ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣ ತಂಗಿಯರ ಅಮೆರಿಕ ಕನ್ನಡ ಸಮ್ಮೇಳನ

By * ಶಾಮ್
|
Google Oneindia Kannada News

Bhuvaneshwari Hegde and Sumatindra Nadig
ಉತ್ತರ ಅಮೆರಿಕಾದಲ್ಲಿ ನೆಲೆಸಿರುವ ಒಂದು ತಲೆಮಾರಿಗೆ ಸೇರಿದ ಕನ್ನಡ ಓದು-ಬರವಣಿಗೆ ಪ್ರಿಯರು ಇದೇ ಏಪ್ರಿಲ್ ತಿಂಗಳ ಕೊನೆಯ ವಾರಾಂತ್ಯ ಒಂದೆಡೆ ಜಮಾಯಿಸುತ್ತಿದ್ದಾರೆ. ಅವರೇ ಕಟ್ಟಿಕೊಂಡಿರುವ ಕನ್ನಡ ಸಾರಸ್ವತ ಸಮಾಜ ಈ ವಸಂತ ಋತುವಿನಲ್ಲಿ ಮತ್ತೊಂದು ಕನ್ನಡ ಸಮುದಾಯ ಹಬ್ಬಕ್ಕೆ ಸಿದ್ಧವಾಗಿದೆ. ಹಬ್ಬದ ದಿಬ್ಬಣ ಹೊರುವವರು 'ಕನ್ನಡ ಸಾಹಿತ್ಯ ರಂಗ', ಸಾಹಿತ್ಯ ಪಲ್ಲಕ್ಕಿಗೆ ಹೆಗಲು ಕೊಡುವವರು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ, ಸಂಕ್ಷಿಪ್ತವಾಗಿ 'ಕೆಕೆಎನ್ ಸಿ'.

ಶನಿವಾರ ಏಪ್ರಿಲ್ 30 ಮತ್ತು ಭಾನುವಾರ ಮೇ 1ರಂದು ನಡೆಯುವ ಇಡೀ ಎರಡು ದಿನಗಳ ಸುಗ್ಗಿಯಲ್ಲಿ ಕನ್ನಡಮಯ ಕಾರ್ಯಕ್ರಮಗಳು ಸಾಲುಗಟ್ಟಿ ನಿಂತಿವೆ. ಅಮೆರಿಕಾದ ನಾನಾ ಮೂಲೆಗಳಿಂದ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಬೇ ಏರಿಯಾದ ಗಲ್ಲಿಗಲ್ಲಿಗಳಿಂದ ಕನ್ನಡ ಅಭಿಮಾನಿಗಳು ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಸಮ್ಮೇಳನದ ತಾಣ, ವುಡ್ ಸೈಡ್ ಪ್ರೌಢಶಾಲೆ, ಚರ್ಚಿಲ್ ಅವೆನ್ಯು CA 94062.

ಶೇಕಡ ನೂರಕ್ಕೆ ನೂರರಷ್ಟು ಕನ್ನಡ ಭಾಷೆ ಮತ್ತು ಸಂಸ್ಕೃತಿ ಚಿಂತನೆಯ ಕಾರ್ಯಕ್ರಮ ಇದಾಗಿರುತ್ತದೆ. ಇದು ಸುದ್ದಿ. ಈ ಮುಂಚೆ ಕನ್ನಡ ಸಾಹಿತ್ಯ ರಂಗ ಇಂಥ ನಾಲಕ್ಕು ಸಮ್ಮೇಳನಗಳನ್ನು ನಡೆಸಿದೆ. ಪ್ರತಿ ಸಮ್ಮೇಳನಕ್ಕೂ ಜಾಗರೂಕತೆಯಿಂದ ಆಯ್ದ ಕನ್ನಡದ ಪ್ರಸಿದ್ಧ ಲೇಖಕ ಅಥವಾ ಲೇಖಕಿಯನ್ನು ಕರ್ನಾಟಕದಿಂದ ಆಹ್ವಾನಿಸುವುದು ಸಂಪ್ರದಾಯ. ಈ ಬಾರಿ ಕಥೆಗಾರ, ಕವಿ, ವಿಮರ್ಶಕ ಸುಮತೀಂದ್ರ ನಾಡಿಗ ಮತ್ತು ಹಾಸ್ಯ ಪ್ರಬಂಧಗಳ ಯಜಮಾನಿ ಭುವನೇಶ್ವರಿ ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.

