ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂ ಜೆರ್ಸಿ ಸಾಂಸ್ಕೃತಿಕ ಸಂಸ್ಥೆಯಲ್ಲಿ ಗಣೇಶೋತ್ಸವ

By * ಸತೀಶ್ ಹೊಸನಗರ
|
Google Oneindia Kannada News

AKKA WKC-6 : Volunteers appreciation day
ಕಳೆದ ಭಾನುವಾರ (ಸೆಪ್ಟೆಂಬರ್ 12), ನ್ಯೂ ಜೆರ್ಸಿಯ ಕನ್ನಡ ಸಾಂಸ್ಕೃತಿಕ ಸಂಸ್ಥೆಯಲ್ಲಿ ಗಣೇಶೋತ್ಸವ ಮತ್ತು ಆರನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ದುಡಿದ ಸ್ವಯಂ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕಾರ್ಯಕ್ರಮಗಳನ್ನು ನೀಡಿದ ಕೆಲವು ಕಲಾವಿದರನ್ನು ಸಹ ಆಹ್ವಾನಿಸಲಾಗಿತ್ತು.

ಮಧ್ಯಾಹ್ನ ಎರಡು ಘಂಟೆಯ ಹೊತ್ತಿಗೆ ಸಂಕ್ಷಿಪ್ತ ಗಣೇಶ ಪೂಜೆ ನೆರವೇರಿತು, ಮೂರು ಘಂಟೆಯ ಹೊತ್ತಿಗೆಲ್ಲ ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂ ಸೇವಾಕಾರ್ಯಕರ್ತರು ಹಾಗೂ ಸಭಿಕರು ಹೈಟ್ಸ್‌ಟೌನ್ ಹೈ ಸ್ಕೂಲ್ ಸಭಾಂಗಣದಲ್ಲಿ ಸೇರಿ, ಪ್ರಸನ್ನಕುಮಾರ್ ಅವರು ಗಣಪತಿ ಮಂತ್ರೋಚ್ಛಾರ ಮಾಡಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಂಗರಾಜು, ಮಂಡ್ಯ ಅವರಿಂದ ಸ್ಯಾಕ್ಸೋಫೋನ್ ಮಂಗಳವಾದನದ ಮೂಲಕ ಆರಂಭವಾದವು. ಯಾವುದೇ ಪಕ್ಕವಾದ್ಯಗಳ ಸಹಾಯವಿಲ್ಲದೇ ಪ್ರೇಕ್ಷಕರ ಕರತಾಡನದ ತಾಳಗಳಲ್ಲಿ ಗಣೇಶಸ್ತುತಿ, ಕೃಷ್ಣಾ ನೀ ಬೇಗನೇ ಬಾರೋ, ಲಿಂಗಾಷ್ಟಕಂಗಳನ್ನು ನುಡಿಸಿದರು.

ವೀಣಾ ಕಡಬಾ ಅವರ ನಿರೂಪಣೆಯಲ್ಲಿ ಪ್ರತಿ ಸಾಂಸ್ಕೃತಿಕ ಕಾರ್ಯಕ್ರಮಗಳ ತರುವಾಯ ಒಂದಿಷ್ಟು ವಾಲಂಟಿಯರುಗಳನ್ನು ವೇದಿಕೆಯ ಮೇಲೆ ಕರೆದು ಫಲಕಗಳನ್ನು ಕೊಡುವಂತೆ ಆಯೋಜಿಸಲಾಗಿತ್ತು. ಕೇವಲ ಒಂದು ವಾರದ ಹಿಂದೆಯಷ್ಟೇ ಮಹಾ ಸಮ್ಮೇಳನ ನಡೆದರೂ ವರ್ಷಾವಧಿಯ ಈ ಸಮಾರಂಭದಲ್ಲೂ ವಾಲಂಟಿಯರುಗಳು ಅಷ್ಟೇ ಚುರುಕಾಗಿ ಲವಲವಿಕೆಯಿಂದ ಸೇರಿದ್ದುದು ಗಮನಾರ್ಹವಾಗಿತ್ತು.

