ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗುತಾ ನಲಿನಲಿದಾಡಿದ ನ್ಯೂಜಿಲೆಂಡ್ ಕನ್ನಡಿಗರು

By * ಪ್ರಕಾಶ್ ರಾಜಾರಾವ್, ಆಕ್ಲೆಂಡ್
|
Google Oneindia Kannada News

Rajkumar antakshari in Newzealand
ನ್ಯೂಜಿಲೆಂಡ್ ಕನ್ನಡ ಕೂಟ ಕಳೆದ ಐದು ವರ್ಷಗಳಿಂದ ನಡೆಸುತ್ತಿರುವ ವಾರ್ಷಿಕ ಕನ್ನಡ ಚಲನಚಿತ್ರ ಗೀತೆಗಳ ಅಂತಾಕ್ಷರಿ ಕಾರ್ಯಕ್ರಮಕ್ಕೆ ಈ ಬಾರಿ ವಿಶೇಷ ಮೆರುಗು. ಎಲ್ಲಾ ರಾಜ್ ಮಯ. ಇಡೀ ಕಾರ್ಯಕ್ರಮ ಡಾ.ರಾಜ್ ಕುಮಾರ್ ಅವರ ಚಿತ್ರಗಳಿಗೆ ಮೀಸಲಾಗಿದ್ದು ಅಣ್ಣಾವ್ರ ಭಕ್ತರ ಉತ್ಸಾಹ ಮೇರೆ ಮೀರಿತ್ತು. ಮರೆಯಲಾರದ ಹಳೆಯ ಹಾಡುಗಳನ್ನು ಮತ್ತೆ ಮತ್ತೆ ಅಹಹಾ ಒಹೊಹೋ ಎಂದು ಗುನುಗುನಿಸುತ್ತಾ ಎಲ್ಲರೂ ತಯಾರಿ ನಡೆಸಿದ್ದೆವು.

ಮೇ 28, 2011ರಂದು ಶನಿವಾರ ಆಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ ನಾಗರೀಕರ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಪರ್ಧೆಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ತಂಡಗಳು ನೊಂದಾಯಿಸಿದ ಕಾರಣ ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಯಿತು. ಅಣ್ಣಾವ್ರ ಬದುಕು ಮತ್ತು ಕಲಾ ಜೀವನದ ಬಗ್ಗೆ ಸಾಕಷ್ಟು ಮಾಹಿತಿಯಿದ್ದ ಈ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ತಲಾ ಇಬ್ಬರ ಆರು ತಂಡಗಳು ಅಂತಿಮ ಹೋರಾಟಕ್ಕೆ ಆಯ್ಕೆಯಾದವು. ಇದರಲ್ಲಿ ಅತೀ ಕಿರಿಯ ವಯಸ್ಸಿನ ಕುಮಾರಿ ಸ್ನೇಹಾ ಸಾಲಿಮಠ್ ಮತ್ತು ಅಮೃತಾ ವಿಶ್ವಕರ್ಮ ಆಯ್ಕೆಯಾಗಿದ್ದು ಅಭಿನಂದನಾರ್ಹ.

ಹಲವಾರು ಸುತ್ತುಗಳಿದ್ದ ಈ ಸ್ಪರ್ಧೆಯನ್ನು ಅತ್ಯಾಕರ್ಷಕವಾಗಿ ನಡೆಸಲಾಯಿತು. ಮೊದಲಿಗೆ ಮಾಮೂಲಿನಂತೆ ಕೊನೆಯ ಅಕ್ಷರದಿಂದ ಪ್ರಾರಂಭಿಸುವ ಹಾಡುಗಳಲ್ಲಿ ಹಳೆಯ ಚಿತ್ರಗಳದ್ದೇ ಮೇಲುಗೈ. ಇದರಲ್ಲಿ ಎಲ್ಲರೂ ಪೂರ್ಣ ಅಂಕಗಳಿಸಿ ಬೀಗಿದರೂ ಮುಂದಿನ ಸುತ್ತುಗಳು ತೀವ್ರ ಸ್ಪರ್ಧೆಯನ್ನೊಡ್ಡಿದವು. ದೊಡ್ಡ ಪರದೆಯ ಮೇಲೆ ಮೂಡುತ್ತಿದ್ದ ಹಳೆಯ ಹಾಡುಗಳು, ಸನ್ನಿವೇಶಗಳು ಪ್ರೇಕ್ಷಕರಿಗೆ ಸಂತಸ ತಂದರೂ ಸ್ಪರ್ಧಿಗಳ ನೆನಪಿನ ಸಂಪತ್ತಿಗೆ ಸವಾಲ್ ಹಾಕಿ ತಬ್ಬಿಬ್ಬಾಗಿಸಿದವು.

