• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಯವಿಟ್ಟು ಲೈನ್ ಹೋಲ್ಡ್ ಮಾಡಿರಿ...

By * ಎಚ್.ವೈ. ರಾಜಗೋಪಾಲ್, ಫಿಲಡೆಲ್ಫಿಯಾ
|

ಮೊನ್ನೆ ಬೆಂಗಳೂರಿಗೆ ದೂರವಾಣಿ ಕರೆ ಮಾಡುವ ಸಂದರ್ಭ ಒದಗಿತ್ತು. ಬೇಕಾಗಿದ್ದ ಸಂಖ್ಯೆಯನ್ನು ಒತ್ತಿ ಉತ್ತರಕ್ಕಾಗಿ ಕಾದೆ. ಅತ್ತ ಕಡೆಯಿಂದ ನಾನು ನಿರೀಕ್ಷಿದ್ದ ವ್ಯಕ್ತಿಗೆ ಬದಲಾಗಿ ಒಬ್ಬ ಕೋಕಿಲಕಂಠದ ವ್ಯಕ್ತಿ ಹೀಗೆಂದಳು: "ನೀವು ಕರೆ ಮಾಡಿರುವ ಚಂದಾದಾರರು busyಯಾಗಿದ್ದಾರೆ. ದಯವಿಟ್ಟು line hold ಮಾಡಿರಿ, ಅಥವ ಸ್ವಲ್ಪ ಸಮಯದ ಬಳಿಕ ಮತ್ತೆ ಕರೆ ಮಾಡಿ."

ಆ ಕೋಕಿಲ ಕಂಠ, ಅದಕ್ಕಿಂತ ಹೆಚ್ಚಾಗಿ ಆ ಸವಿಗನ್ನಡ, ಕೈಲಾಸಂ ಅನ್ನೂ ಬೆಚ್ಚಿಬೀಳಿಸುವ ಕನ್ನಡ... ಓಹ್, ಅದನ್ನು ಕೇಳಿದಾಗಿಂದ ನಾನು ಲೈನ್ ಹಿಡಿದೇ ಇದ್ದೇನೆ. ಅಥವಾ ಆ ಲೈನೇ ನನ್ನನ್ನು ಹಿಡಿದಿದೆಯೋ!

ಮೊನ್ನೆಯಿಂದ ನನ್ನ ತಲೆಯಲ್ಲಿ ಒಂದೇ ಯೋಚನೆ. ಆ ಕೋಗಿಲೆ ಹೇಳಿದ ಮಾತುಗಳನ್ನು ನಾವು ಸಾಧಾರಣವಾಗಿ ವ್ಯವಹಾರದಲ್ಲಿ ಬಳಸುವ, ಮಾತಾಡುವ ಕನ್ನಡ ಭಾಷೆಯಲ್ಲಿ ಹೇಳಲು ಸಾಧ್ಯವೆ? ಅಂತ. ಇದನ್ನು ಕನ್ನಡ ಎಂ.ಎ. ಪರೀಕ್ಷೆಗೆ ಕೂರುವವರಿಗೆ ಭಾಷಾಂತರ ಮಾಡಲು ಕೊಡಬಹುದು. ಆ ಒಟ್ಟು ಸಂದೇಶದ ಬಗ್ಗೆ ನಾನಾ ಪ್ರಶ್ನೆಗಳನ್ನೆತ್ತಬಹುದು. ಆದರೆ, ಸ್ವಲ್ಪ ಲೈನ್ ಹೋಲ್ಡ್ ಮಾಡಿರಿ,' ಎಂಬುದರ ಕುರಿತು ಮೊದಲು ಮಾತಾಡೋಣ, ಉಳಿದವಕ್ಕೆ ಆಮೇಲೆ ಹೋಗೋಣ.

