ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಬಾರಿ ಸಿಂಗಪುರದಲಿ ವಚನಾಂಜಲಿ

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Vachananjali in Singapore
ಮೇ 28 ಶನಿವಾರ ಸಂಜೆ ಸಿಂಗಪುರದ ಸೆಂಪಗ ವಿನಾಯಕರ್ ದೇಗುಲದಲಿ ಕನ್ನಡ ಸಂಘ, ಸಿಂಗಪುರ ಹಾಗೂ ಸೆಂಪಗ ವಿನಾಯಕರ್ ಟೆಂಪಲ್ ಅಕಾಡಮಿ ಆಫ್ ಆರ್ಟ್ಸ್ ನೇತೃತ್ವದಲಿ ನಡೆದ ವಚನಾಂಜಲಿ ಕಾರ್ಯಕ್ರಮದ ವರದಿ-ವಾಣಿ ರಾಮದಾಸ್, ಸಿಂಗಪುರ.

ವಚನ ವೈಶಿಷ್ಠ್ಯ : 12ನೇ ಶತಮಾನದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿ, ಅನುಭವಗಳ ಭಂಡಾರ ನಮಗಿತ್ತ ಕೊಡುಗೆ ವಚನ ಸಾಹಿತ್ಯ. ವಚನ ಸಾಹಿತ್ಯದ ವೈಶಿಷ್ಠ್ಯವೆ೦ದರೆ ಅದು ಜನಜೀವನದೊ೦ದಿಗೆ ಹೊ೦ದಿರುವ ಅವಿನಾಭಾವ ಸ೦ಬ೦ಧ. ಅದು ಸಾಹಿತ್ಯವಲ್ಲ-ಬದುಕಿನ ಸತ್ಯತೆ. ವಚನ-ಅಂದಿನ ಜನಸಾಮಾನ್ಯರ ಒಂದು ಧ್ವನಿ. ವಚನಗಳು ದೇವರು-ದಿಂಡಿರುಗಳಿಗೆ ಮಾತ್ರ ಸೀಮಿತಗೊಳ್ಳದೆ ಅಂದಿನ ಜನ ಜೀವನದಲ್ಲಿ ಹಾಸು ಹೊಕ್ಕಾಗಿದ್ದ ಸೂಕ್ಷ್ಮ ಸಮಸ್ಯೆಗಳ ಎಳೆಗಳನ್ನು ಶ್ರೀಸಾಮಾನ್ಯನ ಅರಿವಿಗೆ ಬರುವಂತೆ ಆಡುಭಾಷೆಯಲ್ಲಿ ಅನುಭಾವೀ ಶರಣರ ವಿಚಾರ ಮಂಥನದಿಂದ ಹುಟ್ಟಿದ (ಭರವಸೆಗಳ) ವಚನ-ಫಲ. ವಚನ ಎನ್ನುವುದು ಅತ್ತ ಗದ್ಯವೂ ಅಲ್ಲದ ಇತ್ತ ಪದ್ಯವೂ ಅಲ್ಲದ ಒಂದು ಸರಳ ರೂಪದ ಬರಹ.

ಕಾರ್ಯಕ್ರಮದ ವರದಿ : ಮೇ 28 ಶನಿವಾರ ಸಂಜೆ ಸಿಂಗಪುರದ ಸೆಂಪಗ ವಿನಾಯಕರ್ ದೇಗುಲದಲಿ ಕನ್ನಡಸಂಘ, ಸಿಂಗಪುರ ಹಾಗೂ ಸೆಂಪಗ ವಿನಾಯಕರ್ ಟೆಂಪಲ್ ಅಕಾಡಮಿ ಆಫ್ ಆರ್ಟ್ಸ್ ನೇತೃತ್ವದಲಿ ವಚನಾಂಜಲಿ ಕಾರ್ಯಕ್ರಮ ಏರ್ಪಟ್ಟಿತು. ಪುರಂದರ ನಮನದಲಿ ಕನ್ನಡಿಗರೇ ಅಲ್ಲದೇ ಇತರರೂ ಬಂದು ಪಾಲ್ಗೊಳ್ಳುವಂತೆ ವಚನಾಂಜಲಿ ಕಾರ್ಯಕ್ರಮದ ವೇದಿಕೆ ಕೂಡ ಎಲ್ಲ ಭಾಷಿಗರಿಗೂ ವಚನಗಳ ವೈಶಿಷ್ಟ್ಯ ತಿಳಿಯಪಡಿಸುವ ಕಾರ್ಯಕ್ರಮವಾಗಿತ್ತು.

