• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೆನ್ನೆಮಣೆ : ಇಂದಿನವರು ಅರಿಯರು ಅಂದಿನವರು ಮರೆಯರು

By * ವಾಣಿ ರಾಮದಾಸ್, ಸಿಂಗಪುರ
|

ಇತ್ತೀಚೆಗೆ ಊರಿಗೆ ಹೋದಾಗ ಹಳೆಯದಾದ, ಧೂಳು ತುಂಬಿದ ಬ್ಯಾಗ್ ಎದುರಿಟ್ಟ ಅಮ್ಮ, ನಿಮ್ಮಿಬ್ಬರಲ್ಲಿ ಯಾರಿಗೆ ಬೇಕೋ ಇದನ್ನು ತೆಗೋಳ್ರೇ ಎಂದ್ಳು. ಹೊಂಬಿಸಿಲು ಕಾದಂಬರಿಯಲಿ ಮೈಮರೆತಿದ್ದ ನಾನು, ಬ್ಯಾಗ್ ನೋಡದೆಯೇ "ಅಮ್ಮನ ಆಂಟಿಕ್ ಪೀಸ್, ಉಷಾ, ನೀನೇ ತೆಗೊಳೇ ಎಂದೆ ನನ್ನಕ್ಕನಿಗೆ. ಹಳೆಯದಾದ ಬ್ಯಾಗಿನ ಒಳಗೆ ಕೈ ಹಾಕುತ್ತಾ "ಗುಟ್ಟೊಂದು ಹೇಳುವೆ, ಕೊಟ್ಟದ್ದು ನನಗೆ" ಎಂದು ಕೂಗಿದಳು. ಧಡಕ್ಕನೆ ಹೊಂಬಿಸಿಲು ಪಕ್ಕಕ್ಕಿಟ್ಟು, "ಗೊತ್ತಾಯಿತು, ನಂದದು, ಥು ಪಾಪಿ, ನೀನೇ ಇಟ್ಕೋ ಎಂದೆ ನಗುತ್ತಾ. ಆ ಆಂಟಿಕ್ ಪೀಸ್ ಏನ್ ಗೊತ್ತಾ "ಅಳಗುಳಿ ಮಣೆ ಅಥವಾ ಚೆನ್ನೆ ಮಣೆ" ಇಂದಿನ ಪೀಳಿಗೆ ಅರಿಯದು, ಅಂದಿನ ಪೀಳಿಗೆ ಮರೆಯದು.

