ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಬೆಟ್ಟ ಈ ಬೆಟ್ಟ ಎನ್ನುವ ಬದಲು ಕರಿಘಟ್ಟ ಹತ್ತಿ

By * ವಾಣಿ ರಾಮದಾಸ್, ಸಿಂಗಪುರ್
|
Google Oneindia Kannada News

Karighatta Temple, Srirangapatna
ಹಾದಿಯುದ್ದಕ್ಕೂ ಹಸಿರಿನಿಂದ ಕೂಡಿದ ಹೊಲ ಗದ್ದೆಗಳು, ಬಾಳೆ-ತೆಂಗು ತೋಟಗಳು. ಬಿಡದಿಯಲಿ ತಟ್ಟೆ ಇಡ್ಲಿ, ಮದ್ದೂರಿನಲಿ ವಡೆ ತಿಂದು ಉದರ ದೇವರನು ಮನ್ನಿಸಿ, ಮಳೂರಿನ ಮುದ್ದಾದ ಅಂಬೆಗಾಲು ಕೃಷ್ಣನಿಗೆ ನಮಿಸಿ, ಕಾವೇರಿ, ಶಿಂಷಾ, ಕಣ್ವ ನದಿಗಳತ್ತ ಕಣ್ಣು ಹಾಯಿಸಿ, ಶ್ರೀರಂಗಪಟ್ಟಣ ಕಂಡಾಗ ಟಿಪ್ಪುವನ್ನು ನೆನೆದು ಚಾಮುಂಡಿ ಬೆಟ್ಟ ಕಣ್ಣಿಗೆ ಬಿದ್ದ ತಕ್ಷಣ ಮೈಸೂರು ಹತ್ತಿರ ಬಂತೆಂಬ ಆನಂದ ಇವೆಲ್ಲದರ ಜೊತೆಗೆ ಅಂಗಳದ ಬಾಲ್ಯದ ನೆನಪುಗಳ ಬುತ್ತಿಯನು ಬಿಚ್ಚುತ್ತಾ ಸಾಗುವ ಬೆಂಗಳೂರು-ಮೈಸೂರು ಪಯಣ ನನಗೆ ಸದಾ ಮುದ ನೀಡುವ ಪಯಣ.

ಇಷ್ಟವಗುತ್ತೆ ಈ ಜಾಗ ನಿನಗೆ ಎನ್ನುತ್ತಾ ಶ್ರೀರಂಗಪಟ್ಟಣದ ಆಚೆ ಇದ್ದಕ್ಕಿದ್ದಂತೆ ಕಾರು ಕರಿಘಟ್ಟ ಕ್ರಾಸಿನತ್ತ ತಿರುಗಿಸಿದ ನನ್ನಣ್ಣ. ವಾಹ್, ತುಂಬಾ ಆಸೆ ಇತ್ತು ನಂಗೆ ಇದರ ಬಗ್ಗೆ ಕೇಳಿದ್ದೆ. ಇವತ್ತು ನೋಡಿದ ಹಾಗಾಯಿತು ಎನ್ನುತ್ತಾ ಬೆಟ್ಟ ಕಪ್ಪಗೂ ಇಲ್ಲ, ಆನೆ ಗುಡ್ಡವೂ ಅಲ್ಲ, ಮತ್ಯಾಕೆ ಕರಿಘಟ್ಟ ಅಂತಾರೆ ಎಂದು ಯೋಚಿಸುತ್ತಾ ಸುತ್ತಲೂ ಕಣ್ಣು ಹಾಯಿಸಿದೆ.

