• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎದೆ ಉಬ್ಬಿಸಿ ಹೇಳುತ್ತೇನೆ 'ನಾನು ಕನ್ನಡಿಗ'

By * ಆಕಾಶ ದೀಕ್ಷಿತ, ಲಾಸ್ ಏಂಜಲಿಸ್
|

ಕನ್ನಡಿಗ ಎಂದರೆ ಯಾರು? ಕನ್ನಡಿಗನಾಗಲು ಕರ್ನಾಟಕದಲ್ಲಿ ವಾಸಿಸಬೇಕೆ? ಅಮೆರಿಕೆಯಲ್ಲಿ ಇದ್ದು, ಪಾಶ್ಚಾತ್ಯ ಸಂಸ್ಕೃತಿಯಿಂದ ಆವೃತನಾಗಿಯೂ ಕನ್ನಡಿಗ ಆಗಿರಲು ಸಾಧ್ಯವೆ? ನಿಸ್ಸಂಶಯವಾಗಿ!

ಕುವೆಂಪು ಕೂಡ ಹಾಗೇ ಬಗೆದಿದ್ದರು:

ಎಲ್ಲಾದರು ಇರು, ಎಂತಾದರು ಇರು

ಎಂದೆಂದಿಗು ನೀ ಕನ್ನಡವಾಗಿರು

ನಾನೊಬ್ಬ ಅಭಿಮಾನಿ ಕನ್ನಡಿಗ. ಇದು ಕೇವಲ ತಾಯಿತಂದೆಯರ ಶ್ರದ್ಧೆಯ ಪರಿಸರದ ಪರಿಣಾಮವಲ್ಲ, ಇಲ್ಲಿನ ಪಾಶ್ಚಾತ್ಯ ಸಂಸ್ಕೃತಿಯ 'ಕರಗಿಸುವ ಕಡಾಯಿ"ಯಲ್ಲಿ ಕರಗದೆ ಉಳಿದುಕೊಳ್ಳುವ ಕನ್ನಡತನದ ಅಂತಃಶಕ್ತಿಯ ಪ್ರತೀಕ ಕೂಡ ಹೌದು.

ಕನ್ನಡಿಗ ಎಂದು ಕರೆದುಕೊಳ್ಳುವುದು ಮಾರು ದೂರದ ಮುಕ್ತ ಸಂಬಂಧ, ಸುಲಭ; ಆದರೆ ಕನ್ನಡಿಗ ಆಗಿರಲು ಕನ್ನಡ ಸಂಸ್ಕೃತಿಯಲ್ಲಿ ಮಿಂದು ಮುಳುಗುವುದು ಅವಶ್ಯ. ಒಂದು ಅನ್ಯೋನ್ಯ ಬೆರಕೆಯ ಬಂಧ, ತನ್ನ ಮತ್ತು ಕನ್ನಡ ಸಂಸ್ಕೃತಿಯ ನಡುವೆ ಮುಕ್ತ ಸಂವಾದ ಬೇಕು. ಕನ್ನಡಿಗರೇ ಕನ್ನಡ ಸಂಸ್ಕೃತಿಯ ಶಕ್ತಿ. ಇಂಥ ಕನ್ನಡಿಗರ ಒಡನಾಟ, ಕನ್ನಡ ನುಡಿ ಕಲಿಕೆ, ಕನ್ನಡ ಕಾರ್ಯಕ್ರಮಗಳಲ್ಲಿ ಮನಸ್ವಿ ಪಾಲ್ಗೊಳ್ಳುವುದು, ಅಥವಾ ಮುಂಜಾನೆಯ ಇಡ್ಲಿ ತಿನಿಸು, ಮನೆಯ ಮುಂದಣ ರಂಗೋಲಿ, ಕಿವಿಯಲ್ಲಿ ಗುನುಗುವ ಕನ್ನಡ ಭಾವಗೀತೆ ಇತ್ಯಾದಿ ಪುಟ್ಟ ವಿಷಯಗಳು ಸಹ ಸೇರಿ ಶ್ರೀಮಂತ ಕನ್ನಡ ಸಂಸ್ಕೃತಿಯನ್ನು ಸಕ್ರಿಯವಾಗಿ ನಿರೂಪಿಸುತ್ತವೆ.

