ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಸ್ನೇಹಸೇತುವೆ ಕಟ್ಟಲು ನಾವಿಕ ತವಕ

By * ಪ್ರಸಾದ ನಾಯಿಕ
|
Google Oneindia Kannada News

Suresh Ramachandra, Vishwanath and Keshav Babu
ಬೆಂಗಳೂರು, ಜು. 5 : ಅಮೆರಿಕದಲ್ಲಿಯೇ ಹುಟ್ಟಿ ಬೆಳೆದ ಕನ್ನಡದ ಮಣ್ಣಿನ ಕುಡಿಗಳು ಹೇಗೆ ಮಾತನಾಡುತ್ತವೆ, ಹೇಗೆ ಹಾಡುತ್ತವೆ ಎಂಬುದನ್ನು ನೋಡಬೇಕಿದ್ದರೆ ಜುಲೈ 9 ಮತ್ತು 10ರಂದು ಶನಿವಾರ ಮತ್ತು ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಅಮೆರಿಕನ್ನಡಿಗರ 'ಅಮೆರಿಕನ್ನಡೋತ್ಸವ' ಕಾರ್ಯಕ್ರಮಕ್ಕೆ ಬರಬೇಕು.

'ಸ್ನೇಹಸೇತು' : ಅಮೆರಿಕ ಮತ್ತು ಕರ್ನಾಟಕದ ನಡುವಿನ ವ್ಯಾವಹಾರಿಕ, ಸಾಹಿತ್ಯಿಕ ಮತ್ತು ಸಂಸ್ಕೃತಿಕ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಎರಡು ದಿನಗಳ ಕಾಲ ನಾಡ ಕನ್ನಡಿಗರೆದಿರು ಹಾಡು, ನೃತ್ಯ, ನಾಟಕ ಮುಂತಾದ ಪ್ರತಿಭಾ ಪ್ರದರ್ಶನವನ್ನು ಮಾಡಲಿದ್ದಾರೆ.

ಅವುಗಳಲ್ಲಿ ಮಕ್ಕಳೇ, ಮಕ್ಕಳಿಂದ ಮತ್ತು ಎಲ್ಲರಿಗಾಗಿ ನಡೆಸಿಕೊಡುವ ಗೋಷ್ಠಿ ಪ್ರಮುಖ ಕಾರ್ಯಕ್ರಮಗಳಲ್ಲೊಂದು ಎಂದು, ಎನ್ಆರ್ಐ ಫೋರಂ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಿರುವ 'ನಾವಿಕ' ಸಂಸ್ಥೆಯ ಅಧ್ಯಕ್ಷ ಕೇಶವ ಬಾಬು ಅವರು ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ಮಕ್ಕಳೆಲ್ಲ ಅಮೆರಿಕದಲ್ಲಿ 'ಕನ್ನಡ ಕಲಿ' ಶಾಲೆಯ ವಿದ್ಯಾರ್ಥಿಗಳು. ಈ ಸಾಂಸ್ಕೃತಿಕ ಹಬ್ಬದಲ್ಲಿ ಸುಮಾರು 300ಕ್ಕೂ ಹೆಚ್ಚು ಅಮೆರಿಕನ್ನಡಿಗರು ಪ್ರತಿಭಾ ಪ್ರದರ್ಶನ ಮಾಡಲಿದ್ದಾರೆ. ಅವರಲ್ಲಿ 150ಕ್ಕೂ ಹೆಚ್ಚು ಚಿಣ್ಣರು ಕಲಾಕೌಶಲವನ್ನು ಮೆರೆಯಲಿದ್ದಾರೆ. ಮಕ್ಕಳು, ಪಾಲಕರು, ಬಂಧು-ಮಿತ್ರರು ಸೇರಿ 2500 ಅಮೆರಿಕನ್ನಡಿಗರು ಬೆಂಗಳೂರಿನಲ್ಲಿ ಕನ್ನಡ ಡಿಂಡಿಮ ಬಾರಿಸಲಿದ್ದಾರೆ.

ಅಮೆರಿಕದ ಮಕ್ಕಳಿಗೆ ಕನ್ನಡ ನಾಡಿನ ಸಾಂಸ್ಕೃತಿಕ ಸಂಪತ್ತನ್ನು ತೋರಿಸುವ ಉದ್ದೇಶದಿಂದ 'ರಾಷ್ಟ್ರದೇವೋಭವ' ಎಂಬ ನೃತ್ಯರೂಪಕವನ್ನು ನಡೆಸಿಕೊಡಲಾಗುತ್ತಿದೆ. ರಂಗಾಯಣ ತಂಡದವರು ಒಂದು ನಾಟಕ ಪ್ರದರ್ಶನ ಮಾಡಲಿದ್ದಾರೆ. ಜೊತೆಗೆ ಮಕ್ಕಳಿಗೆ ಮೈಸೂರು ಪ್ರವಾಸ ಮಾಡಿಸುವ ಉದ್ದೇಶವನ್ನೂ ಹೊಂದಿದ್ದಾರೆ. ಬೆಂಗಳೂರಿನ ಗಾಳಿ, ಮಳೆ, ಬಿಸಿಲಿಗೆ ಒಡ್ಡಿಕೊಂಡಿರುವ ಮಕ್ಕಳು ರವೀಂದ್ರ ಕಲಾಕ್ಷೇತ್ರದ ಹಿಂಬದಿಯ ಸಂಸ ರಂಗಮಂದಿರದಲ್ಲಿ ರಿಹರ್ಸಲ್ ನಲ್ಲಿ ತೊಡಗಿದ್ದಾರೆ.

