ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿವಾನಜಿ ಅವರ ಕನ್ನಡ ಕಾದಂಬರಿ ಇಂಗ್ಲಿಷಿನಲ್ಲಿ

By * ಡಾ|| ಮೈ.ಶ್ರೀ. ನಟರಾಜ, ಮೇರಿಲ್ಯಾಂಡ್
|
Google Oneindia Kannada News

Dr. MS Nataraj
ಕರ್ನಾಟಕದ ಹೊರಗೇ ತಮ್ಮ ವೃತ್ತಿಜೀವನವನ್ನು ಕಳೆದ ಖ್ಯಾತ ಕನ್ನಡ ಬರಹಗಾರ ಡಾ|| ವಸಂತ ಅನಂತ ದಿವಾನಜಿ ಅವರು 'ಕುಸುಮಾಕರ ದೇವರಗೆಣ್ಣೂರು" ಎಂಬ ಕಾವ್ಯನಾಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾಗಿದ್ದಾರೆ. ಇವರು ಬರೆದ ಪುಸ್ತಕಗಳ ಸಂಖ್ಯೆ ಚಿಕ್ಕದಾದರೂ ಬರೆದ ಪ್ರತಿಯೊಂದು ಪುಸ್ತಕವೂ ವಿಮರ್ಶಕರ ಹಾಗೂ ವಿದ್ವಾಂಸರ ಮೆಚ್ಚುಗೆ ಗಳಿಸಿದೆ. ಅಷ್ಟೇ ಅಲ್ಲ, ಇವರ ಪುಸ್ತಕಗಳು ಹಲವಾರು ಪ್ರಶಸ್ತಿಗಳನ್ನೂ ಪಡೆದುಕೊಂಡಿವೆ.

ಇವರು ಬರೆದ ಕೊನೆಯ ಕಾದಂಬರಿ "ಬಯಲು-ಬಸಿರು" ಎಂಬ ಕಿರುಹೊತ್ತಗೆ, ದಿವಾನಜಿ ಅವರ ಬರಹದ ಶೈಲಿಯಿಂದ ವಿದ್ವತ್ ವಲಯಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಈ ಕಾದಂಬರಿಯ ನಾಯಕ ಒಬ್ಬ ಅಮೆರಿಕದ ಪ್ರಜೆ, ಕ್ಯಾಲಿಫ಼ೋರ್ನಿಯಾದಲ್ಲಿ ಹುಟ್ಟಿ ಬೆಳೆದವನು. ಅರವತ್ತರ ದಶಕ ಅಮೆರಿಕದಲ್ಲಿ ಹಿಪ್ಪಿಗಳ ಆಂದೋಳನದ ಕಾಲ, ಕೆನಡಿ ಯುಗ. ಹಾಗೇ ಮಾರ್ಟಿನ್ ಲೂಥರ್ ಕಿಂಗ್ (ಜೂನಿಯರ್) ನಡೆಸಿದ ಕ್ರಾಂತಿಯ ಯುಗ. ವರ್ಣಬೇದದಿಂದ ಸಿಡಿದೆದ್ದ ಕರಿಯ ಅಮೆರಿಕನ್ನರು ತಮ್ಮ ಹಕ್ಕಿಗಾಗಿ ಸೆಣೆಸಿದ ಕಾಲ, ವಿದ್ಯಾಲಯಗಳಲ್ಲಿ ಎಡಪಂಥೀಯರ ಬಿರುಸಿನ ಚಟುವಟಿಕೆ, ವಿಯಟನಾಮ್ ಯುದ್ಧ, ಹೀಗೆ ಹಲವಾರು ಕಾರಣಗಳಿಂದ ಈ ಕಾಲ ಒಂದು ಸಾಮಾಜಿಕ ಪರ್ವಕಾಲ. ಇಂಥಾ ವಾತಾವರಣದಲ್ಲಿ ಬೆಳೆದ ಒಬ್ಬ ಯುವಕ, ತಂದೆ ತಾಯಿಗಳ ಬೇರ್ಪಡುವಿಕೆಯಿಂದ ದುಃಖಿತನಾಗಿ, ಕರಿಯರ ಮತ್ತು ಬಿಳಿಯರ ನಡುವೆ ದ್ವೇಷ ಬೆಳೆದು ದೇಶ ನುಚ್ಚುನೂರಾಗುವುದೋ ಎಂಬ ಭಯದಿಂದ ನಡುಗಿ, ಅಮೆರಿಕಾ ಮತ್ತು ಸೋವಿಯಟ್ ಒಕ್ಕೂಟಗಳ ನಡುವಿನ ಸ್ಪರ್ಧೆಯ ಕಾರಣ ಯಾವಾಗ ಅಣ್ವಸ್ತ್ರಗಳ ಉಪಯೋಗವಾಗಿಬಿಡುವುದೋ ಎಂಬ ಶಂಕೆಯ ನಡುವೆ ಬೆಳೆಯುತ್ತಾನೆ, ನಾರ್ಮನ್ ಎಂಬಾತ. ಐಹಿಕ ಸುಖಜೀವನವೇ ಮುಖ್ಯವೆನ್ನುವ ತನ್ನ ದೇಶದ ಜನರ ಮನೋಭಾವದಿಂದ ಬೇಸತ್ತು, ನಾರ್ಮನ್ ಆಧ್ಯಾತ್ಮದತ್ತ ತಿರುಗುತ್ತಾನೆ. ಆತನ ಹುಡುಕಾಟ ಆತನನ್ನು ಭಾರತಕ್ಕೆ ಕೊಂಡೊಯ್ಯುತ್ತದೆ.