ಕನ್ನಡ ನುಡಿಯೆ ಕನ್ನಡ ಸಂಸ್ಕೃತಿಯ ಭಂಡಾರಕ್ಕೆ ಬೀಗದ ಕೈ. ಅನ್ಯ ಭಾಷೆಯಲ್ಲಿ ಬೌದ್ಧಿಕ ತಿಳಿವಳಿಕೆ ಸಾಧ್ಯವಾದರೂ, ಕನ್ನಡ ಸಂಸ್ಕೃತಿಯನ್ನು ಕನ್ನಡದಲ್ಲೆ ಬಾಳುವುದರಿಂದ ಮಾತ್ರ ಅರ್ಥಪೂರ್ಣ ಅನುಭವ ಸಾಧ್ಯ. ಇನ್ನೊಂದು ಭಾಷೆಯಲ್ಲಿ ಕನ್ನಡ ಸಂಸ್ಕೃತಿಯನ್ನು ಅರಿಯಲು ಯತ್ನಿಸಿದರೆ ಅದರೊಡನ ಐಕ್ಯತೆಯನ್ನು ಕಳೆದುಕೊಂಡು ಪರಕೀಯತೆಯ ಬಿರುಕು ಕೂಡಲೆ ಬೆಳೆದು ಕಂದರವಾಗುತ್ತದೆ. ಅಂತೆಯೆ, ಇಲ್ಲಿನ ಮೊದಲ ಜನಾಂಗದ ಕನ್ನಡಿಗರು ನಮಗೆ ಕನ್ನಡ ಕಲಿತು ಸಂಬಂಧ ಬೆಳೆಸುವ ವಿಧಾನ ರೂಪಿಸಿದ್ದಾರೆ. ಕನ್ನಡ ಕಲಿ ಅಂಥ ಒಂದು ಸಂಸ್ಥೆ. ಕನ್ನಡ ಕಲಿಯುವುದು, ಕಲಿಸುವುದು, ಮತ್ತು ಕನ್ನಡ ಕಲಿಗಳನ್ನು ಪ್ರೋತ್ಸಾಹಿಸುವುದು ಅದರ ಗುರಿ. ಕನ್ನಡ ಕಲಿಯ ಆರಂಭದಿಂದ ಅದರ ವಿದ್ಯಾರ್ಥಿಯಾಗಿದ್ದುದು ನನ್ನ ಭಾಗ್ಯ.

ನೀವು ಕನ್ನಡ ಹಿನ್ನೆಲೆ ಹೊಂದಿರಬಹುದು, ಕರ್ನಾಟಕದಲ್ಲಿ ಇರಬಹುದು, ಕನ್ನಡ ಅರಿಯಬಹುದು; ಇವಾವೂ ಕನ್ನಡಿಗ ಎಂದುಕೊಳ್ಳಲು ಸಾಕಾಗದು.
ಮನೆಯಲ್ಲಿ ಸಾಮಾನ್ಯವಾಗಿ ಕನ್ನಡ ಮಾತಾಡಿದರೂ, ಓದು ಬರೆಯುವ ಕಲೆ ಅಭ್ಯಾಸದಿಂದ ಗಳಿಸಿದ್ದು. ಕನ್ನಡವನ್ನು ಓದಿ ಅರಿತುಕೊಳ್ಳುವ ಜ್ಞಾನ ಕನ್ನಡಕಲಿಯಲ್ಲಿ ಸಾಧ್ಯವಾಯ್ತು. ಅದು ಅಕ್ಷರ, ಪದ, ವಾಕ್ಯ, ವ್ಯಾಕರಣಗಳ ಯಾಂತ್ರಿಕ ಕಂಠಪಾಠ ಅಲ್ಲ; ಕನ್ನಡ ಕಲಿಯಲ್ಲಿ ಕಲಿತದ್ದು ಕರ್ನಾಟಕದ ಬಗ್ಗೆ ಅನೇಕ ಸಂಗತಿಗಳು; ಕನ್ನಡ ಭಾಷೆ ಅಷ್ಟೆ ಅಲ್ಲ, ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಕೂಡ. ಇತರ ವಿದ್ಯಾರ್ಥಿಗಳೊಂದಿಗೆ ಮತ್ತು ಕನ್ನಡ ಸಮುದಾಯದೊಂದಿಗೆ ಸಂವಹನ ಕ್ರಿಯೆ ಸಾಧ್ಯವಾಯ್ತು.

