• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೀತಾ ಕೇಶವ ಅಲಾಸ್ಕಾ ಪ್ರವಾಸ ಕಥನ

By * ಸೀತಾ ಕೇಶವ
|

ಕೆನಡಾ, ಅಲಾಸ್ಕಾ ಬಗ್ಗೆ ಯಾರಿಗೆ ಗೊತ್ತಿಲ್ಲ? ಯಾರೂ ನೋಡಿಲ್ಲ ಅಂದರೆ ತಪ್ಪಾಗುತ್ತೆ! ಅಷ್ಟು ಸುಲಭವಾಗಿ ಹೋಗಿ ನೋಡಲಾಗುವುದಿಲ್ಲವೆನಿಸುತ್ತೆ. ಕೆನಡಾ ಅಂದ ತಕ್ಷಣ ನೆನಪಾಗುವುದು, ಟೊರಾಂಟೊ ಮತ್ತು ವಾಂಕೂವರ್. ಅಲಾಸ್ಕಾಗೆ ಹೋಗಬೇಕಾದರೆ ವಾಂಕೂವರ್ ನಿಂದಲೇ ಹಡಗಿನ ಪ್ರಯಾಣ. ವಾಂಕೂವರ್ ಕೆನಡಾದ ಮೂರನೇ ದೊಡ್ಡ ಪಟ್ಟಣ.

ಅಮೇರಿಕಾಗೆ 26 ಮೈಲಿ ವಾಯುವ್ಯ ದಿಕ್ಕಿನಲ್ಲಿದ್ದು, ಸುತ್ತಲೂ ಪರ್ವತ ಶ್ರೇಣಿಯಿಂದ ಕೂಡಿ, ಎಲ್ಲಾ ಜನಾಂಗದವರೂ ವಾಸವಾಗಿ, ದೇಶದ ಅತಿ ದೊಡ್ಡ ದೊಡ್ಡ ಹಣಕಾಸಿನ ನಿರ್ವಾಹಣ, ವಾಣಿಜ್ಯ, ಅರ್ಥಶಾಸ್ತ್ರದವರಿಂದ ಕೂಡಿ ಸುಮಾರು ಎರಡು ದಶಲಕ್ಷಕ್ಕೂ ಮೀರಿ ಜನಸಂಖ್ಯೆ ಇರುವರು. 1856ರಲ್ಲಿ ಫ್ರೇಸರ್ ನದಿಯ ದಡದಲ್ಲಿ ಚಿನ್ನಕೂಡ ಪತ್ತೆ ಹಚ್ಚಿರುವುದಾಗಿ ತಿಳಿದಿದೆ.

ಸ್ಟಾನ್ಲಿ ಪಾರ್ಕ್, 1000 ಎಕರೆ ಜಾಗದಲ್ಲಿ ಸಿಟಿಗೆ ಹತ್ತಿರವಾಗಿ, ಆಟದ ಮೈದಾನ, ವ್ಯಾಯಾಮದವರಿಗೆ (ಸೈಕಲ್ ಸವಾರಿ, ನಡಿಗೆ ಇತ್ಯಾದಿ) ಮತ್ತು "ಅಕ್ವೇರಿಯಂ" ನಲ್ಲೂ 70,000 ಪ್ರಾಣಿಗಳಿಂದ ಕೂಡಿ, ಕೆನಡಾದ ಅತಿ ದೊಡ್ಡ ಆಕ್ವೇರಿಯಂ ಎಂದು ಪ್ರಸಿದ್ಧಿ ಪಡೆದಿದೆ. ಇನ್ನು ಚೈನಾ ಟೌನ್, ಗ್ಯಾಸ್ ಟೌನ್ ಗಳಿದ್ದೂ, 1971ರಲ್ಲಿ ಡಾ.ಸನ್ ಯೂಟ್ ಸೆನ್ ಚೀನಾ ದೇಶದ್ದು ಬಿಟ್ಟರೆ, ಪ್ರಾಚೀನಕಾಲದ ಮೊದಲಿನಿಂದ ಕೂಡಿದ್ದೆಂದು ಹೇಳಿರುವುದಾಗಿ ತಿಳಿಯಿತು.

