ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯಾಟಲ್ ನಲ್ಲಿ ದೀಪಾವಳಿ ಮತ್ತು ರಾಜ್ಯೋತ್ಸವ

By * ಕುಂಭಾಸಿ ಶ್ರೀನಿವಾಸ ಭಟ್, ಸಿಯಾಟಲ್
|
Google Oneindia Kannada News

MD Kowshik in Seattle
ಇದೇ ನವೆಂಬರ್ 21ರಂದು ಸಿಯಾಟಲ್ ನ ಕನ್ನಡಿಗರು, ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವಗಳನ್ನು ತುಂಬು ಸಂಭ್ರಮದಿಂದ ಆಚರಿಸಿದರು. ಹಲವಾರು ಕಾರಣಗಳಿಂದ ಒಂದೆರಡು ವಾರ ತಡವಾಗಿ ಆಚರಿಸಿದರೂ, ದೀಪಾವಳಿಯ ಸಡಗರ, ರಾಜ್ಯೋತ್ಸವದ ಅಭಿಮಾನ ಮತ್ತು ಕನ್ನಡ ಕುಟುಂಬಗಳ ಸ್ನೇಹ ಸಮ್ಮಿನಕ್ಕೆ ಕೊರತೆ ಇರಲಿಲ್ಲ. ಪ್ರಸಕ್ತ ಕಾರ್ಯಕಾರಿ ಸಮಿತಿಯವರ ಕೊನೆಯ ಕಾರ್ಯಕ್ರಮವಾದುದರಿಂದ ಕನ್ನಡ ಕೂಟದ ವಾರ್ಷಿಕ ಆದಾಯ ಖರ್ಚುಗಳ ವರದಿ ಮತ್ತು ಹೊಸ ಸಮಿತಿಯವರ ಹುಡುಕುವಿಕೆಯ ಪ್ರಯತ್ನವೂ ಅಲ್ಲಿ ಸೇರಿತ್ತು.

ಕಾರ್ಯಕ್ರಮದ ಪ್ರಾರಂಭದಲ್ಲೇ ದಿವಿನಾದ ಭೋಜನ. ಸಿಹಿ ಪೊಂಗಲ್, ಮೊಸರನ್ನ, ಪೊಂಗಲ್, ಇಡ್ಲಿ, ಪಕೋಡ, ಮೆಣಸಿನಕಾಯಿ ಬೋಂಡ, ಜಿಲೇಬಿ ಮತ್ತು ಕಾಫಿ ಬಹಳ ರುಚಿಕರವಾಗಿದ್ದುವು. ಈ ರಸಗವಳವನ್ನು ಮುಗಿಸುವಷ್ಟರಲ್ಲಿ ಮನರಂಜನೆಯ ಕಾರ್ಯಕ್ರಮ ಪ್ರಾರಂಭವಾಯಿತು.

ಈ ವರ್ಷದ ಕಾರ್ಯಕ್ರಮದ ವಿಶೇಷವೇನೆಂದರೆ ಮಕ್ಕಳಿಗೆ ಚಿತ್ರ ಕಲೆ, ಸಂಗೀತ, ಮತ್ತು ಕವನ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಪಾರಿತೋಷಕಗಳನ್ನು ವಿತರಿಸಿದರು. ರಮ್ಯಾ ರಾಜಶೇಖರ್ ಅವರು ಪ್ರಾಯೋಜಿಸಿದ ಈ ಕಾರ್ಯಕ್ರಮದಲ್ಲಿ ಸುಮಾರು ನಲವತ್ತು ಮಕ್ಕಳು ಭಾಗವಹಿಸಿ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಎರಡು ವರುಷಗಳ ಮಕ್ಕಳಿಂದ ಹದಿನಾಲ್ಕು ವರ್ಷಗಳ ಬಾಲಿಕೆಯರ ಪ್ರತಿಭೆಯ ಪುರಸ್ಕಾರ ಅಚ್ಚುಕಟ್ಟಾಗಿ ನಡೆಯಿತು. ರಮ್ಯಾ ಅವರ ಅಜ್ಜಿ ಎಮ್.ಡಿ. ಮಹಾದೇವಮ್ಮ ಅವರ ಹೆಸರಿನಲ್ಲಿ ಪಾರಿತೋಷಕಗಳನ್ನು ಅವರೇ ಒದಗಿಸಿದ್ದರು. ಇದೊಂದು ಬಹಳ ಯಶಸ್ವೀ ಕಾರ್ಯಕ್ರಮವಾಗಿ ನಡೆಯಿತು.

ಇನ್ನೊಂದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮ, ಹಠಾತ್ ಕಲಾವಿದರಿಂದ ಕಡಿಮೆ ಬಜೆಟ್ಟಿನ ಚಲನಚಿತ್ರದ ತಯಾರಿಯ ನಿರೂಪಣೆ. ಎಮ್ ಜಿ ಎಮ್ ಲಾಂಛನ(ಅಣಕ ಹೆಸರು)ದಲ್ಲಿ ತಯಾರಿಸಿದ ಈ ಚಲನಚಿತ್ರ ರೂಪಕದಲ್ಲಿ, ಸಂಗೀತ, ನೃತ್ಯ, ಕುಸ್ತಿ, ರಾಜಕೀಯ, ಇತರ ಎಲ್ಲಾ ಮಸಾಲೆಗಳನ್ನೂ ತುಂಬಿಸಿ ಪ್ರೇಕ್ಷಕರ ಮನ ರಂಜಿಸಿದರು. ರಮೇಶ್ ಬೆಂಗಳೂರ್ ಅವರ ನಿರ್ದೇಶನದಲ್ಲಿ ಪ್ರದರ್ಶಿತವಾದ ಈ ಕೊಡುಗೆಯಲ್ಲಿ ಸುಮಾರು ನಲವತ್ತು ಕಲಾವಿದರು ಭಾಗವಹಿಸಿ ತಮ್ಮ ಪ್ರದರ್ಶನದಿಂದ ನೆರೆದ ಜನರ ಮನವನ್ನು ಸೆರೆ ಹಿಡಿದರು.

