ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಸ್ ಏಂಜಲೀಸಲ್ಲಿ 'ಚಿತ್ರಪಟ' ನಾಟಕ ಪ್ರದರ್ಶನ

By * ಆಹಿತಾನಲ, ದ. ಕ್ಯಾಲಿಫೋರ್ನಿಯ
|
Google Oneindia Kannada News

Chitrapata Kannada play
ನವೆಂಬರ್ 20, ಶನಿವಾರ, ಲಾಸ್ ಏಂಜಲಿಸ್ ಬಳಿಯ, ಬಾಲ್ಡ್‌ವಿನ್ ಪಾರ್ಕ್‍ನ, Baldwin Park Performing Arts Centerನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ, ದಕ್ಷಿಣ ಕ್ಯಾಲಿಫೋರ್ನಿಯದ ಕರ್ನಾಟಕ ಸಾಂಸ್ಕೃತಿಕ ಸಂಘ(KCA-SC)ದ ಆಶ್ರಯದಲ್ಲಿ, 'ಅಸೀಮ" ತಂಡದವರು, ಹೆಸರಾಂತ ಸಾಹಿತಿ, ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು ರಚಿಸಿದ 'ಚಿತ್ರಪಟ" ಎಂಬ ಗೀತ ನಾಟಕವನ್ನು ಅಮೋಘವಾಗಿ ಪ್ರದರ್ಶಿಸಿದರು. ಇದು, ಇತ್ತೀಚೆಗೆ ಡಾ. ಚಂದ್ರ ಐತಾಳರ ಮುಂದಾಳತ್ವದಲ್ಲಿ ಸ್ಥಾಪಿತವಾದ 'ಅಸೀಮ" ತಂಡದವರ ಚೊಚ್ಚಲ ಕೊಡುಗೆಯಾಗಿತ್ತು. ಚಂದ್ರ ಐತಾಳರೇ ನಾಟಕದ ಸಮರ್ಥ ನಿರ್ದೇಶಕರೂ ಹಾಗೂ ಸಂಗೀತದ ರಾಗಸಂಯೋಜಕರೂ ಆಗಿದ್ದರು. ಆ ಥಿಯೇಟರಿನಲ್ಲಿ ಸೇರಿದ ಜನಸ್ತೋಮ ಮುಕ್ತ ಕಂಠದಿಂದ ಐತಾಳರ ಶ್ರಮವನ್ನು ಮೆಚ್ಚಿ, ಹೊಗಳಿದರು.

