ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೂರ ತೀರದಿಂದ ಹರಿದು ಬಂದ ಕಥೆಗಳು

By * ನಳಿನಿ ಮೈಯ
|
Google Oneindia Kannada News

Naga Aithal, South California
ದೂರ ತೀರದಿಂದ ಹರಿದು ಬಂದ ಕಥೆಗಳು' ಆಹಿತಾನಲ (ನಾಗ ಐತಾಳ) ಅವರು ಬರೆದ ಒಂಬತ್ತು ಕಥೆಗಳ ಒಂದು ಕಥಾಸಂಕಲನ. ಈ ಪುಸ್ತಕವನ್ನು ಓದುತ್ತಿದ್ದಂತೆ ನನಗನ್ನಿಸಿದ್ದು- ಒಬ್ಬ ಬರಹಗಾರನ ಲೇಖನದಲ್ಲಿ, ಕಥೆ, ಕವನಗಳಲ್ಲಿ ಆತನ ಸಂಸ್ಕಾರ, ವ್ಯಕ್ತಿತ್ವ, ಆಲೋಚನಾ ಲಹರಿಯ ಮಿಂಚುನೋಟ ಸಿಕ್ಕಿಬಿಡುತ್ತದಲ್ಲವೆ? ಅಂತ. ನೀವು ಕುಡಿಯುತ್ತಿರುವುದು ಪಾನಕವೇ ಆಗಲಿ, ಸಾರೇ ಆಗಲಿ ಮೂಲಭೂತವಾದ ನೀರಿನ ಗುಣವಿಶೇಷ ಮನಸ್ಸಿಗೆ ಗ್ರಾಹ್ಯವಾಗಿಬಿಡುತ್ತದಲ್ಲ! ಹಾಗೆಯೇ ಇದೂ ಸಹ.

ಮಾಸ್ತಿ ಅವರ ಕಥೆಗಳಲ್ಲಿ ಒಬ್ಬ ಸಂಪನ್ನ, ಪರಿಪಕ್ವತೆಯನ್ನು ಹೊಂದಿದ ವ್ಯಕ್ತಿಯ ಛಾಪು ಇದೆ. ಆ ಕಥೆಗಳಲ್ಲಿ ಅನುಕಂಪ, ಸಹೃದಯತೆ, ಸೌಜನ್ಯ ತಾನೇತಾನಾಗಿ ಹೊಮ್ಮುತ್ತದೆ. ಅನಂತಮೂರ್ತಿ ಅವರ ಕಥೆಗಳಲ್ಲಿ ರೂಢಿಗತ ಸಂಪ್ರದಾಯಗಳನ್ನು ಪ್ರಶ್ನಿಸುವ ಧೀರ ನಿಲುವು ಕಂಡುಬರುತ್ತದೆ. (ಹೀಗೆ ಹೇಳುವಾಗ ಚಿಕ್ಕಂದಿನಲ್ಲಿ ಬೇಕೆಂದೇ ಅಶ್ವತ್ಥ ಮರದ ಬುಡದಲ್ಲಿರುವ ನಾಗನ ಕಲ್ಲಿನ ಮೇಲೆ ಉಚ್ಚೆ ಹೊಯ್ದಿದ್ದೆ ಅಂತ ಅವರು ಎಲ್ಲೋ ಬರೆದುಕೊಂಡಿದ್ದು ನೆನಪಾಗುತ್ತದೆ.) ಹಾಗೇ ದೂರ ತೀರದಿಂದ ಹರಿದು ಬಂದ ಕಥೆಗಳು' ಓದುವಾಗ ಅಲ್ಲಿ ನಮಗೆ ನಾಗ ಐತಾಳರ ವ್ಯಕ್ತಿತ್ವ ಕಾಣಸಿಕ್ಕುತ್ತದೆ. ಇಲ್ಲಿ ಡಂಭಾಚಾರವಿಲ್ಲ, ಇನ್ನೊಬ್ಬರನ್ನು ಮೆಚ್ಚಿಸಬೇಕೆಂಬ ತವಕವಿಲ್ಲ, ಯಾವುದೇ ಇಸಂ ಅನ್ನು ಪ್ರತಿಪಾದಿಸುವ ಹಟವಿಲ್ಲ. ಇಲ್ಲಿರುವುದು ಜೀವನವನ್ನು ನೋಡುವ ನೇರ, ಸರಳ ದೃಷ್ಟಿ. ಅಮೆರಿಕಾವೇ ಆಗಲಿ, ಭಾರತವೇ ಆಗಲಿ ನೆರೆಹೊರೆಯವರ ಜೊತೆ, ಸ್ನೇಹಿತರ ಜೊತೆ ಪ್ರೀತಿ, ಸೌಹಾರ್ದ ತುಂಬಿದ ಬಾಳ್ವೆ ನಡೆಸಿದ ಐತಾಳರ ಮನೋಭಾವ ಇಲ್ಲಿ ಅಕ್ಷರ ರೂಪದಲ್ಲಿ ಅಭಿವ್ಯಕ್ತಿ ಪಡೆದಿದೆ. ಇದೇ ಕಾರಣದಿಂದ ಇಲ್ಲಿ ತಂತ್ರ, ವಿಭಿನ್ನ ಬಗೆಯ ವಸ್ತು, ಆಡಂಬರದ ಶೈಲಿ ಮುಂತಾದ ಯಾವ ಸರ್ಕಸ್ಸೂ ಇಲ್ಲ. ಅದು ಈ ಕಥೆಗಳಲ್ಲಿನ ಗುಣವೂ ಹೌದು, ದೋಷವೂ ಹೌದು- ಓದುಗರ ದೃಷ್ಟಿಕೋನಕ್ಕನುಗುಣವಾಗಿ.

