• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಸಾಹಿತ್ಯ ರಂಗದ 5ನೇ ವಸಂತ ಸಾಹಿತ್ಯೋತ್ಸವ

By Shami
|
ಕನ್ನಡ ಸಾಹಿತ್ಯ ರಂಗದ ಐದನೇ ವಸಂತ ಸಾಹಿತ್ಯೋತ್ಸವದ ಬಗ್ಗೆ ಈಗಾಗಲೇ ಬಂದ ಪ್ರಕಟನೆಯನ್ನು ಅಮೆರಿಕಾದ ಕನ್ನಡ ಸಾಹಿತ್ಯಾಭಿಮಾನಿಗಳೆಲ್ಲರೂ ನೋಡಿದ್ದೀರೆಂದು ನಂಬಿದ್ದೇವೆ. ಈ ಪ್ರಕಟನೆಯಲ್ಲಿ ಸಾಹಿತ್ಯೋತ್ಸವದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತಿದ್ದೇವೆ. ದಯವಿಟ್ಟು ಗಮನಿಸಿ. ಹಿಂದೆಯೇ ಹೇಳಿದಂತೆ ಈ ಸಾಹಿತ್ಯೋತ್ಸವ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ಸಹಯೋಗದೊಂದಿಗೆ ಮತ್ತು ಅಲ್ಲಿನ ಸಾಹಿತ್ಯ ಗೋಷ್ಠಿ ಸಂಸ್ಥೆಯ ಸಹಕಾರದೊಂದಿಗೆ ನಡೆಯುತ್ತಿದೆ.

ಈ ಕಾರ್ಯಕ್ರಮ ಏಪ್ರಿಲ್ 30 (ಶನಿವಾರ) ಮತ್ತು ಮೇ 1 (ಭಾನುವಾರ), 2011 ಸಾನ್ ಫ್ರಾನ್ಸಿಸ್ಕೋಗೆ ಸುಮಾರು 30 ಮೈಲಿ ದಕ್ಷಿಣದಲ್ಲಿರುವ ವುಡ್‌ಸೈಡ್ ಎಂಬ ಊರಿನ ವುಡ್‌ಸೈಡ್ ಹೈ ಸ್ಕೂಲ್‌ನ ಸುಂದರ ನಿವೇಶನದಲ್ಲಿ ನಡೆಯುತ್ತಿದೆ. ಕಾರ್ಯಕ್ರಮ ಶನಿವಾರ ಮಧ್ಯಾಹ್ನ ಸುಮಾರು 1.30 ಹೊತ್ತಿಗೆ ಮೊದಲಾಗಿ ರಾತ್ರಿ 10.30 ವರೆಗೆ ನಡೆದು, ಮತ್ತೆ ಮರುದಿನ ಬೆಳಿಗ್ಗೆ ಸುಮಾರು 8ರಿಂದ ಮಧ್ಯಾಹ್ನ 4ರವರೆಗೂ ನಡೆಯುತ್ತದೆ. ಹೊರ ಊರುಗಳಿಂದ ಬಂದು ಹೋಗುವವರಿಗೆ ಅನುಕೂಲವಾಗಲೆಂದೇ ಕಾರ್ಯಕ್ರಮ ಸಮಯಗಳನ್ನು ಈ ರೀತಿ ನಿಯೋಜಿಸಲಾಗಿದೆ. ಉತ್ತಮ ಊಟ ಉಪಾಹಾರಗಳನ್ನೂ, ತಕ್ಕ ವಸತಿ ಸೌಕರ್ಯಗಳನ್ನೂ ಸಿದ್ಧಗೊಳಿಸಲಾಗುತ್ತಿದೆ. ಕೆಲಸಗಳು ಹುರುಪಿನಿಂದ ಸಾಗುತ್ತಿವೆ.

ಈ ಸಾಹಿತ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕನ್ನಡದ ಖ್ಯಾತ ಬರಹಗಾರರೂ ವಿಮರ್ಶಕರೂ ಆದ ಡಾ.ಗಿರಡ್ಡಿ ಗೋವಿಂದರಾಜ ಅವರು ಬರುತ್ತಿದ್ದಾರೆ. ಅಲ್ಲದೆ ಕನ್ನಡದ ಅತ್ಯುತ್ತಮ ಹಾಸ್ಯ ಸಾಹಿತಿಗಳಲ್ಲೊಬ್ಬರಾದ ಭುವನೇಶ್ವರಿ ಹೆಗಡೆ ಅವರೂ ಬರುತ್ತಿದ್ದಾರೆ. ಒಂದು ಕಡೆ ಗಂಭೀರ ಸಾಹಿತ್ಯ ವಿಷಯಗಳತ್ತ ನಿಮ್ಮ ಮನಸ್ಸನ್ನು ಪ್ರಚೋದಿಸುವ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದು ಕಡೆ ನಿಮ್ಮ ಮನಸ್ಸನ್ನು ಹಾಸ್ಯಕಿರಣಗಳಿಂದ ಹಗುರಗೊಳಿಸುವ ಕಾರ್ಯವೂ ನಡೆಯುತ್ತದೆ.