ಚಿಕ್ಕಂದಿನಲ್ಲಿ ಅಳಗುಳಿ ಮಣೆ ಆಡುವಾಗಲೆಲ್ಲಾ ನನ್ನಕ್ಕನಿಗೇ ಗೆಲುವು, ಸೋಲು ನನಗೆ ಕಟ್ಟಿಟ್ಟ ಬುತ್ತಿ. ಸೋತ್ ಪುರ್ಕಿ ಸೋರೇಕಾಯ್ ಎಂದು ಅಂತಾ ಇದ್ಲು ಎಂದು ಮಣೆಯನ್ನ ಬಹಳಷ್ಟು ಬಾರಿ ಮಂಚದ ಕೆಳಗೆ, ಕೊಟ್ಟಿಗೆ, ಅಟ್ಟದಮೇಲೆ ಮರೆಮಾಚಿ ಇಡುತ್ತಿದ್ದೆ. ಅದು ಹೇಗೋ ಹುಡ್ಕಿ ತೆಗೀತಾ ಇದ್ಲು ಅವ್ಳು. ಮತ್ತದೇ ಆಟ, ನನಗೋ ಮತ್ತದೇ ಸೋಲು. ಸೋತು, ಮೊಸಳೆ ಕಣ್ಣೀರು ಸುರಿಸುತ್ತಾ "ಹೋಗ್, ನಿನ್ ಜೊತೆ ಆಡೋಲ್ಲ, ಮೋಸ ಮಾಡ್ತೀಯ, ನಿನ್ ಬಿಟ್ಟು ದೂರ ಆದಾಗ ಗೊತ್ತಾಗುತ್ತೆ ಎಂದು ಮೂತಿ ಉಬ್ಬಿಸುತ್ತಲೋ ಅಥವಾ ಠೂ ಎಂದು ತಳ್ಳಿ ಓಡುತ್ತಿದ್ದ ಹಳೆಯ ನೆನಪಾಯಿತು. ಬಾರೇ, ಈಗ್ಲೂ ಆಡೋಣ ಎಂದು ನನ್ನಕ್ಕ ಎಂದಾಗ ಥಟಕ್ಕನೆ "ಹೋಗೇ, ಈಗ್ಲೂ ನೀನೇ ಗೆಲ್ಲೋದು, ನಾನು ನಾಳೆ ವಾಪಸ್ ಸಿಂಗಪುರಕ್ಕೆ", ಮತ್ತೆ ಬರ್ತೀನಲ್ಲಾ ಆಗ ಗುಲಗಂಜಿ, ಹುಣಿಸೆಬೀಜ ರೆಡಿಮಾಡು ಇಬ್ಬರೂ ಆಡೋಣ ಎಂದಾಗ ಇಬ್ಬರ ಮೊಗದಲ್ಲೂ ಬಾಲ್ಯದ ನಗುವಿತ್ತು, ಅಗಲಿಕೆಯ ಕಣ್ಣಂಚಿನ ನೀರಿತ್ತು. ಒಡಹುಟ್ಟಿದವರ ಒಡನಾಟವೇ ಹಾಗೇ, ಕಂಡಾಗ ಕಣ್ಣುರಿ, ಕಾಣದಿದ್ರೆ ಹೊಟ್ಟುರಿ...ಆ ಪ್ರೀತಿ, ಒಡನಾಟಗಳು ಹಂಚಿಕೊಂಡಷ್ಟೂ ಹೆಚ್ಚು, ಹೆಚ್ಚು.

ಈಗಿನ ಮಕ್ಕಳಿಗೆ ಕುಂಟಾಬಿಲ್ಲೆ, ಚೌಕಾಬಾರ, ಮರಕೋತಿ, ಚಿನ್ನಿದಾಂಡು, ಕಣ್ಣುಮುಚ್ಚಾಲೆ ಈ ಆಟಗಳು ಗೊತ್ತಿಲ್ಲ, ಹೇಳಿ ಕೊಡ್ತೀವಿ ಅಂದ್ರೆ ಇಂಟರೆಸ್ಟ್ ಇಲ್ಲ, ಜೊತೆಗೆ ಟೈಮಂತೂ ಇಲ್ವೇ ಇಲ್ಲ. ಸಿಗೋ ಟೈಮಿನಲ್ಲಿ ಟಿ.ವಿ ಪರದೆಯ ಕಾರ್ಟೂನ್‌ಗಳಲ್ಲಿ ಮಗ್ನರಾಗುವ ಕೌಚ್‌ಪೊಟಾಟೋಗಳು. ಜೊತೆಗೆ ಅಯ್ಯೋ ಆ ಗೇಮ್ಸಾ ಹಳೇಕಾಲದ್ದು, ಛೀ ಬೋರಿಂಗ್ ರಾಗ ಬೇರೆ. ಏನ್ ಮಾಡ್ತೀರಾ, ಪಾಪದ್ದು, ಯಾಂತ್ರಿಕತೆ, ಸ್ಪರ್ಧಾತ್ಮಕದ ಈ ದೌಡುವ ಈ ಯುಗದಲ್ಲಿ ಅವರ ಬಾಲ್ಯವೂ ಬೋರಿಂಗ್, ಟೈಮಿಲ್ಲ, ಟಿ.ವಿ ಎಂದು ದೌಡಾಯಿಸುತ್ತಿದೆ.

