ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರೋಜಾದೇವಿಗೆ ಈಬಾರಿ ಅಮೆರಿಕ ಗಣೇಶನ ಕಡುಬು

By * ಶಾಮಿ
|
Google Oneindia Kannada News

B Saroja Devi in Kaveri Kannada Sangha
ಮೇರಿಲ್ಯಾಂಡ್, ವಾಷಿಂಗ್ ಟನ್ ಡಿಸಿ ಮತ್ತು ವರ್ಜೀನಿಯ ಪ್ರದೇಶದ ಕನ್ನಡಿಗರ ಅಡ್ಡ, 'ಕಾವೇರಿ ಕನ್ನಡ ಅಸೋಸಿಯೇಶನ್' ಆಶ್ರಯದಲ್ಲಿ ಗಣೇಶ ಉತ್ಸವವನ್ನು ಶನಿವಾರ (ಸೆ. 17) ಸಂಭ್ರಮ ಮತ್ತು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.

ಜರ್ಮನ್ ಟೌನಿನ ಸೆನೆಕಾ ವ್ಯಾಲಿ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ಉತ್ಸವ ಹಲವು ಆಕರ್ಷಣೆಗಳನ್ನು ತನ್ನದಾಗಿಸಿಕೊಂಡಿತ್ತು. ಗಣೇಶ ಪೂಜೆ, ಮೆರವಣಿಗೆ ಮತ್ತು ವಿಸರ್ಜನೆ ; ಕಾವೇರಿ ಮಕ್ಕಳಿಂದ ಹಾಡು ನೃತ್ಯ; ಕರ್ನಾಟಕದಿಂದ ಆಗಮಿಸಿರುವ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ವೈಭವ.

ಸ್ಥಳೀಯ 'ಗಾನಸುಧೆ' ತಂಡದಿಂದ ಸುಶ್ರಾವ್ಯ ಕರ್ನಾಟಕ ಕರೋಕೆ ಹಾಡುಗಳು, ಬೆಂಗಳೂರಿನ 'ಸಮರ್ಥನಂ' ಅಂಧರ ಶಾಲೆಯ ಮಕ್ಕಳಿಂದ ಮನೋಜ್ಞ ಭರತನಾಟ್ಯ ಪ್ರದರ್ಶನ ಹಾಗೂ ಪಿಟ್ಜ್ ಬರ್ಗ್ ನ ನವಚೇತನ ಕಲಾವಿದರು ತಂಡದ 'ವಶೀಕರಣ' ನಗೆನಾಟಕ ಅಪಾರ ಜನಮೆಚ್ಚುಗೆ ಗಳಿಸಿತು.

ನಗೆನಾಟಕ 'ವಶೀಕರಣ'ವು ಹೆಸರಿಗೆ ತಕ್ಕಂತೆ ಪ್ರೇಕ್ಷಕರನ್ನು ವಶೀಕರಣಗೊಳಿಸುವುದರಲ್ಲಿ ಯಶಸ್ಸು ಕಂಡಿತೆಂದರೆ ತಪ್ಪಾಗದು. ಸರಾಸರಿ ಎರಡು ನಿಮಿಷಕ್ಕೊಂದಾದರೂ ನಗೆಯ ತರಂಗಗಳನ್ನು ಎಬ್ಬಿಸುತ್ತಿದ್ದ ಹಾಸ್ಯ ಡೈಲಾಗ್‌ಗಳೇ ಆ ನಾಟಕದ ಜೀವಾಳ.

ಚತುರ್ಭಾಷಾ ತಾರೆ, ಅಭಿನೇತ್ರಿ ಬಿ. ಸರೋಜಾದೇವಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಮೆರಿಕಾ ಕನ್ನಡಿಗರ ಕನ್ನಡಪರ ಚಟುವಟಿಕೆಗಳಿಗೆ ಹರ್ಷ ವ್ಯಕ್ತಪಡಿಸಿದ ಅವರು ವಿಶೇಷವಾಗಿ ಸಮರ್ಥನಂ ಅಂಧ ಮಕ್ಕಳ ನಾಟ್ಯಸೌರಭಕ್ಕೆ ಮನಸೋತರು.

ಈ ಮಕ್ಕಳ ಶ್ರೇಯೋಭಿವೃದ್ದಿಗಾಗಿ ವೇದಿಕೆಯಿಂದಲೇ 260 ಡಾಲರುಗಳ ನೆರವು ಘೋಷಿಸಿದ ಕೊಡುಗೈ ದಾನಿ ಸರೋಜಮ್ಮ, ತಾವು ಮಲ್ಲೇಶ್ವರಂನಲ್ಲಿ ನಡೆಸುತ್ತಿರುವ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಅನಿವಾಸಿ ಕನ್ನಡಿಗರು ನೆರವಿನ ಹಸ್ತ ಚಾಚಬೇಕೆಂದು ಇದೇ ಸಂದರ್ಭದಲ್ಲಿ ಸೆರಗೊಡ್ಡಿದರು.

