• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರದಲ್ಲಿ ಮೊಳಗಿದ "ವಿಶ್ವ ಮಾನವ ಕುವೆಂಪು" ಕಹಳೆ

By Mahesh
|

ಮೊದಲ ಮಾತು: ಕರ್ನಾಟಕದಲ್ಲಿದ್ದಾಗ ಹಬ್ಬ-ಹರಿದಿನಗಳು, ಜಾತ್ರೆ-ಮೇಳ, ಮದುವೆ-ಮುಂಜಿ ಹೀಗೆ ಸಡಗರ ಸಂಭ್ರಮಕ್ಕೆ, ಬಂಧು-ಮಿತ್ರರೊಂದಿಗೆ ಬೆರೆಯಲು ಹತ್ತು-ಹಲವು ಅವಕಾಶಗಳು. ಕಾರ್ಯನಿಮಿತ್ತ ಸಿಂಗಪುರಕ್ಕೆ ಬಂದ ಮೇಲೆ ಇಂತಹ ಅವಕಾಶಗಳು ಬಹಳ ಕಡಿಮೆ. ಈ ಕೊರತೆಯನ್ನು ತುಂಬಿ, ನಮಗೆ ಹಬ್ಬ-ಹರಿದಿನಗಳ ಸಂಭ್ರಮ ಮೂಡಿಸುವ ಪ್ರಯತ್ನ ಮಾಡುತ್ತಲಿದೆ ಕನ್ನಡ ಸಂಘ (ಸಿಂಗಪುರ). ಕಾರ್ಯಕ್ರಮವನ್ನು ಸ್ಥಳೀಯ ಕಲಾವಿದರಿಂದ ಆಯೋಜಿಸಿದರೆ ನಾವೇ ಪಾಲ್ಗೊಳ್ಳುವ ಇಲ್ಲವೇ ನೋಡುವ ಸಂಭ್ರಮ; ಕರ್ನಾಟಕದಿಂದ ಕಲಾವಿದರನ್ನು ಆಹ್ವಾನಿಸಿದರೆ ನಮ್ಮ ನೆಚ್ಚಿನ ಕಲಾವಿದರನ್ನು ಸನಿಹದಲ್ಲಿ ನೋಡಿ, ಕೇಳಿ ಆನಂದಿಸುವ ತವಕ, ಸಂಭ್ರಮ.

ಉದ್ಘಾಟನೆ: ಜೂನ್ 5, 2011 ಭಾನುವಾರದ ದಿನ ಕನ್ನಡ ಸಂಘದ (ಸಿಂಗಪುರ)ವು "ಕುವೆಂಪು ಕಲಾನಿಕೇತನ" ಹಾಗೂ "ಯುನೈಟೆಡ್ ಲ್ಯಾಂಡ್ ಬ್ಯಾಂಕ್"ನ ಸಹಯೋಗದಲ್ಲಿ "ವಿಶ್ವ ಮಾನವ ಕುವೆಂಪು" ಕಲಾ ಉತ್ಸವ ಮೆಗಾ ಕಾರ್ಯಕ್ರಮವನ್ನು ಇಲ್ಲಿನ ಡೋವರ್ ಕನ್ವೆನ್‌ಶನ್ ಸಭಾಂಗಣದಲ್ಲಿ ಆಯೋಜಿಸಿತ್ತು. ಬೆಳಿಗ್ಗೆ ಸುಮಾರು 12ಘಂಟೆಗೆ ಸಿಂಗಪುರದ ಗಿರೀಶ್ ಜಮದಗ್ನಿ ಅವರ ನಿರ್ಮಾಣದ ಕುವೆಂಪು ಅವರ ಕಿರುಚಿತ್ರ ಪ್ರದರ್ಶನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕನ್ನಡ ಸಂಘದ ಅಧ್ಯಕ್ಷರಾದ ಡಾ. ವಿಜಯಕುಮಾರ್ ಅವರು ಸ್ವಾಗತ ಭಾಷಣ ಮಾಡಿ "ಕುವೆಂಪು ಅವರು ಕೇವಲ ಕವಿಗಳ ಸ್ವತ್ತೂ ಅಲ್ಲ, ಕರ್ನಾಟಕದ ಸ್ವತ್ತೂ ಅಲ್ಲ. ಅವರು ಭಾರತದ, ವಿಶ್ವದ ಅನಿವಾಸೀ ಕನ್ನಡಿಗರೆಲ್ಲರ ಹೆಮ್ಮೆಯ ಹೆಮ್ಮೆಯ ಸ್ವತ್ತು. ಅನಿವಾಸೀ ಕನ್ನಡಿಗರಿಗೆ ಕನ್ನಡದ ಇಂತಹ ಮಹಾನ್ ವ್ಯಕ್ತಿಯ ಕೃತಿಗಳ ಕಿರು ಪರಿಚಯ ನೀಡಲು ಈ ಕಾರ್ಯಕ್ರಮ ಒಂದು ಸಾಂಕೇತಿಕ ಪ್ರಯತ್ನ. ಇನ್ನು ಮುಂದೆ ಇದೇ ತರಹದ ಕವಿ ಪರಿಚಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯವಿದೆ" ಎಂದರು.

