• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯೋತ್ಸವ : ನ್ಯೂಜಿಲೆಂಡ್ ಕನ್ನಡಿಗರಿಂದ ರಕ್ತದಾನ

By * ಪ್ರಕಾಶ್ ರಾಜಾರಾವ್, ಆಕ್ಲೆಂಡ್
|

ನಮ್ಮ ದೇಶದ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಬಹಳ, ನಿಮ್ಮಂತೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರೆ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ ನಿಮಗೆ ಧನ್ಯವಾದಗಳು ಎಂದು ಹೃತ್ಪೂರ್ವಕವಾಗಿ ವಂದಿಸಿದರು ನ್ಯೂಜಿಲೆಂಡ್ ಬ್ಲಡ್ ಸಂಸ್ಥೆಯ ಸ್ಕಾಟ್ ಸಿಂಕ್ಲೇರ್. ಅವರು ಆಕ್ಲೆಂಡ್ ನಗರದಲ್ಲಿ ದಿನಾಂಕ 27ನೇ ಶನಿವಾರದಂದು ನ್ಯೂಜಿಲೆಂಡ್ ಕನ್ನಡ ಕೂಟ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ ಕನ್ನಡ ಕೂಟದ ಸದಸ್ಯರಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.

ಪೂಜಾ ಭಗತ್ ಅವರಿಂದ ಪ್ರಾರ್ಥನಾ ನೃತ್ಯ ಹಾಗೂ ಕನ್ನಡ ಭುವನೇಶ್ವರಿಯ ಪೂಜೆಯ ನಂತರ ಎಲ್ಲರನ್ನೂ ಸ್ವಾಗತಿಸಿ ಕೂಟದ ಅಧ್ಯಕ್ಷ ಪ್ರಕಾಶ್ ಬಿರಾದರ್ ಅವರು ಮಾತನಾಡಿದರು. ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಎಲ್ಲರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಅಭಿಮಾನ ಮೂಡಲು ನಾವೆಲ್ಲಾ ಶ್ರಮಿಸೋಣ ಎಂದು ಕರೆಯಿತ್ತರು.

ಕಾರ್ಯಕಾರಿ ಸಮಿತಿಯ ಸದಸ್ಯೆ ಉಷಾ ರವಿಶಂಕರ್ ಅವರು ಕಾರ್ಯಕ್ರಮದ ವಿವರಣೆ ನೀಡಿದರು. 'ಕಾಣದಂತೆ ಮಾಯವಾದನು' ಎಂದು ಹಾಡಿದ ಸಂಜನಾ ಸತ್ಯ ಕುಮಾರ್ ಮತ್ತು 'ಏಳು ಸ್ವರವು ಸೇರಿ ಸಂಗೀತವಾಯಿತು' ಎಂದು ಸ್ವರ ಜೋಡಿಸಿದ ತನ್ವಿ ಕೆಡಿಯಪ್ಪ, ಕೀಬೊರ್ಡ್ ನಲ್ಲಿ 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ಎಂದು ನುಡಿಸಿದ ಸ್ಕಂದ ದೇಶಪಾಂಡೆ, ಎಲ್ಲರೂ ಚಪ್ಪಾಳೆ ಗಿಟ್ಟಿಸಿದರು. 'ಅಆಇಈ ಕನ್ನಡದ ಅಕ್ಷರ ಮಾಲೆ' ಹಾಡಿಗೆ ಸಮೂಹ ನೃತ್ಯ ಮಾಡಿದ ಹನ್ನೆರಡು ಪುಟಾಣಿಗಳು ಮತ್ತು ಅವರಿಗೆ ತರಬೇತಿ ನೀಡಿದ ಮಂಗಳಾ ಪ್ರಭಾಕರ್, 'ಸಿಂಗಾಪುರದಿಂದ ಬಂದ' ಹಾಡಿಗೆ ನರ್ತಿಸಿದ ವಿನೋದಿನಿ ಹಾಗೂ ರಿತ್ವಿಕ್, ಅಡವಿ ದೇವಿಯ ಕಾಡುಜನಗಳದಿರಿಸು ಧರಿಸಿ ಕುಣಿದ ಮೋನಿಶಾ ಮತ್ತು ಈಶಾ, 'ಸಿಕ್ತಾರೆ ಸಿಕ್ತಾರೆ' [ಜೊತೆ ಜೊತೆಯಲಿ ಚಿತ್ರದ ಹಾಡು] ಎಂದು ಮಿಂಚಿನಂತೆ ಡ್ಯಾನ್ಸ್ ಮಾಡಿದ ಯಶಸ್ ಧರಣೇಂದ್ರ ಹೀಗೆ ಹಲವಾರು ಬಾಲಕಲಾವಿದರಿಗೆ ವೇದಿಕೆಯನ್ನೋದಗಿಸಿತು ನಮ್ಮ ರಾಜ್ಯೋತ್ಸವ.

ಮೈಸೂರಿನ ದಸರಾ ಬೊಂಬೆ ಪ್ರದರ್ಶನ ಕಾರ್ಯಕ್ರಮದ ಒಂದು ಪ್ರಮುಖ ಆಕರ್ಷಣೆಯಾಗಿತ್ತು , ಇದನ್ನು ಅಪಾರ ಆಸಕ್ತಿಯಿಂದ ಸಿಂಗರಿಸಿದ್ದ ಸುಜಾತ ದತ್ತಾತ್ರೇಯ ಮತ್ತು ಕವಿತಾ ವೆಂಕಟ್ ಅವರು ಅಭಿನಂದನಾರ್ಹರು.

ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಕನ್ನಡ ಭುವನೇಶ್ವರಿ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಪುರಂದರ ದಾಸರು, ಟಿಪ್ಪೂ ಸುಲ್ತಾನ್, ತರಕಾರಿ ಮಾರುವ ಹೆಂಗಸು ಹೀಗೆ ಹಲವಾರು ಅಪ್ಪಟ ಕನ್ನಡದ ಪಾತ್ರಧಾರಿ ಚಿಣ್ಣರು ವೇದಿಕೆಯನ್ನೇರಿ ತೀರ್ಪುಗಾರರಾಗಿದ್ದ ಜ್ಯೋತಿ ಶ್ರೀಕಾಂತ್ ಮತ್ತು ವತ್ಸಲಾ ಪ್ರಕಾಶ್ ಅವರಿಗೆ ಸಾಕಷ್ಟು ಶ್ರಮ ನೀಡಿದರು. ಕೃಷ್ಣಾ ನಾಗರಾಜ್ ಮತ್ತು ನಟೇಶ್ ಮಾರಪ್ಪ ಅವರುಗಳು ರಸಪ್ರಶ್ನೆಗಳ ಮೂಲಕ ಸಭಿಕರಿಗೆ ಕರ್ನಾಟಕದ ಇತಿಹಾಸದ ಪರಿಚಯ ಮಾಡಿಸಿದರು.

ಉತ್ತರ ಕರ್ನಾಟಕದ ಗಂಡು ಕನ್ನಡ, ಮಂಗಳೂರು ಕನ್ನಡ ಮತ್ತು ಬೆಂಗಳೂರು ಕನ್ನಡ ಈ ಮೂರು ಭಾಷೆಗಳನ್ನೊಳಗೊಂಡು, ಕರ್ನಾಟಕದ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಛಾಯೆಯಿದ್ದ ಹಾಸ್ಯ ನಾಟಕ ಮತ್ತು ಇನ್ನ್ಯಾವ ನಾಟಕ ಎಲ್ಲರನ್ನೂ ರಂಜಿಸಿತು. ಬಾಲ ಕಲಾವಿದರಾದ ಸುಮಂತ ಮೀನಾಕ್ಷಿ ಮತ್ತು ನಿಧಿ ವಿಜಯ್, ಎಂಎಲ್ಎ ಪಾತ್ರದಲ್ಲಿ ಅರುಣ್ ಕುಲಕರ್ಣಿ, ಅವರ ಶಿಷ್ಯ ವಸಂತ್, ಮಾಜಿ ಎಂಎಲ್ಎ ಆಗಿ ಬಿರಾದರ್, ಹೋಟೆಲ್ ಮಾಲಿಕರಾಗಿ ಸತ್ಯ ಕುಮಾರ್, ಡಾಕ್ಟರ್ ಆಗಿ ವಿಜಯ್ ನರಸಿಂಹ, ಇಂಜಿನೀಯರ್ ಆಗಿ ಸುರೇಶ್ ಅವರುಗಳ ಪ್ರಬುದ್ಧ ಅಭಿನಯದ ಈ ನಾಟಕ ಚುರುಕು ಸಂಭಾಷಣೆಯಿಂದ ಪ್ರೇಕ್ಷಕರ ಮನ ಸೂರೆಗೊಂಡಿತು.

ಕಾರ್ಯದರ್ಶಿ ವಸಂತ ಕುಮಾರ್ ಕೆಂಚಪ್ಪ ಅವರು ರಾಜ್ಯೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ವಂದನೆ ಸಲ್ಲಿಸಿ ಕೂಟದ ಅಭಿವೃದ್ಧಿಗೆ ಸಹಕರಿಸುವಂತೆ ಸದಸ್ಯರಿಗೆ ಮನವಿ ಮಾಡಿದರು. ರಕ್ತದಾನ ಶಿಬಿರವನ್ನು ಆಯೋಜಿಸಿದ್ದ ಶ್ರೀಧರ್ ಹೊನ್ನವಳ್ಳಿ ಮತ್ತು ಕರ್ನಾಟಕ ರಾಜ್ಯೋತ್ಸವದ ಮಹತ್ವವನ್ನು ಪವರ್ ಪಾಯಿಂಟ್ ಮೂಲಕ ತೆರೆಯ ಮೇಲೆ ಪ್ರತಿಬಿಂಬಿಸಿದ ಸುಜಾತ ಬಿರಾದರ್ ಅವರುಗಳನ್ನು ಕೂಟದ ಪರವಾಗಿ ಅಭಿನಂದಿಸಿದರು.

ಯುವ ದಂಪತಿಗಳಾದ ಸುಷ್ಮಾ ಮತ್ತು ಮನು ಅವರು ಉತ್ತಮವಾಗಿ ನಿರೂಪಿಸಿದ ಕೀವಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಾಡಗೀತೆ, ಭಾರತ ಮತ್ತು ನ್ಯೂಜಿಲೆಂಡ್ ರಾಷ್ಟ್ರಗೀತೆಗಳ ಸಾಮೂಹಿಕ ಗಾಯನದೊಂದಿಗೆ ಮುಕ್ತಾಯವಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On the occasion of Kannada Rajyotsava in Auckland blood donation by Newzealand Kannadigas was organized. Newzealand Kannada Sangha members participated overwhelmingly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more