ಭಾರತದಲ್ಲಿ ಹಲವು ಹತ್ತು ಆಶ್ರಮಗಳನ್ನು ಸುತ್ತಿ, ಸಾಧು-ಸಂತರನ್ನು ಕಂಡು ಆಧ್ಯಾತ್ಮದ ಸಂತೆಯಲ್ಲಿ, ಎಷ್ಟು ಗಟ್ಟಿ ಎಷ್ಟು ಜಳ್ಳು ತಿಳಿಯದೇ ನಾರ್ಮನ್ ಕಂಗೆಡುತ್ತಾನೆ. ಆತನ ಮನದಲ್ಲಿನ ದ್ವಂದ್ವ ಮತ್ತು ಹೋರಾಟಗಳ ಚಿತ್ರಣವೇ ಈ ಕಾದಂಬರಿಯ ವಸ್ತು. ಆದರೆ, ಇತರ ಕಾದಂಬರಿಗಳಂತೆ ಪಾತ್ರಗಳನ್ನು ಬೆಳೆಸದೇ ಕೇವಲ ನಾಯಕನ ಮಾನಸಿಕ ಸಂಭಾಷಣೆಗಳಿಂದಲೇ, ಅವನ ಕನಸುಗಳ (ಕೆಲವು ಹಗಲುಗನಸುಗಳೂ ಸಹ) ವರ್ಣನೆಗಳಲ್ಲೆ ಪ್ರಪಂಚದ ಹಲವಾರು ತಾತ್ವಿಕ ವಿಚಾರಗಳನ್ನು ಈ ಕಾದಂಬರಿಯಲ್ಲಿ ಪೋಣಿಸಲಾಗಿದೆ. ಈ ಕಾದಂಬರಿಯನ್ನು ಬರೆದಾಗ ದಿವಾನಜಿ ಅವರಿಗಿದ್ದ ದೃಷ್ಟಿದೋಷದಿಂದಾಗಿ, ಅವರು ತಮ್ಮ ಸೋದರನಿಗೆ ಉಕ್ತಲೇಖನದ ಮೂಲಕ ಹೇಳಿ ಬರೆಯಿಸಿದ ಕಾದಂಬರಿಯಿದು, ಒಮ್ಮೆ ಬರೆಯಿಸಿದ ಮೇಲೆ ಅದನ್ನು ಕೇಳಿಸಿಕೊಳ್ಳುವ ಅಥವಾ ತಿದ್ದುವ ಗೋಜಿಗೂ ಹೋಗಲಿಲ್ಲವಂತೆ!

