ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯಾಟಲ್ ಕನ್ನಡಿಗರಿಗೆ ಒಂದು ಬೇವು ಎರಡು ಬೆಲ್ಲ

By * ಕುಂಭಾಸಿ ಶ್ರೀನಿವಾಸ ಭಟ್, ಸಿಯಾಟಲ್
|
Google Oneindia Kannada News

Ugadi celebration by Sahyadri Kannada Koota, Seattle
ಎಪ್ರಿಲ್ 9ರಂದು ಪಚ್ಚೆ ನಗರಿ ಸಿಯಾಟಲ್ ಸಹ್ಯಾದ್ರಿ ಕನ್ನಡ ಕೂಟದ ಕುಟುಂಬಗಳಿಗೆ ಯುಗಾದಿ ಸಂಭ್ರಮದ ಜತೆಗೆ ಇನ್ನೊಂದು ದೊಡ್ಡ ಸಡಗರದ ವಾತಾವರಣ. ಅಮೆರಿಕ ಸರಕಾರದಿಂದ ಸಹ್ಯಾದ್ರಿ ಕನ್ನಡ ಕೂಟಕ್ಕೆ, "ತೆರಿಗೆ ವಿನಾಯಿತ ಸಂಸ್ಥೆ" ಎಂಬುದಾಗಿ ಅಂಗೀಕಾರ ಪತ್ರದ ಉಡುಗೊರೆ. ಇದಕ್ಕಾಗಿ ದುಡಿದ ಸಮಿತಿಯ ಹಿಂದಿನ ಮತ್ತು ಈಗಿನ ಸದಸ್ಯರಿಗೂ, ಎಲ್ಲ ಕಾರ್ಯಕಾರಿ ಸಮಿತಿಯ ಸದಸ್ಯರಿಗೂ, ತಮ್ಮ ಪ್ರಯತ್ನ ಫಲಕೊಟ್ಟಿತೆಂಬ ಸಂತೋಷದ ಜತೆಗೇ, ಮುಂದೆ ಈ ಮೂಲಕ ಸಮಾಜ ಮತ್ತು ದೇಶದ ಸೇವೆ ಮಾಡುವ ದಾರಿ ಸುಗಮವಾಯಿತೆಂಬ ಹರ್ಷ.

ಈ ಸಂತೋಷದ ನಡುವೆ, ಕ್ಯಾಲಿಫೋರ್ನಿಯದಿಂದ ಬಂದ ಅಲಮೇಲು ಅಯ್ಯಂಗಾರ್ ಅವರ ಬಳಗದಿಂದ 'ಸಾಮರಸ್ಯಕ್ಕೊಂದು ಸಲಹೆ' ಎಂಬ ನಗೆ ನಾಟಕ. ದಿವಿನಾದ ಔತಣ, ಮಕ್ಕಳು ಮತ್ತು ದೊಡ್ಡವರಿಂದ ಮನೋರಂಜನಾ ಕಾರ್ಯಕ್ರಮಗಳು ಇವೆಲ್ಲ ಸೇರಿ, ಈ ಖರ ಸಂವತ್ಸರದ ಯುಗಾದಿ ಬಹಳ ಅದ್ದೂರಿಯಾಗೇ ನಡೆಯಿತು. ಈ ಸಂತೋಷವನ್ನು ದ್ವಿಗುಣಗೊಳಿಸುವಂತೆ ಸ್ಥಳೀಯ ಹಠಾತ್ ಕಲಾವಿದರ ಎರಡನೇ ನಿರ್ಮಾಣ 'ಕನಸು' ಮನರಂಜನಾ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿಬಂದು, ಪ್ರೇಕ್ಷಕರನ್ನು ಒಂದು ಗಂಟೆ ಸೆರೆ ಹಿಡಿಯಿತು.

