ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಭ ಧರಿಸುವ ಗಂಡಿನ ಬಗ್ಗೆ ಕೇಳಿದ್ದೀರಾ?

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Male seahorses undergo pregnancy
ಅಯ್ಯೋ, ಅಮ್ಮಾ ಆಗ್ತಾ ಇಲ್ಲ, ಇದು ಪ್ರಸವದ ವೇದನೆಯ ಕೂಗು! ಆ ಪ್ರಸವದ ಕೊಠಡಿಯ ಎದುರು ಗಂಡ, ಏನೊಂದೂ ತೋಚದೆ ಅತ್ತಲಿಂದಿತ್ತ ತಿರುಗುತ್ತಾ ಪ್ರಸೂತಿ ಗೃಹದ ಬಾಗಿಲಿಗೆ ಕಣ್ ನೆಟ್ಟಿರುತ್ತಾನೆ. ಇದು ನಮ್ಮ ಜೀವನದ ಹಾಗೂ ಸಿನಿಮಾ ಸೀನ್! ಇದೇ ಸೀನಿನಲ್ಲಿ ಸ್ವಲ್ಪ ಮಾರ್ಪಾಡು-ಗಂಡು ಹೆರಿಗೆ ನೋವು ಅನುಭವಿಸಿದಲ್ಲಿ ಹೇಗಿರುತ್ತೆ ಎಂದು ಯೋಚಿಸಿ ನೋಡಿ... ಅಯ್ಯೋ ಎನಿಸುತ್ತಾ ಅಥವಾ ನಮ್ಮಂತೆ ಅವನೂ ಅನುಭವಿಸಲಿ ಎನ್ನುತ್ತೀರಾ! ಸೃಷ್ಟಿ ವೈಚಿತ್ರ್ಯ ನೋಡಿ.. ಗಂಡಿಗೂ ಹೆರುವ ಭಾಗ್ಯ ನೀಡಿದೆ ಪ್ರಕೃತಿ.

ಹೆರಿಗೆ ನೋವು ಅನುಭವಿಸಿ, ಮಕ್ಕಳನು ಹೊತ್ತು, ಹೆರುವ ಗಂಡು, ಅದೂ ಏಕಪತ್ನೀ ವ್ರತಸ್ಥ ಇದ್ದಾನೆ ಅಂದ್ರೆ ನಂಬ್ತೀರಾ? ಖಂಡಿತ ತಮಾಷೆ ಅಲ್ಲಾರಿ! ಆ ಹೆರುವ ಗಂಡು, ಮರ್ತ್ಸ್ಯ ಲೋಕದ ಸ್ಪುರದ್ರೂಪಿ, ಏಕಪತ್ನೀ ವ್ರತಸ್ಥ, ಸ್ವಲ್ಪ ಸೋಮಾರಿ ಹಯವದನ-ಮರ್ತ್ಸ್ಯದೇಹಿ ಆತನ ನಾಮಧೇಯ ಸಮುದ್ರ-ಕುದುರೆ-SEA-HORSE.

ಸಮುದ್ರ ಕುದುರೆ-ಸೀ-ಹಾರ್ಸ್ ಅಥವಾ ಹಿಪ್ಪೋ-ಕೇಂಪಸ್. ಇದೊಂದು ಜಾತಿಯ ಮೀನು. ಮುಖ ಕುದುರೆಯಂತೆ-ದೇಹ ಕಂಬಳಿಹುಳದಂತೆ-ಬಾಲ ಹಲ್ಲಿಯಂತೆ ಎನಿಸುವುದು ಕೆಲವೊಮ್ಮೆ. ಈ ಸಮುದ್ರಕುದುರೆಯ ಎತ್ತರ 2ರಿಂದ 30 ಸೆಂ.ಮೀ. ಎತ್ತರವಿದ್ದು ಸುಮಾರು 1 ರಿಂದ 5 ವರ್ಷ ಆಯಸ್ಸನ್ನು ಹೊಂದಿರುತ್ತವೆ. ಇವುಗಳಿಗೆ ದೇವರಿತ್ತ ವರ ಊಸರವಳ್ಳಿಯಂತೆ ಈ ಸಮುದ್ರ ಕುದುರೆ ಸಮುದ್ರದಲ್ಲಿನ ಗಿಡ, ಎಲೆಗಳ ಹಿನ್ನೆಲೆಗೆ ಅನುಗುಣವಾಗಿ ಹೊಂದಿಕೊಂಡು ಗುರುತಿಸಲಾಗದಂತೆ ಮೈ ಬಣ್ಣ ಮತ್ತು ವಿನ್ಯಾಸದ ಬದಲಾವಣೆ ಮಾಡಿಕೊಳ್ಳುವ ಕೊಡುಗೆ. ಮೀನಿನಂತೆಯೇ ಇವು ಕೂಡ ಕಿವಿರು ಮೂಲಕ ಕರಗಿದ ಆಮ್ಲಜನಕವನ್ನು ಉಸಿರಾಡುವ ಜೀವಿ. ಸಮುದ್ರ ಕುದುರೆಗಳಲ್ಲಿ ಸುಮಾರು 40-50 ವಿಧಗಳಿರುತ್ತವೆ. ಸಮುದ್ರ ಕುದುರೆಗಳಿಗೆ ಸುಮಾರು ಸಮುದ್ರದ ಹುಲ್ಲು, ಹವಳದ್ವೀಪ ಇಷ್ಟವಾದ ತಾಣ.