ನನ್ನ ಮನಸ್ಸನ್ನು ಆಳವಾಗಿ ತಟ್ಟಿದ್ದು ಈ ಸಂಗ್ರಹದಲ್ಲಿರುವ ಮೊದಲನೆಯ ಕಥೆ- ರಮ್ಮಿ ಅಂಡ್ ಶೋ'. ಇಲ್ಲಿ ನಿರೂಪಕನ ಜೀವನೋತ್ಸಾಹ, ಸಂಭ್ರಮ, ಸಡಗರಗಳು ಇಸ್ಪೀಟು ಆಟ, ಕನ್ನಡಕೂಟದ ಕಾರ್ಯಕ್ರಮ ಇತ್ಯಾದಿ ರೂಪಗಳಲ್ಲಿ ಚೆನ್ನಾಗಿ ಚಿತ್ರಿತವಾಗಿದೆ. ಅಪರೂಪಕ್ಕೆ ಆತ ಹೆಂಡತಿಯ ಜೊತೆ ಆಡುವ ಜಗಳವೂ ಕೂಡಾ ಆಹ್ಲಾದಕರವಾಗಿಯೇ ಇರುತ್ತದೆ- ಊಟಕ್ಕೆ ಉಪ್ಪಿನಕಾಯಿ ಇದ್ದ ಹಾಗೆ. ಈ ಹಿನ್ನೆಲೆಯಲ್ಲಿ ವೆಂಕೋಬ ರಾಯನ ಬದುಕಿನ ಭಗ್ನ ಕನಸುಗಳು, ಏಕಾಂಗಿತನ ಎಲ್ಲವೂ ಎದ್ದುಕಾಣುತ್ತವೆ. ಆತನ ಮಾತಿಲ್ಲದ ಒಕ್ಕುಂಟಿ ವ್ಯಕ್ತಿತ್ವ ನಿರೂಪಕನ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾಗಿದೆ. ಕೊನೆಯಲ್ಲಿ ವೆಂಕೋಬರಾಯನ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಆತನ ಬದುಕಿನ ದಾರುಣ ಕಥೆಯನ್ನು ಕೇಳಿದಾಗ ಹೃದಯ ನೀರಾಗುತ್ತದೆ. ಈ ಆಧುನಿಕ ಸಂವಹನ ಯುಗದಲ್ಲಿ, ಅಮೆರಿಕೆಯಂತಹ ಶ್ರೀಮಂತ ರಾಷ್ಟ್ರದಲ್ಲಿ ಆತನ ನೋವು ತುಂಬಿದ ಹೃದಯದ ಕರೆ ಯಾರನ್ನೂ ಮುಟ್ಟಲಿಲ್ಲವಲ್ಲ ಅನ್ನಿಸಿಬಿಡುತ್ತದೆ!

