ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ನಿರ್ದೇಶಕ ಚುನಾವಣೆ ಫಲಿತಾಂಶ ಪ್ರಕಟ

By * ಎಸ್ಕೆ. ಶಾಮಸುಂದರ
|
Google Oneindia Kannada News

Ravi Denkanikote
ಬೆಂಗಳೂರು, ನ. 17 : ಎರಡು ಸಾವಿರದ ಹತ್ತನೇ ಸಾಲಿನ ಅಕ್ಕ ನಿರ್ದೇಶಕ ಹುದ್ದೆಗೆ ಸ್ಪರ್ಧಿಸಿದ್ದ ಹತ್ತೂ ಮಂದಿ ಅಮೆರಿಕನ್ನಡ ಸ್ವಯಂಸೇವಕರು ನಿರ್ದೇಶಕ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂದಕ್ಕೆ ಪಡೆಯಲು ಕಡೆಯದಿನವಾಗಿದ್ದ ನವೆಂಬರ್ 14ರಂದು ಇಬ್ಬರು ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದದ್ದರಿಂದ ಮತದಾನ ನಡೆಯದೆ ನಿರ್ದೇಶಕರ ಚುನಾವಣೆ ಸುಸೂತ್ರವಾಯಿತು.

ಅಕ್ಕ ನಿರ್ದೇಶಕ ಮಂಡಳಿಯಲ್ಲಿ ಒಟ್ಟು 21 ಮಂದಿ ಚುನಾಯಿತ ಸದಸ್ಯರಿರುತ್ತಾರೆ. ಪ್ರಸಕ್ತ ಸಾಲಿನಲ್ಲಿ ತೆರವಾಗಿದ್ದ ಆವರ್ತನ ನಿಯಮಾನುಸಾರದ 10 ಸ್ಥಾನಗಳನ್ನು ತುಂಬುವ ಸಲುವಾಗಿ ಹಾಲಿ ಚುನಾವಣೆ ನಡೆಯಿತು. ಹೆಚ್ಚಾಗಿ ಹೊಸ ಮುಖಗಳೇ ಆಗಿರುವ ನೂತನ ನಿರ್ದೇಶಕರ ಹೆಸರುಗಳು ಮತ್ತು ಅವರು ವಾಸಿಸುವ ರಾಜ್ಯಗಳ ಹೆಸರುಗಳು ಕೆಳಕಂಡಂತಿವೆ :

* ಅನಿಲ್ ದೇಶಪಾಂಡೆ (ಇಲಿನಾಯ್)
* ರವೀಂದ್ರ ಹರ್ಸೂರ್ (ಇಲಿನಾಯ್)
* ಮೋಕ್ಷಗುಂಡಂ ಜಯರಾಮ್ (ಇಲಿನಾಯ್)
* ಡಾ. ನವೀನ್ ಕೃಷ್ಣ (ಮಿಸ್ಸೌರಿ )
* ಶಶಿಶೇಖರ್ ಕೃಷ್ಮರಾಜನಗರ್ (ಪೆನ್ಸಿಲ್ ವೇನಿಯ)
* ರಾಘವ ಪುಟ್ಟಸ್ವಾಮಿ (ಮಿಚಿಗನ್)
* ಮಧು ರಂಗಯ್ಯ (ನ್ಯೂ ಜೆರ್ಸಿ)
* ಸಂಜಯ್ ರಾವ್ (ವರ್ಜೀನಿಯ)
* ಶಂಕರ್ ಶೆಟ್ಟಿ (ನ್ಯೂ ಜೆರ್ಸಿ)
* ರವಿಶಂಕರ್ ಭೈರಪ್ಪ ಗೌಡ (ಉತ್ತರ ಕ್ಯಾಲಿಫೋರ್ನಿಯ)

ಚುನಾವಣೆಗಳನ್ನು ನಡೆಸಲು ಒಂದು ಸ್ವತಂತ್ರವಾದ ಆದರೆ ನಿಷ್ಪಕ್ಷವಾದ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಚುನಾವಣೆಯ ಪ್ರಕ್ರಿಯೆಗಳನ್ನು ಸಮರ್ಥ ರೀತಿಯಲ್ಲಿ ನಡೆಸಿ ಫಲಿತಾಂಶ ಪ್ರಕಟಿಸಿತು ಎಂದು ಅಕ್ಕ ಅಧ್ಯಕ್ಷ ರವಿ ಡಂಕಣಿಕೋಟೆ ಬುಧವಾರ ದಟ್ಸ್ ಕನ್ನಡಕ್ಕೆ ತಿಳಿಸಿದರು. ಚುನಾವಣಾ ಸಮಿತಿ ಪೂರ್ವ ಕರಾವಳಿಯಿಂದ ಕಾರ್ಯೋನ್ಮುಖವಾಗಿತ್ತು.

