• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಯರ ಅನುಗ್ರಹ ಯಾಚಿಸಿದ ಅಮೆರಿಕನ್ನಡಿಗರು

By * ಶಾಮ್, ಹೆರಂಡನ್
|
Google Oneindia Kannada News
ವರ್ಜೀನಿಯ, ಸೆ. 15: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಉತ್ತರ ಅಮೆರಿಕಾದ ಪೂರ್ವ ಕರಾವಳಿಯಲ್ಲಿರುವ ಕನ್ನಡಿಗರು ಸೆಪ್ಟೆಂಬರ್ 12ರ ಭಾನುವಾರ ಶ್ರದ್ಧಾಭಕ್ತಿಗಳಿಂದ ಆಚರಿಸಿದರು. ವರ್ಜೀನಿಯಾದ ಫೇರ್ ಫ್ಯಾಕ್ಸ್ ಸ್ಟೇಷನ್ ಕೌಂಟಿಯಲ್ಲಿರುವ ದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರಾಧನೆಯಲ್ಲಿ ಸುಮಾರು 250 ಕನ್ನಡ ಕುಟುಂಬಗಳು ಕಲೆತು ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮತಭೇದಗಳನ್ನು ಬದಿಗಿಟ್ಟು ರಾಯರ ಮಹಿಮೆಯನ್ನು ಕೊಂಡಾಡಿದರು.

ಶ್ರೀಹರಿವಾಯುಗುರುಗಳ ಪಾದಪೂಜೆಯ ಜತೆಗೆ ಇತರ ಸಾಂಪ್ರದಾಯಿಕ ಪೂಜಾದಿಗಳನ್ನು ಪೇಜಾವರ ಶ್ರೀಗಳ ಶಿಷ್ಯೋತ್ತಮರಲ್ಲೊಬ್ಬರಾದ ಹರೀಶ್ ಬೈಪಡ್ಡಿತ್ತಾಯ ಅವರು ಶಾಸ್ತ್ರೋಕ್ತವಾಗಿ ನೆರವೇರಿಸಿದವರು. ಹರೀಶ್ ಮತ್ತು ಗೋಪಿನಾಥ ಗಲಗಲಿ ಅವರಿಂದ ಈ ಸಂದರ್ಭದಲ್ಲಿ ಪ್ರವಚನ ಏರ್ಪಡಿಸಲಾಗಿತ್ತು. ನಿಷ್ಕಲ್ಮಷ ಮನಸ್ಸಿನಿಂದ ರಾಯರ ಸ್ಮರಣೆ ಮಾಡುವ ಭಕ್ತರಿಗೆ ಐಹಿಕ ಮತ್ತು ಪಾರಮಾರ್ಥಿಕ ಫಲಗಳು ಪ್ರಾಪ್ತವಾಗುವುವು ಎಂದು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಸ್ಕೃತ ವಿದ್ವಾನ್ ಗೋಪೀನಾಥ ಗಲಗಲಿ ಅವರು ನುಡಿದರು.

ಪ್ರವಚನಗಳ ನಂತರ ರಾಯಚೂರು ಶೇಷಗಿರಿ ದಾಸ್ ಅವರಿಂದ ಹರಿದಾಸ ಕೀರ್ತನೆಗಳನ್ನು ಆಧರಿಸಿದ ಭಕ್ತಿನಾಮ ಸಂಕೀರ್ತನ ನಡೆಯಿತು. ಪಕ್ಕವಾದ್ಯದಲ್ಲಿ ಸ್ಥಳೀಯರೇ ಆದ ರಾಮನ್ (ವೇಣುವಾದನ) ಮತ್ತು ಸಾಮ್ರಾಟ್ (ತಬಲ) ಭಕ್ತಿ ಸಂಗೀತಕ್ಕೆ ಮಾಧುರ್ಯ ತುಂಬಿದರು. ಮಧ್ವರ ತತ್ವ ಮೀಮಾಂಸೆಗಳನ್ನು ಅಮೆರಿಕಾದಲ್ಲಿ ಪಸರಿಸಲು ಸದಾ ಉತ್ಸುಕರಾಗಿರುವ ಪೂರ್ವ ಕರಾವಳಿಯ ಜಯಕೃಷ್ಣ ನೆಲಮಂಗಲ, ನರಹರಿ ಮತ್ತು ವಾಸು ಮೂರ್ತಿ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ಪೂಜೆಯ ನಂತರ ಗಲಗಲಿ ಅವರು ಭಕ್ತಗಣಕ್ಕೆ ಫಲ ಮಂತ್ರಾಕ್ಷತೆ ವಿತರಿಸಿದರು.