"ಕುವೆಂಪು ಕಲಾನಿಕೇತನ"ದ ಅಧ್ಯಕ್ಷರಾದ ಶ್ರೀ ಪ್ರಕಾಶ್ ಅವರು ಪ್ರಾಸ್ಥಾವಿಕ ಭಾಷಣದಲ್ಲಿ ಇಂದಿನ ಕಾರ್ಯಕ್ರಮದ ವಿವರಗಳನ್ನು ನೀಡಿ, ಇನ್ನೂ ಹಲವಾರು ದೇಶಗಳಲ್ಲಿ ಕುವೆಂಪುರವರನ್ನು ಪರಿಚಯಿಸುವ ಉದ್ದೇಶವಿದೆಯೆಂದರು. ನಂತರ ಈ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಕರ್ನಾಟಕ ರತ್ನ ದೇಜಗೌ, ಸಭಾಧ್ಯಕ್ಷ ಹಾಗೂ "ಕುವೆಂಪು ಭಾಷಾ ಭಾರತಿ" ಅಧ್ಯಕ್ಷರಾದ ಡಾ. ಪ್ರಧಾನ ಗುರುದತ್, ಹಿರಿಯ ಪತ್ರಕರ್ತ ಪಿ. ರಾಮಯ್ಯ, "ಯುನೈಟೆಡ್ ಲ್ಯಾಂಡ್ ಬ್ಯಾಂಕ್"ನ ಚೇರ್ಮನ್ ಪ್ರದೀಪ್ ಕುಮಾರ್ ಇವರೆಲ್ಲರೂ ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ದೇಜಗೌ ಅವರು ಉದ್ಘಾಟನಾ ಭಾಷಣದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲು ಸಿಂಗಪುರವನ್ನು ಮೊದಲ ಬಾರಿಗೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಕುವೆಂಪುರವರು ಕನ್ನಡ ಭಾಷೆಗೆ ಇತ್ತ ಕಾಣಿಕೆಯನ್ನು ಸ್ಮರಿಸಿ, ಆ ಬಗ್ಗೆ ವಿವಿಧ ಮಹಾನ್ ವ್ಯಕ್ತಿಗಳ ಅಭಿಪ್ರಾಯವನ್ನು ತಿಳಿಸಿದ್ದಲ್ಲದೇ, ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡ ನೀವು ವಿಶ್ವದ ಕನ್ನಡಿಗರೆಲ್ಲರಿಗೂ ಆದರ್ಶಪ್ರಾಯವಾಗಿದ್ದೀರೆಂದರು. ಡಾ. ಪ್ರಧಾನ ಗುರುದತ್ ಅವರು ಕುವೆಂಪು ಅವರ ಭಾವಚಿತ್ರದ ಅನಾವರಣ ಮಾಡಿದರು.

