ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪಿಗೆಯಲ್ಲಿ ಅ.22 ವಿದ್ಯಾಭೂಷಣರ ಸಂಗೀತದ ಕಂಪು

By * ಲಕ್ಷ್ಮೀನಾರಾಯಣ ಗಣಪತಿ
|
Google Oneindia Kannada News

Vidyabhushana concert in North Carolina
ಉತ್ತರ ಕೆರೊಲಿನಾ ಕನ್ನಡ ಸಂಘ "ಸಂಪಿಗೆ"ಯ ಆಶ್ರಯದಲ್ಲಿ ಹರಿದಾಸ ವಿದ್ಯಾಭೂಷಣರ ಸಂಗೀತ ಕಾರ್ಯಕ್ರಮವನ್ನು ಅಕ್ಟೋಬರ್ 22 ಸಂಜೆ 5 ಗಂಟೆಗೆ ಹಿಂದೂ ಮಂದಿರ(HSNC, Morrisville NC)ದಲ್ಲಿ ಆಯೋಜಿಸಲಾಗಿದೆ.

ದಾಸ ದಾಸರ ದಾಸ ಗಾನಯೋಗಿಯಾತ
ಸಂಸಾರ ಸಾಗರವನೀಜಿ ಹರಿದಾಸನಾದಾತ.
ಭಕ್ತಿಯಿಂದ ಮೆಚ್ಚಿಸಿ ಹರಿಯನ್ನೆ ದಾಸನಾಗಿಸಿದ
ಹರಿದಾಸರುಗಳ ಪರಿಯನ್ನು ಕಲಿಯುಗದಲ್ಲಿ
ಪಾಲಿಸುವ ಪರಿ ಹೇಗೆನ್ನುತ್ತೀರಾ? ಬನ್ನಿ ಕೇಳಿ..

ಪೀಠ ತ್ಯಾಗ ಮಾಡಿದರೂ ಹರಿದಾಸ ನಿಷ್ಠೆ ಬಿಡದೆ ತಮ್ಮ ಗಾನ ಸೌರಭದ ಮೂಲಕ ಕೇಳುಗರಲ್ಲಿ ಆಧ್ಯಾತ್ಮದ ಎಚ್ಚರಕ್ಕೆ ಅನುವು ಮಾಡಿಕೊಡುತ್ತಲೇ ಬಂದಿರುವ ವಿದ್ಯಾಭೂಷಣರು ಮತ್ತೆ ನಮ್ಮ ನಡುವೆ ಬರುತ್ತಿದ್ದಾರೆ.

ಪ್ರತಿ ಕನ್ನಡ ಸಮ್ಮೇಳನದಲ್ಲೂ ಕೇಳುಗರ ಅಭಿಮಾನದಿಂದ ಎರಡೆರಡು ಬಾರಿ ಕಛೇರಿ ಕೊಡಬೇಕಾಗುವುದು ಇವರಿಗೆ ಭೂಷಣ. ಪೀಠದ ಬಲವಿಲ್ಲದೆಯೇ ತಮ್ಮ ಹೆಸರಿಗೊಂದು ತೂಕ ತಂದುಕೊಂಡಿರುವ ವಿದ್ಯಾಭೂಷಣರ ಜೀವನ, ಸಾತ್ವಿಕತೆ, ಸೌಜನ್ಯತೆ, ಪ್ರಾಮಾಣಿಕತೆಗಳ ಅನುಷ್ಠಾನ. ಎಲ್ಲ ಮತಗಳ ಆಚರಣೆಯಲ್ಲೂ ಕಷ್ಟಸಾಧ್ಯವಾಗಿ ಸೇರಿಹೋಗಿ, ಹಲವು ಬಾರಿ ನೈತಿಕ ಸಿಕ್ಕುಗಳಿಗೆ ಕಾರಣವಾಗಿರುವ ಬ್ರಹ್ಮಚರ್ಯದ ಭೂತಕ್ಕೆ ಬಾಗದೆ ದೈವ ತನ್ನೊಳಗೆ ಮೊಳಗಿಸಿದ ಜೀವ ದನಿಯನ್ನು ಭಕ್ತಿಯ ಉತ್ಕಟತೆಯಲ್ಲಿ ಹಾಡಿ ಹರಿದಾಸನಾಗಿ ಬದುಕಿದ ವಿದ್ಯಾಭೂಷಣರ ಪರಿ ದಾಸ ಪಂಥಕ್ಕೆ ಯೋಗ್ಯವಾದುದು.

