ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ರಂಗದ 5ನೇ ಅಧಿವೇಶನ ಒ೦ದು ಸಮೀಕ್ಷೆ

By Prasad
|
Google Oneindia Kannada News

MS Nataraj and HY Rajagopal
ಕಳೆದ ಏಪ್ರಿಲ್ 30 ಮತ್ತು ಮೇ 1, 2011ರಂದು ಕ್ಯಾಲಿಫ಼ೋರ್ನಿಯಾದ ವುಡ್‌ಸೈಡ್ ಹೈಸ್ಕೂಲಿನ ಭವ್ಯ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ರಂಗದ ಐದನೇ ಅಧಿವೇಶನವು ಅತ್ಯಂತ ಸಂಭ್ರಮದಿಂದ ನಡೆಯಿತು. ಈಗಾಗಲೇ ನಾಲ್ಕು ಸಮ್ಮೇಳನಗಳನ್ನು ನಡೆಸಿ ಗಳಿಸಿದ ಅನುಭವಗಳ ಆಧಾರದಿಂದಲೇ ಈ ಬಾರಿಯ ಕಾರ್ಯಕ್ರಮಗಳನ್ನೂ ವಿನ್ಯಾಸ ಮಾಡಲಾಗಿತ್ತು. ಶನಿವಾರ ಮಧ್ಯಾಹ್ನ ಪ್ರಾರಂಭವಾಗಿ ಭಾನುವಾರ ಮಧ್ಯಾಹ್ನ ಮುಕ್ತಾಯವಾದ ಸಾಹಿತ್ಯ ರಂಗದ ಈ ಕಾರ್ಯಕ್ರಮಕ್ಕೆ ಆಶ್ರಯಕೊಡಲು ಮುಂದೆ ಬಂದವರು ಉತ್ತರ ಕ್ಯಾಲಿಫ಼ೋರ್ನಿಯಾದ ಕನ್ನಡ ಕೂಟ (KKNC) ಮತ್ತು ಜೊತೆಗೆ ಸಹಕರಿಸಿದವರು ಅದೇ ಪ್ರದೇಶದ ಸಾಹಿತ್ಯ ಗೋಷ್ಠಿ.

ಭಾರತದಿಂದ ಆಹ್ವಾನಿತರಾಗಿ ಕನ್ನಡದ ಇಬ್ಬರು ಪ್ರಮುಖ ಸಾಹಿತಿಗಳು ಈ ಅಧಿವೇಶನದಲ್ಲಿ ಭಾಗವಹಿಸಿದರು. ಖ್ಯಾತ ಕವಿ, ವಿಮರ್ಶಕ ಮತ್ತು ಅನುವಾದಕ ಡಾ|| ಸುಮತೀಂದ್ರ ನಾಡಿಗರು ಕನ್ನಡ ಸಾಹಿತ್ಯದಲ್ಲಿ ಪ್ರಬ೦ಧ ಪ್ರಕಾರ ಎ೦ಬ ವಿಷಯವನ್ನು ಕುರಿತು ವಿದ್ವತ್ಪೂರ್ಣ ಪ್ರಧಾನ ಭಾಷಣವನ್ನು ಮಾಡಿದರು. ಪದ್ಧತಿಯಂತೆ, ಈ ಭಾಷಣವನ್ನು ಕನ್ನಡ ಸಾಹಿತ್ಯ ರಂಗದ ಭಾಷಣ ಮಾಲಿಕೆಯಲ್ಲಿ ಮುದ್ರಿಸಿ ಹಂಚಲಾಯಿತು. ಪ್ರಬಂಧ ಪ್ರಕಾರದ ಹುಟ್ಟು ಬೆಳವಣಿಗೆಗಳ ವಿಸ್ತಾರವಾದ ಸಮೀಕ್ಷೆಯೊಂದಿಗೆ ಕನ್ನಡದ ಖ್ಯಾತ ಬರಹಗಳನ್ನು (ಅಮೇರಿಕದ ಬರಹಗಾರರ ಪ್ರಬಂಧಗಳನ್ನೂ ಸೇರಿಸಿಕೊಂಡು) ನಾಡಿಗರು ಚರ್ಚಿಸಿದರು. ಅಮೆರಿಕದ ಕನ್ನಡಿಗರೇ ಬರೆದ ಲಲಿತ ಪ್ರಬಂಧಗಳ ಸಂಕಲನ "ಮಥಿದಷ್ಟೂ ಮಾತು" (ಪ್ರಧಾನ ಸಂಪಾದಕಿ ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಸಹ ಸಂಪಾದಕ ಎಂ. ಆರ್. ದತ್ತಾತ್ರಿ) ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು. ಸಮ್ಮೇಳನಕ್ಕೆ ನೋ೦ದಣಿ ಸಲ್ಲಿಸಿದ ಪ್ರತಿ ಕುಟು೦ಬಕ್ಕೂ ಈ ಪುಸ್ತಕದ ಒ೦ದು ಪ್ರತಿ ಕೊಡಲಾಯಿತು.