ಕುವೆಂಪು ನಮನ: ಕಾರ್ಯಕ್ರಮವು ಭಾಷಣದಿಂದ ಗಾಯನದತ್ತ ತಿರುಗಿತು. ಶ್ರೀಮತಿ ರತ್ನಮಾಲ ಪ್ರಕಾಶ್, ಶ್ರೀಮತಿ ಮಾಲತಿ ಶರ್ಮ, ಶ್ರೀ ವೈ. ಕೆ. ಮುದ್ದುಕೃಷ್ಣ ಹಾಗೂ ಶ್ರೀ ಕಿಕ್ಕೇರಿ ಕೃಷ್ಣಮೂರ್ತಿ ಅವರು "ಕುವೆಂಪು ಗೀತಗಾಯನ" ಕಾರ್ಯಕ್ರಮವನ್ನು "ಬಾರಿಸು ಕನ್ನಡ ಡಿಂಡಿಮವ" ಗೀತೆಯ ಮೂಲಕ ಪ್ರಾರಂಭಿಸಿದರು. ಹೀಗೆ ಮುಂದುವೆರೆದ ಕಾರ್ಯಕ್ರಮದಲ್ಲಿ ಕುವೆಂಪು ಅವರ ಗೀತೆಗಳ ಗಾಯನದ ಹಾಲು, ಹಳ್ಳ ಹರಿದಿತ್ತು; ಗುಡಿ ಚರ್ಚು ಮಸ-ಜೀದಿಗಳ ಬಿಟ್ಟು ಹೊರಬರಲು ಕರೆ ಮೂಡಿತ್ತು. ಭೋಜನದ ನಂತರ "ಕುವೆಂಪು ನಮನ"ನ ಎರಡನೇ ಭಾಗದಲ್ಲಿ ಮುದ್ದುಕೃಷ್ಣರವರ ಜನ್ಮದಿನವನ್ನು ಸ್ಮರಿಸುತ್ತಾ ಕಲಾವಿದರು ಉಚ್ಛ ಸ್ಥಾಯಿಯಲ್ಲಿ ಹಾಡಿದ "ಉಳುವಾ ಯೋಗಿಯ ನೋಡಲ್ಲಿ" ಹಾಡಿಗೆ ಸಭಿಕರು ಚಪ್ಪಾಳೆ ಹೊಡೆದು ಆನಂದಿಸಿದರು. ಭಾವಪೂರ್ಣವಾಗಿ ಹಾಡಿದ "ಎಲ್ಲಾದರೂ ಇರು, ಎಂತಾದರೂ ಇರು" ಹಾಡನ್ನು ಒಂದು ಬಾರಿ ಕೇಳಿದ್ದು ಸಾಲದೇ ಒನ್ಸ್ ಮೋರ್ ಎಂದ ಸಭಿಕರನ್ನು ಕಲಾವಿದರು ನಿರಾಶೆಪಡಿಸಲಿಲ್ಲ. ರತ್ನಮಾಲ ಅವರು ಮಾಲತಿ ಶರ್ಮ ಅವರ ಜೊತೆ "ನಾನೇ ವೀಣೆ, ನೀನೇ ತಂತಿ" ಹಾಗೂ "ಬೃಂದಾವನಕೆ ಹಾಲನು ಮಾರಲು" ಮುಂತಾದ ಜನಪ್ರಿಯ ಗೀತೆಗಳನ್ನು ಹಾಡಿ ನಮ್ಮನ್ನು ರಂಜಿಸಿದರು. ಕುವೆಂಪು ಅವರ ವೈಚಾರಿಕತೆ ಹಾಗೂ ಆಧ್ಯಾತ್ಮಿಕತೆಯ ಔನ್ನತ್ಯವನ್ನು ಸಾರುವ "ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ" ಎಂಬ ಹಾಡು ಹಾಗೂ ಕಲಾವಿದರಿಗೆ ಕಿರುಕಾಣಿಕೆಯೊಂದಿಗೆ "ಕುವೆಂಪು ನಮನ" ಕಾರ್ಯಕ್ರಮ ಮುಕ್ತಾಯವಾಯಿತು.

ಪ್ರಶಸ್ತಿ ಪ್ರದಾನ: ಶ್ರೀ ಅಮರನಾಥ್ ಗೌಡ, ಮಾಜಿ ಅಧ್ಯಕ್ಷರು, ಅಕ್ಕ ಸಂಸ್ಥೆ, ಅಮೇರಿಕ (ಹೊರನಾಡ ಕನ್ನಡಿಗ), ಡಾ|| ರವಿ ಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕರು, ಋಷಿ ಗ್ರೂಪ್ ಆಫ್ ಕಂಪನಿಸ್ (ಉದ್ಯಮಿ), ಶ್ರೀ ಪ್ರಕಾಶ್ ಶೆಟ್ಟಿ, ಛೇರ‍್ಮನ್, ಗೋಲ್ಡ್ ಪಿಂಚ್ ಹೋಟಲ್ ಗ್ರೂಪ್ಸ್ (ಹೋಟೆಲ್ ಉದ್ಯಮಿ), ಇನ್ನೂ ಮುಂತಾದವರನ್ನು "ಕುವೆಂಪು ವಿಶ್ವ ಮಾನವ ಅಂತರಾಷ್ತ್ರೀಯ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಹಾಗೆಯೇ ರತ್ನಮಾಲಾ ಪ್ರಕಾಶ್ (ಸಂಗೀತ), ಕಿಕ್ಕೇರಿ ಕೃಷ್ಣಮೂರ್ತಿ(ಸಂಗೀತ - ಲಿಮ್ಕಾ ದಾಖಲೆ), ಶ್ರೀ ಟಿ. ವೆಂಕಟೇಶ್ (ಪತ್ರಿಕಾ ರಂಗ), ಶ್ರೀ ವಿ. ಟಿ. ಶ್ರೀನಿವಾಸ್ (ಕನ್ನಡ ಸೇವೆ) ಇನ್ನೂ ಮುಂತಾದವರನ್ನು "ಕುವೆಂಪು ವಿಶ್ವ ಕನ್ನಡ ರತ್ನ ಅಂತರಾಷ್ತ್ರೀಯ ಪ್ರಶಸ್ತಿ" ನೀಡಿ ಗೌರವಿಸಲಾಯಿತು. "ಕುವೆಂಪು ನೇಗಿಲಯೋಗಿ: ಅತ್ಯುತ್ತಮ ರೈತ ಅಂತರಾಷ್ಟ್ರೀಯ ಪ್ರಶಸ್ತಿ"ಯನ್ನು ಯಲಹಂಕದ ಸನ್ಮಾನ್ಯ ಶ್ರೀ ಎನ್. ದೇವರಾಜಯ್ಯ ಅವರಿಗೆ ನೀಡಲಾಯಿತು.

