ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಿಯರನ್ನೂ ಸೆಳೆದ ಕರ್ನಾಟಕದ ಕಲಾಸಂಗಮ

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Karnataka art exhibition in Singapore
ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡ ಒಂದು ಸ್ವತ೦ತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ) , ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಬಹಳ ಜನಪ್ರಿಯ ಕಲೆ.

ಈ ಕರಾವಳಿಯ ಶಾಸ್ತ್ರೀಯ, ಸಾಂಪ್ರದಾಯಿಕ ಕಲೆಯ ಬಗ್ಗೆ ಅರಿವು ಮೂಡಿಸುವ ಕಿರು ಪ್ರಯತ್ನವೊಂದು ಕನ್ನಡಸಂಘ- ಸಿಂಗಪುರ, ಮುದ್ರಾ ಕಲ್ಚರಲ್ ಸೊಸೈಟಿ, ಜೆಲುಟುಂಗ್ ಕಮ್ಯುನಿಟಿ ಕ್ಲಬ್ ಅವರ ನೇತೃತ್ವದಲ್ಲಿ ಸಿಂಗಪುರದ ಜೆಲುಟುಂಗ್ ಕಮ್ಯುನಿಟಿ ಕ್ಲಬ್‍ನಲ್ಲಿ ಜುಲೈ 30, ಶನಿವಾರ ಸಂಜೆ ನಡೆಯಿತು.

ಯಕ್ಷಗಾನದ ವಾದ್ಯ, ಹಿಮ್ಮೇಳ-ಮುಮ್ಮೇಳ, ಪ್ರಸಂಗ, ತಾಳಮದ್ದಳೆ, ವಸ್ತ್ರವಿನ್ಯಾಸ, ವೇಷಭೂಷಣ, ಯಕ್ಷಗಾನ ತೊಗಲು ಬೊಂಬೆಯಾಟಗಳ ಬಗ್ಗೆ ಶ್ರಾವ್ಯ-ಸಾಹಿತ್ಯ-ದೃಶ್ಯಗಳನ್ನು ಒಳಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಜೆಟ್‍ಲುಂಗ್ ಐ.ಎ.ಇ.ಸಿ ಯ ಸಿಂಗಪುರದ ಚೀನಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದುದು ಕುತೂಹಲ ಮೂಡಿಸಿತು.

ಯಕ್ಷಗಾನ ವೇಷಭೂಷಣ, ವಾದ್ಯಗಳು, ಮಾತುಗಾರಿಕೆ, ಕಾವ್ಯ, ಅಭಿನಯಗಳ ವೈವಿಧ್ಯತೆಯನ್ನು ಸಾಕ್ಷ್ಯ ಚಿತ್ರಗಳ ಮೂಲಕ ಆಂಗ್ಲ ಹಾಗೂ ಕನ್ನಡ ಭಾಷೆಯಲಿ ವಿವರಿಸುವ ಕಾರ್ಯ ನಿರ್ವಹಿಸಿದರು ಜನಾರ್ಧನ ಭಟ್ಟರು ಮತ್ತು ರಾಜೇಶ್ ನಿರ್ವಹಿಸಿದರು. ಮಾಹಿತಿ, ಸಾಕ್ಷ್ಯ ಚಿತ್ರಗಳ ಸಂಗ್ರಹಣೆ ರಾಜೇಶ್ ಮತ್ತು ಚಂದ್ರಶೇಖರ್ ಅವರಿಂದ.