"ಕೈ ಹಿಡಿದು ನಡೆಸುವಾಗ, ತಂದೆ-ತಾಯಿ ನೀನಾಗು" ರೇಣುಕಾ ಅವರ ರಚನೆಯಿಂದ ವಚನಾಂಜಲಿ ಕಾರ್ಯಕ್ರಮ ಪ್ರಾರಂಭಗೊಂಡಿತು. ಕನ್ನಡಸಂಘ ಸಿಂಗಪುರದ ಅಧ್ಯಕ್ಷರಾದ ಡಾ.ವಿಜಯಕುಮಾರ್ "ವಚನಾಂಜಲಿ"ಯ ದೀಪ ಬೆಳಗಿದರು. ಸಿಂಗಪುರ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಗುರುಪ್ರಕಾಶ್ ಮತ್ತು ಪ್ರಭುದೇವ ಅವರು ವಚನ ಸಾಹಿತ್ಯದ ಬಗ್ಗೆ ವಿವರಿಸುತ್ತಾ "ವಚನಗಳು ವಿಚಾರ ಮಂಥನ ಮಾಡುವಂತಹುದು, ಯಾವುದೇ ಧರ್ಮ, ಜಾತಿಗೆ ಸೀಮಿತಗೊಂಡಿಲ್ಲ. ಹೃದಯದಿಂದ-ಹೃದಯಕ್ಕೆ ಉತ್ತಮ ಮೌಲ್ಯಗಳನ್ನು ವಿನಿಮಿಮಯ ಮಾಡುವ ಒಂದು ಮಾಧ್ಯಮ. ನಮ್ಮಲ್ಲಿನ ಈ ಉತ್ತಮ ಮೌಲ್ಯಗಳು ತುಂಬಿದ ದಾಸ, ವಚನ ಸಾಹಿತ್ಯಗಳ ಭಂಡಾರ ಮುಂದಿನ ಪೀಳಿಗೆಗೇ ಅಲ್ಲದೆ ಕನ್ನಡೇತರರಿಗೂ ಅರಿವಾಗಬೇಕು ಎಂಬುದೇ "ವಚನಾಂಜಲಿ" ಕಾರ್ಯಕ್ರಮದ ಉದ್ದೇಶ್ಯ ಎಂದು ಅರುಹಿದರು.

ನೀರಿಗೆ ನೈದಿಲೆ, ಹೊಯ್ದವರನ್ನ, ಸೂರ್ಯನುದಯದ, ಒಲೆ ಹತ್ತಿ ಉರಿದರೆ, ತನು ನಿಮ್ಮದೆಂದ ಬಳಿಕ-ಬಸವಣ್ಣ, ಹರನೆ ನೀ ಎನಗೆ ಗಂಡನಾಗಬೇಕು-ಅಕ್ಕ ಮಹಾದೇವಿಯವರ ವಚನಗಳನ್ನು ಸಂಗೀತ ವಿದುಷಿ ಭಾಗ್ಯ ಮೂರ್ತಿ ಅವರ ನೇತೃತ್ವದಲಿ ಕನ್ನಡಿಗರು-ಕನ್ನಡೇತರರು ಹಾಡಿದರು. ಶ್ರೀರೇಖಾ, ಅದಿತಿ ಶಿವಕುಮಾರ್, ಶ್ರೇಯಸ್ ಭಾರದ್ವಾಜ್ ಹಾಗೂ ವಸಂತ ಕುಲಕರ್ಣಿ ಅವರುಗಳು ಹಸಿವಾದೊಡೇ, ಸಾವಿಲ್ಲದಾ, ನಡೆವುದೊಂದೆ ಭೂಮಿ, ವಚನದಲಿ ನಾಮಾಮೃತ ತುಂಬಿ-ವಚನಗಳನ್ನು ಹಾಡಿದರು.

ಇದೀಗ ವಚನ ಕೇವಲ ಗಾಯನಕ್ಕಷ್ಟೇ ಸೀಮಿತವಾಗದೆ ನೃತ್ಯರೂಪಕ, ನಾಟಕ, ಸಿನಿಮಾ ಸಂಗೀತದಲ್ಲಿಯೂ ಮೈಚಾಚಿಕೊಂಡಿದೆ. ನೃತ್ಯ ರೂಪದಲಿ ಮಕ್ಕಳು-ಶಶಿಮುಖಿ ಶ್ಯಾನ್‍ಭಾಗ್ ಅವರ ನೇತೃತ್ವದಲಿ ಆಡುವೆ-ಪಾಡುವೆ, ಶ್ರೀಲಕ್ಷ್ಮಿ ಅರುಣ್ ತಂಡದವರಿಂದ ತನುಕರಗದವರಲ್ಲಿ ಹಾಗೂ ಮೇಘನಾ ಹೆಬ್ಬಾರ್ ಅವರಿಂದ ಚಕೋರಂಗೆ ಚಂದ್ರಮನ ನೃತ್ಯ ಸೊಗಸಾಗಿ ಮೂಡಿ ಬಂದಿತು. ಸೆಂಪಗ ವಿನಾಯಕರ್ ದೇಗುಲದ ಸಭಾಂಗಣದ ಮುಖ್ಯಸ್ಥರಾದ ಕಮಲ ದಾಸ್ ಅವರನ್ನು ಗೌರವಿಸಲಾಯಿತು.

