ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ನಿಮಿತ್ತ ಒಂದಾದ ಅಡಿಲೈಡ್ ಕನ್ನಡಿಗರು

By Prasad
|
Google Oneindia Kannada News

Kannada Rajyotsava in Adelaide, Australia
ಕನ್ನಡವನ್ನು, ಕನ್ನಡತನವನ್ನು ಎತ್ತಿ ಹಿಡಿಯುವದು ಹಾಗೂ ನಮ್ಮ ಭಾಷೆಯ ಹಿರಿಮೆ ಹಾಗೂ ಶ್ರೀಮಂತಿಕೆಯನ್ನು ಜಗತ್ತಿಗೆ ತೋರಿಸುವದು ಪ್ರತಿ ಕನ್ನಡಿಗನ ಕರ್ತವ್ಯ. ಇದರ ಒಂದು ಭಾಗವಾಗಿ ಕನ್ನಡ ರಾಜ್ಯೋತ್ಸವವನ್ನು ಅಡಿಲೇಡ್‌ನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. 'ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ...' ಅನ್ನೋ ಹಾಡಿನ ಹಾಗೇ ಕನ್ನಡಿಗರೆಲ್ಲ ಒಂದಾಗಿ ಭಾಗವಹಿಸಿ ನಡೆಸಿಕೊಟ್ಟ ಕಾರ್ಯಕ್ರಮ ಸಾಂಗವಾಗಿ ನೆರವೇರಿದ್ದು ನವೆಂಬರ್ 5ರಂದು ಡಡ್ಲೀ ಪಾರ್ಕ್ ನ ಸ್ಲೊವೇನಿಯನ್ ಕ್ಲಬ್ ನಲ್ಲಿ.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪುಟಾಣಿಗಳು, ಆ ಪುಟಾಣಿಗಳ ಅಮ್ಮ-ಅಪ್ಪಂದಿರು, ಕಾರ್ಯಕ್ರಮ ಆಯೋಜಿಸಿದವರು, ಪ್ರಾಯೋಜಕರು ಹೀಗೆ ಎಲ್ಲರೂ ಸಂಭ್ರಮದಿಂದ ಓಡಾಡುತ್ತಿದ್ದುದು ಶುರುವಾಗಿದ್ದು ಸರಿ ಸಂಜೆ 5.30ಕ್ಕೆ. ಅಲ್ಲಿಂದ ಸುಮಾರು 3 ಗಂಟೆಗಳ ಕಾಲ ನಿರಂತರ ಮನರಂಜನೆ. ಕೃಷ್ಣಪ್ರಸಾದ್ ಹಾಗೂ ಸಂಗಡಿಗರು ಮೊದಲಿಗೆ ಕನ್ನಡ ನಾಡಗೀತೆ ಹಾಡಿದರು ಹಾಗೂ ಪ್ರಮುಖ ಪ್ರಾಯೋಜಕರಾದ ANZ ಬ್ಯಾಂಕಿನ ಕನ್ವಲ್ ಸಿಂಗ್ ಅವರ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೀಪ ಬೆಳಗುವಿಕೆಯ ಸಂದರ್ಭದಲ್ಲಿ ಪುಟಾಣಿ ದಿಶಾ 'ಹಚ್ಚೇವು ಕನ್ನಡದ ದೀಪ' ಎಂದು ಸುಂದರವಾಗಿ ಹಾಡಿದ್ದು ಜನರ ಸೆಳೆಯಿತು.

ಅಡಿಲೈಡ್ ಕನ್ನಡ ಸಂಘದ ಅಧ್ಯಕ್ಷರಾದ ಮಂಜುನಾಥ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಭಿಕರ ಸಹಕಾರ ಹಾಗೂ ಕಾರ್ಯಕಾರಿಣಿ ಸದಸ್ಯರ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹೇಗೆ ಆಯೋಜಿತವಾಯಿತು ಎಂದು ವಿವರಿಸಿದರು. ಕುಮಾರಿ ಸೃಜಲಾ ಹಾಗೂ ಕುಮಾರ್ ವೈಭವ್ ಕ್ರಮವಾಗಿ 'ವಿಶ್ವ ವಿನೂತನ' ಹಾಗೂ 'ನಾವಾಡುವ ನುಡಿಯೇ ಕನ್ನಡ ನುಡಿ' ಹಾಡುಗಳನ್ನು ಹಾಡಿ ಮನ ರಂಜಿಸಿದರು. ಇದರ ಮಧ್ಯೆಯೇ ಅಪುರ್ವಾ ಹಾಗೂ ನಿತ್ಯಾ ತಮ್ಮ 'ಹಕ್ಕಿಯ ಹೆಗಲೇರಿ ಬಂದವಗೆ' ಸೆಮಿ ಕ್ಲಾಸಿಕಲ್ ಡಾನ್ಸ್ ಪ್ರದರ್ಶಿಸಿದರು.