ಚಿತ್ರಪಟದ ಕಥಾವಸ್ತು ಪುರಾಣದ ರಾಮಾಯಣವಾದರೂ, ಪುರಾಣದ ವ್ಯಕ್ತಿಗಳ ದೇವಾಂಶಸಂಭೂತ ಭಾವನೆಗಳು ಸಮಕಾಲೀನ ಸಂವೇದನೆಗಳನ್ನು ಸ್ಪಂದಿಸುವಂತೆ ಜಾನಪದ ಹಿನ್ನೆಲೆಯನ್ನು ಬಳಸಿದ ಈ ನಾಟಕ, ಒಂದು ವಿಶಿಷ್ಟತೆಯನ್ನು ಪಡೆದಿದೆ. ಹೆಳವನ ಕಟ್ಟೆಗಿರಿಯಮ್ಮನ ಕಾವ್ಯವೇ ಈ ನಾಟಕದ ಮೂಲ ಆಧಾರ. ನಾಟಕದಲ್ಲಿ ಬಳಸಿದ ಭಾಷೆ ದಾವಣಗೆರೆ ಪ್ರದೇಶದಲ್ಲಿನ ಆಡುಮಾತುಗಳು. ಭೂತೆಯರು ಎಂದು ಕರೆಯಿಸಿಕೊಳ್ಳುವ ಒಂದು ಮೇಳದವರಿಂದ ಈ ನಾಟಕವನ್ನು ಪ್ರಸ್ತುತಪಡಿಸುವ ತಂತ್ರ ಅನನ್ಯವಾದುದು. ಈ ಭೂತೆಯರು ಎಲ್ಲಮ್ಮ ದೇವಿಯ ಭಕ್ತರಾಗಿದ್ದು, ಚಿತ್ರಪಟಗಳನ್ನು ತೋರಿಸುತ್ತ, ಪುರಾಣದ ಕಥೆಗಳನ್ನು ಜಾನಪದ ಶೈಲಿಯ ನೃತ್ಯ-ಹಾಡುಗಳ ಮೂಲಕ ಪ್ರದರ್ಶಿಸುವ ವಿಶಿಷ್ಟ ಜಾನಪದ ಕಲಾರಾಧಕರು. ಈ ತಂತ್ರದ ಬಳಕೆಗೆ, ಹೆಸರಾಂತ ರಂಗಕರ್ಮಿ, ಬಿ. ಜಯಶ್ರೀಯವರ ಸಲಹೆಗಳೇ ಕಾರಣವೆಂದು ಎಚ್ಚೆಸ್ವಿಯವರು ಹೇಳಿಕೊಂಡಿದ್ದಾರೆ. ಜಯಶ್ರೀಯವರು, ಈ ಹಿಂದೆ ಕರ್ನಾಟಕದಲ್ಲಿ ಈ ನಾಟಕವನ್ನು ಯಶಸ್ವಿಯಾಗಿ ರಂಗಭೂಮಿಯಲ್ಲಿ ಪ್ರದರ್ಶಿಸಿದ್ದರು. ಆದರೆ, ಇಲ್ಲಿ, ಲಾಸ್ ಏಂಜಲಿಸ್‍ನಲ್ಲಿ ಐತಾಳರು, ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಈ ನಾಟಕವನ್ನು ರಂಗಭೂಮಿಯ ಮೇಲೆ ಪ್ರದರ್ಶನಕ್ಕೆ ತಂದಿದ್ದಾರೆ.

ಎಚ್ಚೆಸ್ವಿಯವರ ಮೂಲ ಉದ್ದೇಶಕ್ಕೆ ಧಕ್ಕೆ ಬಾರದಂತೆ, ಗ್ರೀಕ್ ನಾಟಕಗಳಲ್ಲಿ ಬಳಸಿದ, ಸಂಗೀತ ಹಿಮ್ಮೇಳ, ನಟ-ನಟಿಯರ ಮುಮ್ಮೇಳ, ನಟ-ನಿರೂಪಕರು ಪ್ರೇಕ್ಷಕರೊಡನೆ ಮಾಡುವ ನೇರ ಸಂಭಾಷಣೆ - ಇವೇ ಮುಂತಾದ ತಂತ್ರಗಳು ಇಲ್ಲಿ ವಿಶಿಷ್ಟತೆ ಪಡೆದಿದೆ. ಸಂಗೀತಗಳ ರಾಗ ಸಂಯೋಜನೆಯಲ್ಲೂ ವೈವಿಧ್ಯತೆಯನ್ನು ರೂಡಿಸಿಕೊಂಡಿದ್ದಾರೆ, ಐತಾಳರು. ರಾಜಸ್ಥಾನ, ಹಿಮಾಚಲ ಪ್ರದೇಶಗಳ ಧಾಟಿಗಳನ್ನೂ, ಪೂರ್ವ ಯುರೋಪಿನ ಸ್ವರಗಳನ್ನೂ, ಬಳಸಿ ನಾಟಕದ ಗುಣಪಟ್ಟವನ್ನು ಹೆಚ್ಚಿಸಿದ್ದಾರೆ. ನಾಟಕದ ನಾಂದಿಪದದಲ್ಲಿ ಇಡುಗುಂಜಿ ಗಣಪನ ನೆನೆವರಿಕೆ ಇದೆ. ಉತ್ತರ ಕನ್ನಡ ಜಿಲ್ಲೆಯ ಇಡುಗುಂಜಿಯಲ್ಲಿ, ಹೆಸರಾಂತ ಯಕ್ಷಗಾನ ಮೇಳ ಮೆರೆಯುವುದನ್ನು ನಾವಿಲ್ಲಿ ನೆನೆಯಬಹುದು. ಇದ್ದನ್ನು ಮನಸ್ಸಿನಲ್ಲಿಟ್ಟುಕೊಂಡೋ ಏನೋ, ಪರಂಪರೆಯ ಯಕ್ಷಗಾನ ವೇಷಭೂಷಣ ಮತ್ತು ಶೈಲಿಯಲ್ಲಿ ಶೂರ್ಪನಖಿ ಮತ್ತು ರಾವಣರು ಪ್ರವೇಶಿಸುವಂತೆ ಮಾಡಿ, ನಾಟಕದ ಜಾನಪದ ಸೊಗಡನ್ನು ಐತಾಳರು ಹೆಚ್ಚಿಸಿದ್ದಾರೆ. ಸೀತೆ ಬರೆದ ಚಿತ್ರಪಟದಿಂದ ರಾವಣನು ಜೀವಂತವಾಗಿ ಮೂಡಿಬರುವ ಸನ್ನಿವೇಶವಂತೂ ಅಪೂರ್ವವಾದುದು, ಹಾಗೂ ಪ್ರೇಕ್ಷಕರನ್ನು ದಂಗುಬಡಿಸಿತ್ತು. ರಾವಣನ ಚಿತ್ರ ಬರೆದ ಪರದೆಯಲ್ಲಿ ಮಧ್ಯೆ ಸೀಳು ಮಾಡಿ, ಅಲ್ಲಿಂದ ಜೀವಂತ ರಾವಣನ ಪ್ರವೇಶ, 'ಚಿತ್ರಪಟ"ಕ್ಕೆ ಒಂದು ವಿಶಿಷ್ಟತೆಯನ್ನು ಒದಗಿಸಿ, ನಾಟಕದ ಶೀರ್ಷಿಕೆಗೆ ಸಲ್ಲಬೇಕಾದ ಸಮರ್ಥನೆ ಒದಗಿಸಿದೆ. ಇದೊಂದು ಜಾಣ ತಂತ್ರ ಎಂದು ನನ್ನ ಅನಿಸಿಕೆ. ಈ ಚಿತ್ರದ ರಚನಕಾರ, ಸದಾಶಿವ ಫಡ್ನಿಸರು ಅಭಿನಂದನಾರ್ಹರು.