ಹಾದಿ ಬದಿಯಲಿ ಬಾಳೆ ತೋಟ, ಪುಟ್ಟ ಪುಟ್ಟ ಮನೆಗಳು, ಹಸು-ಕರುಗಳು, ಕೊಟ್ಟಿಗೆ, ಕೆಳಗೆ ಚಿಕ್ಕದಾಗಿ ಹರಿಯುವ ಲೋಕಪಾವನಿ ನದಿ, ಎದುರಲಿ ಕಂಡೆ ಸಣ್ಣಗುಡ್ಡಕ್ಕೆ ನೀಟಾದ ಮೆಟ್ಟಲುಗಳು, ಪಕ್ಕದಲಿ ಕಿರಿದಾದ ಟಾರು ರಸ್ತೆ, ಅಣತಿ ದೂರ ಕಿರಿದಾದ ರಸ್ತೆಯಲಿ ಕಾರು ಬೆಟ್ಟದ ಮೇಲೆ ತೆರಳಿದಂತೆ ಹಿಂದೆ ಕಣ್ಣಾಡಿಸಿದಾಗ ಹಸಿರೇ ಹಸಿರು ಕಣ್ಣು ತುಂಬಿದವು. ಹಾದಿ ಉದ್ದಕ್ಕೂ ನೆಲ್ಲಿ ಗಿಡ, ಹುಣಿಸೆ ಮರ.

ಕುರುಚಲು ಗಿಡಕ್ಕೆ ಬಾಯಿ ಹಾಕಿದ ಮೇಕೆ ಮರಿಗಳು, ಎದುರಿಗೆ ಕಂಡ ಕುರುಬನೋರ್ವ ದೇವಸ್ಥಾನ ತೆಗೆದೈತೆ, ಇಲ್ಲೇ ಕುಂತಿವ್ನಿ, ದರ್ಸನ ಮಾಡಿ ಪ್ರಸಾದ ಕೊಟ್ಟು ಹೋಗಿ ಎಂದು ಕೂಗಿದ. ನಗರದಲಿ ಪರಿಚಿತರೂ ಅಪರಿಚಿತರು- ಭಾರತದ ಸಣ್ಣ ಸಣ್ಣ ಊರು, ಹಳ್ಳಿಗಳಲ್ಲಿ ಅಪರಿಚಿತರೂ ಪರಿಚಿತರು, ಹೌದು ತಾನೇ.

ಕಾರು ನಿಲ್ಲಿಸಿದಂತೆ ಎದುರಿಗೆ ಕಂಡೆ ಬೆಟ್ಟದ ತುದಿಯಲಿ ದೇಗುಲ. ಹೂ ಬೇಕಾ, ಹಣ್ಣು ತಗೋಳ್ಳಿ ಅವ್ವಾ, ಇಲ್ಲಿ ಚಪ್ಪಲಿ ಬಿಡಿ ಎಂಬ ಸದ್ದು-ಗದ್ದಲವಿಲ್ಲದೆ ಮೌನದಲಿ ನಿಂದು ಕೈಮುಗಿದು ಒಳಗೆ ಬಾ ಎಂದಂತೆನಿಸಿತು. ಅವಿಗಳಿಗೆ, ಪ್ರಕೃತಿ ಪ್ರಿಯರಿಗೆ ಸುಂದರ ತಾಣ. ಸುತ್ತಲ್ಲೊ ಕಣ್ಣಾಡಿಸಿದಾಗ ನಾ ಕಂಡ ದೃಶ್ಯ ಮನೋಹರವಾಗಿತ್ತು. ಹಸಿರು ಗದ್ದೆಗಳು, ಮರಗಳು ಮೈದುಂಬಿ ದೂರದಲಿ ಹರಿಯುವ ಕಾವೇರಿ, ಅಣತಿ ದೂರದಲಿ ಕಂಡ ನಿಮಿಷಾಂಬ ದೇಗುಲದ ಗೋಪುರ, ಕರಿಘಟ್ಟದಿಂದಲೇ ಅಲ್ಲಿಗೆ ತಲುಪಲು ಕಂಡ ಕಿರಿದಾದ ರಸ್ತೆ, ಸೇತುವೆ. ಕ್ರಾಪ್ ಕಮ್ ಜುಟ್ಟು ಬಿಟ್ಟಿದ್ದ ಅರ್ಚಕರು ನಮ್ಮನ್ನು ಕಂಡೊಡನೆ ಬನ್ನಿ ಎನ್ನುತ್ತಾ ಒಳನಡೆದರು.

