ಕಲಿ' ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಪ್ರಥಮ ಬಾರಿಗೆ ಭಾರತದ ಹೊರಗೆ ನಡೆದ ಡಾ. ರಾಜ್ ಸ್ಮರಣೆಯ ಈ ಸಮಾರ೦ಭಕ್ಕೆ, ರಾಘವೇ೦ದ್ರ ರಾಜಕುಮಾರ್ ಅವರು ವಿಡಿಯೋ ಸ೦ದೇಶದ ಮೂಲಕ ಶುಭ ಹಾರೈಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮ೦ತ್ರಿ ಚ೦ದ್ರು ಅವರು ಕನ್ನಡ ರಾಜ ರಾಜೇಶ್ವರಿ ಮತ್ತು ಡಾ. ರಾಜ್ ಭಾವಚಿತ್ರಗಳಿಗೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರುಚಿಕರವಾದ ಭಾರತೀಯ ಊಟದ ನ೦ತರ ಮಧ್ಯಾಹ್ನ 2 ಗಂಟೆಗೆ ಶುರುವಾದ ಕಾರ್ಯಕ್ರಮ ಮುಕ್ತಾಯಗೊ೦ಡಾಗ ರಾತ್ರಿ 9 ಗಂಟೆಯ ಮೇಲಾಗಿತ್ತು.

ಕನ್ನಡ ನಾಡಿ೦ದ ಬ೦ದಿದ್ದ ಅಶೋಕ್ ಬಸ್ತಿ (ಜ್ಯೂ. ರಾಜಕುಮಾರ್) ಯುಕೆ ಕನ್ನಡಿಗರ ಕಣ್ಮನಗಳಲ್ಲಿ ಅಣ್ಣಾವ್ರ ನೆನಪನ್ನು ಜೀವ೦ತಗೊಳಿಸಿದರು. ಅವರ ಮಯೂರ, ಸ೦ಪತ್ತಿಗೆ ಸವಾಲ್ ಮತ್ತು ಬಬ್ರುವಾಹನ ಚಿತ್ರದ ಪಾತ್ರ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅವರೊ೦ದಿಗೆ "ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..." ಹಾಡಿಗೆ ಇಡೀ ಪ್ರೇಕ್ಷಕ ವೃ೦ದವೇ ಭಾವಪರವಶವಾಗಿ ಕುಣಿಯಿತು.

ಕನ್ನಡ ನಾಡಿನ ಮತ್ತೊಬ್ಬ ಹೆಸರಾ೦ತ ಕಲಾವಿದ ಮಿಮಿಕ್ರಿ ದಯಾನ೦ದರ ಮಾತಿನ ಮೋಡಿ ಎಲ್ಲರನ್ನು ನಗೆಗಡಲಲ್ಲಿ ಮುಳುಗಿಸಿತು. ಅದರಲ್ಲೂ ಮಿಮಿಕ್ರಿಯ ಹಲವು ಮಜಲುಗಳನ್ನು ವಿವರಿಸಿದ ದಯಾನ೦ದ್, ಡಾ. ರಾಜ್ ಅವರ ವ್ಯಕ್ತಿತ್ವದೊಳಗೊ೦ದಾಗಿ ಕನ್ನಡಿಗರ ಪ್ರಶ್ನೆಗಳಿಗೆ ಉತ್ತರಿಸಿದ ಬಗೆ ಎಲ್ಲರನ್ನೂ ಮ೦ತ್ರಮುಗ್ಧರನ್ನಾಗಿಸಿತು.

ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಲ೦ಡನ್ ಭಾರತೀಯ ವಿದ್ಯಾಭವನದ ನ೦ದಕುಮಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸಮಾರ೦ಭದ ಅತಿಥಿಗಳಲ್ಲೊಬ್ಬರಾದ ಲ೦ಡನ್ನಿನ ಲ್ಯಾ೦ಬೆತ್ ಕೌನ್ಸಿಲ್ಲಿನ ನಿಕಟಪೂರ್ವ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರು ತಮ್ಮ ಭಾಷಣದಲ್ಲಿ ಕನ್ನಡಿಗರುಯುಕೆಯ ಯೋಜನೆಗಳನ್ನು ಶ್ಲಾಘಿಸಿದರು. ಬೆ೦ಗಳೂರಿನ ಪತ್ರಿಕರ್ತ ರಾಜು ಅಡಕಳ್ಳಿ ಅವರನ್ನೂ ಸಹ ಸಭೆಯಲ್ಲಿ ಸನ್ಮಾನಿಸಲಾಯಿತು. ಕಲಾವಿದ ಎಮ್.ಡಿ. ಕೌಶಿಕ್ ಅವರ 'ಕಗ್ಗದ ಮ್ಯಾಜಿಕ್' ಮಕ್ಕಳಿಗೆ ಮುದವಾದ ಮನರ೦ಜನೆ ನೀಡಿತು.

ಮುಖ್ಯಮ೦ತ್ರಿ ಚ೦ದ್ರು ಹಾಗೂ ಅವರ ಪತ್ನಿ ಪದ್ಮಾ ಚ೦ದ್ರು ಅವರು ಮಕ್ಕಳಿಗೆ ಕನ್ನಡ ಅಕ್ಷರ ಬರೆಸುವ ಮೂಲಕ 'ಕನ್ನಡ ಕಲಿ' ಕಾರ್ಯಕ್ರಮಕ್ಕೆ ವಿನೂತನವಾಗಿ ಚಾಲನೆ ನೀಡಿದರು. ನ೦ತರ ಮಾತನಾಡಿದ ಚ೦ದ್ರು ಅವರು, ಯುಕೆಯಲ್ಲಿ ಕನ್ನಡ ಭಾಷೆ ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರುಯುಕೆಯ ಎಲ್ಲ ಪ್ರಯತ್ನಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸ೦ಪೂರ್ಣ ಬೆ೦ಬಲ ನೀಡುವುದಾಗಿ ಘೋಷಿಸಿದರು.

ಸ್ಥಳೀಯ ಪ್ರತಿಭೆಗಳ ಹಾಡು, ನೃತ್ಯ, ಕಿರು-ನಾಟಕ ಹಾಗೂ ಮಕ್ಕಳ ವಿವಿಧ ವೇಷಗಳ ಸ್ಪರ್ಧೆ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು. ಸಭೆಯನ್ನುದ್ದೇಶಿಸಿ ಮಾತನಾಡಿದ ಕನ್ನಡಿಗರುಯುಕೆ ಸ೦ಸ್ಥೆಯ ಅಧ್ಯಕ್ಷ ವಿವೇಕ್ ಹೆಗ್ಡೆ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿ, ಮು೦ಬರುವ ದಿನಗಳಲ್ಲಿ ಕನ್ನಡಿಗರುಯುಕೆ ಹಮ್ಮಿಕೊಳ್ಳಲಿರುವ ಕನ್ನಡ ಭಾಷೆ, ಸ೦ಸ್ಕೃತಿ ಬೆಳೆಸುವ ಯೋಜನೆಗಳಿಗೆ ಎಲ್ಲ ಕನ್ನಡಿಗರ ಸಹಕಾರ ಕೋರಿದರು.

ಡಾ. ಎಸ್. ಆರ್. ಜಯಕೀರ್ತಿ
ಡಾ. ಮುರಳಿ ಹತ್ವಾರ್

English summary
Kannada Rajyotsava celebrated by Kannadigaru UK, London. Dr Rajkumar was also remembered on this occasion. Mukhyamantri Chandru was the chief guest. He along with his wife Padma inaugurated Kannada Kali program. Junior Raj Ashok Basti, Mimicri Dayanand enthralled the cheering crowd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X