ಐತಾಳರ ಕಥನಕಲೆಯ ಮೇಲೆ ಮಾಸ್ತಿಯವರ ಪ್ರಭಾವ ಉಂಟಾಗಿರುವುದು ಹಲವಾರು ಕಡೆ ಕಾಣಿಸುತ್ತದೆ.
ಕವಲು ದಾರಿ' ಕಥೆಯಲ್ಲಿ ಒಬ್ಬ ನಿವೃತ್ತ ಪ್ರೊಫೆಸರ್ ಮನೆಯಲ್ಲಿ ಹೆಂಡತಿಯ ಆಜ್ಞಾನುವರ್ತಿಯಾಗಿ, ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡವನಾಗಿ ಒಳಗೊಳಗೆ ತನ್ನ ಪರಿಸ್ಥಿತಿಯನ್ನು ದ್ವೇಷಿಸುತ್ತಿರುವ ಚಿತ್ರಣ ಲಘು ಹಾಸ್ಯಭರಿತವಾಗಿ ಬಹಳ ಚೆನ್ನಾಗಿ ಮೂಡಿದೆ. ಅನೇಕರ ಜೀವನದಲ್ಲಿ ಇದು ನಿಜವಾಗಿಯೂ ಸಂಭವಿಸಬಹುದಾದ ಸನ್ನಿವೇಶ! ಓ.ಹೆನ್ರಿಯವರ ಒಂದು ಕಥೆಯಿಂದ ಪ್ರಭಾವಿತವಾದ ಕಥೆ ಇದಾದರೂ ಇಲ್ಲಿ ಪಡಿಮೂಡಿದ ಭಾರತೀಯತೆ ಆ ಸುಳಿವನ್ನೇ ಕೊಡುವುದಿಲ್ಲ.

ತುಂಬುಜೀವನ ನಡೆಸಿದ ಐತಾಳರ ಸ್ವಭಾವದ ಒಂದು ಮುಖವೆಂದರೆ ಸಹಮಾನವನ ಅವಗುಣಗಳನ್ನು, ಲೋಪದೋಷಗಳನ್ನು ಅನುಕಂಪದಿಂದ ಕಾಣುವ ದೃಷ್ಟಿ. ಅವರ ವ್ಯಕ್ತಿತ್ವದ ಈ ಆಯಾಮ ಮೆಲಿಸ್ಸಾಳ ಮನೋವೇದನೆ' ಮತ್ತು ಮಿಣ್ಣು, ಹಣ್ಣು, ನಾಗೂ' ಕಥೆಗಳಲ್ಲಿ ಎದ್ದು ಕಾಣುತ್ತದೆ. ಮೆಲಿಸ್ಸಾಳ ಮನೋವೇದನೆ' ಕಥೆಯಲ್ಲಿ ತನ್ನ ಭಾರತೀಯ ಸೊಸೆಯನ್ನು ಒಪ್ಪಿಕೊಳ್ಳಲಾರದೆ ಮನಸ್ಸಿನಲ್ಲೇ ತುಮುಲವನ್ನು ಅನುಭವಿಸುತ್ತಿರುತ್ತಾಳೆ ಮೆಲಿಸ್ಸಾ. ಆ ತುಮುಲದ ಧಗೆ ತನ್ನನ್ನು ತಟ್ಟಿದರೂ ಮನಸ್ಸಿಗೆ ಹಚ್ಚಿಕೊಳ್ಳದೆ ಅತ್ತೆಯನ್ನು ಪ್ರೀತಿಯಿಂದಲೇ ಕಾಣುವ ಸೊಸೆ ಮೇಘನಾ. ಈ ಚಕಮಕಿಯಲ್ಲೇ ಕಥೆ ಸಾಗುತ್ತಾ ಕೊನೆಯಲ್ಲಿ ಮೆಲಿಸ್ಸಾಳ ಮರಣಾನಂತರ ಸಿಕ್ಕಿದ ಅವಳ ಡೈರಿ ಕಥೆಯ ಓಘವನ್ನೇ ಬದಲಿಸಿಬಿಡುತ್ತದೆ. ಮೆಲಿಸ್ಸಾ ಸೊಸೆಯ ಬಗ್ಗೆ ತನ್ನ ಒರಟು ವರ್ತನೆಗಾಗಿ ಪಶ್ಚಾತ್ತಾಪ ಪಡುತ್ತಿದ್ದಳೆಂದೂ, ಸೊಸೆಯನ್ನು ಮೆಚ್ಚಿಕೊಂಡಿದ್ದಳೆಂದೂ ತಿಳಿಯುತ್ತದೆ! ದುರುಳ ದುರ್ಯೋಧನನೂ ಸಹ ಕರ್ಣನ ಸ್ನೇಹದಲ್ಲಿ ತನ್ನ ಇನ್ನೊಂದು ಮುಖವನ್ನು ತೋರಿದಂತೆ ಯಾರೂ ಪೂರ್ತಿಯಾಗಿ ಕೆಟ್ಟವರಲ್ಲ ಎಂಬುದು ಮನದಟ್ಟಾಗುತ್ತದೆ.

