ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.23ರಂದು ದುಬೈ ಕನ್ನಡ ಸಾಹಿತ್ಯ ಸಮ್ಮೇಳನ

By Prasad
|
Google Oneindia Kannada News

BR Shetty to inaugurate Kannada Sahitya Sammelana, Dubai
ಯುಎಇ ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿರುವ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ಶುಕ್ರವಾರ, ಏಪ್ರಿಲ್ 23ರಂದು ದುಬೈನಲ್ಲಿ ಜರುಗಲಿದೆ.

ದುಬೈನಲ್ಲಿರುವ ಜೆಮ್ ಪ್ರೈವೇಟ್ ಶಾಲೆಯ ಆದಿಕವಿ ಪಂಪ ಸಭಾಂಗಣದಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷತೆಯನ್ನು ಕನ್ನಡದ ಹಿರಿಯ ಕವಿ ಚನ್ನವೀರ ಕಣವಿಯವರು ವಹಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಯುಎಇ ಕನ್ನಡಿಗ ಬಿಆರ್ ಶೆಟ್ಟಿ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ 8.30ರಿಂದ ಸಂಜೆ 7ರವರೆಗೆ ನಡೆಯುತ್ತಿರುವ ಸಂಭ್ರಮಾಚರಣೆಯಲ್ಲಿ ಸರಕಾರಿ ಅಧಿಕಾರಿಗಳು, ಕರ್ನಾಟಕದ ಕಲಾವಿದರು, ಸಾಹಿತಿಗಳು ಭಾಗವಹಿಸುತ್ತಿದ್ದಾರೆ. ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ವಿವಿಧ ಕನ್ನಡ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕದಿಂದ ಆಗಮಿಸಿರುವ ಕಲಾವಿದರಿಂದ ಸಂಗೀತ ರಸದೌತಣವನ್ನೂ ಬಡಿಸಲಾಗುತ್ತಿದೆ.

ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, ಸರಕಾರದ ಅನಿವಾಸಿ ಭಾರತೀಯರ ಸಮಿತಿಯ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದುಬೈನ ಉದ್ಯಮಿ ಜಫರುಲ್ಲಾ ಖಾನ್ ಭಾಗವಹಿಸುತ್ತಿದ್ದಾರೆ.

ವಿಶೇಷ ಆಮಂತ್ರಿತರಾಗಿ ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್, ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ, ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ, ಸಾಹಿತಿ ಮತ್ತು ಸಂಘಟಕ ಜರಗನಹಳ್ಳಿ ಶಿವಶಂಕರ್, ರಂಗಕರ್ಮಿ ವೆಂಕಟರಾಜು ಮತ್ತು ಗಾಯಕ ಶಶಿಧರ ಕೋಟೆ ಭಾಗವಹಿಸುತ್ತಿದ್ದಾರೆ. ಶಶಿಧರ ಕೋಟೆ ಮತ್ತು ತಂಡದವರು ದುಬೈ ಕನ್ನಡಿಗರನ್ನು ಸಂಗೀತದಿಂದ ರಂಜಿಸಲಿದ್ದಾರೆ.

ಸಮ್ಮೇಳನಕ್ಕೆ ಪ್ರವೇಶ ಉಚಿತವಾಗಿದ್ದು ಕನ್ನಡ ಬಂಧುಮಿತ್ರರು ಸಂಸಾರಸಮೇತರಾಗಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕೆಂದು ಧ್ವನಿ ಪ್ರತಿಷ್ಠಾನದ ಪರವಾಗಿ ಪ್ರಕಾಶ್ ರಾವ್ ಪಯ್ಯಾರ್ ಕೋರಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X