ಉದ್ಘಾಟನೆ : ಶುಕ್ರವಾರ, ಜುಲೈ 8ರಂದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಆರಂಭವಾಗಲಿರುವ ಬಿಸಿನೆಸ್ ಫೋರಂ ಅನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉದ್ಘಾಟನೆ ಮಾಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಾರು ಉದ್ಘಾಟಿಸುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಅಮೆರಿಕದಲ್ಲಿ ಉದ್ಯಮಿಗಳಾಗಿ ಕೆಆರ್ಎಸ್ ಮೂರ್ತಿ, ವಲ್ಲರಿ, ಸಚ್ಚಿದಾನಂದ ಬಾಬು, ಜಿಕೆ ಸತ್ಯ ಮುಂತಾದವರು 'ಉದ್ಯಮದಲ್ಲಿನ ಅವಕಾಶ', 'ಸೌರ ವಿದ್ಯುತ್ ಗ್ರಾಮ ಕಲ್ಪನೆ' ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲಿದ್ದಾರೆ. ನಂತರ ಅಮೆರಿಕನ್ನಡಿಗರಿಗಾಗಿ ಔತಣಕೂಟವನ್ನು ಏರ್ಪಡಿಸಲಾಗಿದೆ.

ಅಮೆರಿಕದಲ್ಲಿ ಸಾಫ್ಟ್ ವೇರ್, ಹೆಲ್ತ್ ಕೇರ್, ಕಟ್ಟಡ ನಿರ್ಮಾಣ, ಸರಕಾರಿ ವಲಯದಲ್ಲಿ ಸಾಕಷ್ಟು ಕನ್ನಡಿಗರು ಹೆಸರು ಮಾಡಿದ್ದಾರೆ ಎಂದು ಕೇಶವಬಾಬು ಹರ್ಷ ವ್ಯಕ್ತಪಡಿಸಿದರು. ಅಲ್ಲಿಯ ಅತ್ಯುತ್ತಮ ಬಿಸಿನೆಸ್ ಸ್ಕೂಲ್ ನಲ್ಲಿ ಕನ್ನಡಿಗರಾದ ಸುನೀಲ್ ಕುಮಾರ್ ಅವರು ಡೀನ್ ಆಗಿ ಆಯ್ಕೆಯಾಗಿದ್ದಾರೆ ಎಂಬ ವಿಷಯವನ್ನು ತಿಳಿಸಿದರು.

ತಾರಾ ಆಕರ್ಷಣೆ : ಈ ಉತ್ಸವದಲ್ಲಿ ಕ್ರಿಕೆಟ್ ತಾರೆಗಳಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಸಿನೆಮಾ ನಕ್ಷತ್ರಗಳಾದ ರಮೇಶ್ ಅರವಿಂದ್, ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ಸಂಗೀತ ನಿರ್ದೇಶಕ ಮನೋಮೂರ್ತಿ, ಕೊಳಲು ಮಾಂತ್ರಿಕ ಪ್ರವೀಣ್ ಗೋಡ್ಖಿಂಡಿ ಮುಂತಾದವರು ಪಾಲ್ಗಾಳ್ಳುತ್ತಿದ್ದಾರೆ.

ನೊಂದಾವಣಿ : ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಚ್ಛಿಸುವವರು ಮುಂಚೆಯೇ ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗಾಗಿ : http://navika.org/kannadasamavesh.php ವೀಕ್ಷಿಸಿ. ಪತ್ರಿಕಾಗೋಷ್ಠಿಯಲ್ಲಿ ಬಿಸಿನೆಸ್ ಫೋರಂ ಚೇರ್ ಆಗಿರುವ ಸುರೇಶ್ ರಾಮಚಂದ್ರ, ಎನ್ಆರ್ಐ ಫೋರಂನ ಜಂಟಿ ನಿರ್ದೇಶಕರಾಗಿರುವ ವಿಶ್ವನಾಥ್, ಪೂರ್ವತಯಾರಿ ಮಂಡಳಿಯ ಚೇರ್ ಆಗಿರುವ ಅಭಿಜಿತ್ ಪ್ರಹ್ಲಾದ್ ಮತ್ತು ಯಶವಂತ ಸರದೇಶಪಾಂಡೆ ಹಾಜರಿದ್ದರು. [ಅಮೆರಿಕನ್ನಡೋತ್ಸವ ಕಾರ್ಯಕ್ರಮ ವಿವರ]

English summary
North America Vishwa Kannada Association (Navika) has organized two days cultural program at Ravindra Kalakshetra in Bangalore on July 9 and 10. Cine artists like Ramesh Aravind, Srinath, cricketers Anil Kumble, Javagal Srinath are participating in two days cultural extravaganza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X