ವಾಂಕೂವರ್ ನಮ್ಮ ಚಂಡೀಘರ್, ಕ್ಯಾನ್ಬರಾ ತರಹ ಮೊದಲೇ ಚಿತ್ರಿಸಿ, ಸುಂದರವಾಗಿ ರೂಪಗೊಂಡಿರುವ ಪಟ್ಟಣ. ರಸ್ತೆಗಳೆಲ್ಲಾ ಏರುಪೇರು ಇಲ್ಲದೆ, ಮಟ್ಟಸವಾಗಿ, ವಿಶಾಲವಾಗಿದ್ದು, ಓಡಾಡುತ್ತಿದ್ದರೆ ಅದರ ಮಜ, ಸುಖವೇ ಬೇರೆ! ಅಲ್ಲಿಯವರ ವೈಶಿಷ್ಯತೆ ಕೂಡ, ನಾವು, "ಥ್ಯಾಂಕ್ ಯೂ" ಎಂದರೆ ಅವರು ಸುಮ್ಮನೆ "ವೆಲ್ಕಂ" ಎನ್ನದೆ, "ವೆರ್ರಿ ವೆಲ್ಕಂ" ಎಂದೇ ಹೇಳುವುದು.

ಸೆಲೆಬ್ರಿಟಿ ಮರ್ಕ್ಯೂರಿ ಕ್ರೂಸ್ : ನಾವು ಆಗಸ್ಟ್ 23ರಂದು ಹೊರಡುವ ಹೆಸರಾಂತ ಪ್ರಸಿದ್ದ, "ಸೆಲೆಬ್ರಿಟಿ ಮರ್ಕ್ಯೂರಿ ಕ್ರೂಸ್" ನಲ್ಲಿ ಏಳು ದಿವಸದ ಹಡಗಿನ ಪ್ರಯಾಣಕ್ಕೆ ಹೊರಟೆವು. ಒಂದು ದಿವಸ ವಾಂಕೂವರ್ ನಲ್ಲಿದ್ದು ಅಲ್ಲಿಯ ಸ್ಟಾನ್ಲಿಪಾರ್ಕ್, ಕಾಲ್ಗರಿ ಟವರ್, ಲುಕ ಔಟ್, ಮುಂತಾದವುಗಳನ್ನು ನೋಡಿಕೊಂಡು ಹಡಗಿನ ಪ್ರಯಾಣಕ್ಕೆ ಹೊರಟೆವು. ಬಂದರಿಗೆ ಬಂದಾಗ, ನಮ್ಮ ಸೂಟ್ ಕೇಸ್ ಗಳಿಗೆ ಇಬ್ಬರು ಕಟ್ಟು ಮಸ್ತಾದ, ಆಜಾನುಬಾಹುಗಳು, ನಮ್ಮ ಹೆಸರಿನ ಚೀಟಿ ಅಂಟಿಸಿ ಭದ್ರಪಡಿಸಿ ಎತ್ತಿ ಒಳಗೆ ಹಾಕಿದರು.

ಕ್ಯೂನಲ್ಲಿ ನಿಂತಾಗಲು, ನಾನಾತರಹದ ಜನರ, ವೇಶ ಭೂಷಣ, ಅಳತೆ, ಆಕಾರ, ಭಾಷೆ ನೋಡಿ, ಆಲಿಸಿ ಆನಂದಿಸಿ, ನಾನು ಟೋಪಿ ಮರೆತಿದ್ದರಿಂದ ಅಲ್ಲಿಯೇ ಸುವೆನೀರ್ ಎಂದು ಖರೀದಿಸಿ, ಪಾಸ್ಪೋರ್ಟ್, ವೀಸಾ ಹಾಳೆ ಇಟ್ಟುಕೊಂಡು ನಮ್ಮ ಸರದಿಗೆ ಕಾಯುತ್ತಾ ನಿಂತು, ಅದರದ್ದೆಲ್ಲಾ ಮುಗಿದ ಮೇಲೆ, "ಅಬ್ಬಾ" ಎಂದು ನಿಟ್ಟುಸಿರುಬಿಟ್ಟು ಬಂದಾಗ "ಹಾಟ್ ಚಾಕೊಲೇಟ್" ಕೈಬೀಸಿ ಕರೆದಿದ್ದು, ಕ್ಯೂನಲ್ಲಿದ್ದಾಗಿದ್ದ ಆತಂಕ, ಆಯಾಸವೆಲ್ಲಾ ಪರಿಹಾರವಾಯಿತು.