ರಂಗಸ್ಥಳದ ಗಜಮುಖನಿಗೆ ವಂದನೆಯ ಪ್ರಾರ್ಥನೆಯ ದೃಶ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಯಕ್ಷಗಾನದ ಇತಿಹಾಸ, ತಾಳವನ್ನು ಅರ್ಥಬದ್ಧವಾಗಿ ಹಾಕುತ್ತಾ ತಮ್ಮದೇ ಶೈಲಿಯಲ್ಲಿ ಪದ್ಯವನ್ನು ಹಾಡುವ ಭಾಗವತರು, ರೌದ್ರಾವತಾರದ ಪಾತ್ರಗಳು, ಮುಮ್ಮೇಳ-ರ೦ಗಸ್ಥಳದ ಮು೦ಭಾಗದಲ್ಲಿ ನೃತ್ಯ/ಅಭಿನಯ ಮಾಡುವ ಪಾತ್ರಗಳು. ಹಿಮ್ಮೇಳದವರು ಇದೇ ರ೦ಗಸ್ಥಳದ ಹಿ೦ಭಾಗದಲ್ಲಿ, ಪ್ರೇಕ್ಷಕರಿಗೆ ಕಾಣುವ೦ತೆ ಕುಳಿತು ಚ೦ಡೆ-ಮದ್ದಳೆಗಳನ್ನು ಸ೦ದರ್ಭಕ್ಕೆ ತಕ್ಕ೦ತೆ ಬಾರಿಸುತ್ತಾರೆ. ಜಾಗಟೆ, ಹಾರ್ಮೋನಿಯ೦ ಜವಾಬ್ದಾರಿ ಹೊತ್ತಿರುವವರೂ ಜೊತೆಗೆ ಕುಳಿತಿರುತ್ತಾರೆ.

ಹಿಮ್ಮೇಳದವರ ಮಧ್ಯದಲ್ಲಿ ಕುಳಿತ ಭಾಗವತರು- ಯಕ್ಷಗಾನದ ನಿರ್ದೇಶಕರು, ಸೂತ್ರದಾರರು ಕುಳಿತು ಪದ-ಪದ್ಯಗಳನ್ನು ವಿವಿಧ ಧಾಟಿಗಳಲ್ಲಿ ಹಾಡಿ ಪ್ರಸ೦ಗವನ್ನು ರಸವತ್ತಾಗಿ ಕಾವ್ಯರೂಪದಲ್ಲಿ ವಿವರಿಸುತ್ತಾರೆ. ಈ ಭಾಗವತರೇ ರ೦ಗದ ಮೇಲಿನ ನಿರ್ದೇಶಕರು. ಅವರು ಹಾಡಿದುದನ್ನು ಪಾತ್ರಧಾರಿಗಳು ಗದ್ಯರೂಪದಲ್ಲಿ ಪ್ರೇಕ್ಷಕರಿಗೆ ಮಾತುಗಾರಿಕೆಯಿ೦ದ ಆಡಿತೋರಿಸುತ್ತಾರೆ. ಭಾಗವತರು ಸೃಷ್ಟಿಸುವ ಸ್ಪಷ್ಟ ಹಾಗೂ ನಾದಮಯ ಪ್ರಪಂಚ ಯಕ್ಷಗಾನದ ಕುಣಿತಕ್ಕೆ ನಾದಮಯ ವಾತಾವರಣವನ್ನು ನೀಡುತ್ತದೆ.

ತಾಳಮದ್ದಳೆ :
ಇದು ಕರ್ನಾಟಕದ ದಕ್ಷಿಣ ಕರಾವಳಿಯ ಒಂದು ಜಾನಪದ ಮೇಳ. ಇದು 'ಆಟವಿಲ್ಲದ ಕೂಟ". ಯಕ್ಷಗಾನ ವೇಷಭೂಷಣ, ಸಂಗೀತ, ಹಿಮ್ಮೇಳನ ಇವುಗಳನ್ನೊಳಗೊಂಡ ಜಾನಪದ ನೃತ್ಯ. ಆದರೆ 'ಯಕ್ಷಗಾನ ತಾಳಮದ್ದಳೆ" ಎನ್ನುವುದು ನೃತ್ಯ, ವೇಷಭೂಷಣಗಳಿಲ್ಲದೆ ನಡೆಸುವ ರಂಗತಾಲೀಮು ಅಥವಾ ಪೂರ್ವ ಅಭಿನಯ. ಯಕ್ಷಗಾನದಂತೆ ಇಲ್ಲಿ ಹಿಮ್ಮೇಳ, ಚಂಡೆ ಮದ್ದಳೆ, ಭಾಗವತರ ಸಂಗೀತವಿದೆ. ಇದರಲ್ಲಿ ಬರುವ ಪಾತ್ರಧಾರಿಗಳನ್ನು ಅರ್ಥಧಾರಿಗಳು ಎಂದು ಕರೆಯುತ್ತಾರೆ.