ಸಮರ್ಪಕ ಅಭಿನಯ : ಪಾತ್ರವರ್ಗದಲ್ಲಿ ನಟಿಸಿದ ಎಲ್ಲರೂ ತಮ್ಮ ಪಾತ್ರಗಳನ್ನು ಸಮರ್ಪಕವಾಗಿ ಅಭಿನಯಿಸಿದ್ದಾರೆ. ಜಾಹ್ನವಿ ಐತಾಳ, ಪ್ರಣತಿ ಮೋಹನಚಂದ್ರ, ಮಾನಸ ತಾವರಗೇರಿ, ಸುಮಾ ಮೂರ್ತಿ, ಗೀತಾ ತಾವರಗೇರಿ, ವಾಸಂತಿ ಶ್ರೀಧರ್, ರಂಜಿತಾ ಕಾಶ್ಯಪ್, ಜಗನ್ನಾಥ್ ಶಂಖಂ, ಸೋಮಶೇಖರ್, ನಾರಾಯಣ ಕಾಶ್ಯಪ್ - ಇವರುಗಳು ಭೂತೆಯರಾಗಿ ಅಭಿನಯಿಸಿ, ನಾಟಕದ ಹರವು ಬಿಚ್ಚುವುದರಲ್ಲಿ ಸಮರ್ಥರಾಗಿದ್ದಾರೆ. ಕೆಲವೆಡೆಗಳಲ್ಲಿ ಭೂತೆಯರು ಮಾನವ ಪರದೆಯಾಗಿದ್ದುದೂ ಒಂದು ಚಲಾಕಿನ ತಂತ್ರ. ಚಂದ್ರನಖಿ ಪಾತ್ರದಲ್ಲಿ ಕವಿತಾ ರಾವ್ ಸಭಿಕರ ಮನಸೆಳೆದಿದ್ದರು. ಲತಾ ಶರಶ್‍ಚಂದ್ರರು ರೂಪಾಲಿಯಾಗಿ ಪಾತ್ರವಹಿಸಿದ್ದರು. ಯಕ್ಷಗಾನ ಶೈಲಿಯಲ್ಲಿ ಮೊಹನಚಂದ್ರ ಶೂರ್ಪನಖಿಯಾಗಿಯೂ, ಗೋಪಾಲಕೃಷ್ಣ ಶ್ರೀನಾಥ ರಾವಣನಾಗಿಯೂ ನಟಿಸಿ, ಪ್ರೇಕ್ಷಕರನ್ನು ದಂಗುಬಡಿಸಿದ್ದಾರೆ. ಸಾಂಪ್ರದಾಯಿಕ ರಾಮ, ರಾವಣರಾಗಿ ವೆಂಕಟೇಶ್ ಚಕ್ರವರ್ತಿ ಮತ್ತು ಶ್ರೀನಿವಾಸ ತ್ಯಾಮಗೊಂಡ್ಲು ಉತ್ತಮ ಅಭಿನಯ ಪ್ರದರ್ಶಿಸಿದ್ದಾರೆ. ಸೀತೆಯಾಗಿ ಇಂದುಮತಿ ಮೋಹನಚಂದ್ರ ಮತ್ತು ಕೊರವಂಜಿಯಾಗಿ ಸುಜಾತಾ ಐತಾಳರು ತುಂಬ ಉತ್ತಮವಾಗಿ ನಟಿಸಿದ್ದಾರೆ.