ಕೇವಲ ಅನಿವಾಸಿ ಕನ್ನಡಿಗರ ಕುರಿತೇ ಮಾತನಾಡಿದ ದೇವಿ, ಇತ್ತೀಚಿನ ಕರ್ನಾಟಕದ ಯಾವುದೇ ವಿದ್ಯಮಾನದ ಬಗ್ಗೆ ಅಮೆರಿಕಾ ಪ್ರವಾಸದಲ್ಲಿ ಪ್ರಸ್ತಾಪ ಮಾಡಲಿಲ್ಲ. ಈಚೆಗೆ ಅವರು ಸಾಮಾಜಿಕ ವಿಚಾರ, ವಿವಾದಗಳ ಬಗೆಗೆ ಹೆಚ್ಚು ಮಾತನಾಡುವುದಿಲ್ಲ. ಆದರೂ, ನಟ ದರ್ಶನ್ ತಮ್ಮ ಹೆಂಡತಿ ವಿಜಯಲಕ್ಷ್ಮಿ ಅವರಿಗೆ ಕೊಟ್ಟ ಮಾನಸಿಕ, ದೈಹಿಕ ಕಿರುಕುಳದ ಬಗ್ಗೆ ತಮ್ಮ ಅನಿಸಿಕೆಯನ್ನು ಬೆಂಗಳೂರಿನಲ್ಲಿದ್ದಾಗ ಹಂಚಿಕೊಂಡಿದ್ದರು.

"ಯಾವುದೇ ಹೆಣ್ಣನ್ನು ಈ ರೀತಿ ಶೋಷಿಸಬಾರದು. ಎಲ್ಲರನ್ನೂ ಗೌರವದಿಂದ ಕಾಣಬೇಕು" ಎಂದು ಅಮೆರಿಕಾಗೆ ತೆರಳುವ ಮುನ್ನ ಕರ್ನಾಟಕ ಮಾಧ್ಯಮಗಳಿಗೆ ಅವರು ಹೇಳಿದುದನ್ನು ಇಲ್ಲಿ ಸ್ಮರಿಸಬಹುದು.

ಕಾವೇರಿ ಅಧ್ಯಕ್ಷೆ ಜಯಶ್ರೀ ಜಗದೀಶ್ ಮಾರ್ಗದರ್ಶನದಲ್ಲಿ ಉತ್ಸವವನ್ನು ಕಾವೇರಿ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಏರ್ಪಡಿಸಿದ್ದರು. ಮನೆ ಬಾಗಿಲಿಗೆ ಬಂದ ಹಿರಿಯ ಕನ್ನಡತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಆದರೆ, ಹಬ್ಬದ ಊಟೋಪಚಾರಗಳ ವೈವಿಧ್ಯ ಹಾಗೂ ಸರಬರಾಜು ಸರಾಸರಿ ಗುಣಮಟ್ಟಕ್ಕಿಂತ ಕೆಳಗಿತ್ತು ಎಂದು ಸದಸ್ಯರು ಬೇಜಾರು ವ್ಯಕ್ತಪಡಿಸಿದರು. ಕಾವೇರಿ ಸಂಘ ಮತ್ತು ಡಾ. ರಂಗಮಣಿ ಹಾಗೂ ಮಾಧು ಮೂರ್ತಿ ಅವರು ಗಣೇಶ ಹಬ್ಬವನ್ನು ಜಂಟಿಯಾಗಿ ಪ್ರಾಯೋಜಿಸಿದ್ದರು.

ಅಂದಹಾಗೆ, ಕಾವೇರಿ ಪಲ್ಲಕ್ಕಿಯನ್ನು ಹೊರಲು ಹೊಸ ಪದಾಧಿಕಾರಿಗಳ ಪಡೆ ಆಗಮಿಸುತ್ತದೆ. ಸರ್ವ ಸದಸ್ಯರ ಸಭೆ, ಚುನಾವಣೆ ದಿನಾಂಕಗಳು ಸಮೀಪಿಸುತ್ತಿದ್ದು ಕಲಾವಿದ ಇ-ಸ್ಯಾವಿ ಹರಿದಾಸ್ ಲಹರಿ ಅವರು ಮುಂದಿನ ಸಾಲಿಗೆ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅದಕ್ಕೆ ಹಿರಿಯರ ಆಶೀರ್ವಾದ ಮತ್ತು ಕಿರಿಯರ ಪ್ರೋತ್ಸಾಹ ಸಿಗಲಿದೆ ಎಂಬ ಮಾತುಗಳು I-495 ಕ್ಯಾಪಿಟಲ್ ಬೆಲ್ಟ್ ವೇಯಿಂದ ಕೇಳಿ ಬರುತ್ತಿವೆ ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

English summary
Hindu God Ganesha festival celebrated in Kaveri Kannada Association, WDC. Veteran South Indian Actress B. Saroja Devi was the chief Guest. A report by Shami with inputs from DC stringer in I-495 Capital Belt way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X