ನನ್ನ ಮೂಲ ಮತ್ತು ಹಿನ್ನೆಲೆ ಅರಿತುಕೊಳ್ಳಲು ಕನ್ನಡ ನನಗೆ ಮಾರ್ಗದರ್ಶಿಯಾಗಿದೆ. ಭಗವದ್ಗೀತೆಯ ಸಾರವನ್ನು ನನಗೆ ನನ್ನ ತಂದೆ ಹೇಳಿದ್ದು ಕನ್ನಡದಲ್ಲೆ. ನಂತರ ಇಡಿ ಗೀತೆಯನ್ನು ನನಗೋಸ್ಕರ ಕನ್ನಡಿಸಿದ್ದು ನನಗೆ ಹೆಮ್ಮೆಯ ವಿಷಯ. ಉದಾಹರಿಸಿದ 'ಕಳಬೇಡ ಕೊಲಬೇಡ", 'ಬೆಟ್ಟದ ಮೇಲೊಂದು ಮನೆಯ ಮಾಡಿ" ಇತ್ಯಾದಿ ಶರಣರ ವಚನಗಳು ನನಗೊಂದು ನೈತಿಕ ನೆಲೆಯನ್ನು ತೋರಿವೆ. ನನ್ನ ತಾಯ್ನುಡಿಯ ಸಂಬಂಧ ನನ್ನ ಎದೆಯಾಳದಲ್ಲಿ ಎಷ್ಟಿದೆ ಎಂದರೆ ಸುತ್ತಣ ಜಗತ್ತನ್ನು ಅದರ ಮೂಲಕ ಅರಿಯಲು ಸಾಧ್ಯ. ನನ್ನ ಮತ್ತು ಕನ್ನಡ ಸಂಸ್ಕೃತಿಯ ನಡುವೆ ಕನ್ನಡ ಒಂದು ವಿಶಿಷ್ಟ ಕೊಂಡಿಯಾಗಿದೆ. ಮುರಿಯಲಾಗದ ಈ ಬಂಧವೆ ನಾನು ಕನ್ನಡಿಗ ಅನಿಸಲು ಕಾರಣ.