ಮತ್ತೊಬ್ಬ ಆಹ್ವಾನಿತರು, ಹಾಸ್ಯಲೇಖಕಿ ಶ್ರೀಮತಿ ಭುವನೇಶ್ವರಿ ಹೆಗಡೆ ತಮ್ಮ ಸ್ವಾರಸ್ಯಕರವಾದ ಭಾಷಣಗಳಲ್ಲಿ ಹಾಸ್ಯಲೇಖನದ ತಮ್ಮ ಅನುಭವಗಳನ್ನು ಹಂಚಿಕೊಂಡದ್ದೇ ಅಲ್ಲದೆ, ತಮ್ಮ ಸುಸ೦ಸ್ಕೃತ ಹಾಸ್ಯಪ್ರತಿಭೆಯಿ೦ದ ಇಡೀ ಸಭೆಯನ್ನು ಲವಲವಿಕೆಗೊಳಿಸಿದರು. ಮೊದಲ ದಿನದ ಸಂಜೆಯ ಮನರಂಜನೆಯ ಮುಖ್ಯ ಅಂಗವಾಗಿ "ಕಂಸವಧೆ" ಎಂಬ ಯಕ್ಷಗಾನ ಪ್ರಸಂಗ ಮತ್ತು ವರಕವಿ ಪುತಿನ ಅವರ "ಹರಿಣಾಭಿಸರಣ" ನೃತ್ಯ-ನಾಟಕ ಸ್ಥಳೀಯ ಕಲಾವಿದರ ಉನ್ನತ ಕಲಾಪ್ರತಿಭೆಯ ದ್ಯೋತಕವಾಗಿತ್ತು. ಇತ್ತೀಚೆಗೆ ಪ್ರಕಟವಾದ ಹಿರಿಯ ಕಿರಿಯ ಬರಹಗಾರರ ಹಲವಾರು ಪುಸ್ತಕಗಳು ವಿವಿಧ ಗೋಷ್ಠಿಗಳಲ್ಲಿ ಲೋಕಾರ್ಪಣೆಗೊಂಡವು. ಕೆಲವು ಆಯ್ದ ಪುಸ್ತಕಗಳ ಪರಿಚಯದೊಂದಿಗೆ ಲೇಖಕರ ಪರಿಚಯವನ್ನೂ ಮಾಡಿಕೊಡಲಾಯಿತು. ಎರಡನೆಯ ದಿನದ ಕಾರ್ಯಕ್ರಮಗಳಲ್ಲಿ ಆಹ್ವಾನಿತ ಅತಿಥಿಗಳೊಂದಿಗೆ ಸಂವಾದ ಮತ್ತು ಕನ್ನಡ ಕಲಿಯುತ್ತಿರುವ ಮಕ್ಕಳಿಂದ ಅವರ ಕಲಿಕೆಯ ಸಾಧನೆಗಳ ಪ್ರದರ್ಶನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಪ್ರತಿಬಾರಿಯಂತೆ, ಕನ್ನಡ ಪುಸ್ತಕಗಳ ಮಳಿಗೆಯೂ ಏರ್ಪಾಟಾಗಿತ್ತು, ಸುಮಾರು ಎರಡು ಸಾವಿರ ಡಾಲರಿನಷ್ಟು ಬೆಲೆಯ ಪುಸ್ತಕಗಳ ಮಾರಾಟವಾಯಿತು.