ಮಿಣ್ಣು, ಹಣ್ಣು, ನಾಗೂ' ಕಥೆಯಲ್ಲಿ ಮಯ್ಯರ ಪಾಲಿಗೆ ತನ್ನ ಇಚ್ಚೆಗೆ ವಿರೋಧವಾಗಿ ಯಾರನ್ನೋ ವರಿಸಿದ ಮಗಳು ನಾಗೂ ತಪ್ಪಿತಸ್ಥೆ. ಮಗಳ ದೃಷ್ಟಿಯಲ್ಲಿ ತನ್ನ ಆಯ್ಕೆಯನ್ನು ಒಪ್ಪಿ ಆಶೀರ್ವದಿಸದ ಅಪ್ಪನೇ ತಪ್ಪು ಮಾಡಿದವನು. ವರ್ಷಗಟ್ಟಲೆ ಹೀಗೇ ಕಳೆದು ಕೊನೆಗೆ ಮಯ್ಯರು ಮರಣಶಯ್ಯೆಯಲ್ಲಿರುವಾಗ ಈ ಎಲ್ಲ ತಪ್ಪು-ಒಪ್ಪುಗಳ ಲೆಕ್ಕಾಚಾರವನ್ನು ಮೀರಿ ಪ್ರೀತಿ ತನ್ನ ಇರುವಿಕೆಯನ್ನು ಸಾರುತ್ತದೆ. ಅವರವರ ಸಂಸ್ಕಾರಕ್ಕೆ, ತಿಳಿವಳಿಕೆಗೆ ತಕ್ಕಂತೆ ಸರಿ-ತಪ್ಪುಗಳ ಪರಿಕಲ್ಪನೆ ಇದ್ದು ತಪ್ಪು' ಎಂಬ ಗ್ರಹಿಕೆಯೇ ಬುಡವಿಲ್ಲದ್ದು ಎಂಬ ಸಂದೇಶ ಈ ಕಥೆಯಲ್ಲಿ ನವಿರಾಗಿ ಮೂಡಿ ಬಂದಿದೆ.