"ಲೈನ್ ಹೋಲ್ಡ್ ಮಾಡಿರಿ" ಎಂಬುದನ್ನು ಪದಶಃ ಭಾಷಾಂತರ ಮಾಡಿದರೆ ಹೇಗಿರುತ್ತದೆ ನೋಡಿ. ಲೈನ್ ಎಂಬುದಕ್ಕೆ ಗೆರೆ, ಸಾಲು, ದಾರ, ವಿದ್ಯುತ್ ತಂತಿ, ದೂರವಾಣಿಯ ತಂತಿ - ಮುಂತಾದ ಅನೆಕಾನೇಕ ಅರ್ಥಗಳಿವೆ. ಹೋಲ್ಡ್ ಎನ್ನುವುದಕ್ಕೆ ಹಿಡಿ, ಹಿಡಿದುಕೋ ಇತ್ಯಾದಿ ಅರ್ಥಗಳಿವೆ. ಇವೆಲ್ಲಾ ನಿಮಗೆ ಗೊತ್ತಿರುವುದೇ. "ದಯವಿಟ್ಟು ದೂರವಾಣಿಯ ತಂತಿ ಹಿಡಿದುಕೊಳ್ಳಿ" ಎಂದರೆ ಆಗ ಕರೆ ಮಾಡಿದವನು ಫೋನನ್ನು ಕೆಳಗಿಟ್ಟು ಬಾಗಿಲು ತೆರೆದು ಹೊರಗೆ ಹೋಗಿ ಕಂಬ ಹತ್ತಿ ದೂರವಾಣಿಯ ತಂತಿ ಹಿಡಿದುಕೊಳ್ಳಲು ಹೋಗಬಹುದು. ಸುಮ್ಮನೆ ತಂತಿ ಹಿಡಿದುಕೊಳ್ಳಿ ಅಂದರೆ "ಅಯ್ಯೊ ಬೇಡಪ್ಪ, ಷಾಕ್ ಹೊಡೆಯುತ್ತೆ" ಅನ್ನಬಹುದು!

ಲೈನ್ ಹೋಲ್ಡ್ ಮಾಡಿರಿ ಎಂಬುದು ಇಂಗ್ಲಿಷಿನ Hold the line ಎಂಬ ನುಡಿಕಟ್ಟಿನ ಅನುಕರಣ. ಅದು ನಮ್ಮ ಭಾಷೆಯ ನುಡಿಕಟ್ಟಲ್ಲ. ಆದ್ದರಿಂದ ನಮ್ಮ ಮಾತಿಗೆ ಹೊಂದುವಂತೆ ಹೇಳಬೇಕಾದರೆ ಸ್ವಲ್ಪ ತಾಳಿ ಎಂದೋ, ಕಾದಿರಿ ಎಂದೋ ಹೇಳಬೇಕಾಗುತ್ತದೆ. ಆದರೆ ಅದು ಸ್ವಲ್ಪ ನಿರ್ಲಕ್ಷ್ಯ ತೋರಿಸಿದಂತೆನಿಸಬಹುದು ಕೆಲವರಿಗೆ. ಇನ್ನು ಕೆಲವರಿಗೆ ಇದು ತೀರ ಹಳೆಯ ಕಾಲದ ಮಾತು, ತೀರ ಲೋ-ಟೆಕ್' ಅನ್ನಿಸಬಹುದು. ರೈಲು ಬಸ್ಸು - ಮುಂತಾದ ಪದಗಳನ್ನೆಲ್ಲ ಕನ್ನಡ ಕಬಳಿಸಿಲ್ಲವೆ? ಅವಕ್ಕೆ ಸಮಾನ ಪದಗಳನ್ನು ಸೃಷ್ಟಿಸುವ ಗೋಜಿಗೆ ಯಾರೂ ಹೋಗಲಿಲ್ಲ. ಹಾಗೇ ಲೈನ್ ಎಂಬ ಪದವನ್ನೂ ತೆಗೆದುಕೊಂಡರಾಯಿತು. ಯಾವ ಮಾತನ್ನಾದರೂ ಉಕಾರ ಸೇರಿಸಿ ಕನ್ನಡ ಮಾಡುವ ಶಕ್ತಿ ನಮ್ಮ ಭಾಷೆಗಿದೆ. line=ಲೈನು. ಆದ್ದರಿಂದ "ದಯವಿಟ್ಟು ಲೈನು ಹಿಡಿದುಕೊಳ್ಳಿ" ಅಂತಲೇ ಹೇಳಬಹುದು. ನನಗೇನೋ ದಯವಿಟ್ಟು ಸ್ವಲ್ಪ ಕಾದಿರಿ... ಎಂಬುದು ನಮ್ಮ ಸಂಸ್ಕೃತಿಗೆ, ಭಾಷೆಗೆ ಹೆಚ್ಚು ಸಮರ್ಪಕ ಎನ್ನಿಸುತ್ತದೆ.