ಶ್ರೀನಿವಾಸನ ಸೌಂದರ್ಯದ ಬೆರಗು: ಯಾವುದೊಂದೇ ಆಡಂಬರವೂ ಇಲ್ಲದ ದೇಗುಲ. ಗರ್ಭಗುಡಿಯಲಿ ನಿಂದ ಆರು ಅಡಿಯ ಶ್ರೀನಿವಾಸನ ಸೌಂದರ್ಯಕ್ಕೆ ಮಾರುಹೋದೆ. ಮೈಮೇಲೆ ಏನೊಂದೂ ಆಭರಣವಿರದ, ಶ್ವೇತ ಮಗುಟ, ಸೇವಂತಿ ಮಾಲೆ ತೊಟ್ಟ ಸ್ನಿಗ್ದ ಸುಂದರ ಕರಿಗಿರಿವಾಸ. ನಿರಾಭರಣನ ಚೆಲುವ. ವೈಭವೋಪೇರಿತ ತಿರುಪತಿ ತಿಮ್ಮಪ್ಪನಿಗೂ ಈ ಕರಿಗಿರಿಯ ನಿರಾಭರಣನಿಗೂ ಅಜ-ಗಜ ವೆತ್ಯಾಸ ಎಂದುಕೊಂಡಂತೆಯೇ ಅರ್ಚಕರು ಈ ದೇವರು 12ನೆಯ ಶತಮಾನದ್ದು, ಈ ವೆಂಕಟರಮಣನಿಗೆ "ಬೈರಾಗಿ ವೆಂಕಟರಮಣ" ಎನ್ನುತ್ತಾರೆ ಎಂದರು.

ಪಕ್ಕದಲ್ಲಿ ಪದ್ಮಾವತಿ ಇದ್ದೂ, ಸಾತ್ವಿಕತೆಯೇ ಮೂರ್ತಿವೆತ್ತಿದ್ದಾನೆ ಈ ಶ್ರೀನಿವಾಸ. ಆ ಸಾತ್ವಿಕತೆ ಕಂಡೇ ಇವನಿಗೆ ಬೈರಾಗಿ ಎಂದು ಹೆಸರು ಬಂದಿತೇನೋ. ಅಕ್ಕಪಕ್ಕದ ಮಂಟಪಗಳಲ್ಲಿ ಭೋಗಾ ಮತ್ತು ಯೋಗಾ ಶ್ರೀನಿವಾಸ. ಮಗದೊಂದೆಡೆ ಪದ್ಮಾವತಿ. ದೇಗುಲದ ಹಿಂದೆ ವಿಷ್ಣುಪಾದವಿದೆ ಹಾಗೂ ಪ್ರಾಕಾರದಲಿ ಮದುವೆ ಮಂಟಪ ಇದೆ.

ಕ್ಷೇತ್ರ ಪುರಾಣ: ಬೆಟ್ಟಕ್ಕೆ 450 ಮೆಟ್ಟಲು ಇದೆ, ಇಲ್ಲಿ ದರ್ಬೆ ಹುಲ್ಲು ಸಿಗುತ್ತೆ ಬೇಕಾದ್ರೆ ಕೊಂಡು ಹೋಗಿ ಎಂದರು ಅರ್ಚಕರು. ಫೆಬ್ರವರಿಯಲಿ ತೇರು ನಡೆಯುತ್ತೆ ನಿಮಗೆ ದಾನ ಕೊಡಬೇಕು ಎನಿಸಿದರೆ ಕೊಡಿ ಎನ್ನುತ್ತಾ ಕ್ಷೇತ್ರ ಪುರಾಣವನ್ನು ಹೇಳಿದರು. ಶ್ರೀರಂಗಪಟ್ಟಣ ಯುದ್ದದಲ್ಲಿ ಬ್ರಿಟಿಷರು ಇಲ್ಲಿ ಸಿಡಿ ಗುಂಡುಗಳನ್ನು ಇಟ್ಟಿದ್ದರಂತೆ. ದೇಗುಲದ ಪುರಾಣ ಎಂದುಲಿದ ನನಗೆ ವರಾಹ ಅವತಾರದಲ್ಲಿ ವಿಷ್ಣು ಇಲ್ಲಿಗೆ ಬಂದು ಮೈ ಆಡಿಸಿದನಂತೆ, ಆ ಕೂದಲು ಅದಕ್ಕೆ ಮೊನಚಾಗಿ ದರ್ಬೆ ಹುಲ್ಲು ಹಾಗೊ ಬೆಟ್ಟಕ್ಕೆ ಕರಿಘಟ್ಟ ಎಂದು ಹೆಸರು ಬಂದಿತು ಎನ್ನುತ್ತಾರೆ ಎಂದರು. ಅಂತೂ-ಇಂತೂ ಬಂತು ಪುರಾಣ. ಇಷ್ಟರಲ್ಲಿ ಶಂಖವನೂದೂತ್ತ ದಾಸಯ್ಯನೋರ್ವ ಬಂದ.