ಡಾ. ಗಿರಡ್ಡಿಯವರು ತಮ್ಮ ಕಥೆ, ಕವಿತೆ, ಪ್ರಬಂಧ ಮತ್ತು ವಿಮರ್ಶೆಗಳಿಂದ ಇಂದಿನ ಪ್ರಮುಖ ಸಾಹಿತಿಗಳಲ್ಲೊಬ್ಬರೆಂದು ಪ್ರಖ್ಯಾತರಾಗಿದ್ದಾರೆ. ವಿಮರ್ಶೆಯ ಕ್ಷೇತ್ರದಲ್ಲಿ ಅವರ ಕೀರ್ತಿ ನಾಡಿನಾದ್ಯಂತ ಹರಡಿದೆ. ಭುವನೇಶ್ವರಿ ಹೆಗಡೆಯವರ ಹಾಸ್ಯ ಲೇಖನಗಳನ್ನೋದಿ ಆನಂದಿಸದವರಾರು? ಹೀಗೆ ಜೀವನ ಸಾಹಿತ್ಯಗಳ ವಿವಿಧ ಮುಖಗಳನ್ನು ಪರಿಚಯಿಸುವ ಇಂಥ ಇಬ್ಬರು ಉತ್ತಮ ಸಾಹಿತಿಗಳು ಇಲ್ಲಿ ಬರುತ್ತಿರುವುದು ಒಂದು ವೈಶಿಷ್ಟ್ಯ.

ಪುಸ್ತಕ ಯಜ್ಞ : ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ರಂಗ ತನ್ನ ಐದನೇ ಪ್ರಕಟನೆಯನ್ನು ಲೋಕಾರ್ಪಣ ಮಾಡುತ್ತಿದೆ. ಅಮೆರಿಕದ ಕನ್ನಡಿಗರು ಬರೆದ ಸುಮಾರು 25 ಲಘು ಪ್ರಬಂಧಗಳ ಸಂಕಲನ ತ್ರಿವೇಣಿ ಶ್ರೀನಿವಾಸರಾವ್ ಮತ್ತು ಎಂ.ಆರ್. ದತ್ತಾತ್ರಿಯವರ ಸಂಪಾದಕತ್ವದಲ್ಲಿ ಹೊರಬರುತ್ತಿದೆ. ಪುಸ್ತಕ ಇನ್ನೇನು ಅಚ್ಚಿನಮನೆಗೆ ಹೋಗುತ್ತಿದೆ. ಇದರ ಜೊತೆಗೆ ಈ ಸಾಹಿತ್ಯೋತ್ಸವದಲ್ಲಿ, ಇಲ್ಲಿನವರೇ ಬರೆದ, ಇದುವರೆಗೆ ಪ್ರಕಟವಾಗಿಲ್ಲದ, ಹೊಸ ಪುಸ್ತಕಗಳನ್ನೂ ಲೋಕಾರ್ಪಣೆ ಮಾಡುವ ಅವಕಾಶವಿರುತ್ತದೆ. ಆ ಬಗ್ಗೆ ಆಸಕ್ತಿಯುಳ್ಳ ಲೇಖಕರು ನಮ್ಮನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ.

ಮೇ 2009ರ ತರುವಾಯ ಇಲ್ಲಿನವರು ಬರೆದು ಪ್ರಕಟಿಸಿರುವ ಪುಸ್ತಕಗಳನ್ನು ಜನರ ಗಮನಕ್ಕೆ ತರುವ ಸಲುವಾಗಿ ನಮ್ಮ ಬರಹಗಾರರು ಕಾರ್ಯಕ್ರಮ ನಿಯೋಜಿಸಲಾಗಿದೆ. ಬರಹಗಾರರನ್ನೂ, ಅವರ ಪುಸ್ತಕಗಳನ್ನೂ, ಅವುಗಳ ಬಗ್ಗೆ ಯುಕ್ತ ರೀತಿಯ ವಿಮರ್ಶೆಗಳನ್ನೂ ಜನಕ್ಕೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶ. ಇದರಲ್ಲಿ ಭಾಗವಹಿಸುವ ಆಸಕ್ತಿಯುಳ್ಳವರು ದಯವಿಟ್ಟು ನಮ್ಮನ್ನು ಸಂಪರ್ಕ ಮಾಡಿ.

