• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರುಹರಿಗೆ ಸಂಧ್ಯಾರವಿ ಗುರುವಂದನೆ

By * ಸಂಧ್ಯಾ ರವೀಂದ್ರನಾಥ್, ಬೇ ಏರಿಯ
|

ಆವತ್ತು ನಮ್ಮ ಮನೆಗೆ ಹರಿಹರೇಶ್ವರ ಮತ್ತು ನಾಗಲಕ್ಷ್ಮಿ ಬಂದಿದ್ದರು. ಅವರು ಬರುತ್ತಾರೆ ಎಂದರೆ ನನಗೆ ಎಲ್ಲಿಲ್ಲದ ಸಡಗರ, ಉತ್ಸಾಹ. ಮನೆಗೆ ಹಿರಿಯ ದಂಪತಿಗಳು ಬರುವರೆಂದು ಮಾತ್ರವಲ್ಲ, ಪ್ರೀತಿಪಾತ್ರರಾದ ಸ್ನೇಹಿತರು. ಕನ್ನಡದ ಬಗ್ಗೆ ಹುರುಪು ತುಂಬುವವರು, ಬದುಕಿಗೆ ಚೇತನ ತುಂಬುವ ಮಾರ್ಗದರ್ಶಿಗಳು ನಮ್ಮಂಥವರ ಮನೆಗೆ ಬರುವುದು ಕಡಲು ತೊರೆ ಅರಸಿ ಬಂದಂತೆ.

ಅವರು ಬಂದ ಕ್ಷಣದಿಂದ ಪ್ರಾರಂಭವಾಗುವ ನಮ್ಮ ಸಂಭಾಷಣೆ ಎಡೆತಡೆಯಿಲ್ಲದೆ ಸಾಗುವುದು. ಒಂದು ಕ್ಷಣವೂ ಸುಮ್ಮನೆ ಇರುವುದಿಲ್ಲ, ಬೇಸರದ ಸುಳಿವೇ ಇಲ್ಲ. ಹರಿಹರೇಶ್ವರ ಅವರು ವಿವಿಧ ವಿಷಯಗಳಲ್ಲಿ ಹೊಂದಿದ್ದ ಅಗಾಧವಾದ ಜ್ಞಾನದಿಂದ ನಮ್ಮ ಸಂಭಾಷಣೆಗಳು ಶಾಲೆಯಲ್ಲಿ ಕುಳಿತು ಗುರುಗಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿರುವಂತೆ ಇರುತ್ತಿತ್ತು. ಏಕವ್ಯಕ್ತಿ ವಿಶ್ವವಿದ್ಯಾಲಯ ಎಂದು ಕರೆಯುವುದು ಇಂಥವರಿಗೇ.

ಕಳೆದ ಗುರುವಾರ ನಮ್ಮನ್ನಗಲಿದ ಶಿಕಾರಿಪುರ ಹರಿಹರೇಶ್ವರ ತಾವು ಓದಿದ ಪ್ರತಿಯೊಂದು ಪುಸ್ತಕವನ್ನೂ ಪತ್ನಿ ನಾಗಲಕ್ಷ್ಮಿಯವರೊಡನೆ ಹಂಚಿಕೊಳ್ಳುತ್ತಿದ್ದರು. ಸಾಹಿತ್ಯ, ನಿರೂಪಣೆ, ಪದಬಳಕೆ ಬಗೆಗೆ ಅವರವರಲ್ಲಿ ಚರ್ಚೆ ಸಾಗುತ್ತಿತ್ತು. ಹರಿ ಅವರೇ ಹೇಳಿದಂತೆ ತಾವು ಬರೆಯುವ ಪ್ರತಿಯೊಂದು ಬರಹವನ್ನೂ ನಾಗಲಕ್ಷ್ಮಿ ವಿಮರ್ಶಿಸುತ್ತಿದ್ದರು. ಅವರದ್ದು ಅನುರೂಪ, ಅಪರೂಪದ ದಾಂಪತ್ಯ. ಇಬ್ಬರ ಆಸೆ, ಆಸಕ್ತಿಗಳು ಒಂದೇ ಆದ್ದರಿಂದ ಜೀವನ ಸುಗಮ, ಸರಾಗ, ಸ್ನೇಹಮಯ. ಅವರಿಬ್ಬರ ಹೆಸರೂ ಅನುರೂಪವಾಗಿಯೇ ಇದೆ, ಅವರು ಹರಿ ಆದರೆ ಇವರು ಲಕ್ಷ್ಮಿಯಾಗುತ್ತಾರೆ, ಅವರು ಹರೇಶ್ವರರಾದರೆ, ಇವರು ನಾಗ!