ಕವಿ ಮಾತು: ಕವಯತ್ರಿ ಮತ್ತು ಕಥೆಗಾರ್ತಿ ಲತಾ ರಾಜಶೇಖರ್ ಅವರು ಮಾತನಾಡುತ್ತಾ "ಕರ್ನಾಟಕದಲ್ಲೇ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುವುದು ಕಷ್ಟದ ಕೆಲಸ. ಕನ್ನಡ ನಾಡಿನಿಂದಾಚೆ ಇದನ್ನು ಮಾಡಿರುವ ನೀವು ಅಭಿನಂದನಾರ್ಹರು" ಎಂದರು. ೨೦ಕ್ಕೂ ಹೆಚ್ಚು ಕವನ ಸಂಕಲನ, ಸಾವಿರಾರು ಭಾವಗೀತೆಗಳು, ಕಾದಂಬರಿಗಳು, ನಾಟಕಗಳು - ಹೀಗೆ ಕುವೆಂಪು ಅವರ ಸಾಹಿತ್ಯ, ಕೊಡುಗೆ, ಕನ್ನಡಪ್ರೇಮ ಅಪಾರ ಎಂದರು.

ಹಾಸ್ಯಗೋಷ್ಠಿ: ಪ್ರಪ್ರಥಮ ಬಾರಿಗೆ ಮರದ ಮೇಲೆ ನಾಟಕ ಮಾಡಿಸಿದ ಖ್ಯಾತಿಯ ನಾಟಕಕಾರ, ಹಾಸ್ಯಗಾರ ನಾಗರಜ್ ಕೋಟಿ ಅವರು ದಿನನಿತ್ಯ ಜೀವನದಲ್ಲಿ ನಡೆಯುವ ಹಾಸ್ಯವನ್ನು ಸೊಗಸಾಗಿ ವಿವರಿಸಿದರು. ಮನುಷ್ಯನ ಜೀವನವೇ "ಒoಟಿಜಚಿಥಿ ಣo ಈಡಿiಜಚಿಥಿ"ಯಂತೆ! ಆಂಬುಲೆನ್ಸ್ ಶಬ್ದವನ್ನೂ ಬಿಡದೇ ತಮಾಷೆ ಮಾಡಿದ ಅವರು ಸಾಯಲು ೧೦ ಸೆಕೆಂಡ್ ಇರುವವರೆಗೂ ನಗೋಣವೆಂದರು. "ನಾಳೆ ಪ್ರಳಯವೆಂದು ಉದ್ದು ನೆನೆಹಾಕಲು ಮರೆಯಬೇಡಿ - ಬದುಕಿದ್ರೆ ಇಡ್ಲಿ, ಹೋದರೆ ವಡೆ! ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲ, ಮೊಬೈಲ್ ಇಲ್ಲದವನು ಎಲ್ಲಿಯೂ ಸಲ್ಲ" ಎಂದ ಅವರು ಒಂದು ಕುಡಿಯೋ ಚಟದ ಮೇಲಿನ ಅಣಕು ಹಾಡಿನೊಂದಿಗೆ ಎಲ್ಲರಿಗೂ ನಗೆಯ ನಮಸ್ಕಾರ ಹೇಳಿದರು.

