ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಉಲ್ಲಾಸ'ದಾಯಕ ಸಂಗೀತ ರಂಗಪ್ರವೇಶ

By * ಲಕ್ಷ್ಮೀನಾರಾಯಣ ಗಣಪತಿ, ಉತ್ತರ ಕೆರೋಲಿನಾ
|
Google Oneindia Kannada News

Ullas Rao, Boston
ಭಾರತದಲ್ಲಿ ಬೆಳಗಾದರೆ ಅಮೆರಿಕಾದಲ್ಲಿ ಸಾಯಂಕಾಲದ ಮಬ್ಬು. ಅದಕ್ಕೆಯೋ ಎಂಬಂತೆ ಈ ಎರಡೂ ದೇಶಗಳ ಸಂಸ್ಕೃತಿಗಳನ್ನು ಪೂರ್ವ ಪಶ್ಚಿಮ ಎಂದು ಗುರುತಿಸುವಷ್ಟು ವಿಭಿನ್ನತೆ ಅವುಗಳಲ್ಲಿವೆ. ಆದರೀಗ ಹೆಚ್ಚೆಚ್ಚು ಭಾರತೀಯರಿಲ್ಲಿ ವಲಸೆ ಬಂದಂತೆ, ನಮ್ಮಲ್ಲಿಯ ಎಷ್ಟೋ ಸಾಂಸ್ಕೃತಿಕ ಅಂಶಗಳು ಪಶ್ಚಿಮದ ಗಾಳಿ ಬೆಳಕಿನಲ್ಲಿ ಪ್ರೋತ್ಸಾಹ ಕಂಡು ಬೆಳೆಯುತ್ತಿವೆ. ಸಂಗೀತ ಮತ್ತು ನೃತ್ಯ ಕಲೆಗಳಂತೂ ಅಮೆರಿಕದಲ್ಲಿ ಚೆನ್ನಾಗಿಯೇ ಬೇರೂರಿ ಬೆಳೆಯುತ್ತಿವೆ.

ಸುಮಾರು 30 ಸಾವಿರ ಭಾರತೀಯರಿರುವ ನಮ್ಮ ಊರಿನಲ್ಲಿ ವರುಷಕ್ಕೆ ಹಲವಾರು ನೃತ್ಯ-ರಂಗಪ್ರವೇಶಗಳು ಸಾಮಾನ್ಯವಾಗಿ ಬಿಟ್ಟಿವೆ. ಅವುಗಳಲ್ಲಿ ಶೇಕಡಾ 50ಕ್ಕೂ ಹೆಚ್ಚು ನೃತ್ಯಪಟುಗಳ ಸಾಧನೆ ನಿಜವಾಗಿಯೂ ಉತ್ತಮ ಮಟ್ಟದ್ದಾಗಿರುತ್ತದೆಂಬುದು ಗಮನಾರ್ಹ. ಸಂಗೀತದಲ್ಲಿಯೂ ಈ ರೀತಿಯ ರಂಗ ಪ್ರವೇಶಗಳು ನಡೆದರೂ ಅವುಗಳ ಸಂಖ್ಯೆ ಕಡಿಮೆ. ನಮ್ಮೂರಿನಲ್ಲಿಯೇ ಉತ್ತಮವಾಗಿ ಶಾಸ್ತ್ರೀಯ ಸಂಗಿತ ಹಾಡಬಲ್ಲ ಮಕ್ಕಳ ಪಟ್ಟಿ ದೊಡ್ಡದಾಗಿಯೇ ಇದೆ.

ಆದರೂ ಸ್ನೇಹಿತರುಗಳಾದ ಉಷಾ ಮತ್ತು ಸುಧಾಕರ ರಾವ್ ತಮ್ಮ ಮಗ ಉಲ್ಲಾಸನ ಸಂಗೀತ ರಂಗಪವೇಶಕ್ಕೆ ಆಮಂತ್ರಣ ಇತ್ತಾಗ ಸ್ವಲ್ಪ ಪುರುಸೊತ್ತು ಮಾಡಿಕೊಂಡು, ಹಾಗೇ ಸ್ನೇಹಿತರುಗಳೊಂದಿಗೆ ಪಟ್ಟಾಂಗ ಹೊಡೆಯಬಹುದೆಂಬ ದೂರಾಲೋಚನೆಯೊಂದಿಗೆ ಬಾಸ್ಟನ್ನಿಗೆ ತೆರಳುವ ನಿಶ್ಚಯ ಮಾಡಿದ್ದೆ. ಅದಲ್ಲದೆ ಅಣ್ಣ ಸುಹಾಸ್ ರಾವ್ (ಈಗ ಹಾರ್ವಡ್ ನಲ್ಲಿ ಓದುತ್ತಿರುವ) ವಯೊಲಿನ್ ನುಡಿಸುವ ಮೋಡಿಗೆ ಮನಸೋತಿದ್ದ ನನಗೆ ಮತ್ತೊಮ್ಮೆ ಈ ಎಳೆಯರಿಬ್ಬರ ಪ್ರತಿಭೆ ನೋಡುವ ಅವಕಾಶ ಒದಗಿ ಬಂದಿತ್ತು.