ಆಡಳಿತ ಮಂಡಳಿ, ಇತ್ಯಾದಿ : ಇದೇ ಡಿಸೆಂಬರ್ ನಲ್ಲಿ ಅಕ್ಕ ನಿರ್ದೇಶಕ ಮಂಡಳಿ ಸಭೆ ಸೇರುತ್ತಿದ್ದು ಆಡಳಿತ ಮಂಡಳಿಗೆ (EC) ಚುನಾವಣೆಗಳು ನಡೆಯುತ್ತವೆ. ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ ಮತ್ತು ಕಾರ್ಯನಿರ್ವಾಹಕ ಮಂಡಳಿಯ ಸದಸ್ಯ ಸ್ಥಾನಗಳನ್ನು ತುಂಬಲಾಗುತ್ತದೆ. ಅಗತ್ಯ ಬಿದ್ದರೆ ಮತದಾನ ನಡೆಯುತ್ತದೆ.

ಪ್ರಮುಖವಾಗಿ ಅಕ್ಕ ಅಧ್ಯಕ್ಷ ಸ್ಥಾನವನ್ನು ಯಾರು ಅಲಂಕರಿಸುತ್ತಾರೆ ಎನ್ನುವುದು ಅಮೆರಿಕಾ ಮಾತ್ರವಲ್ಲದೆ ಅಕ್ಕದ ಆಗುಹೋಗುಗಳನ್ನು ಆಸಕ್ತಿಯಿಂದ ಗಮನಿಸುವ ವಿಶ್ವಕನ್ನಡಿಗರ ವಲಯಗಳಲ್ಲಿ ಕುತೂಹಲದ ವಿಷಯವೇ ಆಗಿರುತ್ತದೆ. ಬಲ್ಲ ಮೂಲಗಳ ಪ್ರಕಾರ, ಹಾಲಿ ಅಧ್ಯಕ್ಷ ರವಿ ಡಂಕಣಿಕೋಟೆ ಅವರಿಗೆ ಇನ್ನೊಮ್ಮೆ ಅಧ್ಯಕ್ಷರಾಗುವ ತವಕ ಇದ್ದಂತಿಲ್ಲ.

ಇಲಿನಾಯ್ ರಾಜ್ಯದ ಶಿವಮೂರ್ತಿ ಕೀಲಾರ, ಕಾವೇರಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ನಾಗಶಂಕರ ಚಂದ್ರಶೇಖರ್, ಇದೀಗ ಮುಕ್ತಾಯವಾದ ನ್ಯೂ ಜೆರ್ಸಿ ಅಕ್ಕ ವಿಶ್ವ ಕನ್ನಡ ಸಮ್ಮೇಳನದ [6ನೇ ಅಕ್ಕ ಸಮ್ಮೇಳನ ಗ್ಯಾಲರಿ] ಸಂಚಾಲಕರಲ್ಲೊಬ್ಬರಾದ ಮಧು ರಂಗಯ್ಯ ಅವರುಗಳಲ್ಲದೆ ವಾಷಿಂಗ್ಟನ್ ಡಿಸಿ ಕನ್ನಡಿಗರ ವಲಯಗಳಲ್ಲಿ ಜನಪ್ರಿಯ ವ್ಯಕ್ತಿಯಾಗಿರುವ ಸಂಜಯ್ ರಾವ್ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿವೆ. ಇಂಥ ತುರುಸಿನ ಸ್ಪರ್ಧೆಯಲ್ಲಿ ಪಶ್ಚಿಮ ಕರಾವಳಿಯ ಉತ್ಸಾಹಿ ಕನ್ನಡಿಗ, ಕೆಕೆಎನ್ ಸಿ ಸಕ್ರಿಯ ಸದಸ್ಯ ರವಿಶಂಕರ್ ಭೈರಪ್ಪ ಅವರಿಗೆ ಅಧ್ಯಕ್ಷ ಲಕ್ಷ್ಮಿ ಒಲಿದುಬಂದರೆ ಆಶ್ಚರ್ಯಪಡಬೇಕಾಗಿಲ್ಲ.