ನಂತರದ ಕಾರ್ಯಕ್ರಮಗಳಲ್ಲಿ ಮುರಳೀಧರ ಕೌಶಿಕ್ ಅವರ ಮ್ಯಾಜಿಕ್ ಶೋ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಾರ್ಯಕ್ರಮಗಳಲ್ಲೊಂದು. ನಾವು ಹಲವಾರು ಮ್ಯಾಜಿಕ್ ಕಾರ್ಯಕ್ರಮಗಳನ್ನು ನೋಡಿದ್ದರೂ ಕೌಶಿಕ್ ಅವರು ಮಂಕುತಿಮ್ಮನ ಕಗ್ಗದ ಸುಮಾರು 600 ಪದ್ಯಗಳನ್ನು ತಮ್ಮ ಮ್ಯಾಜಿಕ್‌ಗೆ ಅಳವಡಿಸಿಕೊಂಡು ಒಂದು ಕಡೆ ಕಗ್ಗದ ಪದ್ಯಕ್ಕೆ ಅರ್ಥ ಹೇಳುತ್ತಲೇ ಅದಕ್ಕೆ ಹೊಂದುವಂತೆ ಮ್ಯಾಜಿಕ್ ಟ್ರಿಕ್ ಅನ್ನು ತೋರಿಸಿ ಸಭಿಕರಿಂದ ಮೆಚ್ಚುಗೆಗಳಿಸಿದರು.

ನಂತರದ ಕಾರ್ಯಕ್ರಮಗಳಲ್ಲಿ ಪ್ರಭಾತ್ ಕಲಾವಿದರ ಪಂಚವಟಿ, ಮಹಿಷಾಸುರ ಮರ್ಧಿನಿ ಹಾಗೂ ಕಿಂದರಿಜೋಗಿ ಇವೆರಡೂ ಸಭಿಕರಿಂದ ಸಾಕಷ್ಟು ಕರತಾಡನಗಳನ್ನು ಗಿಟ್ಟಿಸಿದರೆ, ಕುಮಾರಿ ನಂದಿನಿ ರಾವ್ ಅವರ ಸುಶ್ರಾವ್ಯವಾದ ಸಂಗೀತ ಕಾರ್ಯಕ್ರಮ ಸುಲಲಿತವಾಗಿ ಮೂಡಿಬಂತು. ಕಿರಿಯ ವಯಸ್ಸಿನ ಈ ಕಲಾವಿದೆ ಸುಮಾರು 14 ಭಾಷೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುವುದಾಗಿ ನಾಡಿನಲ್ಲಿ ಪರಿಚಿತರಾಗಿರುವುದು ಬಹಳ ದೊಡ್ದ ವಿಷಯ.

ಇನ್ನು ನೃತ್ಯ ಕಾರ್ಯಕ್ರಮಗಳಲ್ಲಿ ಭ್ರಮರಿ ತಂಡದವರಿಂದ ಸೊಗಸಾದ ನೃತ್ಯಗಳು ಹಾಗೂ ಕರ್ನಾಟಕ ಕಲಾದರ್ಶಿನಿ ಅವರಿಂದ ಮಕ್ಕಳ ಯಕ್ಷಗಾನ ಕಾರ್ಯಕ್ರಮವೂ ಆಕರ್ಷಕವಾಗಿತ್ತು. ಅಲ್ಲದೇ ಜೋಗಲೇ ಸಿದ್ಧರಾಜು, ನರಸಿಂಹಮೂರ್ತಿ ಮತ್ತು ಕಾನಿಕರಿಂದ ಜನಪ್ರಿಯ ಜಾನಪದ ಗೀತೆಗಳು ಮೂಡಿಬಂದು ಶ್ರೋತೃಗಳನ್ನು ಮೋಡಿ ಮಾಡಿದವು.

ನಂತರ ಕಲಾವಿದರು, ಶ್ರೋತೃಗಳು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ಕಾರ್ಯಕ್ರರ್ತರೆಲ್ಲ ಒಟ್ಟಿಗೆ ಕುಳಿತು ಹಬ್ಬದೂಟವನ್ನು ಸವಿದರು. ಈ ವರ್ಷದ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಕರ್ನಾಟಕದಿಂದ ಬಂದ ಕಲಾವಿದರ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡಿದ್ದವು. ಸಮೇಳನದ ಕೆಲಸ ಕಾರ್ಯಗಳಲ್ಲಿ ಅವಿರತರಾಗಿ ತೊಡಗಿಕೊಂಡು ಈ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡ ವಾಲಂಟಿಯರುಗಳಿಗೆ ಎರಡನೇ ಅವಕಾಶದಂತೆ ಈ ಸಂದರ್ಭವನ್ನು ಕಲ್ಪಿಸಿಕೊಡಲಾಗಿತ್ತು.

English summary
Ganeshotsava and AKKA conference volunteers appreciation day at New Jersey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X