ಚನ್ನೆಮಣೆಯತ್ತ ಗಮನಿಸೋಣ ಬನ್ನಿ...

ಪ್ರತಿಯೊಂದೂ ಕ್ರೀಡೆಯ ಇತಿಹಾಸ ಆಯಾ ಜನಾಂಗದ ಸಂಸ್ಕೃತಿ, ಮನೋಭಾವ, ಅಭಿರುಚಿಗಳಿಗೆ ಕನ್ನಡಿ. ಕಾಲ ಬದಲಾದಂತೆ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡರೂ ಆಯಾ ಜನಾಂಗದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

ದಕ್ಷಿಣ ಭಾರತದಲ್ಲಿ ನಮ್ಮಲ್ಲಿ ಚನ್ನೆಮಣೆ, ಅಳಗುಳಿಮಣೆ, ಕೇರಳದಲ್ಲಿ ನಿಕ್ಕಕ್ಕಳಿ, ತಮಿಳಿನಲ್ಲಿ ಪನ್ನಾಂಗುಯಿ ಎಂದು ಹೇಳುತ್ತಿದ್ದ ಈ ಅಳಗುಳಿ ಮಣೆಯಲ್ಲಿ ಏಳುಗುಣಿಗಳ ಎರಡುಸಾಲು ಮತ್ತು ಇಕ್ಕೆಲಗಳಲ್ಲಿ ಹೆಚ್ಚಿನ ಬೀಜಗಳನ್ನು ಹಾಕಲು ಇನ್ನೆರಡು ಕುಳಿಗಳು ಇರುತ್ತಿದ್ದವು. ಆ ಕುಳಿಗಳಲ್ಲಿ ಹುಣಿಸೆಬೀಜ ಅಥವಾ ಗುಲಗಂಚಿ. ಅದೂ ಸಿಕ್ಕದಿದ್ದಲ್ಲಿ ಸಣ್ಣಸಣ್ಣ ಕಲ್ಲುಗಳನ್ನು ತುಂಬಿಸಿ ಈರ್ವರು ಎದುರು-ಬದುರು ಕೂತು ಬೀಜಗಳನ್ನು ಸಾಲಾಗಿ ಕುಳಿಗಳಲ್ಲಿ ಹಾಕಬೇಕಾಗಿತ್ತು. ಒಂದು ಕುಳಿ ತುಂಬಿದಾಕ್ಷಣ ಆ ಕುಳಿಯ ಬೀಜಗಳನ್ನು ಬದಿಗಿಟ್ಟು ಕಡೆಯಲ್ಲಿ ಯಾರ ಕುಳಿಯಲ್ಲಿ ಹೆಚ್ಚು ಬೀಜಗಳು ಸೇರುವುದೋ ಅವರು ಗೆದ್ದವರು ಎಂಬ ಆಟವದಾಗಿತ್ತು.

ಜಾಗರಣೆ, ಉಪವಾಸದ ದಿನಗಳಲ್ಲಿ, ಗ್ರಾಮೀಣ ಭಾಷೆಯಲ್ಲಿ ಆಷಾಡದ ಆಟ, ಹೊತ್ತು ಕಳೆಯುವ ಆಟ ಎಂದು ಕರೆಯಲ್ಪಡುತ್ತಿದ್ದ ಈ ಆಟ. ಗ್ರಾಮೀಣ ಸಂಸ್ಕೃತಿಯಲ್ಲಿ ಪಗಡೆ, ಚನ್ನೆಮಣೆಗಳನ್ನು ಗಂಡ-ಹೆಂಡತಿ, ಒಡಹುಟ್ಟಿದವರು ಆಡಿದಲ್ಲಿ ಕೌಟುಂಬಿಕ ಹಾಗೂ ಭಾವನಾತ್ಮಕ ಸಂಬಂಧಗಳಿಗೆ ಧಕ್ಕೆ ಬರುತ್ತದೆ ಎಂಬ ಹೆದರಿಕೆಯಿಂದ ಬಹುತೇಕ ಮನೆಗಳಲ್ಲಿ ಮನೆಯವರೊಂದಿಗೆ ಈ ಆಟ ಆಡಲು ನಿಷೇಧ ಹೇರುತ್ತಿದ್ದರು ಎಂದಳು ನನ್ನಮ್ಮ.