ಶಿಷ್ಯನ ಬೆನ್ನುತಟ್ಟಿದ ಗುರು : ಸಂಜೆ 4ರಿಂದ 8ರವರೆಗೆ ನಿಗದಿಗೊಳಿಸಿದ್ದ ಕಾರ್ಯಕ್ರಮದ ಪಟ್ಟಿ ರಂಗಪ್ರವೇಶಕ್ಕೆ ಅಗತ್ಯವೆಂಬುದಕ್ಕಿಂತಲೂ, ಗುರು, ವಿದುಷಿ ಶ್ರೀಮತಿ ಗೀತಾ ಮುರಳಿಗೆ ಶಿಷ್ಯನ ಪರಿಣತಿಯ ಮೇಲಿದ್ದ ಅಪಾರ ವಿಶ್ವಾಸದ ಕುರುಹಾಗಿತ್ತು. ನಾಲ್ಕೂ ಗಂಟೆಗಳ ಕಾಲ ಸತತವಾಗಿ ಕೇಳುಗರ ಮನಸ್ಸನ್ನು ಸೆರೆಹಿಡಿದು ತನ್ನ ಕಂಠ ಸಿರಿ ಮತ್ತು ಸಂಗೀತದ ಪ್ರೌಢಿಮೆಯಲಿ ತೇಲಿಸಿದ ಉಲ್ಲಾಸ್ ತನ್ನ ಕುಟುಂಬಕ್ಕೊಂದು ಹೆಮ್ಮೆಯ ರತ್ನವಾಗಿದ್ದ. ತನ್ನ ಗುರುವಿನ ಆಶೀರ್ವಾದದೊಂದಿಗೆ, ಬಾಸ್ಟನ್ನಿನ ವಿದುಷಿ ತಾರಾ ಆನಂದ್ ಮತ್ತು ಮೈಸೂರಿನ ವೇಣು ವಿದ್ವಾನ್ ಚಂದನ್ ಕುಮಾರ್ ಅವರಿಂದಲೂ ಸೈ ಎನಿಸಿಕೊಂಡ ಉಲ್ಲಾಸ್ ರಾವ್ ಸಾಧನೆಗೆ ಒಂದು ಇಡೀ ಸಂಸ್ಕೃತಿ ಮತ್ತು ಪರಂಪರೆಯ ಅಭಿಮಾನಿಗಳು ಕೃತಜ್ಞರೆನ್ನಿ. ಅವನ ಗಾಯನದಲ್ಲಿನ ಶೃತಿ ಶುದ್ಧತೆ ಹಾಗೂ ಸ್ವರ ಶುದ್ಧತೆಗಳು ನನ್ನ ಅಂತರಾಳಕ್ಕೇ ಅರಿವಾದರೂ ವೇಣುವಿದ್ವಾನ್ ಮೈಸೂರಿನ ಚಂದನ್ ಕುಮಾರ್ ಅವರಿಂದಲೇ ಕೇಳಿದ್ದರಿಂದ ಇಲ್ಲಿ ಧೈರ್ಯವಾಗಿ ಬರೆಯುತ್ತಿದ್ದೇನೆ. ಸಂಗೀತವನ್ನು ಆಸ್ವಾದಿಸಲಷ್ಟೇ ತಿಳಿದಿರುವ ನನ್ನಂಥವರೆಲ್ಲರ ಕರತಾಡನಕ್ಕೆ ಪಾತ್ರನಾದ ಉಲ್ಲಾಸ್ ರಾವ್ ನ ರಂಗಪ್ರವೇಶ ಎಲ್ಲ ದೃಷ್ಟಿಯಿಂದಲೂ ಹರ್ಷದಾಯಕವೂ, ಉಲ್ಲಾಸದಾಯಕವೂ ಆಗಿತ್ತು.

ಇದೆಲ್ಲ ಸರ್ವೇ ಸಾಧಾರಣವೆಂದು ತಳ್ಳಿ ಹಾಕಲಾಗದುದಕ್ಕೊಂದು ಮುಖ್ಯ ಕಾರಣವಿದೆ. ಬೆಂಗಳೂರು ಮೈಸೂರುಗಳಲ್ಲಿಯೇ ಪಾಪ್ ಸಂಸ್ಕೃತಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಶಾಸ್ತ್ರೀಯ ಸಂಗೀತದ ಉತ್ಕೃಷ್ಟ ಫಲಗಳಲ್ಲಿ ಹಲವು ಹೊರನಾಡಿನಲ್ಲಿ ಮೂಡಿಬರುತ್ತಿರುವದರ ಅಭಿಮಾನವನ್ನು ಮುಚ್ಚಿಟ್ಟುಕೊಳ್ಳುವುದು ಕಷ್ಟ. ಅಷ್ಟೇ ಅಲ್ಲ, ಉಲ್ಲಾಸ್ ತನ್ನ ಕೆಲ ಸ್ನೇಹಿತರೊಂದಿಗೆ ಒಂದು ಬ್ಯಾಂಡ್ (The Current) ಸಹ ಇಟ್ಟು ಕೊಂಡಿದ್ದಾನೆ. ಮೃದಂಗವಾದನದಲ್ಲಿಯೂ ಸಾಕಷ್ಟು ತರಬೇತಿ ಮತ್ತು ಪರಿಣತಿ ಹೊಂದಿರುವ ಸುಮಧುರ ಕಂಠದ ಉಲ್ಲಾಸ್ ತನ್ಮಯತೆಯಿಂದ ಹಾಡಿದಾಗ, ರಂಗ ಪ್ರವೇಶದ ದಿನ ಸೆಪ್ಟಂಬರ್ 11ಎಂದು ಸ್ವಲ್ಪ ಮಂಕಾಗಿದ್ದ ನನ್ನ ಮನಸ್ಸು, ಹೊಸ ಹಾಡುಗಳ ದನಿಯೊಂದು ಅರಳುವ ಕ್ಷಣಗಳಿಗೆ ಸಾಕ್ಷಿಯಾಗುವ ಮೂಲಕ ಸಾಂತ್ವನಗೊಂಡು, ಭವಿಷ್ಯದ ಬಗ್ಗೆ ಉತ್ಸಾಹ ತಳೆಯಲಾರಂಭಿಸಿತ್ತು.