ಮೇಲೆ ಹೇಳಿದ ಒಟ್ಟು ಸಂದೇಶದ ಬಗ್ಗೆ ನಾನಾ ಪ್ರಶ್ನೆಗಳನ್ನೆತ್ತಬಹುದು ಎಂದೆ ಅಲ್ಲವೆ? ಅವುಗಳಲ್ಲಿ ಕೆಲವನ್ನಾದರೂ ನಿಮಗೆ ಹೇಳಬೇಕು, ಮತ್ತೆ ಸ್ವಲ್ಪ ಲೈನ್ ಹೋಲ್ಡ್ ಮಾಡುತ್ತೀರಾ?

ಆ ಟೆಲಿಫೋನ್ ಕೋಗಿಲೆ ನಾನು ಕರೆ ಮಾಡಿದ ಚಂದಾದಾರರು busyಯಾಗಿದ್ದಾರೆ ಎಂದಳಲ್ಲವೆ? ಅಲ್ಲೇ ನನಗೆ ಅನೇಕ ಸಂದೇಹಗಳು ತಲೆತಿನ್ನುತ್ತವೆ. ಮೊದಲಾಗಿ ನಾನು ಚಂದಾದಾರರನ್ನೇ ಕರೆ ಮಾಡಿದೆನೆ? ಅಥವ ನಾನು ಕರೆ ಮಾಡಿದವರೇ ಚಂದಾದಾರರೇ? ನಿಜವಾಗಿ ಎಷ್ಟೋ ಸಲ ನಮಗೆ ದೂರವಾಣಿ ಸಂಖ್ಯೆ ತಿಳಿದಿರುತ್ತದೆಯೇ ಹೊರತು ಅದಕ್ಕೆ ಯಾರು ನಿಜವಾದ ವಾರಸುದಾರರು ಅಥವಾ ಚಂದಾದಾರರು ಎಂಬುದು ಗೊತ್ತಿರುವುದಿಲ್ಲ. ಅದು ನಮಗೆ ಬೇಕಾಗಿಯೂ ಇರುವುದಿಲ್ಲ. ಕೆಲವು ವೇಳೆ ನಿಜವಾದ ಚಂದಾದಾರರು ಈ ಭೂಲೋಕದಲ್ಲೇ ಇರುವುದಿಲ್ಲ. ಆದ್ದರಿಂದ ಅಂಥ ಚಂದಾದಾರರನ್ನು ನಮ್ಮಂಥ ಯಃಕಶ್ಚಿತ್ ಮನುಷ್ಯರು - ಅಂದರೆ Art of Living ಆಗಲೀ Art of the Dead ಆಗಲೀ ಕೈವಶ ಮಾಡಿಕೊಂಡಿಲ್ಲದವರಿಗೆ - ಕರೆ ಮಾಡುವುದು ಸಾಧ್ಯವಿಲ್ಲ.

ಇಲ್ಲಿ ಇನ್ನೊಂದು ಪ್ರಶ್ನೆಯನ್ನೂ ಎತ್ತಬಹುದು ಎಂದು ನನ್ನ ಮನಸ್ಸು ಹೇಳುತ್ತದೆ: ನೀನು ಕರೆ ಮಾಡಿದಾಗ ಚಂದಾದಾರ ಮನೆಯಲ್ಲೇ ಇದ್ದ, ಆದರೆ ಅವನ ಮನೆಗೆ ಅವನ ಷಡ್ಡಕ ಬಂದು ವಾರದಿಂದ ತಳ ಊರಿದ್ದಾನೆ. ಮೂರು ಹೊತ್ತೂ ಅವರಿಗೆ ಇವರಿಗೆ ಫೋನ್ ಮಾಡುತ್ತಿರುತ್ತಾನೆ.' ಇದನ್ನು ನಾನು ಆ ಕೋಗಿಲೆಗೆ ತಿಳಿಸಬೇಕು ಅನ್ನಿಸುತ್ತೆ. ಚಂದಾದಾರ ಏನೂ busyಯಾಗಿರಲಿಲ್ಲ, busyಯಾಗಿದ್ದುದು ಬೇರೊಬ್ಬ ಅಂತ.