ರೂಪ ಹಾಗೂ ಸಂಗಡಿಗರು ಶಂಕರ್ ಮಹಾದೇವನ್ ರವರ 'ಗಣೇಶ ಧೀಮಹಿ' ಸುರುಳಿಗೆ ಸುಂದರವಾಗಿ ನರ್ತಿಸಿದರು. ಅಡಿಲೈಡ್ ನ ಕನ್ನಡ ಬಳಗದ ಮಹಿಳೆಯರಿಂದ ನಡೆದ ಈ ನೃತ್ಯ ಸಂಯೋಜನೆ ಸಭಿಕರಿಂದ ಶ್ಲಾಘಿಸಲ್ಪಟ್ಟಿತು. ಗಣೇಶನ ಬೆನ್ನಲ್ಲೇ ಬಂದದ್ದು ರಘು ಹಾಗೂ ವಿನುತಾ ಸಂಯೋಜಿಸಿದ ನೃತ್ಯ ಪ್ರದರ್ಶನ 'ಶಂಕರ ಶಶಿಧರ'. ತುಂಬಾ ಸ್ಪಷ್ಟವಾಗಿ ಗೋಚರಿಸಿದ ಮಾತೆಂದರೆ ಈ ಸಲ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯ್ಕೆ ಹಾಗೂ ಗುಣಮಟ್ಟ ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಉತ್ತಮವಾಗಿತ್ತು. ಹಾಡುಗಾರರಾದ ಉಮೇಶ್ ನಾಗಸಂದ್ರಾ, ಸುನಿಲ್ ಮತ್ತು ವೀಣಾ ಶೇಖರ್ ಅವರು 'ಅವರು ತರವಲ್ಲ ತಗಿ ನಿನ್ನ ತಂಬೂರಿ ಸ್ವರ', 'ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ' ಹಾಗೂ 'ನಧೀಂ ಧೀಂ ತನ' ಹಾಡುಗಳನ್ನ ಕರಾಓಕೆ ಶೈಲಿಯಲ್ಲಿ ಸುಂದರವಾಗಿ ಹಾಡಿದರು. ಜನಪದ ನೃತ್ಯವಾದ 'ಬೇಡಗರ ನಂಜುಂಡ' ನೃತ್ಯವನ್ನು ವಿನಯ ರೈ ಅವರ ಸಂಯೋಜನೆಯಲ್ಲಿ ಕುಮಾರಿ ಅಶ್ವಿನಿ, ಅಪೂರ್ವಾ, ಹಾಗೂ ನಿತ್ಯಾ ನೆರವೇರಿಸಿಕೊಟ್ಟರು.

ಇದೆಲ್ಲ ಜಾನಪದ, ಸಾಂಸ್ಕೃತಿಕದ ಮಾತಾದರೆ, ಆಧುನಿಕ ಜಗತ್ತಿನ ಧೂಮ್ ಧಡಾಕಾ ಹಾಡುಗಳು ಹಾಗೂ ನೃತ್ಯಗಳೂ ಪ್ರದರ್ಶಿಸಲ್ಪಟ್ಟವು. ಯುವ ಜನಾಂಗದ ಇಷ್ಟದ ಪ್ರಕಾರ ಸೂಪರ್ ಹಿಟ್ ಹಾಡುಗಳಾದ 'ನಿದ್ದೆ ಬಂದಿಲ್ಲ', 'ಬಿಂದಾಸ್' ಹಾಡುಗಳಿಗೆ ಪುಟಾಣಿಗಳಾದ ಭೂಮಿಕ, ಸೃಜಲ, ಗೌತಮಿ, ಅನುಜ, & ರೋಹನ್ ಹೆಜ್ಜೆ ಹಾಕಿ ತಮ್ಮ ಮೋಹಕ ನಡೆಗಳಿಂದ ಆಕರ್ಷಿಸಿದವು. ನಂತರ ಕನ್ನಡ ಚಲನಚಿತ್ರದ ಇನ್ನೊಂದು ಸೂಪರ್ ಹಿಟ್ ಹಾಡಾದ 'ನಾ ಸೂಪರು ರಂಗ' ಹಾಗೂ ಕೆಲ ಫ್ಯೂಶನ್ ಹಾಡುಗಳಿಗೆ ಅಡಿಲೈಡ್ ನ ಪುಟಾಣಿಗಳು ಹೆಜ್ಜೆ ಹಾಕಿ ಮನ ರಂಜಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಕೊನೆಯಲ್ಲಿ ಮಂಜುನಾಥ್ & ಚಂದ್ರಶೇಖರ್ ಅವರು ಭಾಗವಹಿದ ಮಕ್ಕಳಿಗೆ ನೆನಪಿನ ಕಾಣಿಕೆಗಳನ್ನು ಕೊಟ್ಟು ಗೌರವಿಸಿದರು. ಶಿವಾನಂದ್ ತೋಟಗಿ ಅವರು ವಂದನಾರ್ಪಣೆ ಮಾಡಿದರು. ಎಲ್ಲರೂ ಸವಿಯಾದ ಭೋಜನ ಸವಿದು, ತಮ್ಮ ತಮ್ಮ ಮನೆಗಳಿಗೆ ಹೊರಟು ನಿಂತಾಗ ಸುಮಾರು ರಾತ್ರಿ 11 ಗಂಟೆ. ರಾಜ್ಯೋತ್ಸವದ ನಿಮಿತ್ತ ಎಲ್ಲಾ ಕನ್ನಡಿಗರು ಒಂದೆಡೆ ಸೇರಿ ಮನರಂಜನೆಯನ್ನೂ ಮಾಡಿಕೊಂಡು, ತಮ್ಮ ಮಿತ್ರ ವೃಂದವನ್ನು ಭೇಟಿಯೂ ಆಗಿ, ತಮ್ಮ ಬಿಡುವಿಲ್ಲದ ದೈನಂದಿನ ಕೆಲಸದ ಮಧ್ಯೆ ಸ್ವಲ್ಪ ಕಾಲ ಸುಧಾರಿಸಿಕೊಂಡು ವಿಹರಿಸುತ್ತಿದು ಕಂಡು ಬಂದಿದ್ದು ಮಾತ್ರ ಹೌದು.

English summary
Adelaide Kannada Koota celebrated Kannada Rajyotsava in Adelaide, Australia on November 5, 2011. Kannada flag with yellow and red colors fluttered all over at Dudley Park Slovenian Club, Adelaide. Here is report of the NRI event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X