ಕೊನೆಯಲ್ಲಿ ಜಾದೂಗಾರ ಎಮ್.ಡಿ. ಕೌಶಿಕ್ ಅವರಿಂದ ಡಿ.ವಿ.ಜಿ. ಆವರ ಮಂಕು ತಿಮ್ಮನ ಕಗ್ಗದ ಸಂದೇಶವನ್ನು ಸಾರುವ ಮ್ಯಾಜಿಕ್ ಶೋ ಮಕ್ಕಳಿಗೂ, ದೊಡ್ಡವರಿಗೂ ನೀತಿ ಪಾಠದೊಡನೆ ಮನರಂಜನೆಯನ್ನೂ ಒದಗಿಸಿತು. ಇಂತಹ ಕಾರ್ಯಕ್ರಮವನ್ನು ಅಮೆರಿಕದಲ್ಲಿ ಇದೇ ಮೊದಲ ಬಾರಿ ನೋಡಿದೆವೆಂದು ನನ್ನ ಅನಿಸಿಕೆ. ಕೌಶಿಕ್ ಅವರ ವಾಕ್ಚಾತುರ್ಯ, ಕೈಚಳಕ, ಮತ್ತು ಹಾಸ್ಯಪೂರಿತ ನಿರೂಪಣೆ ಪ್ರೇಕ್ಷಕರನ್ನು ಅದರಲ್ಲೂ ಮಕ್ಕಳನ್ನು ಬೇರೊಂದು ಲೋಕಕ್ಕೆ ಕರೆದೊಯ್ದುವು.

ಕಾರ್ಯಕ್ರಮದ ಅಂಗವಾಗಿ ಈ ವರ್ಷ ನಮ್ಮನ್ನು ಅಗಲಿದ ಶಿಕಾರಿಪುರ ಹರಿಹರೇಶ್ವರ ಮತ್ತು ಅಯೋವಾದ ಕೃಷ್ಣ ಶಾಸ್ತ್ರಿ ಅವರ ಕನ್ನಡ ಸೇವೆಯನ್ನು ನೆನೆದು ಅವರಿಗೆ ಶ್ರದ್ಧಾಂಜಲಿಯನ್ನು ಅಪ್ಱಿಸಲಾಯಿತು.

ಕಾರ್ಯಕ್ರಮಕ್ಕೆ ಸಹಾಯ ಮಾಡಿದ ಅಪಾರ ಸ್ವಯಂ ಸೇವಕರ ಬಳಗ, ಕಾರ್ಯಕ್ರಮಕ್ಕೆ ಬಂದು ಉತ್ಸಾಹದಿಂದ ಭಾಗವಹಿಸಿದ ಸದಸ್ಯರು ಮತ್ತು ಅತಿಥಿಗಳು ಎಲ್ಲರೂ ಈ ದೀಪಾವಳಿ ಮತ್ತು ರಾಜ್ಯೋತ್ಸವ ಕಾರ್ಯಕ್ರಮವನ್ನು ಅಮೋಘವಾಗಿ ಮಾಡಿ, ಹೊಸ ಹರುಷವನ್ನು ಸಿಯಾಟಲ್ ಕನ್ನಡ ಬಳಗಕ್ಕೆ ತಂದರೆಂಬುದರಲ್ಲಿ ಯಾವುದೇ ಸಂಶಯ ಕಾಣಿಸಲಿಲ್ಲ. ಸಮಿತಿಯ ಸದಸ್ಯರಾದ ಚಂದ್ರಶೇಖರ ಕುಂಟೆಗೌಡನಹಳ್ಳಿ , ಮಲ್ಲಿಕಾರ್ಜುನ ಗುಮ್ಮ, ನಾಗೇಂದ್ರ ಹೊನ್ನವಳ್ಳಿ , ಪ್ರತಿಮ ಸುನೀಲ್, ರಮ್ಯ ರಾಜಶೇಕರ್, ಶ್ರೀನಿವಾಸ ರಾವ್, ವೆಂಕಟೇಶ್ ಗೌಡ, ವಿದ್ಯ ಬ್ಯಾಡಿಗಿ ಹಾಗು ವಿಜಯ ಬ್ಯಾಡಿಗಿ ಅವರಿಗೆ ಈ ಸಂಭ್ರಮದ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಕ್ಕಾಗಿ ಸಿಯಾಟಲ್ ಕನ್ನಡಿಗರ ಹೃತ್ಪೂರ್ವಕ ಅಭಿನಂದನೆಗಳು.

English summary
Kannadigas in Seattle, Washington, America celebrated Diwali and Kannada Rajyotsava on November 21. MD Mahadevamma distributed awards to the children who participated in various cultural activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X