ಇನ್ನೂ ಒಂದು ಸಂದೇಹ. "ನೀವು 'ಕರೆ' ಮಾಡಿರುವ ಚಂದಾದಾರ" ಅಂದಳಲ್ಲವೆ ಆ ಕೋಗಿಲೆ? ಅಂದರೆ ನಾನು ಯಾವತ್ತಾದರೂ ಆ ಚಂದಾದಾರನ ಬಿಳೀ ಜುಬ್ಬಾದ ಮೇಲೆ ಕೆಂಪು ಶಾಯಿ ಸುರಿದು ಕರೆ ಮಾಡಿದ್ದೆನೆ, ಟೀ ಕಷಾಯ ಸುರಿದು ಕರೆ ಮಾಡಿದ್ದೆನೆ, ಅಥವಾ ಅವರ ಮುಖಕ್ಕೆ ಮಸಿ ಬಳಿದಿದ್ದೆನೆ? ಒಂದೂ ಇಲ್ಲ. ಆದ್ದರಿಂದ ನೀವು ಕರೆ ಮಾಡಿರುವ ಚಂದಾದಾರರು ಅನ್ನುವ ಬದಲು ಕರೆಮಾಡಿರುವ ಸಂಖ್ಯೆ ಎಂದರೆ ಇಷ್ಟೊಂದು ಪ್ರಶ್ನೆಗಳು ಏಳುವುದಿಲ್ಲ (ಯಾಕೆಂದರೆ ಸಂಖ್ಯೆಗಳು ಬಿಳಿ ಜುಬ್ಬ ತೊಡುವುದಿಲ್ಲ). ಆದರೆ ಆಗ ವ್ಯಾಕರಣವನ್ನು ಸ್ವಲ್ಪ ತಿದ್ದಬೇಕಾಗುತ್ತದೆ - ನೀವು ಕರೆ ಮಾಡಿರುವ ಸಂಖ್ಯೆ busyಯಾಗಿದೆ - ಎಂದು.

"ನೀವು ಕರೆ ಮಾಡಿರುವ" ಎಂಬುದಕ್ಕಿಂತ "ನೀವು ಕರೆದಿರುವ ಸಂಖ್ಯೆ" ಎಂದೇಕೆ ಅನ್ನಬಾರದು? ಒಂದು ಸಲ ಬೆಂಗಳೂರಿನವರೊಬ್ಬರ ಹತ್ತಿರ "ಇಂಥವರನ್ನು ಕರೆದಿದ್ದೆ" ಎಂದೆ. ಆಗ ಅವರು "ತುಪ್ಪದಲ್ಲಿ ಕರೆದಿದ್ರೋ, ಎಣ್ಣೇಲಿ ಕರೆದಿದ್ರೋ, ಹೆಹ್ಹೆಹ್ಹೆ!" ಎಂದರು. ನಾನು "ಇಲ್ಲ, ಫೋನಿನಲ್ಲಿ, ಹೆಹ್ಹೆಹ್ಹೆ!" ಎಂದಿದ್ದೆ. ಅಮೆರಿಕದ ಕನ್ನಡಿಗರು ಬಹು ಮಂದಿಗೆ ಈ ಮಾತಿನಲ್ಲಿ ಏನೂ ತೊಂದರೆ ಕಾಣುವುದಿಲ್ಲ. "ಮೊನ್ನೆ ಅವರನ್ನು ಕರೆದಿದ್ದೆ" ಎಂದರೆ ಸಾಧಾರಣವಾಗಿ ಎಲ್ಲರೂ ಫೋನಿನಲ್ಲಿ ಎಂದೇ ಅರ್ಥಮಾಡಿಕೊಳ್ಳುತ್ತಾರೆ. ಅದು ನಮ್ಮ ಇಲ್ಲಿನ ಪ್ರಾಂತಭಾಷೆ (dialect) ಎನ್ನಬಹುದೇನೋ. ಆದರೆ ಬೆಂಗಳೂರವರಿಗೆ ಸ್ವಲ್ಪ ಈ ಕರಿದ ತಿಂಡಿಯ ಚಟ ಕಡಿಮೆಯಾದರೆ ಆರೋಗ್ಯಕ್ಕೆ ಒಳ್ಳೆಯದು!