ರೆಡ್ಮಂಡ್ ಹೈಸ್ಕೂಲಿನ ಭವ್ಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಪ್ರಾರಂಭ. ಸ್ವಯಂ ಸೇವಕರ ದೊಡ್ಡ ಬಳಗವೇ ಸಜ್ಜಾಗಿ ನಿಂತು ನಗುಮುಖದಿಂದ ಬಡಿಸಿದ ಹಬ್ಬದ ಔತಣದ ಜತೆಗೆ ನೆರೆದ ಕನ್ನಡಿಗರ ಸ್ನೇಹಪೂರಿತ ಉಭಯ ಕುಶಲೋಪರಿ. ಊಟ ಮುಗಿಯುತ್ತಿದ್ದಂತೆ ಮನರಂಜನೆಯ ಕಾರ್ಯಕ್ರಮ. ಮೊದಲನೆಯದಾಗಿ ಪುಟಾಣಿಗಳಿಂದ ಪ್ರಾರ್ಥನೆ ಮತ್ತು ಹೊಸ ಸಮಿತಿಯ ಸದಸ್ಯರ ಪರಿಚಯದೊಂದಿಗೆ ಕಾರ್ಯಕ್ರಮದ ಚಾಲನೆ ಅಯಿತು.

ದಿವ್ಯ ಶಿವಪ್ರಸಾದ್, ಕಿರಣ ಗೌಡ, ಮಹಾದೇವ್, ರೂಪಾಲಿ ಖೋತ್, ಶಿವಪ್ರಸಾದ ನಾಗಭೂಷಣ ಸ್ವಾಮಿ, ಶ್ರೇಯಾ ರಾಮಸ್ವಾಮಿ, ಸೌಮ್ಯ ನಂಜಯ್ಯ ಇವರು ಪ್ರಸಕ್ತ ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರು. ಕುಮಾರ್ ರಾವ್, ರಾಗಿಣಿ ಶ್ರೀನಿವಾಸ ಮೂರ್ತಿ, ರಮೇಶ್ ಬೆಂಗಳೂರ್, ಮತ್ತು ಶ್ರೀನಿವಾಸ ರಾವ್ ಇವರು ಕಾರ್ಯನಿರ್ವಾಹಕ ಸಮಿತಿಯ ಸದಸ್ಯರು.

ಪ್ರಾರಂಭದಲ್ಲಿ ಸೌಮ್ಯ ನಂಜಯ್ಯನವರಿಂದ ಸ್ವಾಗತ ಭಾಷಣವಾದ ಬಳಿಕ ಅಲಂಕ್ರಿತ ಆನಂದ, ಲಕ್ಷ್ಮಿ ವಸಿಷ್ಟ, ಮತ್ತು ಶ್ರೇಯ ರಾಮಸ್ವಾಮಿಯವರು ಎಮ್.ಸಿ ಗಳಾಗಿ ಕನ್ನಡದಲ್ಲೇ ಕಾರ್ಯಕ್ರಮದ ನಿರ್ವಹಣೆಯನ್ನು ಲವಲವಿಕೆಯಿಂದ ನಡೆಸಿಕೊಟ್ಟರು. ಈ ಬಾರಿ ಯುಗಾದಿ ಆಚರಣೆಯ ವಿಶೇಷವೆಂದರೆ ಸಮಿತಿಯವರು ಸದಸ್ಯರಿಂದ ಸುಮಾರು ಇನ್ನೂರಕ್ಕೂ ಜಾಸ್ತಿ ಪುಸ್ತಕಗಳನ್ನು ಸಂಗ್ರಹಿಸಿ ರೀಡಿಂಗ್ ಟ್ರೀ ಸಂಸ್ಥೆಗೂ, ಸುಮಾರು 130 ಡಾಲರ್ ಬೆಲೆಯ ಆಹಾರ ಸಾಮಗ್ರಿಗಳನ್ನು ಸೇವಾರೂಪವಾಗಿ ಸಂಗ್ರಹಿಸಿ ಹೋಪ್ ಲಿಂಕ್ ಸಂಸ್ಥೆಗೂ, ದಾನ ಮಾಡಿದರು.