ವಿದೇಶೀ ಕನ್ನಡಿಗರ ಗೋಷ್ಠಿ: ವಿದೇಶೀ ಕನ್ನಡಿಗರ ಸಮಸ್ಯೆ ಹಾಗೂ ಪರಿಹಾರಗಳ ಬಗ್ಗೆ ಚಿಂತನೆ "ವಿದೇಶೀ ಕನ್ನಡಿಗರ ಗೋಷ್ಠಿ" ಡಾ|| ವಿಜಯಕುಮಾರ್ ಅವರ ನೇತ್ರತ್ವದಲ್ಲಿ ನಡೆಯಿತು. ಮೊದಲು ಮಾತನಾಡಿದ ಅಮರನಾಥ್ ಗೌಡ ಅವರು ಅಮೇರಿಕದ ಕನ್ನಡ ಸಂಸ್ಥೆಗಳು ಹಾಗೂ ಅಕ್ಕ ಸಂಸ್ಥೆಯ ಕಾರ್ಯಕ್ರಮಗಳನ್ನು ವಿವರಿಸಿ, ಹೊಸತಾಗಿ ಬಂದ ಕನ್ನಡಿಗರ ಸಮಸ್ಯೆಗಳನ್ನು ಬಗೆಹರಿಸಲು ಬೆಂಗಳೂರಿನಲ್ಲಿಆಫೀಸನ್ನು ತೆರೆದಿರುವ ವಿಷಯ ತಿಳಿಸಿದರು. ಬೆಹರಾನ್‌ನ ರಾಜ್ ಕುಮಾರ್ ಅವರು ಕರ್ನಾಟಕ ಸರ್ಕಾರದ ವತಿಯಿಂದ ಕಲಾವಿದರನ್ನು ವರ್ಷಕ್ಕೊಮ್ಮೆಯಾದರೂ ಕಳಿಸಿಕೊಡಿ" ಎಂದು ಕೇಳಿಕೊಂಡರು.

ಎನ್.ಆರ್.ಐ.ಗಳಿಗೆ ಒಂದು ಐಡೆಂಟಿಟಿ ಕೊಡಬೇಕೆಂದು ಕೇಳಿಕೊಂಡ ಇವರು ಕನ್ನಡ ಭವನ ಕಟ್ಟುವ ಕನಸಿದೆಯೆಂದು ತಿಳಿಸಿದರು. ಸತೀಶ್ ಕುವೈಟ್‌ನ ಚಂದ್ರ ಶೆಟ್ಟಿ ಅವರು ಮಕ್ಕಳಿಗೆ ಹೈಯರ್ ಎಜುಕೇಶನ್‌ನಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರ ನೀಡಿದರು. ಮನೆ ಕೆಲಸಕ್ಕೆ ಬರುವ ಕೆಲಸಗಾರರ ತೊಂದರೆಗಳು ಹಾಗೂ ಅವರಿಗೆ ನೀಡುವ ಸಹಾಯದ ಬಗ್ಗೆ ವಿವರ ನೀಡಿದರು. ಸುಬ್ರಮನ್ಯ ಶ್ರೀಕಂಠನ್ ಊಟಿಯ ಕನ್ನಡ ಸಂಘ ಮಾಡುತ್ತಿರುವ ಹಾಗೂ ಮಾಡಬಯಸುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ಇನ್ನು ಕೆಲವೇ ದಿನಗಳಲ್ಲಿ "ಕನ್ನಡ ಕಲಿ" ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ತಿಳಿಸಿದರು ಡಾ. ವಿಜಯಕುಮಾರ್ ಅವರು.

ಡೊಳ್ಳು ಕುಣಿತ: ಪುರುಷ ಪ್ರಧಾನವಾದ ಜಾನಪದ ಕಲೆ ಡೊಳ್ಳು ಕುಣಿತವನ್ನು ೫೦೦ಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ಸ್ನೇಹ ಸಾಗರ ಮಹಿಳಾ ಡೊಳ್ಳು ಕುಣಿತ ತಂಡ, ಸಾಗರದ ಚೂಡಾಮಣಿ ಅವರು ಸೊಗಸಾಗಿ ಮಾಡಿದರು. ನಂತರ ಕ್ಯಾತಸಂದ್ರದ ಶ್ರೀ ಕವಿತಾ ಕೃಷ್ಣ ಅವರು ಸಭಿಕರನ್ನುದ್ದೇಶಿಸಿ ಭಾವಪೂರ್ಣವಾಗಿ ಮಾತನಾಡಿದರು.