ಬಹುತೇಕ ಕಾವೇರಿ ಕನ್ನಡ ಸಂಘದ ಸದಸ್ಯ ಕುಟುಂಬಗಳೇ ಪಾಲ್ಗೊಂಡಿದ್ದ ಸಮುದಾಯ ಕಾರ್ಯಕ್ರಮದಲ್ಲಿ ಕಾವೇರಿಯ ಅಧ್ಯಕ್ಷ ಗುರು ನಾಗರಾಜ್, ಸದಸ್ಯರಾದ ವಿಜಯೇಂದ್ರ, ಫಲ್ಗುಣ, ಅನಿಲ್ ಕುಮಾರ್, ರಾಮಮೂರ್ತಿ, ರಾಘವೇಂದ್ರ, ಅಕ್ಕದ ಸದಸ್ಯ ಸಂಜಯ್ ರಾವ್ ಮತ್ತು ಕಾವೇರಿಯ ಮಾಜಿ ಅಧ್ಯಕ್ಷೆ ಮೀನಾ ರಾವ್, ಶ್ರೀವತ್ಸ ಜೋಶಿ, ಸಹನಾ ಜೋಶಿ, ಕೃಷ್ಣಮೂರ್ತಿ ಜೋಯಿಸ್ ಮುಂತಾದವರು ಪಾಲ್ಗೊಂಡಿದ್ದರು. ದೇವಸ್ಥಾನಕ್ಕೆ ದಾರಿ.

ಇದೇ ವೇದಿಕೆಯಿಂದ ಮಾತನಾಡಿದ ಕಾವೇರಿಯ ಸಕ್ರಿಯ ಸದಸ್ಯೆ ಶರ್ಮಿಳಾ ಮೂರ್ತಿ ಬರಲಿರುವ ಕಾವೇರಿ ಕಾರ್ಯಕ್ರಮಗಳನ್ನು ಪ್ರಕಟಿಸಿದರು. ಸೆ. 18ರಂದು ಕಾವೇರಿ ಆಶ್ರಯದಲ್ಲಿ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಮೆಕ್ ಲೀನ್ ನಲ್ಲಿರುವ ಲ್ಯಾಂಗ್ಲೀ ಪ್ರೌಢಶಾಲೆಯಲ್ಲಿ ಅಂದು ಸಂಜೆ 4ರಿಂದ 8ರವರೆಗೆ ಏರ್ಪಡಿಸಲಾಗಿರುವ ಸಿದ್ಧಿ ವಿನಾಯಕ ಉತ್ಸವದಲ್ಲಿ ಹಿರಿಯರಿಗೆ ಮತ್ತು ಕಿರಿಯರಿಗೆ ಒಪ್ಪುವ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಕನ್ನಡ ಕಲಿಯೋಣ ಮಕ್ಕಳ ಪ್ರಾರ್ಥನೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಸದ್ಯ ಅಮೆರಿಕ ಪ್ರವಾಸದಲ್ಲಿರುವ ಪ್ರಭಾತ್ ಕಲಾವಿದರಿಂದ ಕಿಂದರ ಜೋಗಿ ಮತ್ತು ಮಹಿಷಾಸುರ ಮರ್ದಿನಿ ನೃತ್ಯರೂಪಕಗಳ ಪ್ರದರ್ಶನ ಇರುತ್ತದೆ. ಹೆಚ್ಚಿನ ವಿವರಗಳಿಗೆ ಅಧ್ಯಕ್ಷ ಗುರು ನಾಗರಾಜ್ ಅವರನ್ನು kaveri_president@yahoo.com ವಿಳಾಸದ ಮುಖಾಂತರ ಸಂಪರ್ಕಿಸಬಹದು ಎಂದು ಶರ್ಮಿಳಾ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X