ಸರಿ, ಅವೆಲ್ಲ ಆಯಿತು, ಈಗ ಇನ್ನೊಂದು ಚಿಕ್ಕ ಪದವಿದೆ, ಇಂಗ್ಲಿಷಿನ busy.' ಇದಕ್ಕೆ ತಕ್ಕ ಕನ್ನಡ ಪದ ಏನು ಎಂದು ತಲೆಕೆಡಿಸಿಕೊಳ್ಳುತ್ತಿದ್ದೇನೆ. ನೇರವಾಗಿ, ಯಥಾರ್ಥವಾಗಿ ಸರಿಸುಮಾರು ಅಷ್ಟೇ ಚಿಕ್ಕದಾದ, ಸುಲಭವಾದ ಸಮಾನ ಪದ ನನ್ನ ಕಣ್ಣಿಗೆ ಕಾಣುತ್ತಿಲ್ಲ. ಇದಕ್ಕೆ ಏನು ಕಾರಣವೋ? ಸಾಧಾರಣವಾಗಿ ಒಂದು ಪ್ರದೇಶದಲ್ಲಿ ಅಥವಾ ಅಲ್ಲಿನ ಜನರಲ್ಲಿ ಒಂದು ವಸ್ತುವೋ, ವಿಶೇಷವೋ ಏನಾದರೂ ಇದ್ದರೆ ಅದಕ್ಕೆ ತಕ್ಕ ಪದ ಅವರಲ್ಲಿರುತ್ತದೆಂದು ನಾನು ಕೇಳಿರುವ ಮಾತು. ಉದಾಹರಣೆಗೆ, ಎಸ್ಕಿಮೋ ಜನರಲ್ಲಿ ಹಿಮದ/ಮಂಜಿನ ನಾನಾ ರೂಪಗಳನ್ನು ಗುರ್ತಿಸುವ ನೂರಾರು ಪದಗಳಿವೆಯಂತೆ. ಅದರ ಪ್ರಕಾರ ನೋಡಿದರೆ ನಮ್ಮಲ್ಲಿ ಯಾರೂ busyಯಾಗಿರುತ್ತಿರಲಿಲ್ಲವೆ? ನಿಜವೇನೋ! ನಮ್ಮಲ್ಲಿ ಇಂಥವನು ನಿಧಾನಸ್ತ' ಎಂದರೆ ಅದು ಅವನಿಗೆ ನಾವು ಸಲ್ಲುವ ದೊಡ್ಡ ಮರ್ಯಾದೆ. ಅಲ್ಲದೆ ನಮ್ಮ ಜನರ ದಾಕ್ಷಿಣ್ಯ ಪ್ರವೃತ್ತಿ ನೋಡಿದರೆ ಕೂಡ ಹಾಗೆನ್ನಿಸುತ್ತದೆ. ನಮ್ಮಲ್ಲಿ ಸಾಧಾರಣವಾಗಿ ಯಾರೂ (ಅಧಿಕಾರಿಗಳ ಹೊರತು - ಅವರು ಬಿಡಿ, ಯಾವಾಗಲೂ ಸುಳ್ಳು ಹೇಳುತ್ತಾರೆ, ವಿಶ್ವೇಶ್ವರಯ್ಯನಂಥವರನ್ನು ಬಿಟ್ಟು) ನಾನೀಗ ತುಂಬ ಕೆಲಸದಲ್ಲಿದ್ದೇನೆ, ಆಮೇಲೆ ಮಾತಾಡೋಣ ಎಂದು ಹೇಳಿ ಬಂದವರನ್ನು ಅಥವ ಕರೆದವರನ್ನು ಕಳಿಸುವುದಿಲ್ಲ. Busyಯಾಗಿದ್ದೀರೇನೋ ಅಂತ ಅವರೇ ಹೇಳಿದರೂ (ಅವರದ್ದೂ ದೇಶಾವರಿಯೇ) ನಾವು ದಾಕ್ಷಿಣ್ಯಕ್ಕೆ "ಅಯ್ಯೊ, ಇಲ್ಲ, ಇಲ್ಲ. ಹೇಳಿ" ಎಂದು ಸಂಕಟದಲ್ಲಿ ಸಿಕ್ಕಿಕೊಳ್ಳುತ್ತೇವೆ. ಅದಕ್ಕೇ ಬಹುಶಃ ನಮ್ಮಲ್ಲಿ busy ಎಂಬುದಕ್ಕೆ ತಕ್ಕ ಪದ ಇಲ್ಲ. ನೀವೆನ್ನಬಹುದು, ನಮ್ಮ ಕನ್ನಡದಲ್ಲಿ thanks ಎಂಬುದಕ್ಕೂ ಸುಲಭವಾದ ತಕ್ಕ ಪದ ಇಲ್ಲ. ಹಾಗಾದರೆ ನಮಗೆ ಕೃತಜ್ಞತೆಯೇ ಇಲ್ಲವೆ? ಛೆ, ಎಂಥ ಮಾತು! ನಮ್ಮಲ್ಲಿ ಎಷ್ಟು ಬಗೆಯ ಋಣ'ಗಳಿಲ್ಲ! ಅವುಗಳಿಂದ ಪಾರಾಗುವುದು ಸಾಧ್ಯವೆ? Thanks ಎಂದು ನಾವು ನೇರವಾಗಿ ಹೇಳುವುದಿಲ್ಲ. "ತುಂಬಾ ಉಪಕಾರವಾಯಿತು" ಎನ್ನುತ್ತೇವೆ ತುಂಬಾ ಗೌರವ ತೋರಿಸಬೇಕಾದ ಸಂದರ್ಭಗಳಲ್ಲಿ. ಆದರೆ, ಸಾಧಾರಣ ಸಂದರ್ಭಗಳಲ್ಲಿ? ಗೆಳೆಯರ ಹತ್ತಿರ ಮಾತಾಡುವಾಗ?