ಕನ್ನಡ ಸಾಹಿತ್ಯ ರಂಗದ ಕಾರ್ಯಕ್ರಮಗಳು ಪ್ರತಿ ಬಾರಿಯೂ ಬೇರೆ ಬೇರೆ ಭೌಗೋಳಿಕ ವಲಯಗಳಲ್ಲಿ ನಡೆಯುವುದರಿಂದ ಅನೇಕರು ಮೊಟ್ಟಮೊದಲ ಬಾರಿಗೆ ಭಾಗವಹಿಸುವವರು ಇರುತ್ತಾರೆ. ಇನ್ನು ಕೆಲವರು ಪ್ರತಿ ಸಾಹಿತ್ಯೋತ್ಸವದಲ್ಲೂ ಭಾಗವಹಿಸುವವರಿದ್ದಾರೆ. ಈ ಎರಡೂ ವರ್ಗಗಳಿಂದ ಹಲವಾರು ಮಂದಿ ತಮ್ಮ ಅಭಿಪ್ರಾಯಗಳನ್ನೂ ಪ್ರತಿಕ್ರಿಯೆಗಳನ್ನೂ ಸಾಹಿತ್ಯ ರಂಗದ ಅಧ್ಯಕ್ಷರ ಆಹ್ವಾನದ ಮೇರೆಗೆ ಅವರಿಗೆ ಬರೆದು ಕಳಿಸಿದ್ದಾರೆ ಮತ್ತು ಕರೆದು ತಿಳಿಸಿದ್ದಾರೆ. ಸಾಹಿತ್ಯ ರಂಗದ ಅಭಿಮಾನಿಗಳೂ ಮತ್ತು ಸಕ್ರಿಯ ಸದಸ್ಯರು ಈ ನಮ್ಮ ವಸಂತ ಸಾಹಿತ್ಯೋತ್ಸವವನ್ನು ಮುಂದೆ ಹೇಗೆ ರೂಪಿಸಿದರೆ ಚೆನ್ನ, ಇನ್ನೂ ಏನೇನು ಸಾಧ್ಯತೆಗಳಿವೆ ಮುಂತಾಗಿ ತಮ್ಮ ಸೂಚನೆ ಸಲಹೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಸಂಕ್ಷಿಪ್ತವಾಗಿ ಉದ್ಧರಿಸಲಾಗಿದೆ.

"ಕಸಾರಂ ಮತ್ತು ಕೆ ಕೆ ಎನ್ ಸಿ ಎರಡೂ ಸಂಸ್ಥೆಗಳ ಕಾರ್ಯಕರ್ತರಿಗೆ ಅನಂತ ಧನ್ಯವಾದಗಳು. ಒಂದು ಸಂಭ್ರಮದ ವಾತಾವರಣವನ್ನು ಕಲ್ಪಿಸಿ, ಸಹೃದಯ ಗೆಳೆಯ-ಗೆಳತಿಯರೊಂದಿಗೆ ನಗುನಗುತ್ತ ಕಾಲ ಕಳೆಯುವ ಹಾಗೆ ಮಾಡಿದ್ದೀರಿ. ಮುಖ್ಯ ಅತಿಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು ಸಮ್ಮೇಳನದ ಮೆರುಗನ್ನು ಹೆಚ್ಚಿಸಿದರು. ಸಮ್ಮೇಳನದ ಉದ್ದೇಶಗಳೂ ಸಹ ಸರಳವಾಗಿದ್ದು ನಮ್ಮೂರಿನ ಮತ್ತು ಹೊರಗಿನ ಅತಿಥಿಗಳು ಎಲ್ಲರನ್ನೂ ಸೇರಿಸಿ ನಡೆಸಿದ ರೀತಿ ಚೆನ್ನಾಗಿತ್ತು. ಹೊರ ಊರಿನ ಸಾಹಿತಿಗಳನ್ನು ಮತ್ತು ಇತರ ಅತಿಥಿಗಳನ್ನು ಮುಖತಃ ಭೇಟಿ ಮಾಡಿದ್ದು, ಅವರ ಪರಿಚಯವಾದದ್ದು ಎಲ್ಲ ನನಗೆ ಸುವರ್ಣಾವಕಾಶದ ಹಾಗೆ ಎನಿಸಿತು. ಸಮ್ಮೇಳನ ಹೀಗೇ ಮುಂದುವರೆಸಿಕೊಂಡು ಬನ್ನಿ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಲಿ ಎಂದು ಹಾರೈಸೋಣ." (ಮಂಗಳಾ ಕುಮಾರ್)