ನಮ್ಮ ಹಡಗು 3000 ಪ್ರಯಾಣಿಕರನ್ನು ಕರೆದೊಯ್ಯುವಂತಹುದು. ಅದರಲ್ಲಿ 900 ಜನ ಅಲ್ಲಿಯ ಕೆಲಸ ಕಾರ್ಯದ ವರ್ಗದವರು. ಹಡಗು ವಿಪರೀತ ದೊಡ್ಡದಾಗಿ, ಎಲ್ಲಾ ಕಡೆ ಕನ್ನಡಿಗಳು, ಲಿಫ್ಟ್, ಮೆಟ್ಟಲುಗಳು, ಎಲ್ಲರೂ ಅವರವರ ರೂಮುಗಳ ನಂಬರುಗಳು, ಅದರ ವ್ಯವಸ್ಥೆನ ನೋಡಿ ಖುಶಿ ಪಟ್ಟುಕೊಂಡು, ಕ್ಯಾಪ್ಟನ್ ಆಗಾಗ್ಗೆ ವರದಿ ಹೇಳುವುದು ಕೇಳಿಸಿಕೊಂಡು, ಊಟದ ಮನೆ (ಡೈನಿಂಗ್ ಹಾಲ್) ಕಡೆ ಹೋಗಬಹುದೆಂದಾಗ ಅದರ ಕಡೆ ಹೊರಟೆವು.

ಪಲಾವ್, ಹುಳಿ, ಪಕೋಡ : ಸಸ್ಯಾಹಾರಿಗಳಿಗೂ ಹಡಗಿನಲ್ಲಿ ಯಾವ ತರಹದ ತೊಂದರೆಯೂ ಆಗುವುದಿಲ್ಲ. ಎಲ್ಲಾ ಕಾಣುವ ಹಾಗೆ, ಚೊಕ್ಕಟವಾಗಿ ಇಟ್ಟಿರುತ್ತಾರೆ. ನಾವೇ ನಾವು ನಮಗೆ ಬೇಕಾದ್ದನ್ನ, ಎಷ್ಟು ಬೇಕಾದರೂ, ಎಷ್ಟು ಸಲವಾದರೂ ಹೋಗಿ ಹಾಕಿಕೊಂಡು ತಿನ್ನಬಹುದು. ನಮ್ಮ ಅನ್ನ, ಪಲಾವ್, ಹುಳಿ, ರೋಟಿ, ಪಕೋಡ, ಪಾಯಸ, ಪೂರಿ ಇದ್ದರೂ, ಈಗಿನ ಪಿಜ್ಜ, ಫ್ರೈಸ್, ನೂಡಲ್ಸ್, ಕಡೆನೇ ಯಾವಾಗಲೂ ವಿಪರೀತ ದೊಡ್ಡ ಕ್ಯೂ. ಏಕೆಂದರೆ ಅಲ್ಲಿ ನಾವೇ ನಮಗೆ ಬೇಕಾದ, ದಪ್ಪ ಅಥವಾ ಸಣ್ಣ ನೂಡಲ್ಸ್, ತರಕಾರಿ, ಸಾಸ್, ಶುಂಠಿ, ಕೊತ್ತಂಬರಿ ಸೊಪ್ಪು (ಬೇಕಾದರೆ ಬೆಳ್ಳುಳ್ಳಿ) ಹಾಗಿಸಿಕೊಂಡು ಫ್ರೆಶ್ ಆಗಿ ಮಾಡಿಸಿಕೊಳ್ಳಬಹುದಾಗಿತ್ತು.