ಸುಮಾ ಭಟ್, ಸುಷ್ಮಾ ಪವನ್, ವಾಣಿ ಮಂಜುನಾಥ್, ವೀಣಾ ಕೃಷ್ಣ, ಶರಶ್ ಬೆಂಗಳೂರು, ನಾಗೇಶ ತಾವರಗೇರಿ, ಪವನ್ ಜಾನಕಿರಾಂ - ಇವರುಗಳು ಹಾಡಿದ ಸುಶ್ರಾವ್ಯ ಸಂಗೀತಕ್ಕೆ, ಚಂದ್ರ ಐತಾಳರು ಹಾರ್ಮೋನಿಯಂ, ಚಂದ್ರಭೂಷಣ ರಾವ್ ತಬಲ ಮತ್ತು ನರೇಂದ್ರ ಝಾಲಾ ಡೋಲಕ್ ಹಿಮ್ಮೇಳ ಒದಗಿಸಿದ್ದಾರೆ. ಈ ಸಂಗೀತ ತಂಡ ಹಾಡಿದ ಸುಮಧುರ ಹಾಡುಗಳು ನಾಟಕದ ಕಳೆ ಏರಿಸಿತ್ತು. ಅವರು ಹಾಡಿದ ರಾಗಗಳು ಆಯಾ ಸನ್ನಿವೇಶಗಳಿಗೆ ಸಮಯೋಜಿತವಾಗಿದ್ದು, ಹಾಡುಗಳು ಪ್ರೇಕ್ಷಕರ ಹೃದಯದಲ್ಲಿ ಹೂತುಹೋಗುವಂತೆ ಮಾಡಿತ್ತು.