ತಮಗೆ ಹೊಸದಾಗಿ ಬಂದ ತೆರಿಗೆ ವಿನಾಯಿತಿಯ ಸೌಲಭ್ಯವನ್ನು ಉಪಯೋಗಿಸಿ ಇನ್ನು ಮುಂದೆಯೂ ಸಮಿತಿಯವರು ಇಂತಹ ಸತ್ಕಾರ್ಯಗಳನ್ನು ಅಳವಡಿಸಿಕೊಳ್ಳುವ ರೂಪರೇಷೆಗಳನ್ನು ಕಾರ್ಯನಿರ್ವಾಹಕ ಸಮಿತಿಯ ಕುಮಾರ ರಾವ್ ಮೂಲಕ ಸಭೆಗೆ ತಿಳಿಸಿದರು. ಫುಟ್ಟ ಮಕ್ಕಳಿಂದ ಕರ್ನಾಟಕದ ವಿವಿಧ ಭಾಗದ ಜನರ ವೇಷ ಭೂಷಣಗಳ ಪ್ರದರ್ಶನ, ಜಾನಪದ, ಸಿನೆಮ ನೃತ್ಯಗಳು, ಹಾಸ್ಯ ಸನ್ನಿವೇಶಗಳು, ಮತ್ತಿತರ ಸೃಜನಾತ್ಮಕ ಪ್ರತಿಭಾ ಪ್ರದರ್ಶನಗಳು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡವು.

ಈ ಬಾರಿಯ ಸಮಿತಿಯ ಸದಸ್ಯರ ಪರಿಚಯ ಆದೊಡನೆ, ಕಿರಣ್ ಗೌಡ ಅವರು ಪ್ರಸ್ತುತ ವರ್ಷದಲ್ಲಿ ಪ್ರಾಯೋಜಿತವಾಗಿರುವ ಕಾರ್ಯಕ್ರಮಗಳನ್ನು ವಿವರಿಸಿದರು. ಹಠಾತ್ ಕಲಾವಿದರ 'ಕನಸು' ಕನ್ನಡಿಗನೊಬ್ಬನ ಶುದ್ಧ ಕನ್ನಡದ ಕರ್ನಾಟಕದ ಕನಸು ನನಸಾಗದಿದ್ದರೂ ಕನ್ನಡಿಗರಾಗಲು ಪ್ರಯತ್ನ ಪಡುವ, ಇತರ ಭಾಷೆಯ ಜನಗಳ ಅರ್ದಂಬರ್ಧ ಕನ್ನಡೀಕರಣದಿಂದಲೇ ತೃಪ್ತಿಪಟ್ಟು ತಮ್ಮ ಉದಾರ ಹೃದಯದಿಂದ ಅವರೆಲ್ಲರನ್ನೂ ಕನ್ನಡಿಗರೆಂದು ಅಂಗೀಕರಿಸುವ ಸನ್ನಿವೇಶವನ್ನು ಕಲವಿದರು ಹಾಸ್ಯಪೂರಿತವಾಗಿ ಸಂಯೋಜಿಸಿ, ಪ್ರಸ್ತುತಪಡಿಸಿದರು. ರಮೇಶ್ ಬೆಂಗಳೂರ್, ರಾಗಿಣಿ ಶ್ರೀನಿವಾಸ ಮೂರ್ತಿ, ಗೌರಿ ರಮೇಶ್, ಸ್ಮಿತಾ ಭಾರದ್ವಾಜ್, ಶ್ರೀವತ್ಸ ಶ್ರೀನಿವಾಸನ್, ಮತ್ತು ಗುರುಪೂರ್ಣ ವಸಿಷ್ಟರು ಈ ಕಾರ್ಯಕ್ರಮವನ್ನು ರೂಪಿಸಿ, ಪ್ರಸ್ತುತಪಡಿಸಿದರು.