ಇಲ್ಲಿನ ಕನ್ನಡಿಗರು ಬರೆದ ಪುಸ್ತಕಗಳು ಎಷ್ಟೋ ವೇಳೆ ಇಲ್ಲಿನವರಿಗೇ ದೊರೆಯುವುದಿಲ್ಲ, ಲೇಖಕರು ತಾವಾಗಿ ವಿಶ್ವಾಸಪೂರ್ವಕ ಕೊಟ್ಟ ಹೊರತು! ಈ ಪರಿಸ್ಥಿತಿ ಬದಲಾಗಬೇಕು. ಇಲ್ಲಿನವರು ಬರೆದ ಪುಸ್ತಕಗಳನ್ನು ನಾವು ಇಲ್ಲಿಯೇ ಕೊಳ್ಳುವಂತಾಗಬೇಕು. ಇದನ್ನು ಕಾರ್ಯಗತ ಮಾಡುವ ಉದ್ದೇಶದಿಂದ ನಮ್ಮ ಸಾಹಿತ್ಯೋತ್ಸವದಲ್ಲಿ ಒಂದು ಪುಸ್ತಕ ಮಳಿಗೆ ತೆರೆಯುತ್ತೇವೆ. ಇಲ್ಲಿನ ಲೇಖಕರು ತಮ್ಮ ಪುಸ್ತಕಗಳನ್ನು ನಮ್ಮ ರಂಗದ ಮೂಲಕ ಅಲ್ಲಿ ಮಾರಾಟ ಮಾಡಬಹುದು.

ನಮ್ಮ ಕನ್ನಡಿಗರ ಸೃಜನಶೀಲತೆಗೆ ಇಂಬುಗೊಡುವ ಕಾರ್ಯಕ್ರಮ ಕವಿಗೋಷ್ಠಿ. ಇದರಲ್ಲಿ ಭಾಗವಹಿಸಲು ಇಚ್ಛೆಯುಳ್ಳವರಿಗೆ ನಮ್ಮ ಆದರದ ಸ್ವಾಗತ. ಈ ಬಗ್ಗೆ ನಿರ್ದಿಷ್ಟ ಸೂಚನೆಗಳನ್ನೊಳಗೊಂಡ ವಿಶೇಷ ಪ್ರಕಟನೆಯೊಂದು ಸದ್ಯದಲ್ಲೇ ಬರಲಿದೆ. ಅದನ್ನೂ ಗಮನಿಸಿ.

ವಸಂತ ಸಾಹಿತ್ಯೋತ್ಸವ ಒಂದು ಅಪೂರ್ವ ಪ್ರಯೋಗ, ಒಂದು ಅಪೂರ್ವ ಅನುಭವ. ಬಹಳ ಮುತುವರ್ಜಿಯಿಂದ, ಪೂರ್ವಾಲೋಚನೆಯಿಂದ ಸಿದ್ಧಗೊಳಿಸಿದ ಕಾರ್ಯಕ್ರಮಗಳು, ಬಿಗಿಯಾಗಿ ಯಾರ ಸಮಯವನ್ನೂ ವ್ಯರ್ಥಗೊಳಿಸದೆ ಕಾರ್ಯನಿರ್ವಹಣೆ ಮಾಡುವ ಶಿಸ್ತು, ಉತ್ತಮವಾದ ಮನರಂಜನೆ, ಸಹೃದಯ ವಾತಾವರಣ, ಹಿತವಾದ ಊಟೋಪಚಾರ, ಸನ್ಮಿತ್ರರೊಂದಿಗೆ ಹಂಚಿಕೊಳ್ಳುವ ರಸನಿಮಿಷಗಳು... ಇವೆಲ್ಲ ನಿಮಗೆ ಅಲ್ಲಿ ಲಭ್ಯ. ಕಾರ್ಯಕ್ರಮ, ನೋಂದಣಿ, ಇತ್ಯಾದಿ ವಿವರಗಳು ಸಿದ್ಧವಾದಂತೆಲ್ಲ ಅವನ್ನು / ಮತ್ತು http://www.kannadasahityaranga.org/ ಮತ್ತು http://www.kknc.org/ ತಾಣಗಳಲ್ಲೂ ಪ್ರಕಟಿಸುತ್ತೇವೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಸುಸ್ವಾಗತ.

ಸಂಪರ್ಕ : ಎಚ್.ವೈ.ರಾಜಗೋಪಾಲ್ (hyrajagopal@gmail.com); ವಲ್ಲೀಶ ಶಾಸ್ತ್ರಿ (vshastry@yahoo.com); ಅಲಮೇಲು ಐಯಂಗಾರ್ (iyengars@gmail.com); ಪದ್ಮಾ ರಾವ್ (padmita@hotmail.com)

* ಎಚ್.ವೈ. ರಾಜಗೋಪಾಲ್ [ವಸಂತ ಸಾಹಿತ್ಯೋತ್ಸವ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Sahitya Ranga (KSR) 5th Kannada Literary convention, Vasanta Sahityotsava, San Fransisco 30 April- 1 May, 2011. Renouned critic Giraddi Govindaraj and Satirist Smt. Bhuvaneshwari Hegde Chief guests. An invitation to all Kannada language, Kannada literature lovers in North America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more