ಮೂರು ನಾಲ್ಕು ಚಿತ್ರಗಳ ಹಾಡುಗಳನ್ನು ಸೇರಿಸಿ ಕುಲಗೆಡಿಸಿ ತೋರಿಸಿ ನಂತರ ಅವುಗಳನ್ನು ಗುರುತಿಸಲು ಕೋರಿದಾಗ ಅನೇಕರಿಗೆ ಹಿನ್ನೆಡೆಯಾಗಲು ಕಾರಣವಾಯಿತು. ಮೂರು ಸುಳಿವಿನ ಸುತ್ತಿನಲ್ಲಿ ಯಾವುದೋ ಒಂದು ಹಾಡಿನ ಸನ್ನಿವೇಶ ಮೂಡಿಸಿ ಸ್ಪರ್ಧಿಗಳು ಮೂರು ಸುಳಿವುಗಳ ಆಧಾರದ ಮೇಲೆ ಉತ್ತರ ನೀಡಲು ನೆರವು ಪಡೆಯಬಹುದಾಗಿತ್ತು. ಮೂಕಾಭಿನಯದ ಸುತ್ತು ನಿಜಕ್ಕೂ ಕ್ಲಿಷ್ಟವಾಗಿದ್ದು ಬಹಳಷ್ಟು ಜನಕ್ಕೆ ಬಿಸಿ ಬಿಸಿ ಕಜ್ಜಾಯ ಲಭಿಸಿತು. ಕೊನೆಯದಾದ ಕಾಲೆಳೆಯುವ ಸುತ್ತು ಒಂದು ಅದ್ಭುತ ಕಲ್ಪನೆ. ಪ್ರತಿಯೊಂದು ತಂಡದವರು ಮೊದಲಿಗೆ ಒಂದು ಚೀಟಿಯನ್ನು ಆರಿಸಿಕೊಂಡು ಅದರಲ್ಲಿ ಬರೆದ ಚಿತ್ರದ ಹೆಸರನ್ನು ಓದಿ ನಂತರ ಆ ಪ್ರಶ್ನೆಗೆ ತಾವೇ ಉತ್ತರಿಸಿ ಅಂಕ ಪಡೆಯಲು ಅಥವಾ ಕಷ್ಟವೆನಿಸಿದರೆ ಆ ಪ್ರಶ್ನೆಯನ್ನು ತಮಗಿಷ್ಟ ಬಂದ ಬೇರೆ ತಂಡಕ್ಕೆ ವರ್ಗಾಯಿಸಿ ಅವರ ಕಾಲೆಳೆಯಲು ಅನುಕೂಲ ಕಲ್ಪಿಸಲಾಗಿತ್ತು. ಈ ಹಂತದಲ್ಲಿ ಎರಡನೆಯ ಸ್ಥಾನಕ್ಕೆ ಪೈಪೊಟಿಯಿದ್ದ ಕಾರಣ ಇದು ಒಂದು ರೀತಿಯಲ್ಲಿ ನಿರ್ಣಾಯಕವಾಯಿತು.

ಎಲ್ಲಾ ತಂಡದವರೂ ಅಣ್ಣನ ಹೆಸರನ್ನೇ ಬಯಸಿದ ಕಾರಣ ಕ್ರಮವಾಗಿ ಮೇಯರ್ ಮುತ್ತಣ್ಣ, ಸನಾದಿ ಅಪ್ಪಣ್ಣ, ರೌಡಿ ರಂಗಣ್ಣ, ಚೂರಿ ಚಿಕ್ಕಣ್ಣ, ಬೀದಿ ಬಸವಣ್ಣ ಮತ್ತು ಎಮ್ಮೆ ತಮ್ಮಣ್ಣ ಎಂದು ಕರೆಯಲಾಗಿತ್ತು. ಸನಾದಿ ಅಪ್ಪಣ್ಣ ತಂಡದಲ್ಲಿ ಭಾಗವಹಿಸಿದ್ದ ಕೃಷ್ಣಾ ನಾಗರಾಜ್ ಮತ್ತು ವಸಂತ್ ಕುಮಾರ್ ಕೆಂಚಪ್ಪ ತಮಗೆ ಬಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದು ಮಾತ್ರವಲ್ಲದೆ ಬೇರೆ ತಂಡದವರು ಉತ್ತರಿಸಲು ವಿಫಲರಾದಾಗ ಆ ಅವಕಾಶವನ್ನು ಬಾಚಿಕೊಂಡು ಎಲ್ಲರ ಭಾಗ್ಯದ ಬಾಗಿಲು ಮುಚ್ಚಿಸಿ ಗುರಿ ಮುಟ್ಟಿದ್ದು ಆಕಸ್ಮಿಕ ಅಲ್ಲ.