ನಾಟಕದ ವಿಶಿಷ್ಟತೆಯನ್ನು ವರ್ಣಿಸುವಾಗ, ನನ್ನ ಮನಸ್ಸಿಗೆ ಹೊಳೆದ ಒಂದೆರಡು ವಿಷಯಗಳನ್ನು ಇಲ್ಲಿ ಹೇಳಬಯಸುತ್ತೇನೆ. ಕೊರವಂಜಿಯ ಪಾತ್ರದಲ್ಲಿ, ಸುಜಾತ ಐತಾಳರು ನಾಟಕದಲ್ಲಿ ಶೋಭಿಸಿದ್ದಾರೆ. ಅವರ ಅಭಿನಯ ಆ ಪಾತ್ರಕ್ಕೆ ಹೇಳಿಸಿ ಮಾಡಿದಂತಿತ್ತು. ಚಂದ್ರನಖಿ, ಕೊರವಂಜಿಯಾಗಿ ರೂಪಾಂತರಗೊಂಡು, ರಂಗ ಪ್ರವೇಶ ಮಾಡುವ ತಂತ್ರವೂ ಉತ್ತಮವಾಗಿತ್ತು. ಭೂತೆಯರು ಮಾನವ ಪರದೆಯಂತಾಗಿ, ಅಲ್ಲಿಂದ ಹೊರಬರುವ ಆ ತಂತ್ರ ವಿಶೇಷವಾದುದು. ಹೊರಗೆ ಬಂದು, ಕೊರವಂಜಿ ರಂಗಭೂಮಿಯಲ್ಲಿ ನೃತ್ಯಮಾಡುತ್ತಿದ್ದಂತೆ, ಪ್ರೇಕ್ಷಕರ ಮನಸ್ಸೂ ಕೊರವಂಜಿಯ ಜೊತೆಗೆ ಕುಣಿದಾಡಿತ್ತು. ಇನ್ನೊಂದು ಗಮನಿಸಬೇಕಾದ ವಿಶೇಷತೆಯೆಂದರೆ, ಭೂತೆಯಳಾಗಿ ಜಾಹ್ನವಿಯ (ಜಾಹ್ನವಿ ಐತಾಳ, ಚಂದ್ರ ಐತಾಳರ ಪ್ರತಿಭಾವಂತ ಪುತ್ರಿ) ಅಭಿನಯ. ಜಾಹ್ನವಿ ಇನ್ನೂ ಹೈಸ್ಕೂಲು ಸಾಫೊಮೋರ್ (ಹತ್ತನೆಯ ತರಗತಿ) ವಿದ್ಯಾರ್ಥಿ. ಶಾಲೆಯಲ್ಲಿ ಅವಳು ನಾಟಕಕಲೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಅವಳು ಪ್ರದರ್ಶಿಸಿದ ಪ್ರತಿಭೆ ಅಮೋಘವಾದುದು. ರಂಗದ ಮೇಲಲ್ಲದೆ, ಹಿಂದೆಯೂ ಅವಳು ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ. ಸಂಗೀತ ರಾಗಸಂಯೋಜನೆಯಲ್ಲೂ, ಅವಳು ತಂದೆ, ಚಂದ್ರ ಐತಾಳರಿಗೆ ನೆರವಾಗಿದ್ದಾಳೆ. ಭೂತೆಯರ ಅಭಿನಯ, ರಾಮ-ರಾವಣರ ಕಾಳಗದ ದೃಶ್ಯಾವಳಿ, ಇವೇ ಮುಂತಾದ ಸನ್ನಿವೇಶಗಳ ತರಬೇತಿಯಲ್ಲಿ ಜಾಹ್ನವಿಯ ಕೈವಾಡವಿತ್ತು. ನಾಟಕದ ಸಹಾಯಕ ನಿರ್ದೇಶಕಳಾಗಿ, ಜಾಹ್ನವಿಯ ಪಾತ್ರ ಶ್ಲಾಘನೀಯವಾದುದು. ಆ ಕಿರಿವಯಸ್ಸಿನ ಪ್ರತಿಭಾವಂತೆಗೆ ಒಳ್ಳೆಯ ಭವಿಷ್ಯವಿದೆ ಎಂದು ನನ್ನ ಅಭಿಮತ.

ಒಟ್ಟಿನಲ್ಲಿ, ಈ ಚಿತ್ರಪಟ ನಾಟಕ ವಿಶಿಷ್ಟವಾಗಿದ್ದು, ಲಾಸ್ ಏಂಜಲಿಸ್ ಪ್ರೇಕ್ಷಕರಿಗೊಂದು ರಸದೌತಣ ಉಣಿಸಿತ್ತು. 'ಅಸೀಮ" ಮುಂದೆಯೂ ಇಂಥ ಉತ್ತಮ ಕಲಾಪೂರ್ಣ ಪ್ರದರ್ಶನ ನೀಡುವುದೆಂಬ ಆಸೆ ಹೊತ್ತವರಲ್ಲಿ ನಾನೊಬ್ಬ. (ಫೋಟೋ ಕೃಪೆ: ಸುರೇಂದ್ರ ಪ್ರಕಾಶ್)

English summary
Chitrapata, a Kannada play written by Kannada playwrite and poet Dr HS Venkatesh Murthy, was performed in Los Angeles, America. A report by Naga Aithal, South California.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X