ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಚ್ಚೆನಗರಿ ಸಿಯಾಟಲ್ನಲ್ಲಿ ಪುರಂದರ ಆರಾಧನೆ

By * ಕುಂಭಾಸಿ ಶ್ರೀನಿವಾಸ ಭಟ್, ಸಿಯಾಟಲ್
|
Google Oneindia Kannada News

Purandara aradhane in Seattle
ಅಮೆರಿಕಾದ ಈಶಾನ್ಯಮೂಲೆಯಲ್ಲಿ, ಗಿರಿವನಗಳ ಸಸ್ಯಶ್ಯಾಮಲ, ಪಚ್ಚೆ ತಳಿರಿನ (ಅದಕ್ಕಾಗಿಯೇ ಸಿಯಾಟಲ್ ಗೆ "ಪಚ್ಚೆನಗರಿ" ಎಂಬ ಅಂಕಿತ) ಸಿರಿಯಲ್ಲಿ, ಸುಂದರ ನದಿ, ಸರೋವರಗಳ ನಡುವೆ, ಶಾಂತಸಾಗರದ ತಡಿಯಲ್ಲಿ, ಪ್ಯುಜಿತ್ ಸೌಂಡ್ ಎಂಬ ಹಿನ್ನೀರು ಪ್ರದೇಶದಲ್ಲಿ, ಸಿಯಾಟಲ್ ನಗರ ರಾರಾಜುಸುತ್ತಿದೆ. ಈ ಪಚ್ಚೆನಗರಿ ಪ್ರಪಂಚದ ಅತೀ ಶ್ರೀಮಂತ ಹಾಗೂ ಅತಿದೊಡ್ಡ ದಾನಿ ಬಿಲ್ ಗೇಟ್ ಅವರಂತಹ ಹಲವಾರು ಮೇಧಾವಿಗಳಿಗೂ, ಮೈಕ್ರೊಸಾಫ್ಟ್, ಅಮೆಝಾನ್, ಸ್ಟಾರ್ ಬಕ್ಸ್, ಬೋಯಿಂಗ್ ಗಳಂತಹ ಪ್ರಸಿದ್ಧ ಕಂಪೆನಿಗಳಿಗೂ ತಾಯ್ನಾಡಾಗಿ ಹೆಸರುವಾಸಿ ಆಗಿದೆ. ಅಮೇರಿಕದಲ್ಲೇ ಶೇಕಡಾ ಅತ್ಯಂತ ಹೆಚ್ಚು ಮೇಧಾವಿಗಳೂ, ವಿಚಾರವಾದಿಗಳೂ, ಮತ್ತು ವಿದ್ಯಾವಂತರೂ ಇರುವ ರಾಜ್ಯವೆಂಬ ಹೆಗ್ಗಳಿಕೆ ವಾಷಿಂಗ್ಟನ್ ರಾಜ್ಯದ್ದು.

ಈ ಪಚ್ಚೆನಗರಿಯ ಕನ್ನಡಿಗರು ಸೇರಿ ಸಿಯಾಟಲ್ ನ ಗರಿಮೆ ಹೆಚ್ಚಿಸುವ ಇನ್ನೊಂದು ಐತಿಹಾಸಿಕ ಘಟನೆಯನ್ನು ಈ ಶನಿವಾರ (ಫೆ. 26) ನಡೆಸಿದರು. ಇಲ್ಲಿ, ಮೊತ್ತಮೊದಲ ಬಾರಿಗೆ ನಮ್ಮ ಕರ್ನಾಟಕದ ದಾಸವರೇಣ್ಯ, ಪುರಂದರದಾಸರ ಆರಾಧನೆಯನ್ನು ಬಹಳ ವೈಭವದಿಂದ, ವೇದಿಕ್ ಕಲ್ಚರಲ್ ಸೆಂಟರ್(ವೈದಿಕ ಸಂಸ್ಕ್ರತಿ ಕೇಂದ್ರ)ನಲ್ಲಿ, ಅತ್ಯುತ್ತಮ ರೀತಿಯಲ್ಲಿ ಆಚರಿಸಿದರು.