ಏನಪ್ಪಾ ಅಂದರೆ ವೆಜಿಟೇರಿಯನ್ ನವರಿಗೆ ಅವರು "ಸಾಸ್ ಪಾನ್" ಶುಭ್ರವಾಗಿ, ವಾಸನೆ ಇಲ್ಲದಿರುವಂತೆ ತೊಳೆದುಕೊಂಡು ತಂದು ಮಾಡಬೇಕಾಗುತಿತ್ತು. ವೇಳೆ ವ್ಯರ್ಥವಾಗುತ್ತೆ, ಇದಕ್ಕೆ ಬೇರೆ ಇಟ್ಟುಬಿಡಿ ಎಂದು ಸಲಹೆ ಕೊಟ್ಟೆ, ಅಭಿನಂದಿಸಿ, ಇದೇರೀತಿ ಇನ್ನೊಬ್ಬರು ಹೇಳಿದರು ಮುಂದೆ ಮಾಡುತ್ತೇವೆಂದರು. ಎಲ್ಲಾ ತರಹದ ಹಣ್ಣು, ಜ್ಯೂಸ್, ಸಮೃದ್ಧಿಯಾಗಿದ್ದು ಯಾವ ತರಹದ ಕೊರತೆಯೂ ಆಗಲಿಲ್ಲ. ಮನೆಗಿಂತ ಹೆಚ್ಚಾಗೆ ಸೇರಿಸುತ್ತಿದ್ದೆವು. ಪ್ರತಿ ದಿವಸ ಎರಡು ಸಲ ಥಿಯೇಟರ್ ಒಳಗೆ ಮನರಂಜನೆ ಕಾರ್ಯಕ್ರಮ, ಇನ್ನು ಹೊರಗಡೆ ಕೇಳಲೇಬೇಕಾಗಿಲ್ಲ. ಹಾಗೂ ದೊಡ್ಡ ಮಂಜುಗಡ್ಡೆನ ಎಲ್ಲರ ಎದುರಿಗೇ ತಿಮಿಂಗಿಲದ ಆಕೃತಿಯಲ್ಲಿ ಕೆತ್ತಿಸಿದ್ದು ಬಹಳ ಚೆನ್ನಾಗಿತ್ತು ಮತ್ತು ಹಡಗಿನಲ್ಲಿ ಜಿಮ್, ಬ್ಯೂಟೀ ಪಾರ್ಲರ್, ಬಟ್ಟೇ ಅಂಗಡಿ, ವಾಚು, ನಾನಾತರಹ ಸೌಂದಯದ ವಸ್ತುಗಳ ಅಂಗಡೀ ಇದ್ದವು.

ಹಡಗಿನ ಪ್ರಯಾಣದಲ್ಲಿ 1. ಐಸಿ ಪಾಯಿಂಟ್ ಸ್ಟೈಟ್, 2. ಜುನ್ಯು, ಮತ್ತು 3. ಕೆಟ್ಚಿಕನ್ ಎನ್ನುವ ಊರುಗಳಲ್ಲಿ ನಿಲ್ಲಿಸಿದ್ದರು. ಇಲ್ಲಿ ನಾವು ಊರಿನ ವಿಶೇಷತೆ ನೋಡಲು ಪ್ರತ್ಯೇಕವಾಗಿ ದುಡ್ಡು ಕೊಟ್ಟು ಹೋಗಬೇಕು. ಮೊದಲ ಊರಿನಲ್ಲಿ ನಾವು ಬುಶ್ ವಾಕ್ ಮತ್ತು ತಿಮಿಂಗಿಲಗಳಿಗೆ ಊಟ ಕೊಡುವುದು ನೋಡಲು ಸಣ್ಣ ಬೋಟ್ನಲ್ಲಿ 90 ನಿಮಿಷದ ಪ್ರಯಾಣಕ್ಕೆ ಹೋದೆವು. ನಮ್ಮ ದುರಾದೃಷ್ಟಕ್ಕೆ, ಯಾವುದೂ ಪೂರ್ತಿಯಾಗಿ ಮೇಲೆ ಬಂದು ದರ್ಶನವೇ ಕೊಡಲಿಲ್ಲ. ಅರ್ಧರ್ಧ ಕಾಣಿಸಿಕೊಂಡವು.