"ರಸಋಷಿ"- ನಾಟಕ: ರಂಗಭೂಮಿ ಹಾಗೂ ಚಲನ ಚಿತ್ರ ಕಲಾವಿದರ ಜಂಟಿ ಆಯೋಗದಲ್ಲಿ ಜನಪ್ರಿಯ ನಾಟಕ "ಕುವೆಂಪು ರಸಋಷಿ" ಏಕಪಾತ್ರ ನಾಟಕದ ಆಯ್ದ ಭಾಗಗಳನ್ನು ಪ್ರಸ್ತುತ ಪಡಿಸಿದವರು ಸಿ. ಆರ್. ಸಿಂಹ ಮತ್ತು ತಂಡದವರು. ಕುವೆಂಪು ಅವರ ಧರಿಸುತ್ತಿದ್ದ ಬಿಳಿ ಜುಬ್ಬ-ಪೈಜಾಮಗಳನ್ನೇ ತೊಟ್ಟುಕೊಂಡು ವೇದಿಕೆಯನ್ನು ಪ್ರವೇಶಿಸಿದ ಸಿ. ಆರ್. ಸಿಂಹರವರಿಗೆ ಮಾತಿಗೆ ಮೊದಲೇ ಚಪ್ಪಾಳೆಯ ಸುರಿಮಳೆ. ಕುವೆಮ್ಪು ಅವರ ಧ್ವನಿ, ಹಾವ ಭಾವಗಳಲ್ಲಿ ಅವರ ಬಾಲ್ಯ, ಯೌವನ, ಕವಿಜೀವನದ ಪರಿಚಯವನ್ನು ಸೊಗಸಾಗಿ ಮಾಡಿಕೊಟ್ಟರು ಸಿಂಹ. ಜೇಮ್ಸ್ ಕಸಿನ್ಸ್ ಅವರು "ನಿಮ್ಮ ಭಾಷೆಯಾದ ಕನ್ನಡಲ್ಲೇ ಬರೆಯಬೇಕು" ಎಂಬ ಕಿವಿಮಾತು ಹೇಳಿದ ಮೇಲೆ ನಮ್ಮ ಕನ್ನಡಕ್ಕೆ ಕನ್ನಡದ ಕವಿ ಕುವೆಂಪು ಸಿಕ್ಕಿದರು. ಅವರ ಒಂಬತ್ತು ವರ್ಷಗಳ ತಪಸ್ಸಿನ ಪ್ರತಿಫಲ - ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯ.

ಸ್ವಾತಂತ್ರ್ಯದ ಹೋರಾಟಗಾರರಿಗೆ "ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ" ಮುಂತಾದ ದೇಶಭಕ್ತಿಗೀತೆಗಳ ಮೂಲಕ ಸ್ಫೂರ್ತಿ ನೀಡಿದ ಕೀರ್ತಿ ಇವರದ್ದು. ವಿಶ್ವಮಾನವ ಸಂದೇಶದೊಂದಿಗೆ ಸಿ. ಆರ್. ಸಿಂಹ ವೇದಿಕೆಯಿಂದ ನಿರ್ಗಮಿಸಿದಾಗ ಕುವೆಂಪು ಹಾಗೂ ಸಿ. ಆರ್. ಸಿಂಹ ಇಬ್ಬರಿಗೂ ಸಭಿಕರು ತುಂಬುಹೃದಯದ ಚಪ್ಪಾಳೆ ತಟ್ಟಿದರು. ಸಿ. ಆರ್. "ರಸಋಷಿ" ಹಾಗೂ "ಸಂಗೊಳ್ಳಿ ರಾಯಣ್ಣ" ಚಿತ್ರಗಳು ಸಧ್ಯದಲ್ಲೇ ತೆರೆ ಕಾಣಲಿವೆ. ಈ ಕಾರ್ಯಕ್ರಮದ ಪ್ರಾಯೋಜಕರಾದ "ಯುನೈಟೆಡ್ ಲ್ಯಾಂಡ್ ಬ್ಯಾಂಕ್"ನ ಶ್ರೀ ಪ್ರದೀಪ್ ಕುಮಾರ್ ಅವರು ವಿಶ್ವದ ಕನ್ನಡಿಗರಿಗಾಗಿ, ಕನ್ನಡ ಸಂಘಗಳಿಗಾಗಿ ತಾವು ಹಮ್ಮಿಕೊಂಡ ಕಾರ್ಯಕ್ರಮ, ಸೌಲಭ್ಯಗಳ ವಿವರ ನೀಡಿದರು.

