ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಲಗೆಟ್ಟ ಅಂಕಣಗಳನ್ನು ಚುಚ್ಚಿದ ದುಂಡಿರಾಜ್

By Shami
|
Google Oneindia Kannada News

Poet H Dundiraj (pic : kavite.blogspot.com)
ಬೆಂಗಳೂರು, ಜು 4 : ಕನ್ನಡ ಪತ್ರಿಕೆಗಳಲ್ಲಿ ಮೂಡಿಬರುತ್ತಿರುವ ಅನೇಕಾನೇಕ ಅಂಕಣಗಳು, ತನ್ನ ಮೂಲ ಸ್ವರೂಪ ಮತ್ತು ಉದ್ದೇಶವನ್ನು ಕಳೆದುಕೊಂಡಿವೆ ಎಂದು ಸಾಹಿತಿ ಮತ್ತು ಅಂಕಣಕಾರ ಎಚ್ ದುಂಡಿರಾಜ್ ಖೇದ ವ್ಯಕ್ತಪಡಿಸಿದ್ದಾರೆ.

ಶ್ರೀವತ್ಸ ಜೋಶಿ ಅವರ 'ಪರಾಗಸ್ಪರ್ಶ' ಅಂಕಣ ಬರಹಗಳ ಸಂಕಲನ 'ಗೆಲುವಿನ ಟಚ್ & ಚೆಲುವಿನ ಟಚ್' ಜೋಡಿ ಪುಸ್ತಕಗಳನ್ನು ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಸ್ವಪ್ರತಿಷ್ಠೆ, ಆತ್ಮರತಿ, ಅಹಂಕಾರ ಪ್ರದರ್ಶನಕ್ಕೆ ಮೀಸಲಾಗಿರುವ ಅಂಕಣ ಬರಹಗಳನ್ನು ತರಾಟೆಗೆ ತೆಗೆದುಕೊಂಡ ದುಂಡಿ, ಕೆಲವು ಅಂಕಣಗಳಂತೂ ಪರಸ್ಪರ ಕೆಸರು ಎರಚುವ, ವಿಷಕಾರುವ, ರಾಗ ದ್ವೇಷ ಉಗುಳುವ ಕಾರ್ಖಾನೆಗಳಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಮೂರು ದಶಕಗಳ ಹಿಂದೆ ಅಂಕಣ ಬರಹಗಳ ಬಗ್ಗೆ ಒಂಥರಾ ಮೈಲಿಗೆ ಇತ್ತು. ಅದು ಸಾಹಿತ್ಯವೇ ಅಲ್ಲ ಎಂದು ಹೇಳುವವರ ನಂಬಿಕೆಯನ್ನು ಬುಡ ಮೇಲಾಗಿಸಿದ್ದು ಡಾ. ಹಾ. ಮಾ ನಾಯಕರು. ಅವರ ಅಂಕಣ ಬರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತದ್ದನ್ನು ದುಂಡಿರಾಜ್ ಸ್ಮರಿಸಿದರು.

ಇವತ್ತಿನ ಕಾಲದಲ್ಲಿ ಎಲ್ಲಾ ಪತ್ರಿಕೆಗಳಲ್ಲಿ ಅಂಕಣ ಬರಹ ಸಿಗತ್ತೆ. ಕೆಲವು ಜನಪ್ರಿಯತೆಯನ್ನೂ ಗಳಿಸಿಕೊಂಡಿವೆ. ನಿಷ್ಠೆಯ ಓದುಗರನ್ನು ಸೃಷ್ಠಿಸಿಕೊಂಡ ಅಂಕಣಗಳೂ ಉಂಟು. ದೌರ್ಭಾಗ್ಯವೆಂದರೆ ಕೆಲವು ಅಂಕಣಗಳು 'ನಾನು ನಾನೆಂಬ' ಕಾಯಿಲೆಗೆ ತುತ್ತಾಗಿರುವುದರಿಂದ ಕನ್ನಡ ಅಂಕಣ ಜಗತ್ತು ಗಬ್ಬೆದ್ದು ಹೋಗಿವೆ ಎಂದರು.