ಎರಡನೆಯ ಜಾಗದಲ್ಲಿ, ಮರದಲ್ಲಿ ಕೆತ್ತನೆ ಮಾಡುವುದು ನೋಡಿಕೊಂಡು, ಅದರ ಹತ್ತಿರದ ಅರಣ್ಯದಲ್ಲಿ "ಕಪ್ಪು ಕರಡಿಯ ಸಂಸಾರ" (ತಾಯಿ, ಮೂರು ಮಕ್ಕಳು) ನೋಡಿದ್ದು ಬಹಳ ಚೆನ್ನಾಗಿತ್ತು. ಮೂರನೆಯದೇ ಮುಖ್ಯವಾದ ಕಣ್ಣು ಕೋರೈಸುವ "ಹಬ್ಬಡ್ಡಾಡ್ ಗ್ಲೇಸಿಯರ್" ಹತ್ತಿರ ಹಡಗನ್ನು ನಿಲ್ಲಿಸಿದಾಗ, ಎಲ್ಲರ ಪ್ರತಿಕ್ರಿಯೆ ನೋಡಬೇಕು, "ಆಹಾ, ಹೋ, ವಾಹ್" ಎನ್ನುತ್ತಾ, ಒಂದುಕ್ಷಣ ನಾವೆಲ್ಲಿರುವೆವೆನ್ನಿಸಿಬಿಟ್ಟಿತು. ಇದೇ ಅಲಾಸ್ಕಾದ ವೈಶಿಷ್ಟ್ಯ.

ಗ್ಲೇಸಿಯರ್ ಟೂರ್ : ಮಂಜುಗಡ್ಡೆಗಳು ದೊಡ್ಡಾ ದೊಡ್ಡ ಬಂಡೆಯಾಕೃತಿಯಲ್ಲಿ, ತಿಳಿ ನೀಲಿ, ತಿಳಿ ಹಸಿರು ಬಣ್ಣಗಳಿಂದ ಕೂಡಿ ನಿಂತಿರುವ ದೃಶ್ಯ ರಮಣೀಯ. ಅವುಗಳು ಬಿಸಿಲಿಗೆ ಕರಗಿ ಬೇರೆ ಬೇರೆಯಾಗಿ ಬೀಳುವುದು ಅಬ್ಬಾ ಎನಿಸುತ್ತೆ. ನಾವು ಹೆಲಿಕಾಪ್ಟರ್ ನಲ್ಲಿ ಗ್ಲೇಸಿಯರ್ ನೋಡುವ ಟೂರ್ ತೆಗೆದುಕೊಂಡಿದ್ದೆವು, ನಾಲ್ಕು ಜನ ಒಂದು ಹೆಲಿಕಾಪ್ಟರ್ ನಲ್ಲಿ. ಚಾಲಕನೂ ಬಹಳ ನಿಧಾನವಾಗಿ ಅದರದ್ದೆಲ್ಲ ವರ್ಣಿಸಿ ಅಪಾಯಕಾರಿ ಇಲ್ಲದ ಜಾಗದಲ್ಲಿ ಹೆಲಿಕಾಪ್ಟರ್ ನಿಲ್ಲಿಸಿ ನಮಗೆ ನಡೆದಾಡಲು ಅನುಮತಿ ಕೊಟ್ಟು ಅದರ ಅನುಭವ ಸಂಪೂರ್ಣವಾಗುವಂತೆ ಮಾಡಿದ್ದು ತೃಪ್ತಿಯಾಯಿತು. ಎನಪ್ಪಾ ಅಂದರೆ ಅಲಾಸ್ಕಾ ಹೆಸರು ಕೇಳಿದ ಕೂಡಲೆ, ಬಿಳಿಯ ಪೋಲಾರ್ ಬೇರ್ ನೋಡುತ್ತೆವೆಂದು ತಿಳಿದಿದ್ದೆ. ಅವುಗಳು ಇಲ್ಲಿ ಕಾಣುವುದಿಲ್ಲ.