ಹರಿ ನಾಗಲಕ್ಷಿಯವರದ್ದು ಕೊಡುವ ಕೈ. ಇವರು ಇಲ್ಲಿ, ಅಂದರೆ ಅಮೇರಿಕಾದಲ್ಲಿ ಇದ್ದಾಗ ಮಾಡಿದ ಕನ್ನಡ ಪರ ಕೆಲಸಗಳು ಅನೇಕ. ಅಮೆರಿಕನ್ನಡ ಪತ್ರಿಕೆ ಪ್ರಾರಂಭಿಸುವುದರ ಮೂಲಕ 1980ರ ದಶಕದಲ್ಲಿ ಅಮೇರಿಕಾದಾದ್ಯಂತ ಮನೆಮಾತಾಗಿದ್ದರು. ಕನ್ನಡವೇ ಕಾಣದ, ಕೇಳದ ಈ ಪರಿಸರದಲ್ಲಿ, ಆ ಸಮಯದಲ್ಲಿ ನನ್ನಂತಹ ಕನ್ನಡಪ್ರೇಮಿಗಳಿಗೆ ಅಮೆರಿಕನ್ನಡ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್‌ನಂತೆ ಇತ್ತು.

ನನ್ನ ಗುರು, ನಮಗೆಲ್ಲ ಗುರು : ಅವರು ಕ್ಯಾಲಿಫೋರ್ನಿಯಾಗೆ ಬಂದ ಮೇಲಂತೂ ನನ್ನ ಬರವಣಿಗೆಗೆ ಅವರಿಂದ ತುಂಬು ಹೃದಯದ ಬೆಂಬಲ ದೊರಕಿತು. ಪ್ರತಿವಾರ ಒಂದಲ್ಲ ಒಂದು ಕಾರ್ಯಕ್ರಮ ಹೂಡುತ್ತಿದ್ದರು. ಅವರು ಹೋಮ್‌ವರ್ಕ್ ಕೊಟ್ಟು ನನ್ನ ಕನ್ನಡದ ಬರವಣಿಗೆಗೆ ಪ್ರೋತ್ಸಾಹವಿತ್ತರು. ಹೀಗೆ ಇಲ್ಲಿನ ಕನ್ನಡಿಗರಿಗೆ ಕನ್ನಡ ಸಾರುವುದಕ್ಕೆ, ಬೆಳೆಸುವುದಕ್ಕೆ ಹರಿ ಊರುಗೋಲಾಗಿದ್ದರು. ಅವರು ಮೈಸೂರಿಗೆ ಮರಳಿದ ಮೇಲೆ ಊರುಗೋಲು ಖಂಡಾಂತರದ ಸೇತುವೆಯಾಯಿತು.

ನಾನು ಮೈಸೂರಿನಿಂದ ನಿಮ್ಮ ಕನ್ನಡಪರ ಕಾರ್ಯಕ್ರಮಗಳಿಗೆ ಹೇಗೆ ಸಹಾಯ ಮಾಡಲಿ? ಎನ್ನುವುದು ಅವರು ಪ್ರತಿಸಲಿ ನನ್ನೊಡನೆ ಮಾತನಾಡಿದಾಗ ಕೇಳುವ ಪ್ರಶ್ನೆ! ನನ್ನ ಸಣ್ಣಕಥೆಗಳ ಸಂಗ್ರಹ ಬೆಳಕು ಕಾಣುವುದಕ್ಕೆ ಈ ದಂಪತಿಗಳೇ ಕಾರಣ. ಹಲವಾರು ವರುಷಗಳಿಂದ ಬರೆದಿದ್ದ ಕಥೆಗಳು ಒಂದು ಪುಸ್ತಕವಾಗಿ ಹೊರಹೊಮ್ಮಿತು. ಉತ್ತರ ಕ್ಯಾಲಿಫೋರ್ನಿಯಾದಿಂದ ನಾನು ಕಳಿಸಿದ ಕಥೆಗಳನ್ನು ಮೂರು ವಾರಗಳಲ್ಲಿ ಅಚ್ಚು ಮಾಡಲು, ಪ್ರಕಟಗೊಳಿಸಲು ಸಿದ್ಧಗೊಳಿಸಿ, ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನೂ ಅಚ್ಚುಕಟ್ಟಾಗಿ ಮಾಡಿಬಿಟ್ಟರು.