ಗಾಯನಕ್ಕೆ ತಕ್ಕ ಪಕ್ಕವಾದ್ಯ ನೀಡಿದವರು ತಬಲಾ ಧನಬಾಲನ್, ವಯಲಿನ್ ಆದಿತ್ಯ ಅವರಿಂದ. ಕಾರ್ಯಕ್ರಮ ನಿರೂಪಣೆ ಕವಿತಾ ಬಾದಾಮಿ ಹಾಗೂ ವಂದನಾರ್ಪಣೆ ರಶ್ಮಿ ಉದಯಕುಮಾರ್ ಅವರಿಂದ ನಡೆಯಿತು. ವಚನಗಳು, ದಾಸರ ಪದಗಳು ಕನ್ನಡಕ್ಕೆ ದೊರಕಿರುವ ಸಾಹಿತ್ಯ ಭಂಡಾರ, ನಮ್ಮೆಲರ ಅಮೂಲ್ಯ ಆಸ್ತಿ. ಇವುಗಳನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾಯಕ ನಾವು ಮಾಡಬೇಕು. ಮೊಟ್ಟ ಮೊದಲ ಬಾರಿ ಸಿಂಗಪುರದಲಿ ನಡೆದ ಈ ವಚನಾಂಜಲಿಯ ನಾಂದಿ ದೀಪದ ಬೆಳಕು ಆರದಿರಲಿ.

ವಚನಗಳು ನಾಲಿಗೆಯಲಿ ನಲಿದಾಡಿದ ಬಗೆ...

ಕಾದಂಬರಿ ಬ್ರಹ್ಮ ಅನಕೃ ಅವರ ಬಗ್ಗೆ ಗೂಗಲಿಸಿದಾಗ ಸಿಕ್ಕ ಮಾಹಿತಿ ಇದು.

ಶರಣರು ನುಡಿದ ವಚನಗಳಿಗೆ ಸ್ವರ ಹಾಕಿ ಶ್ರೀಸಾಮಾನ್ಯನಿಗೆ ಸಂಗೀತ ರೂಪದಲಿ ನೀಡಬೇಕೆಂಬ ಹಂಬಲ ಮೂಡಿದ್ದು ಕಾದಂಬರಿ ಬ್ರಹ್ಮ ಅನಕೃ ಹಾಗೂ ಸಂಗೀತ ಸಾಮ್ರಾಟ್ ಡಾ.ಮಲ್ಲಿಕಾರ್ಜುನ ಮನ್ಸೂರ್ ಅವರಿಗೆ ಧಾರವಾಡದ ಹಾಲಗೇರಿ ಕೆರೆಯ ದಂಡೆಯ ಮೇಲೆ. ಅನಕೃ ಅವರ ಸ್ಪೂರ್ತಿ ಕಂಡು ಮನ್ಸೂರರು ಒಂದು ವಚನವನ್ನು ಹಿಂದೂಸ್ತಾನಿ ಶೈಲಿಯಲಿ ಹಾಡಿ ವಚನಗಾಯನಕ್ಕೆ ಕೆರೆಯ ದಂಡೆಯ ಮೇಲೆ ಕುಳಿತು ಸಂಚಲನ ನೀಡಿದರಂತೆ. ಕೆರೆಯ ಕುಳಿರ್ಗಾಳಿ ಸಂಗೀತ ಮಾಂತ್ರಿಕ ಮನ್ಸೂರರ ವಚನಾಮೃತ. ಇಂದೀಗ ಜನಜನಿತ. ಆ ಹಿರಿಯ ಚೇತನಗಳಿಗೆ ನಾವು ಸರ್ವದಾ ಚಿರಋಣಿ.

English summary
Vachananjali, a program on vachana sahitya evolved in the 12th century, was jointly organized by Singapore Kannada Sangha and Sempaga Vinayakar Temple academy of arts on May 28. A report by Vani Ramdas, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X