ಇವರು ಸಂಭಾಷಣೆ ಅಥವಾ ಮಾತುಗಳ ಮೂಲಕ ಸೃಷ್ಟಿಸಿದ ಪಾತ್ರಗಳನ್ನು ಕಾಲ್ಪನಿಕವಾಗಿ ಸಭಿಕರಿಗೆ ಅರ್ಥೈಸಿ ಪಾತ್ರಗಳ ಚಿತ್ರಣ ಮೂಡಿಸುತ್ತಾರೆ. ಇದನ್ನು ಮಾಡುವ ವ್ಯಕ್ತಿಗಳಿಗೆ ಪಾತ್ರಗಳು ನಿಯೋಜಿಸಲ್ಪಟ್ಟಿರುತ್ತದೆ. ಇವರು ವೇಷಭೂಷಣವಿಲ್ಲದೆ ರಂಗಮಂಚದ ಮೇಲೆ ಕುಳಿತು ಮಾತುಗಳ ಮೂಲಕ ಪಾತ್ರಗಳನ್ನು ಸಭಿಕರಿಗೆ ಪರಿಚಯಿಸಿ ಎದುರಿನ ಅರ್ಥಧಾರಿಗಳೊಂದಿಗೆ ಸಂಭಾಷಿಸಬೇಕು. ಇಲ್ಲಿ ಸಂಭಾಷಣೆ, ವಿಚಾರ ವಿನಿಮಯಗಳು ಕಾವ್ಯಮಯವಾಗಿ ಮಾತುಗಳ ಮೂಲಕ ಹೊರಹೊಮುತ್ತದೆ. ಧ್ವನಿಯ ಮೂಲಕ ಕೋಪ, ರೋಷ, ದ್ವೇಷ, ಪ್ರೀತಿ, ಅಭಿಮಾನ, ಪ್ರೇಮದ ಭಾವನೆಗಳನ್ನು ವ್ಯಕ್ತಪಡಿಸಿ ಸಭಿಕರನ್ನು ಕಾಲ್ಪನಿಕ ಲೋಕಕ್ಕೆ ಕರೆದೊಯ್ಯುತ್ತಾರೆ.

ತಾಳ-ಮದ್ದಳೆಗೆ ಸರ್ವಸಜ್ಜಿತ ರ೦ಗಸ್ಥಳದ ಅವಶ್ಯಕತೆಯಿಲ್ಲ, ದೊಡ್ದ ದನಿಮಾಡುವ ಧ್ವನಿವರ್ಧಕಗಳೂ ಬೇಡ. ಗಿಜಿಗಿಜಿ ಗುಟ್ಟುವ ಅಸ೦ಖ್ಯ ಪ್ರೇಕ್ಷಕರು ಇಲ್ಲದಿದ್ದರೂ ನಡೆಯುತ್ತದೆ. ಬೇಕಾಗಿರುವುದು ಒ೦ದು ಸಾಮಾನ್ಯ ವೇದಿಕೆ ಮತ್ತು ಶ್ರದ್ಧೆಯಿ೦ದ ಕೇಳುವ ಜನರಿಗೆ ಆಸನದ ವ್ಯವಸ್ಥೆ. ಕಡಿಮೆ ಪ್ರಮಾಣದ ಧ್ವನಿವರ್ಧಕ ಸಾಕು. ಎಲ್ಲ ಖರ್ಚೂ ಬಹಳ ಕಡಿಮೆ ಎಂದು ಭಟ್ಟರು ಮಾಹಿತಿ ನೀಡಿದರು. ಪುಟಾಣಿಯರಾದ ಶ್ರೀಲೇಖ, ಸೂಕ್ತಿ ಮತ್ತು ವಿಭು ಯಕ್ಷಗಾನದ ವೇಷ-ಭೂಷಣ ಧರಿಸಿ, ಕೃಷ್ಣಾರ್ಜುನ ಕಾಳಗದ ಪ್ರಸಂಗದ ಗಯ-ಗಂಧರ್ವ ದೃಷ್ಟಾಂತದಿಂದ ಯಕ್ಷಗಾನದ ರಸಾಭಿನಯದ ಪರಿಚಯವನ್ನು ತೋರಿಸಿದ್ದು ಸೊಗಸಾಗಿತ್ತು.