ದಿವಾನಜಿಯವರ ಬಗ್ಗೆ ಏನೇನೂ ಗೊತ್ತಿಲ್ಲದಿದ್ದ ನನಗೆ ಇವರ ಪರಿಚಯ ಆದದ್ದು ಅವರ "ಬಯಲು-ಬಸಿರು"ವಿನ ಮೂಲಕ. ಸುರಕ್ಷಿತ ಮನಸ್ಥಿತಿಯನ್ನು ಪ್ರತಿನಿಧಿಸುವ ಬಸಿರು ಮತ್ತು ಸ್ವಾತಂತ್ರ್ಯವನ್ನು/ಬಿಡುಗಡೆಯನ್ನು ಪ್ರತಿನಿಧಿಸುವ ಬಯಲು, ಈ ಸಂಕೇತಗಳಿಂದಲೇ ನಾನು ಆಕರ್ಷಿತನಾದೆ. ಆದರೆ, ಈ ಕಾದಂಬರಿಯನ್ನು ನಾನು ಹುಡುಕಿಕೊಂಡು ಓದಿದ್ದಲ್ಲ. ಕನ್ನಡ ಸಾಹಿತ್ಯ ರಂಗದ 2009ರ ಸಮ್ಮೇಳನದಲ್ಲಿ ಪ್ರಕಟವಾದ "ಕನ್ನಡ ಕಾದಂಬರಿ ಲೋಕದಲ್ಲಿ... ಹೀಗೆ ಹಲವು" ಎಂಬ ಪುಸ್ತಕದ ಸಂಪಾದಕತ್ವದ ಹೊಣೆ ನನ್ನ ಮೇಲೆ ಬಿದ್ದಾಗ, ನಾವು ಕಳೆದ 25-30 ವರ್ಷಗಳಲ್ಲಿ ಪ್ರಕಟವಾದ ಪ್ರಮುಖ ಕಾದಂಬರಿಗಳನ್ನು ಪರಿಶೀಲಿಸಿದೆವು. ಸಂಪಾದಕತ್ವದ ಜವಾಬ್ದಾರಿಯ ನಡುವೆ, ಸುಲಭವಾಗಲೆಂದು ಎಲ್ಲಕ್ಕಿಂತ ಪುಟ್ಟ ಕಾದಂಬರಿಯನ್ನು ಪರಿಚಯಿಸಲು ನಾನು ಮುಂದಾದೆ. ಆದರೆ, ಓದುತ್ತ, ಓದುತ್ತ ಇದೊಂದು, ಪುಟಗಳ ಸಂಖ್ಯೆಯಿಂದ "ಪುಟ್ಟ" ಆದರೆ, ತಾತ್ವಿಕ ಸಾಂದ್ರತೆಯಿಂದ "ಬೃಹತ್" ಕಾದಂಬರಿಯೆಂದು ನನಗರಿವಾಯಿತು. ಆದನ್ನು ಓದಿದ ನಂತರ ಹಲವಾರು ದಿನಗಳು ಅದರಿಂದ ಕಾಡಲ್ಪಟ್ಟವನಾದೆ.