"ಕರ್ನಾಟಕದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಅಮೆರಿಕದ ಒಬ್ಬ ಹಿರಿಯ ಕನ್ನಡ ಬರಹಗಾರರನ್ನು ಅಧ್ಯಕ್ಷರಾಗಿ ಏಕೆ ಕಸಾರಂದ ಪ್ರತಿ ವಸಂತೋತ್ಸವಕ್ಕೆ ಆಯ್ಕೆ ಮಾಡಬಾರದು? ಸಮ್ಮೇಳನದ ಮುಖ್ಯ ಭಾಷಣ ಅವರಿಂದ ಬಂದರೆ ಅದು ಅಮೆರಿಕದ ಬರಹಗಾರರನ್ನು ಪ್ರಾತಿನಿಧಿಕವಾಗಿ ಬಿಂಬಿಸುವಲ್ಲಿ ಪರಿಣಾಮಕಾರಿಯಾಗುತ್ತದೆ. ನಮಗಿರುವುದು ಇದೊಂದೇ ವೇದಿಕೆ, ಸ್ಥಳೀಯ ಬರಹಗಾರರೊಂದಿಗೆ ಸಂವಾದಗಳನ್ನು ನಡೆಸುವುದುರಿಂದ, ಅಮೆರಿಕದಲ್ಲಿ ನಡೆಯುವ ಇತರ ಕನ್ನಡ ಸಮ್ಮೇಳನಗಳಿಗಿಂತ ಭಿನ್ನವಾದ ಒಂದು ನಿಲುವು ಕಸಾರಂ ಕಾರ್ಯಕ್ರಮಕ್ಕೆ ದಕ್ಕುತ್ತದೆ..." (ಎ೦. ಆರ್. ದತ್ತಾತ್ರಿ)

"ಸಾಹಿತ್ಯ ಗೋಷ್ಠಿ/ವಿಚಾರ ಸಂಕಿರಣಗಳಲ್ಲಿ ಅನೇಕರಿಗೆ ಪ್ರಾತಿನಿಧ್ಯ ಕೊಡಬೇಕೆನ್ನುವುದು ಒಂದು ನಿಲುವು. ಇದು ಮೇಲ್ನೋಟಕ್ಕೆ ಸರಿಯಾದುದ್ದೇ ಎನಿಸಬಹುದು. ಆದರೆ ಈನಿಲುವಿನಿಂದ ಯಾರಿಗೂ ಉಪಯೋಗವಾಗುವುದಿಲ್ಲವೆಂದೇ ನನ್ನ ಭಾವನೆ. ಕೇವಲ ಐದಾರು ನಿಮಿಷಗಳಲ್ಲಿ ಬರಹಗಳನ್ನು ಕೇಳುಗರ ಮನಸೆಳೆಯುವಂತೆ/ಮನಮುಟ್ಟುವಂತೆ ಓದುವುದು ಯಾರಿಗೂ ಸಾಧ್ಯವಿಲ್ಲ (ಅದರಲ್ಲೂ ಗದ್ಯ)... ಕೆಲವರಿಗೇ ಅವಕಾಶ ಕೊಟ್ಟರೂ ಪರವಾಗಿಲ್ಲ, ಜಾಸ್ತಿ ಸಮಯ ಕೊಡಿ. ಒಂದೇ ಕಥೆಯನ್ನು ಓದೋಣ, ನಾಲ್ಕು ಜನ ಕೂತು ಮಾತಾಡೋಣ, ಇದರಿಂದ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ..." (ಗುರುಪ್ರಸಾದ್ ಕಾಗಿನೆಲೆ)