ಸಾಮಾನ್ಯವಾಗಿ ಪ್ರತೀಸಾರಿ ನಿರ್ದೇಶಕ ಮಂಡಳಿ ಸ್ಥಾನಗಳಿಗೆ ಆಯ್ಕೆಯಾಗಲು ಬಯಸುತ್ತಿದ್ದ ಮುಖಗಳು ಈ ಬಾರಿ ಹಿಂದಕ್ಕೆ ಸರಿದಿರುವುದು ಈ ಸಾಲಿನ ಚುನಾವಣೆಯ ವಿಶೇಷತೆಗಳಲ್ಲಿ ಪ್ರಮುಖ. ಕಳೆದ ಮೂರು ನಿರ್ದೇಶಕ ಚುನಾವಣೆಗಳಲ್ಲಿ ಪರಾಭವಗೊಂಡಿದ್ದ ಶಿಕಾಗೋ ನಗರದ ಹಿರಿಯ ಪ್ರಜೆ ಮೋಕ್ಷಗುಂಡಂ ಜಯರಾಮ್ ಈ ಬಾರಿ ಗೆಲುವಿನ ಬರದಿಂದ ಮುಕ್ತರಾಗಿರುವುದು ಮತ್ತೊಂದು ವಿಶೇಷ.

ಹತ್ತು ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಅಮೆರಿಕನ್ನಡಿಗರ ಒಂದು ಮುಖವಾಣಿ ಅಕ್ಕ ಸಂಸ್ಥೆ ಅನೇಕ ಏಳು ಬೀಳುಗಳನ್ನು ಕಂಡಿದೆ. ಶ್ರೀಸಾಮಾನ್ಯ ಅಮೆರಿಕನ್ನಡಿಗ, ಕನ್ನಡತಿ ಮತ್ತು ಸಮ್ಮೇಳನ ಸಮಯದಲ್ಲಿ ಮಾತ್ರ ಅಮೆರಿಕದತ್ತ ಕತ್ತೆತ್ತಿ ನೋಡುವ ತವರು ಕರ್ನಾಟಕದ ಕನ್ನಡಿಗರ ಅಪೇಕ್ಷೆ ಮತ್ತು ನಿರಪೇಕ್ಷೆಗಳನ್ನು ಮನನ ಮಾಡಿಕೊಂಡು ಅದರಂತೆ ಕಾರ್ಯೋನ್ಮುಖವಾಗುವ ದಕ್ಷ ಅಧ್ಯಕ್ಷ ಮತ್ತು ಅನುಭವಿ ಆಡಳಿತ ಮಂಡಳಿಯನ್ನು ಉತ್ತರ ಅಮೆರಿಕಾ ದೇಶ ಕೈ ಬೀಸಿ ಕರೆಯುತ್ತಿದೆ.

ಅಕ್ಕ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿದ್ದ ಕಳೆದ ಸಾಲುಗಳ ನಾಯಕರ ಹೆಸರುಗಳು ನಿಮಗೆ ತಿಳಿದಿರಲಿ. ಜಯಸ್ವಾಮಿ (ವಿದ್ಯಾರಣ್ಯ ಕನ್ನಡ ಸಂಘ ಶಿಕಾಗೊ) ಅಮರ್ ನಾಥ್ ಗೌಡ (ಪಂಪ ಕನ್ನಡ ಸಂಘ ಮಿಚಿಗನ್), ಡಾ. ಕುದೂರು ಮುರಳಿ (ಪಂಪ ಕನ್ನಡ ಸಂಘ ಮಿಚಿಗನ್), ರಮೇಶ್ ಗೌಡ (ಪಂಪ ಕನ್ನಡ ಸಂಘ ಮಿಚಿಗನ್) ರವಿ ಡಂಕಣಿಕೋಟೆ (ಕಾವೇರಿ ಕನ್ನಡ ಸಂಘ ವಾಷಿಂಗ್ ಟನ್ ಡಿಸಿ).

English summary
North America Kannada organization, AKKA Board of directors election results 2010. Ten aspirants got elected unanimously to serve for a period of two years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X