ಸ್ವಲ್ಪ ನಿರಾಸೆಯಾಗಿ ವಿಚಾರಿಸಿದಾಗ, ತೀವ್ರ ಚಳಿಗಾಲದಲ್ಲಿ ಇಂಟೀರಿಯರ್ ನಾರ್ತ್ ಪೋಲ್ ನಲ್ಲಿ ಕಾಣಿಸಿಕೊಳ್ಳುತ್ತದೆಂದು ಗೊತ್ತಾಯಿತು. ಈ ಮೂರು ಊರುಗಳಲ್ಲೂ ನಾನಾ ವಿಧದ ನವರತ್ನಗಳು, ಹಾಗೂ ಕಪ್ಪು ವಜ್ರಕ್ಕೂ ಪ್ರಸಿದ್ಧಿ ಎಂದು ಹೇಳಿದರು. 29ರಂದು ರಾಖೀ ಪರ್ವತ ಸರಣಿಯನ್ನು ಹೆಸರಾಂತ ರೈಲಿನಲ್ಲಿ ಪ್ರಯಾಣ ಮಾಡುವುದು ಕೇಳಿದ್ದರಿಂದ ನಾವೂ ಅದರ ಅನುಭವ ನೋಡಿ ಪಡೆಯುವುದೆಂದು ಐದು ದಿವಸದ್ದಕ್ಕೆ ಹೋಗಿದ್ದೆವು. ಅಂಥಾ ಹೇಳಿಕೊಳ್ಳುವಂಥದ್ದು, ಏನಿಲ್ಲವೆನ್ನಿಸಿತು.

ಇದನ್ನು ದಾರಿ ಮಾರ್ಗದಲ್ಲಿಯೂ, ಕಾರು, ಬಸ್ಸುಗಳಲ್ಲಿ ಹೋಗಿ, ಸುಂದರವಾದ ದೃಶ್ಯಗಳನ್ನು ನೋಡಿ ಆನಂದಿಸಬಹುದು. ಬಹಳ ನಿಧಾನವಾಗಿ ಚಲಿಸುವ ರೈಲಿನ ಪ್ರಯಾಣ ಸ್ವಲ್ಪ ಆಯಾಸವೇ ಹಾಗೂ ಕೂತಲ್ಲಿಯೇ "ಶತಾಬ್ಧಿ" ತರಹ ನಮ್ಮ ಊಟ ನಮ್ಮ ಸೀಟಿಗೇ ಬರುತ್ತೆ ಮತ್ತು "ಗೈಡ್" ಕೂಡ ಚಲಿಸುವ ರೈಲಿನ ಎಡ, ಬಲದ ದೃಶ್ಯಗಳನ್ನು ವಿವರಿಸುತ್ತಾ ಇರುತ್ತಾರೆ. ಅದೆಷ್ಟು ಸಣ್ಣ ಸಣ್ಣ, ಬೇರೆ ಬೇರೆ ಹೆಸರಿನ ನದಿಗಳೂ ಅಂದರೆ, ಉದಾ: ಫ್ರೇಸರ್, ಕೊಲಂಬಿಯ, ಬೀವರ್, ಥಾಂಸನ್, ಈಗಲ್ ಹೀಗೆ ಕೇಳಿ ಕೇಳಿ ನಾನು ನದಿಯ ಬಗ್ಗೆ ಒಂದು ಕವನ ಬರೆದಿಟ್ಟುಕೊಂಡೆ. ಒಮ್ಮೆ ಅಂತೂ "ಕೈಲಾಸ ಪರ್ವತ" ತರಹದ್ದೇ ಬೆಟ್ಟವು ಕಾಣಿಸಿತು. ಇದರಲ್ಲಿ ಎರಡು ದಿವಸ ರೈಲಿನ ಪ್ರಯಾಣ. ಮೊದಲ ದಿವಸ, ಕ್ಯಾಮ್ ಲೂಪ್ಸ್, ಕೊನೆಯದಾಗಿ ಲೇಕ್ ಲುಯಿಸ್.

