ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರೆಲ್ಲರೂ ಓದಲೇಬೇಕಾದ ಅಪೂರ್ವ ಕಾದಂಬರಿ

By * ತ್ರಿವೇಣಿ ಶ್ರೀನಿವಾಸರಾವ್, ಶಿಕಾಗೋ
|
Google Oneindia Kannada News

Author Prakash Hemavathi
'ಕವಿರಾಜಮಾರ್ಗ" ಅಮೋಘವರ್ಷನ ಆಳ್ವಿಕೆಯಲ್ಲಿ ರಚಿತವಾದ ಲಕ್ಷಣ ಗ್ರಂಥ. ಕನ್ನಡದಲ್ಲಿ ಇದುವರೆಗೆ ಲಭ್ಯವಾಗಿರುವ ಗ್ರಂಥಗಳಲ್ಲಿ ಇದು ಅತ್ಯಂತ ಪ್ರಾಚೀನವಾದುದು. ಅಮೋಘವರ್ಷನ ಆಸ್ಥಾನದಲ್ಲಿದ್ದ ಕವಿ "ಶ್ರೀ ವಿಜಯ" ತನ್ನ ಆಶ್ರಯದಾತನ ಹೆಸರಿನಲ್ಲಿಯೇ ರಚಿಸಿರುವ ಕೃತಿ ಇದೆನ್ನಲಾಗಿದೆ. ಕಾದಂಬರಿಯಲ್ಲಿ ಈ ಕೃತಿಯ ರಚನೆ ಸಂಬಂಧವಾಗಿ ನಡೆಯುವ ಅರಸ-ಆಸ್ಥಾನಕವಿಯ ಸಂಭಾಷಣೆ ಬಹಳ ಸುಂದರವಾಗಿ ಮೂಡಿಬಂದಿದೆ. ಕವಿ ಮತ್ತು ರಾಜ ಇವರಿಬ್ಬರ ಯೋಚನೆ-ಯೋಜನೆಗಳು ಹದವಾಗಿ ಬೆರೆತು ಈ ಕೃತಿ ರೂಪುಗೊಂಡು "ಕವಿರಾಜಮಾರ್ಗ"ವಾಗಿರಬಹುದೆಂಬ ಊಹೆ ನಿಜಕ್ಕೂ ಮನಸ್ಸಿಗೆ ಮುದ ನೀಡುವ ಕಲ್ಪನೆ. ಸರ್ವಧರ್ಮ ಸಹಿಷ್ಣುವಾಗಿದ್ದ ಅಮೋಘವರ್ಷ ವೈಷ್ಣವ ಧರ್ಮದ ಅನುಯಾಯಿಯಾಗಿದ್ದನು. ವಿಷ್ಣುವಿನ ವಾಹನವಾದ ಗರುಡಪಕ್ಷಿಯು ಇವನ ಆಳ್ವಿಕೆಯಲ್ಲಿ ರಾಜಲಾಂಛನವಾಗಿತ್ತು. ಕಾದಂಬರಿಯುದ್ದಕ್ಕೂ ಈ ಗರುಡನನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.

ಸಾಮ್ರಾಜ್ಯದಲ್ಲಿ ಶಾಂತಿ ನೆಲೆಸಿದ್ದಾಗ ತನ್ನಷ್ಟಕ್ಕೆ ತಾನು ಮರವೊಂದರ ಮೇಲೆ ವಿರಾಜಮಾನವಾಗಿರುವ ಗರುಡ, ಆಡಳಿತಕ್ಕೆ ಯಾವುದೇ ವಿಪತ್ತು ಬಂದೆರಗಲಿರುವುದನ್ನು ಮುಂದಾಗಿ ಗ್ರಹಿಸಿ ತಲ್ಲಣಗೊಳ್ಳುತ್ತಾ, ಆಕ್ರಮಣಕಾರಿ ವರ್ತನೆಯನ್ನು ತೋರುತ್ತಾ ರಾಜಧಾನಿಯಲ್ಲಾಗುವ ಪರಿವರ್ತನೆಯ ಭವಿಷ್ಯ ಸೂಚಿಯಾಗಿ ಕಾಣಿಸಿಕೊಳ್ಳುವ ತಂತ್ರವನ್ನು ಲೇಖಕರು ಕಾದಂಬರಿಯುದ್ದಕ್ಕೂ ಅನುಸರಿಸಿದ್ದಾರೆ. ಶಾಂತಿಪ್ರಿಯ ರಾಜನಾದ ಅಮೋಘವರ್ಷನು ರಾಷ್ಟ್ರಕೂಟ ಸಾಮ್ರಾಜ್ಯದ ಸಾರ್ವಭೌಮತೆಗೆ ಧಕ್ಕೆಯೊದಗುವ ಸಂದರ್ಭದಲ್ಲಿ ಅನಿವಾರ್ಯವಾಗಿ ಕದನಗಳನ್ನು ಕೈಗೊಳ್ಳಬೇಕಾಗುತ್ತದೆ. ಆ ಯುದ್ಧಗಳಲ್ಲಿ ಅವನು ಅನುಸರಿಸಿರುವ ಯುದ್ಧತಂತ್ರಗಳ ಬಗೆಗಿನ ವಿವರಣೆ ಕಾದಂಬರಿಯಲ್ಲಿ ಸೊಗಸಾಗಿ ಮೂಡಿಬಂದಿದೆ.