ಪ್ರತಿಯೊ೦ದು ಕಲೆಗೂ ಅದರದೇ ಆದ ವೈಶಿಷ್ಟತೆ ಇದೆ. ಯಕ್ಷಗಾನ ಪಾತ್ರಗಳಲ್ಲಿನ ಮನಮುಟ್ಟುವ ಹಾವಭಾವಗಳು, ಅ೦ದ-ಆಡ೦ಬರದ ವೇಷ-ಭೂಷಣಗಳು, ಮೋಹಕ ಕುಣಿತ, ಮಾತುಗಾರಿಕೆ, ಎದೆಬಿರಿಸುವ ಚ೦ಡೆಯ, ಮದ್ದಳೆ, ಜಾಗಟೆಗಳ ಸದ್ದು, ಮೃದ೦ಗದ ಮೃದುವಾದ ಸ೦ಗೀತ ಎಲ್ಲವೂ ಇವೆ. ಪೌರಾಣಿಕ ಪಾತ್ರಗಳನ್ನು ಅತ್ಯಂತೆ ಪರಿಣಾಮಕಾರಿಯಾಗಿ ಬಹುಶಃ ಬೇರಾವ ಮಾಧ್ಯಮದಲ್ಲೂ ಅಭಿನಯಿಸಿ ತೋರಿಸಲು ಆಗದು.

ಗಾನಂ-ನಾಟ್ಯಂ-ನಾಟಕಂ ಮೂರೂ ಕಲೆಗಳ ಸಂಗಮದ ಯಕ್ಷಗಾನದ ಅರಿವು ಮೂಡಿಸುವ ಈ ಕಾರ್ಯಕ್ರಮದ ಸಮಗ್ರ ನಿರ್ವಹಣೆಯ ಶ್ರೇಯಸ್ಸು ಜನಾರ್ಧನ ಭಟ್, ಕೆ.ಎಸ್.ರಾಜೇಶ್ ಮತ್ತು ಚಂದ್ರಶೇಖರ್ ಅವರಿಗೆ ಸಲ್ಲುತ್ತದೆ. ಜೆಲುಟುಂಗ್ ಸಿ.ಸಿ.ಯ ದೇವಿ ಮತ್ತು ಸಿಂಗಪುರ ಕನ್ನಡಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ್ ಅವರಿಂದ ವಂದನಾರ್ಪಣೆ ನಡೆಯಿತು.

ನಗರೀಕರಾದ ನಮಗೆ ಬೇರೆ ಬೇರೆ ಪ್ರಾಂತ್ಯಗಳ ಕಲೆ, ಪರಿಸರ, ಅಲ್ಲಿನ ಭಾಷೆ ವಿಷಯಗಳ ಬಗ್ಗೆ ತಿಳಿಯುವ ಅಥವಾ ನೋಡುವ ಅವಕಾಶಗಳು ಕಮ್ಮಿ. ಪರದೇಶಗಳಿಗೆ ವಲಸೆ ಬಂದಾಗ ಅಲ್ಲಿ ನಡೆಯುವ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕರ್ನಾಟಕದ ಹಲವು ಪ್ರಾಂತ್ಯಗಳ ಭಾಷೆ, ಕಲಾಚಾರಗಳ ಪರಿಚಯವಾಗುತ್ತದೆ. ಸಿಂಗಾಪುರದಲ್ಲಿ ಇಂತಹ ಅವಕಾಶಗಳನ್ನು ಕಲ್ಪಿಸಿ ವಿವಿಧ ಕ್ಷೇತ್ರಗಳಲ್ಲಿನ ಕಲಾಚಾರವನ್ನು ಕನ್ನಡಿಗರಿಗೆ ಪರಿಚಯಿಸಲು ಪ್ರಯತ್ನಿಸುತ್ತಿರುವ ಕನ್ನಡ ಸಂಘದ ಪ್ರಯತ್ನ ಶ್ಲಾಘನೀಯವಾದುದು.

English summary
Karnataka art exhibition was organized in Singapore to showcase Yakshagana, Tala Maddale. The performance by the artists attracted Chinese students too. A report by Vani Ramdas, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X