ಐತಾಳರ ವ್ಯಕ್ತಿತ್ವದಲ್ಲಿ ಹಾಸುಹೊಕ್ಕಾದ ಸ್ನೇಹ, ಸೌಹಾರ್ದದ ಮೂಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಅವರ ಬಾಲ್ಯ. ತಂಗಿ ತಮ್ಮಂದಿರನ್ನು, ಕೋಟದಲ್ಲಿ ಕಳೆದ ತಮ್ಮ ಬಾಲ್ಯವನ್ನು ಅವರು ಭಾವಪರವಶರಾಗಿ ನೆನೆಸಿಕೊಳ್ಳುತ್ತಾರೆ. ಅವರ ವ್ಯಕ್ತಿತ್ವದ ಈ ಆಯಾಮವನ್ನು ಹಾಗಲಕಾಯಿ ಪಲ್ಯ' ಮತ್ತು ಮೂಕ ವೇದನೆ' ಕಥೆಗಳಲ್ಲಿ ನಾವು ಕಾಣುತ್ತೇವೆ. ಪಾತ್ರಗಳು ಆಡುವ ದಿನನಿತ್ಯದ ಮಾತಿನಲ್ಲೂ ಪ್ರೀತಿ ಸೂಸುತ್ತದೆ ಈ ಕಥೆಗಳಲ್ಲಿ. ಹಾಗಲಕಾಯಿ ಪಲ್ಯ' ಕಥೆಯಲ್ಲಿ ಬರಲಿರುವ ದುರ್ಘಟನೆಯ ಮುನ್ಸೂಚನೆ ತಾಯಿ ಮೀನಾಕ್ಷಮ್ಮನ ಮಾತಿನಲ್ಲಿ ಕಾಣುತ್ತದೆ. "ಹಾಗೆಲ್ಲ ವಡೇನ ಸುಮ್ಮಸುಮ್ನೆ ಮಾಡಬಾರದು ಕಣೋ... ಅದು ವೈದಿಕದಲ್ಲಿ ಮಾತ್ರ ಮಾಡಬೇಕು. ಬೇರೆ ದಿವಸ್ದಲ್ಲಿ ಮಾಡಿ ಯಾಕೆ ಅನಿಷ್ಟನ್ನ ಮನೆಗೆ ಕರ್ಕೊಳ್ತೀಯಾ?"

ಐತಾಳರ ಕಥನಕಲೆಯ ಮೇಲೆ ಮಾಸ್ತಿಯವರ ಪ್ರಭಾವ ಉಂಟಾಗಿರುವುದು ಹಲವಾರು ಕಡೆ ಕಾಣಿಸುತ್ತದೆ. ಉದಾಹರಣೆಗೆ ಇಂಗ್ಲೆಂಡ್ ರಿಟರ್ನ್ಡ್' ಕಥೆಯಲ್ಲಿ ಅನಂತ್ ಅವರು ವಾಸುದೇವ ರಾಯರಿಗೆ ಹೇಳಿದ ಗೋಪಾಲನ ಕಥೆ ಅಂತ ಪೀಠಿಕೆ ಬರುತ್ತದೆ. ಈ ನಿರೂಪಣೆಯ ಶೈಲಿ ಮಾಸ್ತಿಯವರ ಕಥೆಗಳಲ್ಲೂ ಕಂಡು ಬರುತ್ತದೆ. ಇಂಗ್ಲೆಂಡ್ ರಿಟರ್ನ್ಡ್' ಒಂದು ಕುತೂಹಲಕಾರಿ ಕಥೆಯಾಗಿದ್ದು ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.