ಕರ್ನಾಟಕದ ಪ್ರಸಿದ್ಧ ಇತಿಹಾಸಕಾರರಾಗಿರುವ ಸೂರ್ಯನಾಥ್ ಕಾಮತ್ ಅವರು ಈ ಕಾದಂಬರಿಗೆ ಮುನ್ನುಡಿ ಬರೆದಿದ್ದಾರೆ. ಕಾದಂಬರಿಯಲ್ಲಿ ಉಲ್ಲೇಖಿಸಿರುವ ಕೆಲವು ಐತಿಹಾಸಿಕ ವಿವರಗಳ ಬಗೆಗೆ ತಮಗಿರುವ ಭಿನ್ನಾಭಿಪ್ರಾಯವನ್ನು ನಯವಾಗಿ ತೋರಿಸಿಕೊಟ್ಟಿರುವ ಕಾಮತ್, "ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಪ್ರಕಾಶ್ ಹೇಮಾವತಿಯವರು, ಇತಿಹಾಸ ಅಧ್ಯಾಪಕರಿಗೂ ತಿಳಿದಿರದ ಹೊಸ ಅಂಶಗಳನ್ನು ಲೇಖಕರು ಇಲ್ಲಿ ಹೇಳಿದ್ದು ಮೆಚ್ಚಿಗೆಯ ವಿಷಯ. ಅರವತ್ತನಾಲ್ಕು ವರ್ಷ ಆಳಿದ ವೀರನೂ, ವಿದ್ವಾಂಸನೂ, ಧಾರ್ಮಿಕನೂ, ಪಂಡಿತಾಶ್ರಯನೂ, ಜನಪರ ರಾಜನೂ ಆದ ಚಕ್ರವರ್ತಿಯ ಸಾಧನೆಯನ್ನು ಈ ಕೃತಿಯಲ್ಲಿ ಸೆರೆಹಿಡಿವ ಯತ್ನ ಬಹುಮಟ್ಟಿಗೆ ಯಶಸ್ವಿಯಾಗಿದೆ. ಲೇಖಕರು ವಿದೇಶದಲ್ಲಿ ಇದ್ದು ಮಾಡಿದ ಸಾಧನೆ ಇದು!" ಎಂದು ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ.

ಒಟ್ಟಿನಲ್ಲಿ, ಐತಿಹಾಸಿಕ ಕಾದಂಬರಿಗಳು ಅಪರೂಪವಾಗುತ್ತಿರುವ ಈ ಹೊತ್ತಿನಲ್ಲಿ, ಇತಿಹಾಸದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಶಾಶ್ವತವಾಗಿ ಉಳಿಸಿಹೋಗಿರುವ ಕನ್ನಡದ ಹೆಮ್ಮೆಯ ದೊರೆ ಅಮೋಘವರ್ಷನ ಕುರಿತು ಈ ಕಾದಂಬರಿ ಹೊರಬಂದಿರುವುದು ಕನ್ನಡಿಗರೆಲ್ಲರಿಗೂ ಸಂತೋಷದ ವಿಷಯವೇ ಸರಿ. "ಅಂಗ, ವಂಗ, ಮಗಧ, ಮಾಳವ ಮತ್ತು ವೆಂಗಿ ಅರಸರಿಂದ ಅತಿಶಯಧವಳ ಎನ್ನುವ ಬಿರುದಾಂಕಿತನಾಗಿ ಪೂಜಿಸಲ್ಪಡುತ್ತಿದ್ದು, ಕನ್ನಡನಾಡು, ನುಡಿ, ಸಾಹಿತ್ಯ ಮೇರು ಶೃಂಗದಲ್ಲಿ ರಾರಾಜಿಸುವುದಕ್ಕೆ ಭದ್ರಬುನಾದಿ ರೂಪಿಸಿದ ಕನ್ನಡ ಕುಲ ಚಕ್ರವರ್ತಿ, ರಟ್ಟ ಮಾರ್ತಾಂಡ ಅಮೋಘವರ್ಷ ನೃಪತುಂಗ ದೇವನಿಗೆ" ಅರ್ಪಣೆಯಾಗಿರುವ ಈ ಕಾದಂಬರಿಯನ್ನು, ಕನ್ನಡಿಗರೆಲ್ಲರೂ ಓದಿ ಆನಂದಿಸಿ, ತಮ್ಮ ದಿವ್ಯ, ಭವ್ಯ ಪರಂಪರೆಯ ಬಗ್ಗೆ ಹೆಮ್ಮೆಪಡುವಂತಾಗಲಿ ಎಂದು ಹಾರೈಸುತ್ತೇನೆ.

ಕಾದಂಬರಿ : ಅಮೋಘವರ್ಷ
ಲೇಖಕರು : ಪ್ರಕಾಶ್ ಹೇಮಾವತಿ
ಪ್ರಕಾಶನ : ಐಬಿಎಚ್ ಪ್ರಕಾಶನ
ಬೆಲೆ : ನೂರು ರೂಪಾಯಿಗಳು

English summary
Amoghavarsha Nrupatunga is one of the important Kannada emperor ruled Karnataka during Rashtrakuta empire. Prakash Hemavathi from Chicago has written an engrossing novel on Nrupatunga. Triveni Srinivasrao, Chicago writes about the salient feature of Kannada novel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X