ನಿಘಂಟು ತೆಗೆದು ನೋಡಿದರೆ ಈ busy ಪದಕ್ಕೆ ಕಾರ್ಯಮಗ್ನ, ಕಾರ್ಯೋದ್ಯುಕ್ತ - ಇತ್ಯಾದಿ ಭಾರಿ ಭಾರಿ ಪದಗಳನ್ನು ಕಾಣುತ್ತೇವೆ. "ನೀವು ಕರೆ ಮಾಡಿರುವ ಚಂದಾದಾರರು ಕಾರ್ಯಮಗ್ನರಾಗಿದ್ದಾರೆ" - ಎನ್ನಬಹುದು ಆ ಕೋಕಿಲವಾಣಿ. ಆಗ ನನ್ನ ಸಂದೇಹ ಮತ್ತಷ್ಟು ಹೆಚ್ಚುತ್ತದೆ. ನಾನು ಕರೆಮಾಡಿದ ಚಂದಾದಾರ ಅಥವಾ ಅವನ ಷಡ್ಡಕ ನಿಜವಾಗಿಯೂ busyಯಾಗಿದ್ದಾನೆಯೇ? ಅಥವಾ ಇನ್ನೇನೂ ಮಾಡಲು ಕೆಲಸವಿಲ್ಲದೆ ಸುಮ್ಮನೆ ಹರಟೆ ಕೊಚ್ಚುತ್ತಿದ್ದಾನೆಯೇ? ಹಾಗಾದರೆ ಅವನು ಕಾರ್ಯಮಗ್ನ' ಏನು ಬಂತು? ಒಂದೊಂದು ಸಲ ನಾವು ಬಳಸುವ ದೂರವಾಣಿ ಉಪಕರಣಗಳು, ಅವುಗಳನ್ನು ನಿಯಂತ್ರಿಸುವ ಯಂತ್ರಗಳು, ಸಂದೇಶವಾಹಕ ವ್ಯವಸ್ಥೆ - ಇವುಗಳಲ್ಲಿ ಎಲ್ಲಿ ಏನು ತೊಂದರೆ ಇದ್ದರೂ ಆ busy signal ಬರಬಹುದು. ನಿಜ ಸಂಗತಿ ಹೇಳದೆ ಆ ಕೋಗಿಲೆ ಚಂದಾದಾರರು busyಯಾಗಿದ್ದಾರೆ ಎಂದಷ್ಟೇ ಹೇಳಬಹುದು.