"ವಸಂತ ಸಾಹಿತ್ಯೋತ್ಸವ ಎಂಬ ಕನ್ನಡ ಸಾಹಿತ್ಯಕ್ಕೇ ಮುಡಿಪಾದ ಕಾರ್ಯಕ್ರಮದ ಕಲ್ಪನೆಯೇ ಅದ್ಭುತವಾದುದು. ಭಾರತದಿಂದ ಶ್ರೀ ನಾಡಿಗ್ ಮತ್ತು ಶ್ರೀಮತಿ ಭುವನೇಶ್ವರಿ ಅವರುಗಳಂಥ ಅತಿಥಿಗಳನ್ನು ಕರೆಸುವುದು, ಸ್ಥಳೀಯ ಲೇಖಕರ ಲೇಖನಗಳನ್ನೊಳಗೊಂಡ ಗ್ರಂಥವನ್ನು ಪ್ರಕಟಿಸುವುದು, ಮತ್ತು ಪುಸ್ತಕ ಮಳಿಗೆಯಿಟ್ಟು ಕನ್ನಡ ಓದುಗರಿಗೆ ಇತ್ತೀಚಿನ ಪುಸ್ತಕಗಳನ್ನು ಒದಗಿಸುವುದು-- ಈ ಮೂರೂ ಅಂಶಗಳೂ ನನಗೆ ತುಂಬಾ ಹಿಡಿಸಿದವು. ಭಾರತದಿಂದ ಮತ್ತು ಅಮೇರಿಕದ ಮೂಲೆಗಳಿಂದ ಬಂದಿದ್ದ ಬರಹಗಾರೊಂದಿಗೆ ಒಡನಾಟ ನಡೆಸುವ ಅವಕಾಶ ಕಲ್ಪಿಸಿದ್ದಕ್ಕಾಗಿ ಸಾಹಿತ್ಯ ರಂಗಕ್ಕೆ ಧನ್ಯವಾದಗಳು... ಮುಂದಿನ ಸಾಹಿತ್ಯೋತ್ಸವಗಳಿಗೆ ತಪ್ಪದೇ ಬರುವ ಆಶೆಯಿದೆ." (ಆನಂದ ರಾಮಮೂರ್ತಿ)

"...ಸಾಹಿತ್ಯ ರಂಗವೆಂದರೆ ಒಂದೇ ಆಸಕ್ತಿಯ ಹಲವು ಗೆಳೆಯರ ಬಳಗ. ನನಗೆ ಬರೆಯಲೊಂದು ಅವಕಾಶ, ನನ್ನ ಮಾತಿಗೊಂದು ವೇದಿಕೆ, ಹಲವು ಹಿರಿ-ಕಿರಿಯ ಲೇಖಕರ ನಡುವೆ ನನ್ನ ಮಾತೂ ಕೇಳುತ್ತಿರುವುದಕ್ಕೆ ಕಾರಣ, ಎರಡು ವರ್ಷಕ್ಕಾದರೂ ಸರಿ ಬಂದು ಹೋಗುವ ಆಪ್ತಬಂಧು. ಮತ್ತೆ ಬಾ, ಕಾಯುತ್ತೇನೆ. ಬಂದು ಹೋದ ಸಾಹಿತ್ಯ ರಂಗದ ವಸಂತ ಸಾಹಿತ್ಯೋತ್ಸವವೇ, ನಿನಗೆ ಧನ್ಯವಾದಗಳು!" (ಶಾಂತಲಾ ಭಂಡಿ)