ಈ ಎಲ್ಲ ಕಥೆಗಳಲ್ಲೂ ಐತಾಳರೇ ಪುಸ್ತಕದಲ್ಲಿ ಹೇಳಿರುವಂತೆ "ವಾಸ್ತವತೆ, ಕಲ್ಪನೆ, ಆಕಸ್ಮಿಕಗಳ ಜೋಡಣೆಯಿಂದ" ಒಂದು ಸ್ವಾರಸ್ಯಕರವಾದ ಕಥೆ ಹುಟ್ಟಿಕೊಂಡಿದೆ. ಇಲ್ಲಿ ಎದ್ದು ಕಾಣುವುದು ತಮ್ಮ ಅನುಭವಗಳನ್ನು, ಭಾವನೆಗಳನ್ನು ಹಂಚಿಕೊಳ್ಳುವ ಒಂದು ನಿಸ್ಪೃಹ ಪ್ರಯತ್ನ. ಎಷ್ಟೋ ಬಾರಿ ವೈಚಾರಿಕ ಕಥೆ, ಕಾದಂಬರಿಗಳನ್ನು ಓದಿದಾಗ ಮನಸ್ಸು ಯಾವುದೋ ಮಂಥನದಲ್ಲಿ ಸಿಲುಕಿ ಬಹಳ ಕಾಲ ತೊಳಲುತ್ತದೆ. ಇಲ್ಲಿ ಹಾಗಿಲ್ಲ. ಜೀವನದ ಎಲ್ಲ ಏರುಪೇರುಗಳನ್ನು ಸಮದೃಷ್ಟಿಯಿಂದ ನೋಡುವ ಐತಾಳರು ಎಂತಹ ಸನ್ನಿವೇಶದಲ್ಲೂ ಪರಸ್ಪರ ಸಂಬಂಧ ಪ್ರೀತಿಯುತವಾಗಿದ್ದರೆ ಏನನ್ನಾದರೂ ಜಯಿಸಬಹುದು ಎಂಬ ಸಮಾಧಾನಕರವಾದ ಭಾವನೆಯನ್ನು ಉಂಟುಮಾಡುತ್ತಾರೆ.

ತಮ್ಮ ದೀರ್ಘ ಜೀವನದಲ್ಲಿ ಐತಾಳರು ಎಷ್ಟೋ ಸೋಲು, ಗೆಲುವುಗಳನ್ನು ಕಂಡಿದ್ದಾರೆ. ಈಗ ವಯಸ್ಸಾಗುತ್ತಿದ್ದಂತೆ ಆರೋಗ್ಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಅವರನ್ನು ಕಾಡುತ್ತಿವೆ. ಆದರೆ ಇದ್ಯಾವುದೂ ಅವರ ಜೀವನ ಪ್ರೀತಿಯನ್ನು, ಸಾಹಿತ್ಯ, ಸಂಗೀತ ಮುಂತಾದ ಕಲೆಗಳ ಬಗ್ಗೆ ಅವರಿಗಿರುವ ಉತ್ಸಾಹವನ್ನು ಮಬ್ಬುಗೊಳಿಸಿಲ್ಲ. "ಬಂದದ್ದೆಲ್ಲ ಬರಲಿ. ಗೋವಿಂದನ ದಯೆ ಇರಲಿ" ಎಂದು ನಗುನಗುತ್ತಾ, ಅತಿಥಿ ಅಭ್ಯಾಗತರನ್ನು ಕರೆದು ಆದರಿಸುತ್ತಾ, ಭೂತಗನ್ನಡಿಯ ಸಹಾಯದಿಂದ ಕಂಪ್ಯೂಟರ್ ಮೂಲಕ ಕನ್ನಡ ಸೇವೆ ಮಾಡುತ್ತಾ ಕಾಲ ಕಳೆಯುವ ಇವರ ವ್ಯಕ್ತಿತ್ವದ ಛಾಪು ಈ ಕಥೆಗಳ ತುಂಬೆಲ್ಲ ಹರಡಿ ನಿಂತಿದೆ! ನಾನು ಓದಿ ಖುಷಿ ಪಟ್ಟಿರುವ ಈ ಕಥಾಸಂಕಲನವನ್ನು ತುಂಬು ಹೃದಯದಿಂದ ಶಿಫಾರಸ್ಸು ಮಾಡಲು ಸಂತೋಷವಾಗುತ್ತಿದೆ.

ಅಮೆರಿಕಾದಲ್ಲಿ ಈ ಗ್ರಂಥ ಪಡೆಯಲು ಇಚ್ಚಿಸುವವರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ:
Sahityaanjali, 816 Othello street, Arcadia, California, 91006.
ಈಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X