• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಲದ ಮರ ಹರಿಹರೇಶ್ವರ ನೆನಪುಗಳು

By * ನಳಿನಿ ಮಯ್ಯ, ಶಿಕಾಗೊ
|

ಹರಿಹರೇಶ್ವರ ಅವರ ಬದುಕು ಮತ್ತು ಸಾಧನೆಯ ಬಗ್ಗೆ ಈ ಜಾಲತಾಣದಲ್ಲಿ ಈಗಾಗಲೇ ಅನೇಕ ಲೇಖನಗಳು ಶ್ರದ್ಧಾಂಜಲಿ ರೂಪದಲ್ಲಿ ಪ್ರಕಟವಾಗಿವೆ. ಆದರೆ ನನಗೆ ಹರಿ ಅವರನ್ನು ನೆನೆಸಿಕೊಂಡಾಗ ಮೊದಲು ನೆನಪಾಗುವುದು ಅವರ ಪ್ರೀತಿ, ಸ್ನೇಹ ತುಂಬಿದ ನಿಸ್ವಾರ್ಥ ಮನೋಭಾವ. ಅವರು ಒಂದು ದೊಡ್ಡ ಆಲದ ಮರ ಇದ್ದಂತೆ. ಹತ್ತಿರ ಹೋದವರಿಗೆಲ್ಲ ಚೇತೋಹಾರಿಯಾದ ನೆರಳಿನ ಅನುಭವ ಆಗೇ ಆಗುತ್ತದೆ. ಹರಿ ಅವರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ.
ಅಮೆರಿಕಾದಲ್ಲಿರುವ ಹಿರಿಯ ಕನ್ನಡಿಗರೊಬ್ಬರು ಪಾರ್ಕಿನ್ಸನ್ ಖಾಯಿಲೆಯಿಂದ ಬಳಲುತ್ತಿದ್ದಾಗ "ನೆನಪುಗಳು" ಎಂಬ ತಮ್ಮ ಬದುಕಿನ ನೆನಪುಗಳನ್ನು ಒಳಗೊಂಡ ಒಂದು ಪುಸ್ತಕ ಬರೆದರು. ಆಗ ಅವರ ಆರೋಗ್ಯ ಪರಿಸ್ಥಿತಿ ತುಂಬ ಗಂಭೀರವಾಗಿತ್ತು. ಅವರು ಹೆಚ್ಚು ದಿನ ಬದುಕುವ ನಿರೀಕ್ಷೆಯೂ ಇರಲಿಲ್ಲ. ಅಂತಹ ಸಮಯದಲ್ಲಿ ತಮ್ಮ ಬರಹದ ಕರಡು ಪ್ರತಿಯನ್ನು ಅವರು ಹರಿಹರೇಶ್ವರ ಅವರಿಗೆ ಕಳಿಸಿದರು. ಹರಿ ಆಗ ಬೆಂಗಳೂರಿಗೆ ಹೋಗಿದ್ದರು. ಕರಡು ಪ್ರತಿಯನ್ನು ಓದಿದ ನಾಗಲಕ್ಷ್ಮಿ ಅವರು ತಕ್ಷಣ ಹರಿಗೆ ಫೋನ್ ಮಾಡಿ "ಬರವಣಿಗೆ ತುಂಬ ಚೆನ್ನಾಗಿದೆ. ಆದಷ್ಟು ಬೇಗ ಇದನ್ನು ಪ್ರಕಟಿಸಿ ಅವರು ಬದುಕಿರುವಾಗಲೇ ಅವರು ಈ ಪುಸ್ತಕ ಕೈಯಲ್ಲಿ ಹಿಡಿದು ಸಂತೋಷ ಪಡುವ ಹಾಗೆ ಮಾಡಬೇಕು" ಎಂದು ಹೇಳಿದರು.