"ಸಮ್ಮೇಳನವು ಬಹಳ ಚೆನ್ನಾಗಿ ನಡೆಯಿತು, ಅಚ್ಚುಕಟ್ಟಾಗಿ ನಡೆಯಿತು. ಕಾರ್ಯಕ್ರಮದ ವಿನ್ಯಾಸದಿಂದಾಗಿ ಇಲ್ಲಿನ ಬರಹಗಾರರು, ಅವರ ಕೃತಿಗಳು, ಅಮೆರಿಕಾದಲ್ಲಿ ನಡೆಯುತ್ತಿರುವ ಸಾಹಿತ್ಯ ಕೃಷಿ, ಸಾಹಿತ್ಯ ಚಿಂತನೆ ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಸಮ್ಮೇಳನ ಯಶಸ್ವಿಯಾಯಿತು. ಇದರಿಂದಾಗಿ, ಸ್ಥಳೀಯ ಸಾಹಿತ್ಯಾಸಕ್ತರಲ್ಲಿ ಸಾಹಿತ್ಯ ರಂಗದ ಬಗ್ಗೆ ಹಾಗೂ ಈ ಸಂಸ್ಥೆ ಬರಹಗಾರ/ಬರಹಗಾರ್ತಿಯರನ್ನು ಪ್ರೋತ್ಸಾಹಿಸಿ ನಡೆಸಿಕೊಂಡು ಬರುತ್ತಿರುವ ಸಾಹಿತ್ಯ-ಸಂಬಂಧೀ ಚಟುವಟಿಕೆಗಳ ಬಗ್ಗೆ ಇನ್ನೂ ಹೆಚ್ಚಿನ ಅರಿವು ಉಂಟಾಗಿದೆ ಎಂದು ನನಗೆ ಅನ್ನಿಸಿದೆ. ಕಾರ್ಯಕ್ರಮಗಳಲ್ಲಿ ಏಕಮುಖ ಸಂಭಾಷಣೆಗಳೇ ಹೆಚ್ಚಾಗಿದ್ದವು, ಅವುಗಳೊಂದಿಗೇ ಇನ್ನೂ ಹೆಚ್ಚು ಸಂವಾದ ಮತ್ತು ಮಂಥನಗಳೂ ನಡೆದರೆ ಮತ್ತು ಪರಸ್ಪರ ಅನುಭವಗಳ ಹಂಚಿಕೆಯಾದರೆ ಸಮ್ಮೇಳನ ಇನ್ನೂ ಅರ್ಥಪೂರ್ಣವಾಗಬಹುದೇನೋ?" (ಶ್ರೀವತ್ಸ ದುಗ್ಲಾಪುರ)