ಅನುದಿನ ಅನುಕ್ಷಣವೂ ಎರಗುವ ಸಂಸಾರದ ಜಂಜಡಗಳ ನಡುವೆ ದೈವದ ಮೇಲಿನ ನೇಮ ನಿಷ್ಠೆ ಸಾಮಾನ್ಯರಿಗೂ ಸಾಧ್ಯವಾಗುವುದಕ್ಕೆಂದೇ ಕೀರ್ತನೆಗಳನ್ನು ಬರೆದು ಹಾಡಿ ಕುಣಿದು ನಲಿದಾಡಿದ ದಾಸರುಗಳ ಪಾಠವನ್ನು ಅಕ್ಷರಶ: ಪಾಲಿಸುವವರು. ಹಿರಿಯರಿಗೆ ಸ್ನೇಹಿತನಂತೆ, ಕಿರಿಯರಿಗೆ ಹಿರಿಯಣ್ಣನಂತೆ, ವಿದ್ಯಾರ್ಥಿಯಾಗಿ ಬಂದವರಿಗೆ ಗುರುವಾಗಿ ಸಂಗೀತದ ಸಾರವನ್ನು ಧಾರೆ ಎರೆಯುತ್ತ ಹರಿ ಸೇವೆ ಮಾಡುವವರು.

ದೊರಕಿದ ಭಿಕ್ಷದಿಂದಲೇ ಜೀವನ ನಡೆಸುತ್ತ ಬಂದವರಿಗೆ ನಮ್ಮೂರಿನೊಡನೇನೋ ಒಂದು ಬಂಧ. ಒಮ್ಮೆ ಬಂದವರು ಮತ್ತೆ ಬಂದರು. ಈಗ ಮತ್ತೊಮ್ಮೆ ಬರುತ್ತಿದ್ದಾರೆ - ನಮ್ಮ ಸೌಭಾಗ್ಯ. ದಾಸ ಸಾಹಿತ್ಯದ ವೈಭವದ ಅರಿವಿಗೆ ಸೋಪಾನವೆಂದರೆ ವಿದ್ಯಾಭೂಷಣರ ಗಾಯನ. ಸಂಗೀತದ ಆಯಾಮಕ್ಕೆ ಹರಿದಾಸರುಗಳ ಆಧ್ಯಾತ್ಮದ ಆಯಮವನ್ನು ಜೋಡಿಸಿ ಹಾಡುವ ವಿದ್ಯಾಭೂಷಣರದ್ದೀಗ ನಿಜವಾಯೂ ಯೋಗಿಯ ಜೀವನ. ಸುಮ್ಮನೆ ಎನ್ನ ಮಾತಿನ ಡಂಗೂರವೇಕೆ? ನಿಜವಾದ ಹರಿಭಕ್ತನ ಗಾಯನದ ಡಂಗೂರವನ್ನು ಕೇಳಿರಂತೆ. ಕೇಳಿದವರು ಹರಿದಾಸರಾಗಿ ಬಿಟ್ಟೀರೆಂಬ ಭಯವಿದ್ದರೆ ಮಾತ್ರ ಹರಿಯ ಚಿತ್ತ!

English summary
Music concert by Vidyabhushana on haridasa sahitya is organized by Sampige Kannada Sangha in North Carolina, USA on October 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X