ಹರಿ ಅವರು ಅದಕ್ಕೆ ಒಪ್ಪಿಗೆ ಸೂಚಿಸಿ ಕೂಡಲೆ ಸ್ವಂತ ಖರ್ಚಿನಲ್ಲಿ ಅಭಿವ್ಯಕ್ತಿ ಪ್ರಕಾಶನದ ಮೂಲಕ ಪುಸ್ತಕ ಹೊರತಂದು ಅವರಿಗೆ ಮುಟ್ಟಿಸಿದರು. ಅದರಲ್ಲಿ ಅವರಿಗೆ ಯಾವ ಲಾಭವೂ ಇರಲಿಲ್ಲ. ಎಷ್ಟು ಜನ ಅಪರಿಚಿತ ಲೇಖಕನೊಬ್ಬನ ಪುಸ್ತಕವನ್ನು ಕೊಂಡು ಓದುತ್ತಾರೆ? ಆ ಕೆಲಸ ಅವರು ಕನ್ನಡ ತಾಯಿಯ ಪಾದಕ್ಕೆ ಇಟ್ಟ ಹೂವಾಗಿತ್ತು. ಅಷ್ಟೆ. ಮುಂದೆ ಆ ಪುಸ್ತಕಕ್ಕೆ ರಾಜ್ಯ ಪ್ರಶಸ್ತಿಯೂ ಬಂದು ಹರಿ ಅವರ ಎಲ್ಲ ಶ್ರಮಕ್ಕೆ ಸಾರ್ಥಕತೆಯ ಕಿರೀಟವನ್ನು ಇಟ್ಟಂತಾಯಿತು. ಸುದೈವದಿಂದ ಆ ಪುಸ್ತಕ ಬರೆದವರು (ಅನಾರೋಗ್ಯದಿಂದ ಬಳಲುತ್ತಿದ್ದರೂ) ಈಗಲೂ ನಮ್ಮ ನಡುವೆ ಇದ್ದಾರೆ.


ಹರಿ ಮತ್ತು ನಾಗಲಕ್ಷ್ಮಿ ಅವರು (ಸುಮಾರು 2002ರಲ್ಲಿ) ಭಾರತಕ್ಕೆ ಮರಳಿ ಮೈಸೂರಿನಲ್ಲಿ ನೆಲೆಸಿದ ಮೇಲೆ ನಾನು ಅವರ ಮನೆಗೆ ಭೇಟಿ ಕೊಟ್ಟಿದ್ದೆ. ಆಗ ಅವರು ತಮ್ಮ ಹಾಸಿಗೆ ಹಿಡಿದ ತಾಯಿಯನ್ನು ನೋಡಿಕೊಳ್ಳುತ್ತಾ ಒಳಗಿದ್ದ ಕೆಲಸದ ಹೆಂಗಸನ್ನು ಪ್ರೀತಿಯಿಂದ ಕರೆದು ನನಗೆ ಪರಿಚಯ ಮಾಡಿಕೊಟ್ಟರು. "ನಮ್ಮ ತಾಯಿಯನ್ನು ನೋಡಿಕೊಳ್ಳುತ್ತಾಳೆ. ಇವಳೂ ಮನೆಯವಳೇ ಆಗಿಬಿಟ್ಟಿದ್ದಾಳೆ" ಎಂದರು. ಮನೆಯಲ್ಲಿರುವ ಕೆಲಸದಾಕೆಯನ್ನು ಅಷ್ಟು ಪ್ರೀತಿಯಿಂದ, ಗೌರವದಿಂದ ನೋಡುವುದು ಹರಿ ಅವರ ಸೌಜನ್ಯವನ್ನು, ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ.

ಹಾಗೇ ಮಾತನಾಡುತ್ತಾ ಹರಿ ಹೇಳಿದರು- "ಓದಿನಲ್ಲಿ ಆಸಕ್ತಿ ಇದ್ದು ಆರ್ಥಿಕವಾಗಿ ತೊಂದರೆ ಇರುವ ಮಕ್ಕಳಿಗೆ ಸಾಧ್ಯವಾದಷ್ಟೂ ನಾನು ಸಹಾಯ ಮಾಡ್ತೀನಿ. ಮೊನ್ನೆ ತಾನೆ ಒಂದು ಮುಸ್ಲಿಮ್ ಹುಡುಗಿ ಬಂದಿದ್ದಳು. ಸ್ಕೂಲಿಗೆ ಫೀಸ್ ಕಟ್ಟೋದಕ್ಕೆ ಕಷ್ಟ ಅಂತ. ನಾನು ಖುದ್ದಾಗಿ ಅವಳ ಸ್ಕೂಲಿಗೆ ಹೋಗಿ ನಾನೇ ಫೀಸ್ ಕಟ್ಟಿ ಬಂದೆ. ಅವರ ಕೈನಲ್ಲಿ ದುಡ್ಡು ಕೊಟ್ಟರೆ ಬೇರೆಯದಕ್ಕೆ ಖರ್ಚು ಮಾಡಿಬಿಟ್ಟರೆ ಅಂತ ಯೋಚನೆ ನಂಗೆ" ಅಂದರು.