ಯಾರೋ ಮಹಾಶಯನ ಪಂಕ್ತಿಗಳನ್ನು ತಮ್ಮ ಅಂಕಣದಲ್ಲಿ ಧಾರಾಳವಾಗಿ ಉದ್ದರಿಸುವುದು, ಆನಂತರ ಇದನ್ನು ನೀವು ಓದಿ ಎಂದು ಅಪ್ಪಣೆ ಕೊಡಿಸುವುದು ತಪ್ಪು ಎಂದರು. ಕೆಲವು ಅಂಕಣಕಾರರಂತೂ ಉಪದೇಶ ಕೊಡುವ ಮಟ್ಟಕ್ಕೆ ಇಳಿದಿದ್ದಾರೆ. ಹಲ್ಲು ಉಜ್ಜುವುದು ಹೇಗೆ, ಕಿವಿ ಕ್ಲೀನ್ ಮಾಡಿಕೊಳ್ಳುವುದು ಹೇಗೆ ಎಂದು ಓದುಗರಿಗೆ ಪಾಠ ಮಾಡುತ್ತಿದ್ದಾರೆ ಎಂದು ಯಾವ ಅಂಕಣವನ್ನಾಗಲೀ, ಯಾವ ಅಂಕಣಕಾರರ ಹೆಸರನ್ನಾಗಲೀ ಪ್ರಸ್ತಾಪಿಸದೆ ಎಚ್ . ದುಂಡಿರಾಜ್ ಲೇವಡಿ ಮಾಡಿದರು.

ಶ್ರೀವತ್ಸ ಜೋಶಿ ಅವರ ಸಾಪ್ತಾಹಿಕ ಪ್ರಬಂಧಗಳ ಬಗ್ಗೆ ಮಾತನಾಡಿದವರು ಪತ್ರಕರ್ತ ನಾಗೇಶ್ ಹೆಗಡೆ. ಒಂದು ಸಂಗತಿ ಅಥವಾ ಒಂದು ಶಬ್ದ ಅಥವಾ ಒಂದು ಪ್ರಮೇಯವನ್ನು ಕೈಗೆತ್ತಿಕೊಂಡು ಮಾಹಿತಿಯನ್ನು ಮನೋಜ್ಞವಾಗಿ ಪೋಣಿಸುವ ಜೋಶಿಯವರ ಬರಹಗಳಲ್ಲಿ ಸ್ಥಾಯಿಯಾಗಿರುವುದು Cyclic Narration ಶೈಲಿ ಎಂದರು.

ಲೇಖಕರು ಮತ್ತು ಓದುಗರ ನಡುವೆ ಸ್ನೇಹಸ್ಪರ್ಶ ಪ್ರಶ್ನೋತ್ತರದ ಸ್ಲಾಟ್ ಕಾರ್ಯಕ್ರಮದ ಹೈಲೈಟ್ ಆಗಿತ್ತು. ಕಾರ್ಯಕ್ರಮ ನಿರೂಪಣೆ ಶಿಕಾಗೋ ನಿವಾಸಿ, ಭಾರತ ಪ್ರವಾಸಿ ಅನುಪಮ ಮಂಗಳವೇಡೆ. ಸತೀಶ್ ಶೃಂಗೇರಿ ಅವರ ರೇಖಾಚಿತ್ರ, ಅಪಾರ ಅವರ ಮುಖಪುಟ ಕಲೆ ಇರುವ ಗೆಲುವಿನ ಮತ್ತು ಚೆಲುವಿನ ಟಚ್ ಪುಸ್ತಕ ಪ್ರಕಾಶಕರು ಗೀತಾ ಬುಕ್ ಹೌಸ್ ಮೈಸೂರು.

English summary
NRI Srivathsa Joshis two Kannada books released in Bangalore. Journalist Nagesh Hegde spoke about Cyclic Narration in essay writing, while the Poet H Dundiraj in his speech deplored the deteriorating quality of content on column writing in Kannada news papers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X