ಸಮಾರೋಪ: ಪಂಚಭಾಷಾ ಕವಿ, ಸಮ್ಮೇಳನಾಧ್ಯಕ್ಷರಾದ ಡಾ|| ಪ್ರಧಾನ್ ಗುರುದತ್ ಅವರು ಈ ಕಾರ್ಯಕ್ರಮದ ಸಮಾರೋಪ ಭಾಷಣ ಮಾಡುತ್ತಾ ಕನ್ನಡದ ಮಹಾಕವಿಗಳಾದ ಕುವೆಂಪು, ಬೇಂದ್ರೆ, ಕಣವಿ ಮೂವರನ್ನೂ ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಪುಣ್ಯವೆಂದರು. ಕುವೆಂಪು ಅವರು ರವೀಂದ್ರನಾಥ್ ಟಾಗೋರ್ ಅವರಿಂದ ಪ್ರಭಾವಿತರಾಗಿದ್ದರೂ, ಟಾಗೋರರನ್ನು ಮೀರಿ ಬೇಳೆದ ಚೇತನ ಎಂದರು. "ರಾಮಾಯಣ ದರ್ಶನಂ"ಗೆ ಸರಿಗಟ್ಟುವ ಸಾಹಿತ್ಯ ಭಾರತದಲ್ಲಷ್ಟೇ ಅಲ್ಲ, ವಿಶ್ವದಲ್ಲೇಲ್ಲೂ ಇಲ್ಲವೆಂದು ತಿಳಿಸಿದ ಇವರು ಈ ಮಹಾಕಾವ್ಯದ ಹಲವು ಪ್ರಸಂಗಗಳಲ್ಲಿ ಕುವೆಂಪು ತಳೆದ ನಿಲುವನ್ನು ಸೊಗಸಾಗಿ ವಿವರಿಸಿದರು. ಒಟ್ಟು 83 ಕೃತಿಗಳನ್ನು ನೀಡಿದ ಕುವೆಂಪುರವರ ಸಾಹಿತ್ಯದಲ್ಲಿ ಕೆಲವನ್ನು ಕನ್ನಡೇತರ ಭಾಷೆಗಳಿಗೆ ಅನುವಾದಿಸಲಾಗಿದೆ.

ಗೀತ ಗಾಯನ: ಸಭಿಕರೆಲ್ಲರೂ ಸಂಜೆಯವರೆಗೆ ಕುತೂಹಲದಿಂದ ಕಾಯುತ್ತಿದ್ದ ಕಾರ್ಯಕ್ರಮ ವಿಶ್ವ ವಿಖ್ಯಾತ ರಘು ದೀಕ್ಷಿತ್ ಮತ್ತು ತಂಡದವರಿಂದ "ಗೀತ ಗಾಯನ" ಸಂಗೀತ ಗೋಷ್ಠಿ. ಸಿ. ಅಶ್ವಥ್‌ರವರನ್ನು ಗುರುವಾಗಿ ಪರಿಗಣಿಸಿರುವ ಇವರು ಉಚ್ಛ ಶೃತಿಯಲ್ಲಿ ಹಾಡಿದ ಶಿಶುನಾಳ ಶರೀಫರ "ಸೋರುತಿಹುದು ಮನೆಯ ಮಾಳಿಗೆ" ಹಾಡಿಗೆ ಸಭಾಂಗಣದ ಸೂರೇ ಹಾರಿಹೋಗುವುದೇನೋ ಎನ್ನಿಸಿತು! ಹವಾನಿಯಂತ್ರಿತ ಸಭಾಂಗಣದಲ್ಲಿ ಸಭಿಕರ ಛಳಿ ಬಿಡಿಸಲು ಹಾಡಿದ "ಗುಡುಗುಡಿಯ ಸೇದಿ ನೋಡು" ಹಾಡು ಹಾಗೂ ಬಾರಿಸಿದ ಗಿಟಾರ್ ಸಭಿಕರ ಮೈನವಿರೇಳಿಸಿತ್ತು. ಗಾನಸುಧೆಯ ಮತ್ತೇರಿಸುವ ನವಿರಾದ ಚಿತ್ರಗೀತೆ "ಮುಂಜಾನೆ, ಮಂಜಲ್ಲಿ -ಜಸ್ಟ್ ಮಾತ್ ಮಾತಲ್ಲಿ" ಮಧುರವಾಗಿ ಮೂಡಿಬಂದು, ಮನಸ್ಸಿಗೆ ಮುದ ತಂದಿತು. ಅನಾವಶ್ಯಕ ಚಿಂತೆ ಮಾಡುವವರಿಗಾಗಿ ಹಾಡು "ಲೋಕದ ಕಾಳಜಿ ಮಾಡುತ್ತೀನಂತಿ" ಹಾಡಿನ ತುಣುಕನ್ನು ಸಭಿಕರಿಗೆ ಕಲಿಸಿದ್ದಲ್ಲದೇ ಚೆನ್ನೈನ ಸಹಕಲಾವಿದ ವಿಜಯ್ ಜೋಸೆಫ್‌ರೊಂದಿದೆ ಗಿಟಾರ್ ಜುಗಲ್‌ಬಂದಿ ಮಾಡಿ ನಮ್ಮನ್ನು ರಂಜಿಸಿದರು. ಹಾಡಷ್ಟೇ ಅಲ್ಲದೇ ಕಾರ್ಯಕ್ರಮದುದ್ದಕ್ಕೂ ತಮ್ಮ ಹಾಸ್ಯಪ್ರಜ್ಞೆಯಿಂದ ನಮ್ಮ ಮನಸೆಳೆದರು. ಸಭಿಕರ ಗಮನವನ್ನು "ನಿನ್ನಾ, ಪೂಜೆಗೆ ಬಂದೆ, ಮಹದೇಶ್ವರ" ಹಾಡಿನ ಮೂಲಕ ಭಗವಂತನೆಡೆಗೆ ತಿರುಗಿಸಿದರು. ತಮ್ಬೂರಿಯೊಂದಿಗೆ ಹಾಡುವ ಜನಪದ ಹಾಡುಗಳನ್ನು ಆಧುನಿಕ ಪಾಪ್ ಶೈಲಿಯಲ್ಲಿ ಗಿಟಾರ್ನೊಂದಿಗೆ ನಿರರ್ಗಳವಾಗಿ ಹಾಡುವ ಇವರು ಸಿಂಗನ್ನಡಿಗರೆಲ್ಲರ ಮನ ಗೆದ್ದರು, ಕದ್ದರು. ಕಾರ್ಯಕ್ರಮವು ನಾಡಗೀತೆಯೊಂದಿಗೆ ಮುಕ್ತಾಯವಾಯಿತು.