ನಾನು ಅವರ ಧಾರಾಳತನಕ್ಕೆ ಮೆಚ್ಚಿಗೆ ಸೂಚಿಸಿದಾಗ ನಾಗಲಕ್ಷ್ಮಿ ಹೇಳಿದರು- "ದುಡ್ಡಿರೋದ್ಯಾಕೆ ನಳಿನಿ? ನಾವೇನು ಕಾರು ಇಟ್ಕೊಂಡಿಲ್ಲ. ದಿನಬೆಳಗಾದರೆ ಹೋಟಲು, ಸಿನಿಮಾ ಅಂತ ಖರ್ಚು ಮಾಡಲ್ಲ. ಯಾರಿಗಾದರೂ ಸಹಾಯ ಮಾಡಿದರೆ ನಮಗೂ ತೃಪ್ತಿ. ಹೋಗ್ತಾ ನಾವೇನು ತಗೊಂಡ್ ಹೋಗ್ತೀವಾ?"


ಇಲ್ಲ, ಎಲ್ಲ ಬಿಟ್ಟು ಹೋಗ್ತೀವಿ. ಈಗ ಹರಿಹರೇಶ್ವರ ಅವರು ಏನನ್ನು ಬಿಟ್ಟು ಹೋಗಿದ್ದಾರೆ? ಸಹಧರ್ಮಿಣಿ ಎಂಬ ಪದದ ಅರ್ಥವನ್ನು ಸಾರ್ಥಕಗೊಳಿಸಿ ನಲವತ್ತು ವರ್ಷ ಜೊತೆಯಲ್ಲಿ ಬಾಳಿದ ಪತ್ನಿಯನ್ನು, ಮುದ್ದಿನ ಇಬ್ಬರು ಮಗಳಂದಿರನ್ನು, ಪ್ರೋತ್ಸಾಹ ಕೊಟ್ಟು ನೀರೆರೆದು ಹುಲುಸಾಗಿ ಬೆಳೆಸಿದ ಸಾಹಿತ್ಯದ ಫಸಲನ್ನು, ಅಪಾರ ಮಿತ್ರ ವೃಂದವನ್ನು, ಅವರ ಬಗ್ಗೆ ಪ್ರೀತಿ, ಕೃತಜ್ಞತೆಯಿಂದ ಒದ್ದೆಯಾದ ಕಣ್ಣುಗಳನ್ನು, ಅವರನ್ನು ನೆನೆದು ತುಂಬಿ ಬಂದ ಹೃದಯಗಳನ್ನು... ಎಲ್ಲವನ್ನೂ ಹಿಂದೆ ಬಿಟ್ಟು ಹೋಗಿದ್ದಾರೆ. ಹಾಗೇ ಅವರ ದೇಹವನ್ನು ಕೂಡಾ.

ಬಿಟ್ಟು ಹೋದ ಆ ದೇಹವನ್ನೂ ಅವರು ಜೆ.ಎಸ್.ಎಸ್ ಕಾಲೇಜಿಗೆ ಅರ್ಪಿಸಿದ್ದಾರೆ. ಎಂತಹ ಉದಾತ್ತ ವ್ಯಕ್ತಿತ್ವ! ಅಂತಹ ಮಹಾನುಭಾವನ ಸಂಪರ್ಕ, ಸ್ನೇಹ ನನಗೂ ಇತ್ತಲ್ಲ ಎಂಬ ಧನ್ಯತೆಯ ಭಾವ ಮನದಲ್ಲಿ ತುಂಬಿ ಬರುತ್ತಿದೆ. ಮತ್ತೆ ಮೈಸೂರಿಗೆ ಹೋದಾಗ ಹರಿ ಅವರು ಕಾಣಸಿಗುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ನನ್ನ ಮನಸ್ಸು ಸಿದ್ಧವಿಲ್ಲ. ಆದರೆ ಅದೇ ಸತ್ಯ. ಎಲ್ಲಿ ಹೋದಾರು ಹರಿ? ಇದ್ದೇ ಇರುತ್ತಾರೆ ನಮ್ಮ ನಡುವೆ ನೆನಪಾಗಿ, ಹಸಿರಾಗಿ... ನಾವು ಬರೆಯುವ ಪ್ರತಿ ಅಕ್ಷರದ ಹಿಂದಿನ ಪ್ರೇರಣೆಯ ಸೆಲೆಯಾಗಿ, ಕನ್ನಡ ತಾಯಿಗೆ ಅರ್ಪಿಸಿದ ಹೂವಾಗಿ.

ನಿಮ್ಮ ಮೊಬೈಲ್ ನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X