'ಅಕ್ಕ" ಮತ್ತು ಕನ್ನಡ ಕೂಟಗಳು ಕನ್ನಡ ಸಂಸ್ಕೃತಿಯ ಅನೇಕ ಅಂಶಗಳನ್ನು ಅರಿಯಲು ಮತ್ತು ತೋರಿಸಲು ವೇದಿಕೆಗಳಾಗಿವೆ. ಕಾರ್ಯಕ್ರಮಗಳು ವೈಯುಕ್ತಿಕ ಪ್ರತಿಭೆಯನ್ನು ಹೊರತಂದಿವೆ. ನಾಟಕ, ನೃತ್ಯ, ಸಂಗೀತಗಳ ಕಾರ್ಯಕ್ರಮಗಳಲ್ಲಿ ಹುಟ್ಟಿದಾಗಿನಿಂದ ಭಾಗವಹಿಸಿದ್ದೇನೆ; ಎಮ್ಸೀ ಮಾಡಿದ್ದೇನೆ. ಕರ್ನಾಟಕ ಸಾಂಸ್ಕೃತಿಕ ಸಂಘ (ಕೆ.ಸಿ.ಎ.)ದ ಯುವಸಮಿತಿಯ ಅಧ್ಯಕ್ಷನಾಗಿದ್ದೇನೆ. ಈ ಯೋಜಿತ ಕಾರ್ಯಕ್ರಮಗಳಲ್ಲಿನ ಅನುಭವ ಮನಸ್ಸಿನ ಆಳವನ್ನು ತಟ್ಟಲು ಸಾಧ್ಯ. ಇಂಥ ಕಾರ್ಯಕ್ರಮಗಳಲ್ಲಿ ಕನ್ನಡ ಸಂಸ್ಕೃತಿಯ ಮುಖಗಳನ್ನು ಕಂಡಿದ್ದೇನೆ. ಕೆ.ಸಿ.ಎ. ಯುವಸಮಿತಿಯಲ್ಲಿ ಸೇರಿದ್ದರಿಂದ, ದಕ್ಷಿಣ ಕ್ಯಾಲಿಫೋರ್ನಿಯದ ಕನ್ನಡ ಯುವಜನರೊಂದಿಗೆ ವಿನಿಮಯಕ್ಕೆ ಅನುವಾಯಿತು. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಮುಖ ಕನ್ನಡಿಗರೊಂದಿಗೆ ಬೆರೆತದ್ದಾಯ್ತು. ಯುವ ಕಾರ್ಯಕ್ರಮಗಳು ನನ್ನ ಕನ್ನಡ ವಲಯ ಬೆಳೆಯುವಂತೆ ಮಾಡಿದವು. ಇಂಥ ಸಂವಹನ ಪ್ರಕ್ರಿಯೆ ವ್ಯಕ್ತಿಗಳ ನಡುವಣ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಸಂಪರ್ಕ ಹೆಚ್ಚಾದಂತೆ ಎಲ್ಲರಲ್ಲಿ ಒಂದಾಗುತ್ತೇವೆ - ಕನ್ನಡಿಗರಾಗುತ್ತೇವೆ.