ಇದನ್ನೂ ಓದಿ : ಗುಲಗಂಜಿಗಿಂತ ಸುಂದರಿ ಯಾರಿಹರಿಲ್ಲಿ?

ಅರಮನೆ, ಶ್ರೀಮಂತರ ಮನೆಗಳಲ್ಲಿ ಚಿನ್ನ, ಬೆಳ್ಳಿ, ಹಿತ್ತಾಳೆಗಳ ಮಣೆಗಳು ಇವೆ ಎಂದು ಕೇಳಿಬಂದರೂ ಶ್ರೀಸಾಮಾನ್ಯರ ಮನೆಗಳಲ್ಲಿ ಮರದ ಮಣೆಗಳು ಇರುತ್ತಿದ್ದವು. ಕೆಲವೊಮ್ಮೆ ಹೊಲಗಳಲ್ಲಿ, ಮಣ್ಣಿನಲ್ಲಿ ಕುಳಿಗಳನ್ನು ಮಾಡಿ ಕಲ್ಲುಗಳನ್ನು ಇಟ್ಟು ಹೊತ್ತು ಕಳೆಯುವುದಕ್ಕಾಗಿ ಆಡುತ್ತಿದ್ದರು. ದಂಡಿಗಾಗಿ ಪರಸ್ಥಳಗಳಲ್ಲಿ ಬೀಡು ಬಿಡುತ್ತಿದ್ದ ಸೈನಿಕರಿಗೆ ಕೂಡ ಈ ಆಟ ಪ್ರಿಯವಾಗಿತ್ತು. ಇಂದಿಗೂ ಶ್ರವಣಬೆಳಗೊಳ, ಬಾದಾಮಿಯಲ್ಲಿ ನೆಲದಲ್ಲಿ ಕೊರೆದ ಅಳಗುಳಿಯಾಟದ ಗುಳಿಗಳನ್ನು ಕಾಣಬಹುದು. ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಆಡುತ್ತಿದ್ದ ಮಣೆ ಅದು. ಹೆಚ್ಚಾಗಿ ಹೆಣ್ಣುಮಕ್ಕಳು, ಮಳೆಯ ಕಾಲದಲ್ಲಿ ಮನೆಯಲ್ಲಿ ಉಳಿದವರಿಗೆ ಅಳಗುಳಿ ಮಣೆ, ಕವಡೆ, ಚೌಕಾಬಾರ ಪ್ರಿಯವಾದ ಆಟವಾಗಿತ್ತು. ಕ್ರಿಯಾ ಶೀಲತೆಗೆ ತಕ್ಕಂತೆ ಅಳಗುಳಿ ಮಣೆ ವಿವಿಧ ಆಕಾರಗಳಲ್ಲಿ ಕಾಣ ಬರುತ್ತಿತ್ತು.