"ಸಾಹಿತ್ಯ ಕುತೂಹಲಿಗಳು, ಆಸಕ್ತರು ಮತ್ತು ಪರಿಣಿತರೊಡನೆ ಕಳೆದ ಆ ಎರಡು ದಿನಗಳು ನನ್ನ ಸಾಹಿತ್ಯಾಸಕ್ತಿಗೆ ಹೊಸ ಹುರುಪುಕೊಟ್ಟ ದಿನಗಳು. ಅಲ್ಲಿ ಸೇರಿದ ಹಿರಿ-ಕಿರಿಯ ಲೇಖಕರ, ಓದುಗರ ಒಡನಾಟ ಕನ್ನಡ ಸಾಹಿತ್ಯದ ಹಲವು ಮಜಲುಗಳನ್ನು, ಸಾಧ್ಯತೆಗಳನ್ನು ಪರಿಚಯಿಸಿತು. ಹಲವು ಲೇಖಕರನ್ನು ಓದಿ-ಕೇಳಿ ತಿಳಿದಿದ್ದವರಿಗೆ ಅವರೊಡನೆ ಸಂಭಾಷಿಸುವ ಅವಕಾಶ, ಅವರ ಕೃತಿಗಳನ್ನು ಕುರಿತು ಅವರಿಂದಲೇ ಕೇಳುವ ಸುಯೋಗ ಒದಗಿಬಂದಿತ್ತು. ಆತ್ಮೀಯ ವಾತಾವರಣ, ಪುಸ್ತಕ ಮಳಿಗೆ ಮತ್ತು ಅಚ್ಚುಕಟ್ಟಾದ ವ್ಯವಸ್ಥೆ ಮನಸೆಳೆದವು. ಸಾಹಿತ್ಯಿಕ ಸಮುದಾಯವನ್ನು ಉಳಿಸಿ, ಬೆಳೆಸುವ ಇಂತಹ ಸಮಾವೇಶಗಳು ಇನ್ನಷ್ಟು ನಡೆಯಬೇಕು. ಮುಂಬರುವ ಸಮಾವೇಶಗಳಲ್ಲಿ ಸಾಹಿತ್ಯಿಕ ಚರ್ಚೆಗಳು ಇನ್ನಷ್ಟು ಗಟ್ಟಿಯಾಗಿ ಮೂಡಿ ಬರಲಿ. ಸಾಹಿತ್ಯಿಕ ಚರ್ಚೆಗಳು, ಇಲ್ಲಿನ ಸಾಹಿತಿಗಳ ಪುಸ್ತಕಗಳ ಮಾರಾಟ ಸಾಹಿತ್ಯರಂಗದ ಸಾರಥ್ಯದಲ್ಲಿ ನಿರಂತರವಾಗಿ ನಡೆಯಲಿ. ಅದಕ್ಕೆ ಬೇಕಾದ ಪರಿಸರ ಇಲ್ಲಿ ಲಭ್ಯ ಎನ್ನುವುದನ್ನು ಈ ಸಮಾವೇಶ ಸಾಬೀತುಪಡಿಸಿದೆ." (ಪ್ರಕಾಶ್ ನಾಯಕ್)

ಈ ಮೇಲ್ಕಂಡ ಅಭಿಪ್ರಾಯಗಳೇ ಅಲ್ಲದೇ ಕಾರ್ಯಕ್ರಮದ ನಿರೂಪಣೆ ಮತ್ತು ವಿನ್ಯಾಸಗಳ ಬಗ್ಗೆ ಹಲವಾರು ಉಪಯುಕ್ತವಾದ ಮತ್ತು ಖಚಿತವಾದ ಸಲಹೆ/ಸೂಚನೆಗಳೂ ನಮ್ಮ ಸಹಪ್ರಾಯೋಜಕರಿಂದ ಮತ್ತು ನಮ್ಮೊಂದಿಗೆ ಸಹಕರಿಸಿದ ಸಾಹಿತ್ಯ ಗೋಷ್ಠಿಯ ವಿಶ್ವನಾಥ್ ಹುಲಿಕಲ್ ಅವರಿಂದ ಬಂದಿವೆ. ಅವಕ್ಕಾಗಿ ಕನ್ನಡ ಸಾಹಿತ್ಯ ರಂಗ ಅತ್ಯಂತ ಆಭಾರಿಯಾಗಿದೆ. ವಿಶ್ವನಾಥ್ ಅವರು ಇಡೀ ಕಾರ್ಯಕ್ರಮದ ನಿಯೋಜನೆ, ನಿರ್ವಹಣೆಯ ಬಗ್ಗೆ ಹಲವಾರು ವಿವರವಾದ ಸೂಚನೆಗಳನ್ನಿತ್ತಿದ್ದಾರೆ. ಭಾರತದಿ೦ದ ಇಬ್ಬರ ಬದಲು ಒಬ್ಬ ಸಾಹಿತಿಯನ್ನೇ ಕರೆಸಿ, ಅವರಿಗೆ ಹೆಚ್ಚು ಸಮಯಾವಕಾಶ ಕೊಡುವುದು, ಈಗಿನ೦ತೆ ಎರಡು ಅರ್ಧ-ದಿನಗಳ ಕಾರ್ಯಕ್ರಮದ ಬದಲು ಒ೦ದೇ ದಿನ 8 ಗ೦ಟೆಗಳ ಕಾರ್ಯಕ್ರಮ ನಡೆಸುವುದು, ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಹೆಚ್ಚಿನ ಕಾಲಾವಕಾಶ ಕೊಡುವುದು (ಕಡೆಯ ಪಕ್ಷ 10 ನಿಮಿಷ) ಇತ್ಯಾದಿ ಸೂಚನೆಗಳನ್ನಿತ್ತಿದ್ದಾರೆ. ನಮಗೆ ಬ೦ದಿರುವ ಎಲ್ಲ ಸಲಹೆ ಸೂಚನೆಗಳನ್ನೂ ಕುರಿತು ಈ ಮು೦ದೆ ಕನ್ನಡ ಸಾಹಿತ್ಯ ರ೦ಗ ತನ್ನ ಸದಸ್ಯವರ್ಗದಲ್ಲಿ ಒ೦ದು ರಚನಾತ್ಮಕ ಸ೦ವಾದ ಕೈಗೊಳ್ಳಲಿದೆ.