ಪೂರ್ವ ಪಶ್ಚಿಮದ ಸಂಸ್ಕೃತಿಗಳು ಘಟ್ಟಿಸುವಲ್ಲಿ ಪ್ರತಿಭೆಗಳು ಅರಳಿ ಈ ರೀತಿಯ ರಚನಾತ್ಮಕ ಸೃಷ್ಟಿಗಳಷ್ಟೇ ನಡೆದರೆ ಎಷ್ಟು ಚೆನ್ನೆನಿಸಿತ್ತು. ಅಮೆರಿಕದಲ್ಲಿ ಬೆಳೆಯುತ್ತಿರುವ ತನ್ನ ವ್ಯಕ್ತಿತ್ವವನ್ನು ರೂಪಿಸಬಲ್ಲಂತಹ ಅಂಶವೊಂದು ಭಾರತೀಯ ಬೇರಿನಲ್ಲಿದೆ ಎಂಬ ಸಂಕೀರ್ಣ ಜ್ಞಾನ ಇಲ್ಲಿನ ಮಕ್ಕಳಲ್ಲಿರುವುದರ ಗುರುತೇ ಇಂತಹ ಯಶಸ್ವೀ ರಂಗಪ್ರವೇಶಗಳ ಸಂದೇಶ. ತಂದೆ ತಾಯಿಯರಿಬ್ಬರೂ ಸಂಗೀತ ಪ್ರೇಮಿಗಳಷ್ಟೇ ಆಗಿ ತನಗೆ ನೀಡಿದ ಪ್ರೋತ್ಸಾಹದ ಬೆಲೆ ಅರಿತುಕೊಂಡ ಈ ತರುಣ ಮನಸ್ಸಿಗೆ ಶುಭ ಹಾರೈಸೋಣ. ಇನ್ನೂ ಹೈಸ್ಕೂಲಿನಲ್ಲಿರುವ, ಹದಿಹರೆಯದ ಈ ಎಳೆಯನನ್ನು ನಮ್ಮ ತುಂಬು ಪ್ರೀತಿ ಮತ್ತು ಅಭಿಮಾನಗಳೊಂದಿಗೆ ಅಭಿನಂದಿಸೋಣ.

ಉಲ್ಲಾಸನ ಅರಳುವ ಪ್ರತಿಭೆಗೆ ಪ್ರೀತಿ ಅಭಿಮಾನಗಳಿಂದ ಪಕ್ಕವಾದ್ಯಗಳ ಪೋಷಣೆ ಇತ್ತವರು: ಡಾ| ಪ್ರವೀಣ್ ಸೀತಾರಾಂ (ಮೃದಂಗ), ರವಿ ಬಾಲಸುಬ್ರಮಣ್ಯಂ (ಘಟ) ಹಾಗೂ ಹಾರ್ವಡ್ ನಲ್ಲಿ ಓದುತ್ತಿರುವ ಅಣ್ಣ ಸುಹಾಸ್ ರಾವ್ (ಪಿಟೀಲು). ಕೊನೆಯಲ್ಲಿ ಸಾಷ್ಟಾಂಗ ನಮಸ್ಕರಿಸಿದ ಶಿಷ್ಯನನ್ನು ಎತ್ತಿ ತಮ್ಮದೇ ಮಗುವಿನಂತೆ ತಬ್ಬಿ ಆಶೀರ್ವದಿಸಿದ ಗುರು ಗೀತಾ ಮುರಳಿಯವರು ಭಾರತದ ಗುರು-ಶಿಷ್ಯ ಪರಂಪರೆಯನ್ನು ಅಮೆರಿಕದಲ್ಲಿಯೂ ಯಶಸ್ವಿಗೊಳಿಸಿದ್ದಾರೆ. ರಂಗಪ್ರವೇಶದ ಯಶಸ್ಸಿಗೆ ಕಾರಣರಾದ ಈ ಎಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X