ಅಲಮೇಲು ಅಯ್ಯಂಗಾರ್ ತಂಡದವರು, ಅವರೇ ಬರೆದು ನಿರ್ದೇಶಿಸಿದ, 'ಸಾಮರಸ್ಯಕ್ಕೊಂದು ಸಲಹೆ' ಎಂಬ ಹಾಸ್ಯಭರಿತ ನಾಟಕ ಪ್ರದರ್ಶಿಸಿ ತಮ್ಮ ವಿಡಂಬನಾತ್ಮಕ ಸನ್ನಿವೇಶಗಳಿಂದ ಹಾಗೂ ಉತ್ತಮ ನಟನೆಯಿಂದ ವೀಕ್ಷಕರನ್ನು ನಕ್ಕು ನಗಿಸಿದರು. ಅಲಮೇಲು ಅಯ್ಯಂಗಾರ್, ಮಧು ಜೋಶಿ, ಅರ್ಚನಾ ಉಪಾಧ್ಯ, ಸುಚೇತ ಜೋಯ್ಸ, ತಿರುನಾರಾಯಣ ಅಯ್ಯಂಗಾರ್, ಅಂಜನ್ ಶ್ರೀನಿವಾಸ್, ಮತ್ತು ಶ್ರೀವತ್ಸ ದುಗ್ಲಾಪುರ ಇವರು ಈ ನಾಟಕದಲ್ಲಿ ನಟಿಸಿದರು.

ಪು.ತಿ.ನ ಅವರ ಮಗಳಾದ ಅಲಮೇಲು ಅವರು ತಮ್ಮ ತಂದೆಯವರ ಹೆಸರನ್ನು ಮೆರೆಸುತ್ತಿರುವುದಲ್ಲದೇ, ತಮ್ಮ ಪ್ರತಿಭೆಯಿಂದ ಅಮೇರಿಕಾದಲ್ಲಿ ಮನೆ ಮಾತಾಗಿದ್ದಾರೆ. ಇವರ ಜತೆ ಬಂದ ವಿಜಯಾ ಜೋಶಿ (ಗಂಡ ಅಮೆರಿಕಾದ ನೇವಿಯಲ್ಲಿ ಆಫೀಸರ್ ಆಗಿದ್ದಾರೆ) ಕನ್ನಡದ ಬಗ್ಗೆ ಕ್ಯಾಲಿಫೊರ್ನಿಯಾದಲ್ಲಿ ಬಹಳ ಕೆಲಸ ಮಾಡಿದ್ದಾರೆ. ದೂರದ ಊರಿಂದ ಬಂದು ಈ ಕಾರ್ಯಕ್ರಮ ಇಲ್ಲಿ ನಡೆಸಿಕೊಟ್ಟಿದ್ದಕ್ಕೆ ಅಲಮೇಲು ಅವರ ತಂಡಕ್ಕೆ ನಮ್ಮೆಲ್ಲರ ಅಭಿನಂದನೆಗಳು.

ಒಟ್ಟಾರೆ ಈ ಖರ ಸಂವತ್ಸರವು ಹೊಸ ಸಮಿತಿಯ, ಹೊಸ ಉತ್ಸಾಹದಿಂದ, ಸರಕಾರದ ತೆರಿಗೆ ವಿನಾಯಿತಿಯಿಂದ, ಹೊಸ ವರುಷದಲ್ಲಿ, ಹೊಸ, ಹೊಸ ಕಾರ್ಯಕ್ರಮಗಳನ್ನು ಹೀಗೇ ನಮಗೆಲ್ಲ ನೀಡಲಿ ಎಂದು ಆಶಿಸುವುದರ ಜತೆಗೆ ದಟ್ಸ್ ಕನ್ನಡದ ವಾಚಕ ಬಂಧುಗಳಿಗೆಲ್ಲ ಯುಗಾದಿಯ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ.

English summary
Sahyadri Kannada Koota in Seattle, America celebrated Ugadi on Apr 9. Alamelu Iyengar's humorous play Samarasyakkondu Salahe was the highlight of the event. A report by Kumbhasi Srinivas Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X