ಬೆಳಿಗ್ಗೆ ಹತ್ತು ಗಂಟೆಗೆ ಶ್ರಿಕೃಷ್ಣ ಮತ್ತು ಪುರಂದರ ದಾಸರ ಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಸಂಜೆ ಏಳು ಗಂಟೆಯತನಕ ಬಿಡುವಿಲ್ಲದೆ ನಡೆಯಿತು. ಬೆಂಗಳೂರಿನಿಂದ ಶಾಮ್ ಪ್ರಸಾದ್ ಅವರು ತಂದ ಆರಡಿ ಎತ್ತರದ ಪುರಂದರ ದಾಸರ ಭಾವಚಿತ್ರ, ಮತ್ತು ಹೂ ಮಾಲೆಗಳಿಂದ ಅಲಂಕೃತವಾದ, ವೇದಿಕೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಕಲಾವಿದರು ಸೇರಿ ಗಾಯನ, ನೃತ್ಯಗಳಿಂದ ಸೂಕ್ತ ಹಿಮ್ಮೇಳದೊಡನೆ ಪುರಂದರ ದಾಸರ ಮತ್ತು ಅವರ ಕ್ರತಿಗಳ, ಸ್ಮರಣೆಯನ್ನು ವಿಜೃಂಭಣೆಯಿಂದ ಮಾಡಿದರು.

ಪ್ರತೀ ಕಾರ್ಯಕ್ರಮದ ಮೊದಲು ಆ ರಚನೆಯ ಅರ್ಥ, ಸನ್ನಿವೇಶ, ಪ್ರಾಮುಖ್ಯತೆಗಳನ್ನು ಶುದ್ಧ ಕನ್ನಡದಲ್ಲಿ ವಿವರಿಸಿದುದಲ್ಲದೇ (ಕುಮಾರ್ ರಾವ್), ಕಲಾವಿದರೂ ಅಚ್ಚ ಕನ್ನಡ ವೇಷಭೂಷಣಗಳಿಂದ ಅಲಂಕರಿಸಿಕೊಂಡು ಪ್ರೇಕ್ಷಕರ ಕಣ್ಮನಗಳನ್ನು ತಣಿಸಿದರು. ಪುಟ್ಟಬಾಲಕ, ಬಾಲಕಿಯರಿಂದ ಹಿಡಿದು, ಹವ್ಯಾಸೀ ಕಲಾವಿದರ ಹಾಗೂ ವಿಶ್ವ ವಿಖ್ಯಾತ ಗಾಯಕಿ, ಕನ್ನಡದವರೇ ಆದ ಶ್ರೀವಾಣಿ ಜಡೆಯವರ ಪುರಂದರ, ವಾದಿರಾಜ, ಮತ್ತು ಬಸವೇಶ್ವರರ ರಚನೆಗಳ ಸವಿಯೂಟ ನೆರೆದವರೆಲ್ಲರನ್ನು ಬೇರೆ ಲೋಕಕ್ಕೆ ಕರೆದೊಯ್ಯಿತೆಂದರೆ ಉತ್ಪ್ರೇಕ್ಷೆ ಆಗಲಾರದು.