ಈ busy ಪದ ನನಗೆ ಇನ್ನೂ ಅಷ್ಟು ತಲೆನೋವು ಕೊಡುತ್ತದೆ. ಅದನ್ನೂ ಕನ್ನಡಕ್ಕೆ ಹಾಗೇ ತೆಗೆದುಕೊಳ್ಳೋಣ ಅಂದರೆ ಅದನ್ನು ಬರೆಯುವುದೇ ಒಂದು ತೊಡಕು. ಅದರಲ್ಲಿರುವ z' ಶಬ್ದಕ್ಕೆ ನಮ್ಮ ಕನ್ನಡದಲ್ಲಿ ತಾವಿಲ್ಲ. ಬಿಸಿ ಅನ್ನಬೇಕು ಅಥವಾ ಬಿಜಿ ಅನ್ನಬೇಕು. "ನಾನು ತುಂಬಾ ಬಿಸಿಯಾಗಿದ್ದೇನೆ" ಅಂದರೆ "ಯಾಕಪ್ಪ, ಜ್ವರ ಬಂದಿದೆಯೇ?" ಅನ್ನಬಹುದು ಕೇಳಿದವರು. "ನಾನು ತುಂಬಾ ಬಿಜಿ" ಅಂದರೆ ಯಾರೋ ಆಂಧ್ರದವರು ಮಾತಾಡಿದಂತಿರುತ್ತದೆ ("ಐ ಯಾಮ್ ವೆರಿ ಬಿಜಿ ಅಂಡಿ"). ಈಚೆಗೆ ಕೆಲವರು ಬ್ಯುಸಿ ಅಥವಾ ಬ್ಯೂಸಿ ಎಂದು ಬರೆಯಲು ಮೊದಲಿಟ್ಟಿದ್ದಾರೆ. ಇದಂತೂ ತೀರ ಅಶಿಕ್ಷಿತವಾಗಿ ಕೇಳುತ್ತದೆ. ಅದೇನೂ ಈ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಒಂದರ ಬದಲು ಎರಡು ತಪ್ಪು ಮಾಡಿ ಇನ್ನಷ್ಟು ಗೊಂದಲ ಎಬ್ಬಿಸುತ್ತದೆ ಅಷ್ಟೆ. ಆದ್ದರಿಂದ ಅದರ ಬಗ್ಗೆ ನನಗೆ ಒಲವಿಲ್ಲ. ನಮ್ಮ ಹಳೆಯ ಮೈಸೂರು ವಿಶ್ವವಿದ್ಯಾನಿಲಯದ ನಿಘಂಟು 'z' ಶಬ್ದ ಸೂಚಿಸಲು ಸಿ' ಕೆಳಗೆ ಎರಡು ಚುಕ್ಕೆಗಳನ್ನು ಕೊಡುತ್ತದೆ. ಇದು ಸಮರ್ಪಕ ಎನ್ನಿಸುತ್ತದೆ ನನಗೆ. ಆದರೆ ಆ ಸೌಲಭ್ಯ ಎಲ್ಲ ಕೀಲಿಮಣೆಗಳಲ್ಲೂ ಇಲ್ಲ. ನಮ್ಮ ಕನ್ನಡ ಗಣಕತಂತ್ರಜ್ಞರು ಅದಕ್ಕೆ ಸರಿಯಾದ ವ್ಯವಸ್ಥೆ ಮಾಡಬೆಕು. 'z' ಶಬ್ದ ಬರುವ ಇನ್ನೂ ಅನೇಕ ಪದಗಳನ್ನು ಬರೆಯಲು ಇದು ಉಪಯುಕ್ತವಾಗಿರುತ್ತದೆ.

ಇಷ್ಟೆಲ್ಲ ಹೇಳಿದಮೇಲೆ ಈಗ ಆ ಕೋಕಿಲವಾಣಿಯ ಸಂದೇಶವನ್ನು ಹೀಗೆ ಬದಲಿಸಬಹುದೇ ಎನ್ನಿಸುತ್ತದೆ: "ನೀವು ಕರೆದಿರುವವರು (ಅಥವಾ ನೀವು ಕರೆದಿರುವ ಸಂಖ್ಯೆ) ಸದ್ಯದಲ್ಲಿ ಸಿಕ್ಕುವಂತಿಲ್ಲ. ದಯವಿಟ್ಟು ಸ್ವಲ್ಪ ಹೊತ್ತು ಕಾದಿರಿ ಅಥವಾ ಸ್ವಲ್ಪ ಹೊತ್ತಿನ ಮೇಲೆ ಮತ್ತೊಮ್ಮೆ ಪ್ರಯತ್ನಿಸಿ."