ಮೊದಲ ದಿವಸದಲ್ಲಿ ಬೋ ವಾಟರ್ ಫಾಲ್ಸ್, ಹೂಡೂ ಲುಕ್ ಔಟ್, ಮತ್ತು "ಗಾನ್ ಡೋಲಾ" ದಲ್ಲಿ (ಕೇಬಲ್ ಕಾರು) ಹೋಗಿ, 360 ಡಿಗ್ರಿನಲ್ಲಿ, ಪೂರ್ತಿ ಊರು ನೋಡುವುದು ತುಂಬಾ ಚೆನ್ನಾಗಿತ್ತು. ಲೇಕ್ ಲೂಯಿಸ್ ಸುತ್ತಲೂ ಹಿಮದಿಂದ ಮುಚ್ಚಿದ ಬೆಟ್ಟ, ಕೆಳಗಡೆ ದೊಡ್ಡ ಸರೋವರ ಹಾಗೂ ನಾವು ತಂಗಿದ್ದ ಹೋಟಲಿನ ಕೊಠಡಿಯಿಂದಲೂ ರಮಣೀಯ ದೃಶ್ಯ. ಮತ್ತು ಆ ಹೋಟೆಲಿಗೆ ಅದೆಷ್ಟು ದ್ವಾರಗಳು, ಲಿಪ್ಟ್. ಹತ್ತಿರವೂ ನಡಿಗೆಗೂ ಅವಕಾಶವಿದ್ದಿದ್ದರಿಂದ ನಾವೂ ಹೋಗಿ ಬಂದೆವು. "ಕನೂಯಿಂಗ್" ಮಾಡುವವರಿಗೂ ಅವಕಾಶವಿದೆ.

ಒಮ್ಮೆ "ಸ್ಟಾರ್ ಬಕ್ಸ್" ಸ್ಪೆಷಲ್ ಕಾಫಿಕೊಳ್ಳಲು ಹೋದಾಗ, ಇದೇನಪ್ಪಾ ಎಲ್ಲಿಗೆ ಬಂದಿದ್ದೇನೆನ್ನಿಸಿತು. ಏಕೆಂದರೆ ಒಂದು ಕಡೆ ಸಾಲಾಗಿ ಸ್ಕೂಲಿನಂತೆ, "ಲಾಪ್ ಟಾಪ್" ಮುಂದೆ, ಕಿವಿಗೆ ಹಾಕಿಕೊಂಡು, ಪಕ್ಕದಲ್ಲಿ ಮೊಬೈಲ್, ಕಾಫಿ ಕಪ್ , ನೋಡುತ್ತಿದ್ದರೆ, "ಸ್ಟಾರ್ ಬಕ್ಸ್ ಸ್ಪೆಷಲ್ ಸ್ಕೂಲ್" ಅನ್ನಿಸಿ, ಮಹಾತ್ಮಾ ಗಾಂಧೀಜೀಯವರ ಕೆಟ್ಟದ್ದನ್ನ ಕೇಳಬೇಡ, ನೋಡಬೇಡ, ಕೇಳಿಸಿಕೊಳ್ಳಬೇಡಯೆಂದು ಮೂರು ಕೋತಿಗಳ ದೃಶ್ಯ ಕಣ್ಣ ಮುಂದೆ ಬಂದು, ಅವರವರ ಕೆಲಸದಲ್ಲಿ ತಲ್ಲೀನರಾಗಿದ್ದು, "ಸ್ಟಾರ್ ಬಕ್ಸ್"ನವರು ಬರೀ ಕಾಫೀಗೆ ಹೆಸರುವಾಸಿಯಾಗದೆ ಈ ತರಹದ ಅನುಕೂಲ, ಸಹಾಯ ಮಾಡುತ್ತಿರುವುದು ಹೆಮ್ಮೆಯಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Alaska travelogue by Non-Resident Indian and Kannadati Seetha Keshva from Australia. Seetha Keshava shares her travel experience with oneindia-kannada readers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more