ಕಳೆದ ಸಮ್ಮೇಳನಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕನ್ನಡನಾಡಿನ ಕನ್ನಡ ಸಾಹಿತಿಗಳು ಮತ್ತು ಸಮ್ಮೇಳನಗಳು ಜರುಗಿದ ನಗರಗಳ ಪಟ್ಟಿ ಇಂತಿದೆ : ಕೆ.ಪ್ರಭುಶಂಕರ, ಅಧ್ಯಯನಶೀಲರು (ಪೆನ್ಸಿಲ್ ವೇನಿಯ), ಬರಗೂರು ರಾಮಚಂದ್ರಪ್ಪ, ವಾಗ್ಮಿಗಳು (ಲಾಸ್ ಏಂಜಲಿಸ್), ಅ.ರಾ. ಮಿತ್ರ, ವಿದ್ವಾಂಸರು (ಶಿಕಾಗೊ), ವೈದೇಹಿ ಮತ್ತು ವೀಣಾ ಶಾಂತೇಶ್ವರ, ಕಾದಂಬರಿಗಾರ್ತಿಯರು (ವಾಷಿಂಗ್ ಟನ್ ಡಿಸಿ).

ಸುಮತೀಂದ್ರ ನಾಡಿಗರು ಮತ್ತು ಭುವನೇಶ್ವರಿ ಹೆಗಡೆ ಅವರುಗಳ ಸ್ಥೂಲ ಪರಿಚಯದ ಜತೆಗೆ ಸಮ್ಮೇಳನದ ಸಮಗ್ರ ಕಾರ್ಯಕ್ರಮ ಪಟ್ಟಿ ಅಂತರ್ಜಾಲದಲ್ಲಿ ಲಭ್ಯವಿದೆ. ಯಾವುದೇ ದೇಶದಲ್ಲಿ ನೆಲಸಿರಲಿ, ಕನ್ನಡಿಗರು ಒಮ್ಮೆ ಕಣ್ಣು ಹಾಯಿಸಬೇಕಾದ ಕಾರ್ಯಕ್ರಮ ಪಟ್ಟಿ ಇದಾಗಿರುತ್ತದೆ. ಆಸಕ್ತ ಕನ್ನಡಾಭಿಮಾನಿಗಳು ಮತ್ತು ಗೌರವಾನ್ವಿತ ಅತಿಥಿಗಳ ಒಡನಾಟದಲ್ಲಿ ಮೈದಾಳುತ್ತಿರುವ ಈ ಸಮ್ಮೇಳನಕ್ಕೆ ಒನ್ ಇಂಡಿಯ-ಕನ್ನಡ ವೆಬ್ ಸೈಟ್ ಶುಭ ಕೋರುತ್ತದೆ.

ಸಾಹಿತ್ಯ ಹೊರತಾಗಿ ಸ್ವಭಾವ ವಿಶಿಷ್ಟತೆಯಿಂದ ಭುವನೇಶ್ವರಿ ಹೆಗಡೆ ಅವರದು ಮಾತು ಕಡಿಮೆ, ಬರವಣಿಗೆ ಹೆಚ್ಚು. ಸ್ವಭಾವ ಗಂಭೀರವೇ ಆದರೂ ಬರವಣಿಗೆಯಲ್ಲಿ ಹಾಸ್ಯದ ಪ್ರವಾಹವನ್ನೇ ಹರಿಸುವ ಜಾಣೆ. ಭುವನೇಶ್ವರಿ ಅವರದ್ದು ಒಂದು ತೂಕವಾದರೆ, ನಾಡಿಗರದ್ದೇ ಇನ್ನೊಂದು ತೂಕ. ಅವರು ಪೆಸಿಫಿಕ್ ಸಾಗರ ತಟಾಕದಲ್ಲಿ ಒಮ್ಮೆ ನಕ್ಕರೆಂದರೆ ಅಟ್ಲಾಂಟಿಕ್ ಸಾಗರದಲ್ಲಿ ಸುನಾಮಿ ಉಕ್ಕಿ ಬರುವುದು. ಇವರಿಬ್ಬರನ್ನೂ ಮತ್ತು ಅಮೆರಿಕಾ ಕನ್ನಡ ಸಾಹಿತ್ಯಾಸಕ್ತರನ್ನು ಒಂದೆಡೆ ಕಲೆ ಹಾಕುತ್ತಿರುವ ಮುಂದಾಳುಗಳೆಂದರೆ ಸೌಮ್ಯ ಸ್ವಭಾವದ, ಒಳ್ಳೆ ಕನ್ನಡ ಬರೆಯುವ ಸಾಹಿತ್ಯ ರಂಗದ ಎಚ್ ವೈ ರಾಜಗೋಪಾಲ್ ಮತ್ತು ಬೀದಿ ನಾಟಕಕ್ಕೂ ಸೈ ಕೆಕೆಎನ್ ಸಿ ಅಧ್ಯಕ್ಷೆ ಪದ್ಮಾ ರಾವ್.

English summary
Two day Kannada literary convention Vasanta Sahityotsava (30 April - 1 May) in SFO, Bay Area, North America. A convention for the connoisseurs of Kannada language and literature organized by Kannada Sahitya Ranga (KSR) and Kannada Koota of North California (KKNC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X