ಕನ್ನಡ ಬಾಂಧವ್ಯ ಸದ್ಯಕ್ಕೆ ಮಾತ್ರ ಸೀಮಿತವಾದರೆ ಸಾಲದು. ಕನ್ನಡದ ಇತಿಹಾಸ, ಪರಂಪರೆಗಳನ್ನು ಅರಿತು ಸಂಸ್ಕೃತಿಯ ಬೇರುಗಳನ್ನು ಬೆಳೆಸಿಕೊಳ್ಳಬೇಕು. ಭಾರತಕ್ಕೆ ಭೇಟಿ ಇತ್ತಾಗ, ಸಮಯ ಕಡಿಮೆ ಆದರೂ, ಕರ್ನಾಟಕದ ಸುತ್ತ ಯಾತ್ರೆ ಕೈಗೊಂಡಿದ್ದೇನೆ. ನಾಡಿನ ಇತಿಹಾಸವನ್ನು ಪರಿಚಯಿಸಿಕೊಂಡಿದ್ದೇನೆ. ಐಹೊಳೆ, ಪಟ್ಟದಕಲ್ಲು, ಬದಾಮಿ, ಬಿಜಾಪುರ, ಬೇಲೂರು, ಹಳೆಬೀಡು, ಮೈಸೂರು, ಶ್ರೀರಂಗಪಟ್ಟಣಗಳಿಗೆ ಹೋಗಿದ್ದೇನೆ. ಗೋಕಾಕ ಜೋಗದ ಜಲಪಾತಗಳ ಸಿರಿಯಲ್ಲಿ ತೊಯ್ದಿದ್ದೇನೆ. ಈ ಎಲ್ಲ ತಾಣಗಳಿಗೂ ತಮ್ಮದೇ ಆದ ಇತಿಹಾಸ ಇದೆ. ಕರ್ನಾಟಕ ಉದ್ದಗಲಕ್ಕೂ ಇಂಥ ಇತಿಹಾಸದ ಮೈಲಿಗಲ್ಲುಗಳು ಹರಡಿವೆ. ಇಲ್ಲಿನ ಸ್ಮಾರಕಗಳು ಕಾಲವನ್ನು ಮೀರಿ ನಿಂತು ಕರ್ನಾಟಕದ ಭವ್ಯ ಇತಿಹಾಸವನ್ನು- ಚಾಲುಕ್ಯರಿಂದ ವಿಜಯನಗರ, ಈಚಿನ ವೊಡೆಯರವರೆಗೂ ಸೆರೆ ಹಿಡಿದಿವೆ. ಇವುಗಳ ಸಂಗಮವೇ ಕರ್ನಾಟಕ. ಸ್ಥಳಗಳ ಇತಿಹಾಸದಿಂದ, ಕರ್ನಾಟಕದಲ್ಲಿ ಸಾವಿರ ವರುಷಗಳ ಹಿಂದೆ ಕನ್ನಡಿಗರು ಹೇಗಿದ್ದರು ಎಂದು ಕಲ್ಪಿಸಿಕೊಳ್ಳಬಲ್ಲೆ. ಆ ಬೇರುಗಳ ಮೂಲಕ ಇಂದಿನ ಜೀವನಕ್ಕೆ ಮುರಿಯದ ಸಂಬಂಧ ಕಾಣಬಲ್ಲೆ. ಇದು ಕೇವಲ ವಾಸ್ತವಿಕ ಮಾಹಿತಿಗಳ ಗ್ರಹಿಕೆ ಅಲ್ಲ, ನೆಲದೊಡನೆ ಮೂಡುವ ಭಾವನಾತ್ಮಕ ಸಂಬಂಧ ನಾನು ಕನ್ನಡಿಗ ಎಂದು ಸಾರುತ್ತದೆ.

ಕರ್ನಾಟಕದ ಕಲೆ ಕನ್ನಡ ಸಂಸ್ಕೃತಿಯ ಲಕ್ಷಣ ಮತ್ತು ಅಂಗ. ನೃತ್ಯ, ನಾಟಕ, ಸಾಹಿತ್ಯ, ಸಂಗೀತ ಎಲ್ಲ ಕಲೆಗಳೂ ಕರ್ನಾಟಕದ ಅವಿಭಾಜ್ಯ ಅಂಗಗಳು. ಈ ಎಲ್ಲದರಲ್ಲೂ ಸಂಪೂರ್ಣ ಪರಿಣತಿ ಹೊಂದುವುದು ಅಸಾಧ್ಯದ ಮಾತು. ನಾನು ಹಿಂದುಸ್ತಾನಿ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೇನೆ. ವಿಶೇಷವಾಗಿ ತಬಲ ನುಡಿಸುತ್ತೇನೆ. ಹಾಡುಗಾರಿಕೆ ಮತ್ತು ವಾದ್ಯ ಸಂಗೀತಗಳಲ್ಲೂ ಆಸಕ್ತಿ ಹೊಂದಿದ್ದೇನೆ. ಸಂಗೀತದ ಸೌಂದರ್ಯ ಮತ್ತು ಶಕ್ತಿಯನ್ನು ಕಂಡೂಕೊಂಡಿದ್ದೇನೆ. ತಬಲ ನುಡಿಸಲು ಕುಳಿತುಕೊಂಡರೆ, ಶಾಂತಿ ಸಮಾಧಾನದ ಒಂದು ಭಾವ ನನ್ನನ್ನು ಆವರಿಸುತ್ತದೆ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಪುರಂದರ ದಾಸರಂಥ ಸಂಗಿತದ ದಿಗ್ಗಜರೊಂದಿಗೆ ಅವ್ಯಕ್ತ ಸಂಬಂಧದ ಒಂದು ಬಳ್ಳಿ ಅಂಕುರಿಸುತ್ತದೆ. ಸಂಗೀತ ನನಗೊಂದು ಮಾರ್ಗದರ್ಶಿಯಾಗಿ ನನ್ನ ಸಂಸ್ಕೃತಿ ಪರಂಪರೆಗಳನ್ನು ಸದಾ ನೆನಪಿಸುವ ಧ್ರುವತಾರೆಯಾಗಿದೆ. ಕನ್ನಡತ್ವವನ್ನು ಮನಸ್ಸಿನಲ್ಲಿ ಆಳವಾಗಿ ಅಚ್ಚೊತ್ತಿ, ಮರೆಯಲು ಬಿಡದೆ, ನನಗೂ ನನ್ನ ಸಂಸ್ಕೃತಿಗೂ ಬಿದ್ದ ಬೆಸುಗೆಯಾಗಿದೆ.