ಈ ಆಟ ಬರೀ ಭಾರತದಲ್ಲೇ ಅಲ್ಲ ಹಿಂದೆ ಆಫ್ರಿಕೆಯಲ್ಲಿ ಮಂಕಲ ಎಂಬ ಬೇರೊಂದು ರೂಪ, ನಾಮದಲಿ ಜನಪ್ರಿಯವಾಗಿತ್ತು. ಸೋಯಿಂಗ್ ಸೀಡ್ಸ್, ಪಿಟ್ ಅಂಡ್ ಪೆಬಲ್ಸ್ ಎಂದು ಕರೆಯಲ್ಪಡುತ್ತಿದ್ದ ಈ ಆಟದ ಮೂಲಸ್ಥಾನ ಆಫ್ರಿಕಾ, ಇದಕ್ಕೆ ಶತಮಾನಗಳ ಇತಿಹಾಸವಿದೆ ಎಂದು ನ್ಯಾಷನಲ್ ಜಿಯಾಗ್ರಫಿಯ ಹೇಳಿಕೆ. ಬೋರ್ನಿಯೋ, ಮಲೇಶಿಯಾಗಳಲ್ಲಿ ಸೋಂಕ್ಗಾ, ಇಂಡೋನೇಶಿಯ, ಶ್ರೀಲಂಕಾದಲ್ಲಿ ಚೋಂಕ, ಕಾಮರೂನ್ ದ್ವೀಪದಲ್ಲಿ ಸೋಂಗೋ, ಪೂರ್ವ ಆಫ್ರಿಕೆಯಲ್ಲಿ ಬಾವೋ ಎಂದು ಆರುಕುಳಿಗಳ ಚನ್ನೆಮಣೆಯಾಟ ಪ್ರಚಲಿತದಲ್ಲಿತ್ತು. ಕೆಲದಿನಗಳ ಹಿಂದೆ ಆರ್ಕಿಯಾಲಜಿ ಇಲಾಖೆ ಇಥಿಯೋಪಿಯಾದಲ್ಲಿ ದೊರಕಿದ ಚೆನ್ನೆಮಣೆಗೆ ಕೇವಲ 1300 ವರುಷಗಳು.

ಮನೆಮಂದಿಯೊಂದಿಗೆ, ಮಕ್ಕಳೊಂದಿಗೆ ಜೊತೆಯಾಗಿ ಕುಳಿತು ಆಡಬಹುದಾದ ಈ ಆಟ ನಶಿಸೇ ಹೋಗಿತ್ತು. ಆದರೆ ಇತ್ತೀಚೆಗೆ ಚನ್ನೆಮಣೆ, ಚೌಕಾಬಾರ, ಕವಡೆ ತರಹದ ಅಟಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಹೊಣೆಯನ್ನು ತುಳುನಾಡು, ಕರಾವಳಿ, ಮಲೆನಾಡಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ತಿಳಿಯಪಡಿಸಿ, ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ ಎಂಬುದು ಕೇಳಿದ ಸಿಹಿಸುದ್ದಿ. ಎಷ್ಟೇ ದೊಡ್ಡವರಾದ್ರೂ ಎಲ್ಲರಲ್ಲೂ "ಬಾಲ್ಯ" ಅಡಗಿ ಕುಳಿತಿರುತ್ತದೆ. ಓದಿದಾಗ, ನೋಡಿದಾಗ, ಕೇಳಿದಾಗ ನಾನೂ ಆಡಿದ್ದೆ, ನನ್ನ ಬಾಲ್ಯವೂ ಹೀಗೇ ಇತ್ತು ಎಂಬ ನೆನಪಿದೆಯಲ್ಲಾ ಅದು ಅತ್ಯಂತ ಮುದ ನೀಡುತ್ತದೆ, ಹಂಚಿಕೊಂಡಾಗ ಹರುಷ ಹೆಚ್ಚುತ್ತದೆ, ಹೌದು ತಾನೆ.

ನನ್ನೀ ನೆನಪಿನ ಸವಿಯಲ್ಲಿ ನಿಮ್ಮ ಬಾಲ್ಯದ ನೆನಹೂ ಹೊರಬರಲಿ, ಓದುಗರಿಗೆ ಹೊಸವರುಷದ ಶುಭಹಾರೈಕೆಗಳು.

English summary
Rural games in Karnataka are gradually diminishing from the memory of people. Few traditional games like chenne mane, chowka bara are almost forgotten. The present generation children are not enough lucky to play such wonderful games. There is urgent need to revive those games.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X