ಡಾ|| ಪ್ರಧಾನ್ ಹಾಗೂ ಅವರ ಶ್ರೀಮತಿಯವರಿಗೆ ಸನ್ಮಾನ ಮಾಡಿದ ನಂತರ ಡಾ. ವಿಜಯಕುಮಾರ್ ಅವರು ವಂದನಾರ್ಪಣೆ ಮಾಡಿದರು. ಸಭಾಂಗಣದ ಹೊರಗೆ ಪ್ರಾಯೋಜಕರ ಮಳಿಗೆಗಳನ್ನಿಡಲಾಗಿತ್ತು. ಹೊತ್ತು ಹೊತ್ತಿಗೆ ಸರಿಯಾಗಿ ಪುಷ್ಕಳ ಭೋಜನದ ವ್ಯವಸ್ಥೆ "ವೆಜೆ-ಡಿಲೈಟ್"ನ ಶ್ರೀ ನಕ್ಷತ್ರಿಯವರಿಂದ. ಈ ಕಾರ್ಯಕ್ರಮವನ್ನು ಸೊಗಸಾಗಿ ನಿರೂಪಣೆ ಮಾಡಿದವರು ನಾಲ್ವರು ಸಿಂಗನ್ನಡಿಗರು ಮತ್ತು ಚಲನ ಚಿತ್ರ ಹಾಗೂ ದೂರದರ್ಶನದ ಕಲಾವಿದ ಚಿಕ್ಕ ಹೆಜ್ಜಾಜೆ ಮಹದೇವ್ ಅವರು. ಸಂಘದ ದ್ವೈವಾರ್ಷಿಕ ಪತ್ರಿಕೆ "ಸಿಂಗಾರ"ವನ್ನೂ ಈ ಈ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಈ ಅದ್ದೂರಿಯ ಕಾರ್ಯಕ್ರಮ ಸಾಧ್ಯವಾದದ್ದು ಸಿಂಗಪುರ ಕನ್ನಡ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ವಯಂಸೇವಕರ ಅವಿರತ ಪರಿಶ್ರಮದಿಂದ. ಕನ್ನಡನಾಡಿನಾಚೆಯಲ್ಲಿ ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳಸುವ ಈ ರೀತಿಯ ಪ್ರಯತ್ನ ಇನ್ನು ಮುಂದೆಯೂ ಎಲ್ಲೆಡೆ ನಡೆಯಲಿ.

- ವರದಿ: ಸುರೇಶ ಹೆಚ್. ಸಿ., ವಸಂತ್ ಕುಲಕರ್ಣಿ ಮತ್ತು ವೆಂಕಟ್ ಸುದ್ದಿವಾಹಿನಿ ತಂಡ, ಸಿಂಗಪುರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kuvempu Kalaniketan, United Land Bank and Kannada Sangha Singapore celebrated Vishwa Manava Kuvempu Kala Utsav at Dover convention hall in Singapore. Raghu Dixit musical night was the highlight of the program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more