ಅಧ್ಯಯನಶೀಲ : ಹರಿಯವರು ಯಾವ ವಿಷಯವನ್ನೇ ತೆಗೆದುಕೊಂಡರೂ ಅದನ್ನು ಆಮೂಲಾಗ್ರವಾಗಿ ಓದಿ, ಸಂಶೋಧಿಸಿ, ಅದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಗುಬ್ಬಿ ಕುರಿತೇ ಇರಲಿ ಅಥವಾ ಮಹಾಲಕ್ಷ್ಮಿ ಬಗ್ಗೆಯೇ ಇರಲಿ. ವೇದ, ವೇದಾಂತ, ಜಾನಪದ, ಸಾಹಿತ್ಯಲೋಕದಲ್ಲಿ ಎಲ್ಲೆಲ್ಲಿ ಅದರ ಉಲ್ಲೇಖನವಿರುತ್ತದೋ ಅದೆಲ್ಲವು ಹರಿಯವರಿಗೆ ಕರತಲಾಮಲಕ. ಅವರೇ ಬರೆದಿರುವ ಅನೇಕ ಪುಸ್ತಕಗಳಲ್ಲಿರುವ ಟಿಪ್ಪಣಿಗಳಿಂದ ಇದು ನಮಗೆ ತಿಳಿದು ಬರುತ್ತದೆ. ಹರಿಯವರು ಹಲವಾರು ವಿಷಯಗಳ ಕುರಿತು 20ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಹರಿಯವರ ಕನ್ನಡ ಪ್ರೀತಿಗೆ ಇನ್ನೊಂದು ಉದಾಹರಣೆಯೆಂದರೆ ಅವರೇ ಹಣ ಕೊಟ್ಟು ಇತರರ ಪುಸ್ತಕಗಳನ್ನು ಪ್ರಕಟಿಸುವುದು. ಕನ್ನಡದಲ್ಲಿ ಬರೆಯುವವರಿಗೆ ಇವರು ಈ ರೀತಿ ಪ್ರೋತ್ಸಾಹಿಸುವುದಲ್ಲದೆ, ಓದುವವರಿಗೆ ಬಿಟ್ಟಿ ಪುಸ್ತಕಗಳನ್ನು ಕೊಟ್ಟು ಓದುವಂತೆ ಕೋರಿಕೊಳ್ಳುತಿದ್ದರು! ಬಂದೆಡೆಯೆಲ್ಲ ಅವರು ಬರಿಯ ಕೈಯಲ್ಲಿ ಬರುವ ವ್ಯಕ್ತಿಯಲ್ಲ. ಇತರರಿಗೆ ಕೊಡುವುದಕ್ಕೆ ಕೃತಿಗಳು ಜೋಳಿಗೆಯಲ್ಲಿ ಸದಾ ಇರುತ್ತಿದ್ದವು.

ಹರಿ ದಂಪತಿಗಳು ತಾಯ್ನಾಡಿಗೆ ಮರಳಿದ ಮೇಲೆ ಅನೇಕ ರೀತಿಯಲ್ಲಿ ಸಮಾಜಸೇವೆಯನ್ನು ಜತೆಜತೆಯಾಗಿ ಮಾಡುತ್ತಿದ್ದರು. ಅವರ ನೆರವಿನಿಂದ ಅನೇಕರು ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮುಂದುವರೆಸಲು ಸಾಧ್ಯವಾಗಿದೆ. ಅನ್ನದಾನ, ವಸ್ತ್ರದಾನ, ವಿದ್ಯಾದಾನ ನೀಡುವ ಅನೇಕ ಕಾರ್ಯಕ್ರಮಗಳಿಗೆ ತಮ್ಮ ತನು, ಮನ, ಧನವನ್ನು ಮುಡಿಪಾಗಿಟ್ಟಿದ್ದರು. ತಾಯ್ನಾಡಿಗೆ ಒಂದು ನಿರ್ದಿಷ್ಟ ಉದ್ದಿಶ್ಯವಿಟ್ಟುಕೊಂಡು ವಾಪಸ್ಸು ಹೋಗಿದ್ದರು. ಉದ್ದೇಶ ಸ್ಪಷ್ಟ, ಶ್ರದ್ಧೆ ಅಚಲ, ಫಲಿತಾಂಶ ಸಾರ್ಥಕತೆ.

ಹರಿ ಮತ್ತು ನಾಗಲಕ್ಷ್ಮಿ ಅವರ ವೈವಾಹಿಕ ಜೀವನಕ್ಕೆ ಇದೇ ಆಗಸ್ಟ್ ಗೆ 40 ವರ್ಷ ತುಂಬುತ್ತದೆ. ಆ ದಿವಸಕ್ಕಾಗಿ ಅವರ ಮಕ್ಕಳು ಸುಮನಾ ಮತ್ತು ನಂದಿನಿ ಹಾಗೂ ನಾವೆಲ್ಲ ಸೇರಿ ಹರಿ ನಾಗೂ ಅವರಿಗೆ ಸರ್ ಪ್ರೈಸ್ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ನಮಗೆ ಆ ಪುಣ್ಯ ಇಲ್ಲದಂತಾಯಿತು. ಹರಿಯನ್ನು ವಿಧಿ ಕರೆಸಿಕೊಂಡಿತು. ಅನ್ಯ ಮಾರ್ಗವಿಲ್ಲ. ಹಾಗಂತ ಪತ್ನಿ ನಾಗು ಅವರಾಗಲೀ, ನನ್ನಂಥ ಹರಿ ಅಭಿಮಾನಿಗಳಾಗಲೀ ಅನಾಥರಾದೆವೆಂದು ಭಾವಿಸಬೇಕಿಲ್ಲ. ಬದುಕಿರುವವರೆಗೂ ಭಾವನಾತ್ಮಕ ನೆಲೆಯಲ್ಲಿ ಒಟ್ಟಿಗೇ ಇರುವ ನೇಮವನ್ನು ತಾವು ತೊರೆಯುವುದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more