ಅಮೆರಿಕದ ವಿವಿಧ ಮೂಲೆಗಳಲ್ಲಿ ಹಂಚಿಹೋಗಿರುವ ಸಾಹಿತ್ಯ ಪ್ರಿಯರೆಲ್ಲರನ್ನೂ ಒಂದುಗೂಡಿಸಿ ಅವರ ಸೃಜನಾತ್ಮಕ ಬರವಣಿಗೆಗೆ ಒಂದು ವೇದಿಕೆಯನ್ನು ಕಲ್ಪಿಸುವುದು ಮತ್ತು ವಿಶ್ವದ ಇತರ ಭಾಗಗಳಲ್ಲಿರುವ ಸಮಾನಾಸಕ್ತರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವುದಕ್ಕೋಸ್ಕರವೇ ಕನ್ನಡ ಸಾಹಿತ್ಯ ರಂಗ ಜನ್ಮ ತಾಳಿರುವುದು. ಇದೊ೦ದು ದೊಡ್ಡ ಕೆಲಸ. ಬೆಳೆಯುತ್ತಿರುವ ಇಲ್ಲಿನ ಕನ್ನಡ ಸಮಾಜಕ್ಕೆ ಅತ್ಯವಶ್ಯಕವಾದ ಕೆಲಸ. ಈ ಕೆಲಸದಲ್ಲಿ ಇಲ್ಲಿನ ಸಾಹಿತ್ಯಾಭಿಮಾನಿಗಳೆಲ್ಲರೂ ಆದರದಿ೦ದ ನಮ್ಮೊಡನೆ ಸಹಕರಿಸಿದ್ದಾರೆ. ಈ ಸಲದ ಸಮ್ಮೇಳನದ ಸಿದ್ಧತೆಯಲ್ಲಿ ನಮಗೆ ತಗುಲಿದ ಹೆಚ್ಚಿನ ಖರ್ಚನ್ನು ಸರಿತೂಗಿಸಲು ಅನೇಕರು ಉದಾರವಾಗಿ ಧನಸಹಾಯ ಮಾಡಿದ್ದಾರೆ. ಅವರೆಲ್ಲರಿಗೂ ನಮ್ಮ ಹೃತ್ಪೂರ್ವಕ ವ೦ದನೆಗಳು. ಹಿಂದಿನಂತೆ ಮುಂದೆಯೂ ಅಮೆರಿಕದ ಕನ್ನಡ ಸಾಹಿತ್ಯಪ್ರಿಯರು ನಮ್ಮೊಂದಿಗೆ ಸಹಕರಿಸುವರೆಂಬ ಆಶಯ, ಭರವಸೆ ನಮಗಿದೆ.

ಮೈ.ಶ್ರೀ. ನಟರಾಜ (ಉಪಾಧ್ಯಕ್ಷ)
ಎಚ್. ವೈ. ರಾಜಗೋಪಾಲ್ (ಅಧ್ಯಕ್ಷ)

English summary
5th Vasanta Sahityotsava, a Kannada literary conference was conducted by Kannada Sahitya Ranga in California on April 30 and May 1, 2011. Laureates Sumatindra Nagid and Bhuvaneshwari were the chief guests. A report on the Kannada literary event in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X