ಕೆಳಗೆ ಇಳಿಯುತ್ತಿದ್ದಂತೆಯೇ ಕುರಿ-ಕಾಯುವವ ಓಡಿ ಬಂದ-ನಾವೇ ತಂದಿದ್ದ ಬೆಣ್ಣೆ ಬಿಸ್ಕತ್ತು, ಮದ್ದೂರು ವಡೆ ಜೊತೆಗೆ ಕೈಯಲ್ಲಿ 50 ರು. ನೀಡಿದಾಗ ಆತನ ಸಂತೋಷ ನೋಡಬೇಕಿತ್ತು. ಒಂದಿನಿತೂ ಮುಜುಗರವಿಲ್ಲದೆ ಕೆಳಗಿನ್ ತನ್ಕಾ ಬುಟ್ಪಿಡಿ ಬುದ್ದಿ ಎಂದಾಗ ನಗು ಬಂತು. ನಗರೀಕರು ನಾವು ಎಲ್ಲಕ್ಕೂ ಹಿಂಜರಿಯುತ್ತೇವೇ, ಇನ್ನೂ ಹಳ್ಳಿಗಳಲ್ಲಿ ಮನುಜರಲ್ಲಿ ಎಳ್ಳಷ್ಟಾದರೂ ನಂಬಿಕೆಯ ಬೇರು ನಿಂತಿದೆ.

ಸುಂದರ ಪರಿಸರ, ನಿರ್ಮಲ ವಾತಾವರಣ. ಕಂಡರಿಯದ ಶಿಲ್ಪಿಗೆ, ದೇಗುಲ ಕಟ್ಟಲು ಧನಸಹಾಯ ನೀಡಿದ ವ್ಯಕ್ತಿಗಳಿಗೆ ನಮೋನ್ನಮಃ. ಇಂತಹ ಚಿಕ್ಕ-ಪುಟ್ಟ ಸ್ಥಳಗಳು ಬಹಳಷ್ಟು ಇವೆ. ಇದರ ಬಗ್ಗೆ ಪ್ರವಾಸೋದ್ಯಮ ಇಲಾಖೆ ಸೂಕ್ತ ಪ್ರಚಾರ ನೀಡಿ, ಸಮರ್ಪಕ ಸಾರಿಗೆ ವ್ಯವಸ್ಥೆ ಒದಗಿಸಿ, ಉತ್ತಮ ಸೌಲಭ್ಯ ಕಲ್ಪಿಸಬೇಕು. ನಮ್ಮ ಸುತ್ತಲ ಪ್ರಕೃತಿವೈಭವವನ್ನು ನಾವು ಸವಿಯದಿದ್ದರೆ ಮತ್ತು ನಮ್ಮ ಸುತ್ತಲಿರುವ ಪುರಾಣೇತಿಹಾಸ ಪ್ರಸಿದ್ಧ ಸ್ಥಳಗಳನ್ನು ಆನಂದಿಸಿ, ನಾಲ್ಕಾರು ಜನರಿಗೆ ತಿಳಿಸಿ. ಹಾಗೆಯೇ ಅದು ಬೆಟ್ಟ ಇದು ಬೆಟ್ಟ ಎನ್ನುತ್ತಾ ಕರಿಘಟ್ಟವನ್ನೂ ನೋಡಿ ಬನ್ನಿ.

English summary
Karighatta or Black hill near Srirangapatna is a famous Pilgrimage Centre in Mandya district. This ancient temple(12th century) is dedicated Lord Venkateshwara(here god is called as Bhairagi Venkateshwara). Hindu devotees can visit many temples near by Srirangapatna making Karighatta as center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X