ಇಲ್ಲಿ ಮಾತು ಸುಲಭವಾಗಿದೆ, ಕನ್ನಡಕ್ಕೆ ಹೊಂದಿಕೊಳ್ಳುತ್ತದೆ, ಮಹಾಪ್ರಾಣಗಳ ಹಾವಳಿಯಿಲ್ಲ, ಇಂಗ್ಲಿಷ್ ಬೆರಕೆಯಿಲ್ಲ. ಆದರೆ ಇದು ಕೇವಲ ಒಂದು ಮಾದರಿಯಷ್ಟೆ. ಇದಕ್ಕಿಂತ ಉತ್ತಮವಾದ ರೀತಿಯಲ್ಲಿ ಹೇಳುವ ನಾನಾ ಸಾಧ್ಯತೆಗಳಿವೆ ಎಂದು ಒಪ್ಪಿಕೊಳ್ಳುತ್ತೇನೆ. ಇಂಥ ವಿಚಾರಗಳಲ್ಲಿ ಸಂಬಂಧಪಟ್ಟ ಇಲಾಖೆಗಳು, ವ್ಯಾಪಾರ ಸಂಸ್ಥೆಗಳು ನಮ್ಮ ಸಾಹಿತಿಗಳು, ಭಾಷಾತಜ್ಞರು, ಸಂವಹನ ತಜ್ಞರು, ಗಣಕತಂತ್ರದ ಮುಂಚೂಣಿಯಲ್ಲಿರುವವರು - ಇಂಥವರ ಸಲಹೆ, ನೆರವು ಏಕೆ ಪಡೆಯಬಾರದು? ಇಂಥ ಸಣ್ಣ ಸಮಸ್ಯೆಗಳನ್ನು ಬಗೆಹರಿಸುವುದು ನಮಗೆ ಸಾಧ್ಯವಿಲ್ಲವೆ? ನಮ್ಮ ಗಣಕತಂತ್ರಜ್ಞರು ಎಷ್ಟೋ ಹೊಸ ಪದಗಳನ್ನು ಬಳಕೆಗೆ ತಂದಿದ್ದಾರೆ. ಹಾಗೆ ಮಾಡದೆ ಒಂದು ಅತ್ಯಂತ ಸೊಗಸಾದ, ಉಜ್ವಲವಾದ ಕನ್ನಡದಂಥ ಭಾಷೆಯನ್ನು ಅವಮಾನಗೊಳಿಸುವುದೆ?

ಹಿತವಾದ, ಒಳ್ಳೆಯ ಕನ್ನಡ ಬೇಕಾದರೆ ನಾವು ಮಾಸ್ತಿಯಂಥವರು ಬರೆದ ಉತ್ತಮ ಕತೆ ಕಾದಂಬರಿಗಳಿಗೇ ಹೋಗುವಂತಿರಬಾರದು. ಅದು ನಮಗೆ ಕರ್ನಾಟಕದಲ್ಲಿ ಎಲ್ಲೆಲ್ಲಿಯೂ ಸಿಗಬೇಕು - ನಮ್ಮ ಶಾಲಾಕಾಲೇಜುಗಳಲ್ಲಿ, ವಾರ್ತಾಪತ್ರಿಕೆಗಳಲ್ಲಿ, ಪ್ರಸಾರ ಮಾಧ್ಯಮಗಳಲ್ಲಿ, ಸಿನಿಮಾ ನಾಟಕ ಮಂದಿರಗಳಲ್ಲಿ, ಜಾಹೀರಾತುಗಳಲ್ಲಿ, ದೂರವಾಣಿಯಲ್ಲಿ, ಎಲ್ಲ ವ್ಯಾಪಾರ ವಾಣಿಜ್ಯ ವ್ಯವಹಾರಸಂಸ್ಥೆಗಳಲ್ಲಿ, ವಿಮಾನ, ಸಾರಿಗೆ ಸಂಸ್ಥೆಗಳಲ್ಲಿ - ಎಲ್ಲೆಡೆಯೂ ನಮಗೆ ಒಪ್ಪವಾದ ಕನ್ನಡ ದೊರೆಯುವಂತಿರಬೇಕು. ಒಳ್ಳೆಯ ಕನ್ನಡ ನನ್ನ ಕಿವಿಗೆ ಬೀಳಲಿ, ನನ್ನ ಕಣ್ಣಿಗೆ ಕಾಣಲಿ ಎಂದು ಅಪೇಕ್ಷಿಸುವುದು ಕನ್ನಡಿಗನಾದ ನನ್ನ ಹುಟ್ಟುಹಕ್ಕು. ನನ್ನ ಒಡಹುಟ್ಟಿದ ಎಲ್ಲ ಕನ್ನಡಿಗರ ಜನ್ಮಸಿದ್ಧವಾದ ಹಕ್ಕು. ಆ ಹಕ್ಕನ್ನು ನಾವು ಚಲಾಯಿಸಬೇಕು, ಎಂದೆಂದಿಗೂ ಅದನ್ನು ಕಾಪಾಡಬೇಕು.

ಇಷ್ಟೆಲ್ಲ ಹೇಳಿದೆ, ನೀವೇನನ್ನುತ್ತೀರಿ, ಅದುವರೆಗೆ ನಾನು ಲೈನ್ ಹೋಲ್ಡ್ ಮಾಡುತ್ತೇನೆ.'

English summary
Is it not possible to literally translate some of the mobile usage language to kannada? How do you translate - the line is busy, please hold the line? Hole line until you get an answer. An article by HY Rajagopal, America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more