ಗಂಡು ಸಮುದ್ರ ಕುದುರೆ ಹೊಟ್ಟೆಯಭಾಗ ಚೀಲದಂತಹ ಗರ್ಭಕೋಶವನ್ನು ಹೊಂದಿರುತ್ತದೆ. ಹೆಣ್ಣು-ಗಂಡಿನೊಡನೆ ರತಿಕ್ರೀಡೆಯಾಡಿ ತನ್ನ ಅಂಡಕೋಶವನ್ನು ಗಂಡಿನ ಗರ್ಭಚೀಲಕ್ಕೆ ವರ್ಗಾಯಿಸುತ್ತದೆ. ಗಂಡು ತನ್ನ ರೇತ್ರಾಣುಗಳ ಮೂಲಕ ಅಂಡಗಳನ್ನು ಫಲಗೊಳಿಸಿ ಅಂಡದೊಳಗಿನ ಭ್ರೂಣದ ಬೆಳವಣಿಗೆಗೆ ಬೇಕಾದ ಎಲ್ಲ ಜೀವಸತ್ವ-ರಸಗಳನ್ನು ಪೂರೈಸಿ ಪೂರ್ಣರೂಪದಲ್ಲಿ ಬೆಳವಣಿಗೆಯಾದ ಮರಿ ಸಮುದ್ರ ಕುದುರೆಯನ್ನು ಗಂಡು ಸಮುದ್ರ ಕುದುರೆ ಮೂರು ವಾರಗಳ ಬಸಿರು ಹೊತ್ತು ನಂತರ 50-100 ಮರಿಗಳನ್ನು ಪ್ರಸವಿಸುತ್ತದೆ. ಹೆಣ್ಣು ಕುದುರೆ ಪ್ರತಿ ದಿನ ಗರ್ಭಹೊತ್ತ ಸಂಗಾತಿಯ ಬಳಿ ಬಂದು ಉಭಯಕುಶಲೋಪರಿ ವಿಚಾರಿಸಿಕೊಳ್ಳುತ್ತಾಳೆ. ಪ್ರಸವದ ಎರಡು ದಿನಗಳ ನಂತರ ಗಂಡು ಕುದುರೆ ಮತ್ತೆ ಗರ್ಭಧರಿಸಲು ತಯಾರಾಗುತ್ತಾನೆ. ಅಯ್ಯೋ ಗಂಡೇ-ಹೊರುವುದು-ಹೆರುವುದು ಇಷ್ಟೆ ನಿನ್ನ ಕೆಲಸವೇ?

ಈ ಸಮುದ್ರ ಜೀವಿ ಶಾಂತಿಪ್ರಿಯ, ಬೇಗ ಬೇಗ ಈಜಲು ಬಾರದವ. ಈ ಸಮುದ್ರ ಕುದುರೆ ಬಕಾಸುರ, ಈತನ ಆಹಾರ ಸಣ್ಣ ಹುಳು ಹುಪ್ಪಟೆಗಳು-ಅಡಗಿ ಕುಳಿತು ಗಳಕ್ಕನೆ ನುಂಗುವ ಸಮುದ್ರ ಕುದುರೆಗೆ ಹೊಟ್ಟೆಯಿಲ್ಲದ ಕಾರಣ ಇವನು ತಿಂಡಿಪೋತ.

ಔಷಧಕ್ಕಾಗಿ ಆಗ್ನೇಯ ಏಷ್ಯಾ ಹಾಗೂ ಚೀನ ದೇಶದಲ್ಲಿ ಈ ಮೀನಿಗೆ ಬೇಡಿಕೆ ಹೆಚ್ಚು ಇದೆ. ಗಾಜಿನ ಅಂದತೊಟ್ಟಿಗಳಲ್ಲಿ ಅಲಂಕಾರಕ್ಕೆ ಅಕ್ವೇರಿಯಂ ಮೀನನ್ನು ಸಾಕುವಂತೆ ಇದನ್ನೂ ಸಾಕುತ್ತರೆ. ವಿಷಾದದ ಸಂಗತಿ ಎಂದರೆ ಹೆರುವ-ಹೊರುವ ಈ ಗಂಡು ಇದೀಗ ವಿನಾಶದ ಅಂಚಿನಲ್ಲಿ ಇದ್ದಾನೆ. ಕಾಪಾಡುವ ಹೊಣೆ ನಮ್ಮ ಕೈಯಲ್ಲಿ ಇದೆ.

ಒಂಬತ್ತು ತಿಂಗಳು ಹೊತ್ತು, ಹೆತ್ತಿದ್ರೆ ಗೊತ್ತಾಗಿರೋದು ಅಂತನೋ ಅಥವಾ ನೀವು ಹೆರಿಗೆ ನೋವು ಅನುಭವಿಸಿ ಗೊತಾಗುತ್ತೆ ನಿಮಗೆ ಎಂದು ಗಂಡಸರಿಗೆ ಮೂದಲಿಸುವ ಮೊದಲು ಹುಷಾರು.... ನಾನಿದ್ದೇನೆ ಎಂದು ಕಿರುಚಿಯಾನು ಹಯವದನ.

English summary
Contradictory to the common notion male seahorses undergo pregnancy and give birth to their sons and daughters. Here is an article by Vani Ramdas, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X