ಈ ಅಪೂರ್ವ ಕೃತಿಯನ್ನು ಇಂಗ್ಲಿಷಿಗೆ ಅನುವಾದಮಾಡಬಾರದೇಕೆ ಎಂಬ ಪ್ರಶ್ನೆ ನನ್ನನ್ನು ಕಾಡಲಾರಂಭಿಸಿತು. ಅಲ್ಲಿಲ್ಲಿ ಸಣ್ಣ-ಪುಟ್ಟ ಅನುವಾದಗಳನ್ನು ಮಾಡಿರುವ ನನಗೆ ಇದು ಸುಲಭಸಾಧ್ಯವೆಂದೇನೂ ಅನ್ನಿಸಲಿಲ್ಲ. ಆದರೂ, ಯತ್ನಿಸಬಾರದೇಕೆ ಎಂದು ನಿರ್ಧರಿಸಿ ಕಾರ್ಯೋನ್ಮುಖನಾದೆ. ಸುಮಾರು 120 ಪುಟಗಳ ಮೊದಲ ಕರಡು ಮೂರು ವಾರಗಳ ಅವಧಿಯಲ್ಲಿ (ನಾನು ರಜೆಯಲ್ಲಿದ್ದಾಗ) ಸಿದ್ಧವಾಯಿತು. ಇನ್ನೂ ಹಸಿಹಸಿಯಾಗಿದ್ದ ಕರಡನ್ನು ಅಲ್ಲಿಲ್ಲಿ ಇಣುಕಿ ನೋಡಿದ ಕನ್ನಡದ ಹಿರಿಯ ವಿಮರ್ಶಕರೂ ಆದರಣೀಯರೂ ಆದ ಡಾ|| ಆಮೂರರು ಕೆಲವು ಉಪಯುಕ್ತ ಸಲಹೆ ಸೂಚನೆಗಳೊಂದಿಗೆ ಕೆಲವು ಎಚ್ಚರಿಕೆಯ ಮಾತುಗಳನ್ನೂ ಆಡಿ ನನ್ನ ಮುಂದಿನ ಹೆಜ್ಜೆಗಳ ದಿಕ್ಕನ್ನು ಖಚಿತಗೊಳಿಸಿದರು. ಮುಂದಿನ ಕರಡು ಆವೃತ್ತಿಯನ್ನು ಕೂಲಂಕಷವಾಗಿ ಓದಿ ಉಪಯುಕ್ತ ಸಲಹೆಗಳನ್ನಿತ್ತವರು ಕನ್ನಡದ ಮತ್ತೊಬ್ಬ ಖ್ಯಾತ ವಿಮರ್ಶಕ ಡಾ|| ಎಚ್.ಎಸ್. ರಾಘವೇಂದ್ರ ರಾವ್. ಮುಂದಿನ ತಿದ್ದುಪಡಿಗಳು ಕನ್ನಡವರಿಯದ ಇಂಗ್ಲಿಷ್ ಓದುಗರ ಪ್ರತಿಕ್ರಿಯೆಗಳ ಸಹಾಯದಿಂದ ತಯಾರಾದವು. ಹೀಗೆ ಜನ್ಮ ತಾಳಿತು "The Void and The Womb" ಎಂಬ ಆಂಗ್ಲ ಅನುವಾದ. ಮುದ್ರಣಕ್ಕೆ ಹೋದ ಆವೃತ್ತಿಯನ್ನು ಡಾ|| ಸುಮತೀಂದ್ರ ನಾಡಿಗರು ಓದಿದರು. ಕ್ಯಾಲಿಫ಼ೋರ್ನಿಯಾದಲ್ಲಿ, ಏಪ್ರಿಲ್ 30, 2011ರಂದು ನಡೆದ ಕನ್ನಡ ಸಾಹಿತ್ಯ ರಂಗದ ಐದನೇ ಅಧಿವೇಶನದ ಸಂದರ್ಭದಲ್ಲಿ, ಈ ಪುಸ್ತಕದ ಲೋಕಾರ್ಪಣೆಯಾಯಿತು. ಆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ನಾಡಿಗರು ಭಾಷಾಂತರದ ಬಗ್ಗೆ ತಮ್ಮ ಮುಕ್ತ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಅಮೆರಿಕದ ಆವೃತ್ತಿ iUnivesre ಎಂಬ ಪ್ರಕಾಶನ ಸಂಸ್ಥೆಯ ಮೂಲಕ ಇದೀಗ ಲಭ್ಯವಾಗಿದೆ. ಆಸಕ್ತ ಓದುಗರು ಸಾಧಾರಣ ರಟ್ಟಿನ, ಘಟ್ಟಿ ರಟ್ಟಿನ ಅವತರಣಿಕೆಗಳನ್ನು ಅಥವಾ ಕಿಂಡಲ್ ನಲ್ಲಿ ಓದಬಹುದಾದ ವಿ-ಆವೃತ್ತಿಯನ್ನು ಅಮೆಜ಼ಾನ್, ಬುಕ್ಸ್‍ಎ‍ಮಿಲಿಯನ್ ಮತ್ತು ಬಾರ್ನ್ಸ್ ಎಂಡ್ ನೋಬಲ್ ಮುಂತಾದ ಜಾಲತಾಣಗಳ ಮೂಲಕ ತರಿಸಿಕೊಳ್ಳಬಹುದಾಗಿದೆ. ಭಾರತೀಯ ಆವೃತ್ತಿಯೊಂದನ್ನು ಸದ್ಯದಲ್ಲೇ ಹೊರತರುವ ನಿರೀಕ್ಷೆಯಿದೆ. ಹಲವಾರು ಬಗೆಯ ಪ್ರತಿಕ್ರಿಯೆಗಳನ್ನು ಉಂಟುಮಾಡಿದ ಕನ್ನಡದ ಈ ಕಾದಂಬರಿ ಪ್ರಪಂಚದ ಆಂಗ್ಲ ಓದುಗರ ಕೈಸೇರಲಿ ಎಂಬ ಆಶಯದೊಂದಿಗೆ ಈ ಅನುವಾದ ಕಾರ್ಯಕ್ಕೆ ಕೈಹಾಕಿದ್ದೇನೆ. ನನ್ನ ಯತ್ನ ಎಷ್ಟರಮಟ್ಟಿಗೆ ಸಫಲವಾಗಿದೆಯೋ ಓದುಗರೇ ತಿಳಿಸಬೇಕು.

English summary
The Void and The Womb, the Kannada novel by Dr Vasanth Diwanji has been translated by Dr MS Nataraj. The novel was released at 5th Vasanta Sahityotsava in California on Apr 30, 2011. The Void and The Womb is one mans quest for self-realization, published by iUniverse, available online on Amezaon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X