ಸ್ಥಳೀಯ ಕಲಾವಿದೆಯರಾದ ಮತ್ತು ಸಂಗೀತ ಶಿಕ್ಷಣವನ್ನು ನೀಡುತ್ತಿರುವ ಪ್ರಮೀಳ ರಾಣಿ, ವಿಶ್ವವಾಣಿ ಸಂಗೀತ ಅಕಾಡೆಮಿ, ಪದ್ಮಾ ಅರುಣ್, ಜಯಾ ರಾಮಪ್ರಸಾದ, ಸುಭಾಶಿನಿ ಸಂತಾನಮ್, ಭಾರತಿ ಶಿಕ್ಷಣ ಕೇಂದ್ರಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಹಿತ, ಸುಮಾರು ನೂರು ಕಲಾವಿದ ಮತ್ತು ಕಲಾವಿದೆಯರಿಂದ ಈ ವೈಭವಪೂರಿತ ಸಂಗಿತ ಮತ್ತು ನಾಟ್ಯಗಳ ಆರಾಧನೆ ನಡೆಯಿತು. ಪಕ್ಕವಾದ್ಯಗಳೂ, ಧ್ವನಿ ಸಜ್ಜಿಕೆಯೂ ಪೂರಕವಾಗಿದ್ದುವಲ್ಲದೇ, ಕುಮಾರ್ ರಾವ್ ಅವರು ಬಹಳ ಮುತುವರ್ಜಿಯಿಂದ ಸಂಶೋಧನೆ ನಡೆಸಿ ತಯಾರಿಸಿದ ಪುರಂದರ ದಾಸರ ಜೀವನ ಚರಿತ್ರೆ, ಅವರ ರಚನೆಗಳ ವೈವಿಧ್ಯತೆ, ದೇಶ, ಕಾಲ, ಅರ್ಥ, ಸನ್ನಿವೇಶಗಳ ವಿವರಣೆ ಕಾರ್ಯಕ್ರಮಕ್ಕೆ ಕಳೆಗೂಡಿಸಿತೆಂದರೆ ಅತಿಶಯೋಕ್ತಿ ಆಗಲಾರದು.

ರಮೇಶ್ ಬೆಂಗಳೂರ್ ಅವರ ಧ್ವನಿ ಮತ್ತು ರಂಗ ಸಜ್ಜಿಕೆ ಎಂದಿನಂತೆ ಉತ್ತಮವಾಗಿತ್ತು. ಕಾರ್ಯಕ್ರಮದ ಮಧ್ಯೆ, ಮಧ್ಯೆ ನಮ್ಮ ಪಾಕ ಶಾಸ್ತ್ರ ಪ್ರವೀಣೆಯರು ಸೇರಿ ತಯಾರಿಸಿದ ಬಿಸಿಬೇಳೆಭಾತ್, ಪಕೋಡ, ಮೈಸೂರ್ ಪಾಕ್, ಮೊಸರನ್ನ, ಚುರಿಮರಿ, ಗೋಡಂಬಿ ಹಲ್ವ, ಮತ್ತಿತರ ಸಿಹಿ ತಿಂಡಿಗಳು, ಶುಂಠಿ ಚಹಾ, ಎಲ್ಲ ಬಂದವರ ರುಚಿ ಚಿಗುರುಗಳನ್ನು ಸಂತೃಪ್ತಿಪಡಿಸಿದುವು.

ಇಂತಹ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆಂದೇ ಹೊಸತಾಗಿ ವಿರಚಿತವಾದ, "ಪುರಂದರ ಆರಾಧನೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳ ಆಚರಣೆ ಸಮಿತಿ", (ಶಾಮ್ ಪ್ರಸಾದ್ ಬೆಂಗಳೂರು, ಚಿತ್ರ ಮಂಡ್ಯಂ, ಗಾಯತ್ರಿ ಶ್ರೀನಿವಾಸ್, ಶ್ರೀನಿವಾಸ ಭಟ್ ಮತ್ತು ಗೀತ ಶ್ರೀನಿವಾಸ್ ) ಮತ್ತು ಸಹ್ಯಾದ್ರಿ ಕನ್ನಡ ಕೂಟದ ಸಹಕಾರದಿಂದ ಇಂತಹ ಉತ್ತಮ ಕಾರ್ಯಕ್ರಮಗಳು ಇನ್ನು ಮುಂದೆಯೂ ಸತತವಾಗಿ ನಡೆದು, ನಮ್ಮ ಕನ್ನಡ ಸಂಸ್ಕ್ರತಿಯನ್ನು ನಮಗೂ, ಮುಂದಿನ ಪೀಳಿಗೆಗೂ ಹರಡಲು ಸಹಕಾರಿಯಾಗಲೆಂದು ಆಶಿಸುತ್ತೇನೆ.

English summary
NRI activities in USA : Purandara Dasara aradhane was celebrated in Seattle in America by Seattle Kannadigas at Vedic Culture Center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X