ಜಗತ್ತಿನೊಡನಿರುವ ಸಂಬಂಧ ಸಂಪರ್ಕಗಳು ಒಂದು ರೀತಿಯಲ್ಲಿ ಮನುಷ್ಯನನ್ನು ನಿರೂಪಿಸುತ್ತವೆ. ನೀವು ಕನ್ನಡ ಹಿನ್ನೆಲೆ ಹೊಂದಿರಬಹುದು, ಕರ್ನಾಟಕದಲ್ಲಿ ಇರಬಹುದು, ಕನ್ನಡ ಅರಿಯಬಹುದು; ಇವಾವೂ ಕನ್ನಡಿಗ ಎಂದುಕೊಳ್ಳಲು ಸಾಕಾಗದು. ಕನ್ನಡಿಗನಾಗಿರುವುದು ತನ್ನತನದ ಅರಿವು, ಅಂತರಂಗದ ಭಾವ, ಒಳಗಿನ ಬೆಳಕು; ಕನ್ನಡ ಎನ್ನುವ ವಿಶ್ವಚೇತನದೊಂದಿಗೆ ಒಂದಿಕೆ. ಕುಟುಂಬ, ಬಂಧು, ಬಳಗ, ಗೆಳೆಯರಿಂದ ಆಚೆಗೂ ಗಟ್ಟಿ ಕನ್ನಡ ಸಂಬಂಧ ಬೇಕು. ಕನ್ನಡಿಗನಾಗಿರಲು ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅರ್ಥವನ್ನು ಅರಸುತ್ತಿರಬೇಕು. ಕನ್ನಡ ಸಂಸ್ಕೃತಿ, ಈ ಕರಗಿಸುವ ಕಡಾಯಿಯಲ್ಲಿ, ನನಗೊಂದು ವಿಶಿಷ್ಟ ಐಡೆಂಟಿಟಿ ಕೊಟ್ಟಿದೆ. ಅದನ್ನೆ ಪ್ರತಿಬಿಂಬಿಸುತ್ತ ಕನ್ನಡ ಹಿನ್ನೆಲೆಯ ಹರವು, ಅಗಾಧತೆ, ಶ್ರೀಮಂತಿಕೆಗಳ ಬೆಳಕಿನಲ್ಲಿ ಬೆರಗಾಗಿ ನಿಂತಿದ್ದೇನೆ. "ನಾನು ಕನ್ನಡಿಗ" ಎಂದು ಎದೆ ಉಬ್ಬಿಸಿ ಹೇಳುತ್ತಿದ್ದೇನೆ.

ಆಕಾಶ್‌ಗೆ ಕರ್ನಾಟಕ ಸಾಂಸ್ಕೃತಿಕ ಪ್ರಜ್ಞೆ ಪ್ರಶಸ್ತಿ

ಕನ್ನಡತನ ಎಂದರೇನು? ಕನ್ನಡಿಗ ಎಂದರೆ ಯಾರು?

English summary
It is not just enough to stay in Karnataka to be a kannadiga, writes Akash Dixit, Los Angeles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X