ಈ ಸ್ಪರ್ಧೆಯ ತೀರ್ಪುಗಾರರಾಗಿದ್ದ ರತ್ನಾ ವಾಮನ ಮೂರ್ತಿ ಮತ್ತು ರಮಾ ಸತ್ಯನಾರಾಯಣ ಅವರು ಫಲಿತಾಂಶ ಪ್ರಕಟಿಸಿದಾಗ ಕೃಷ್ಣಾ ನಾಗರಾಜ್ ಮತ್ತು ವಸಂತ್ ಕುಮಾರ್ ಕೆಂಚಪ್ಪ ಅವರಿಗೆ ಪ್ರಥಮ ಸ್ಥಾನ ಹಾಗೂ ಭಾಸ್ಕರ್ ನಾರಾಯಣಪ್ಪ ಮತ್ತು ಶಂಕರ್ ಬೆಂಗಳುರು ಅವರಿಗೆ ದ್ವಿತೀಯ ಸ್ಥಾನ ದೊರಕಿತು. ಗೆದ್ದವರು ಯಾರೇ ಆದರೂ ಸೋತವರೂ ಯಾರೂ ಇರಲಿಲ್ಲ. ಪ್ರೇಕ್ಷಕರನ್ನೂ ಸೇರಿ ಎಲ್ಲರ ಮನದಲ್ಲೂ ಮುಖದಲ್ಲೂ ನಗು ನಗುತಾ ನಲೀ ನಲೀ.

ಡಾ.ರಾಜ್ ಸ್ಮರಣೆಗಾಗಿ ಇಂತಹ ಒಂದು ಸುಂದರ ಕಾರ್ಯಕ್ರಮದ ಸಂಯೋಜಕ ಮತ್ತು ನಿರೂಪಕರಾದ ಸತ್ಯಕುಮಾರ್ ಕಟ್ಟೆ, ಅವರ ಪತ್ನಿ ಸುನೀತ, ಸಹ ನಿರೂಪಕಿ ಪುಷ್ಪಾ ರಾಘವೇಂದ್ರ, ಶಶಿಕಿರಣ್ ಸಿದ್ಧಾರ್ಥ, ಊಟೋಪಚಾರದ ಹೊಣೆಹೊತ್ತ ಹೊ.ನಾ ರಾಮಚಂದ್ರ ಮತ್ತು ನೆರವು ನೀಡಿದ ಎಲ್ಲರ ಕೊಡುಗೆಯನ್ನೂ ಸ್ಮರಿಸಲಾಯಿತು. ಕನ್ನಡ ಕೂಟದ ಅಧ್ಯಕ್ಷ ಪ್ರಕಾಶ್ ಬಿರಾದರ್, ಕಾರ್ಯದರ್ಶಿ ವಸಂತ್ ಕುಮಾರ್ ಕೆಂಚಪ್ಪ, ಕಾರ್ಯಕಾರಿ ಸಮಿತಿಯ ಸದಸ್ಯರು ಎಲ್ಲರ ಪರಿಶ್ರಮದ ಕಾರಣ ಅಂತಾಕ್ಷರಿ ಒಂದು ವಾರ್ಷಿಕ ಹಬ್ಬವಾಗಿ ಮಾರ್ಪಟ್ಟಿದೆ ಅಂದರೆ ಅತಿಶಯವಲ್ಲ.

English summary
A unique program was organized by Newzealand Kannadigas in Auckland. Rajkumar movie song antakshari made every kannadiga enjoy, sing and dance. A report by Prakash Rajarao, Auckland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X