• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರಿಯವರಿಗೆ ಆಹಿತಾನಲ ನುಡಿನಮನ

By * ಆಹಿತಾನಲ, ದ.ಕ್ಯಾಲಿಫೋರ್ನಿಯ
|

“ಅಮೆರಿಕನ್ನಡದ ಹರಿಯವ್ರು ಹೋದ್ರು ಎಂದೆನಬೇಡಿ

ಹೋದ್ರೂ ಇಲ್ಲೇ ಕುಂತವ್ರೆ ಪುಣ್ಯಾತ್ಮರು

ಬಿತ್ತಿ ಹೋಗವ್ರೆ ಇಲ್ಲಿ ಕನ್ನಡವಾ"

ಇದು ನನ್ನ ಮನಸ್ಸಿನಲ್ಲಿ ಮೂಡಿ ಬಂದ ಭಾವನೆ, ಹರಿಹರೇಶ್ವರರ ನಿಧನ ವಾರ್ತೆ ಕೇಳಿ. ಅಂದು ಗೆಳೆಯ ಶ್ರೀನಿವಾಸ ಭಟ್ಟರು ದೂರವಾಣಿಯಲ್ಲಿ ನನಗೆ ಹರಿಯವರ ನಿಧನದ ವಾರ್ತೆ ಮುಟ್ಟಿಸಿದಾಗ ಡಾ.ಪಿ.ಕೆ.ರಾಜಶೇಖರ ಅವರು ಸಂಪಾದಿಸಿದ 'ಜನಪದ ಮಹಾಭಾರತ"ವನ್ನು ಓದುತ್ತಿದ್ದೆ. ಆ ಗ್ರಂಥವನ್ನು ಹರಿಹರೇಶ್ವರರು ನಾನು ಮೈಸೂರಿನಲ್ಲಿ ಸರಸ್ವತೀಪುರದ ಅವರ ಮನೆಯಲ್ಲಿ ಕಳೆದ ಜನವರಿಯಲ್ಲಿ ಭೇಟಿ ಮಾಡಿದಾಗ ಉಡುಗೊರೆಯಾಗಿ ನನಗೆ ಕೊಟ್ಟಿದ್ದರು. ಅದೊಂದು ಕಾಕತಾಳೀಯ ನ್ಯಾಯವೆಂದರೂ ಸರಿಯೇ!

ಆ ಗ್ರಂಥವನ್ನು ತಮ್ಮ ಸ್ವಹಸ್ತದಲ್ಲಿ, 'ಆತ್ಮೀಯ ಡಾ. ಎಚ್.ಎನ್. ಐತಾಳ್ ಅವರಿಗೆ" ಎಂದು ಪ್ರೀತಿಯಿಂದ ಬರೆದು ಕೊಟ್ಟಿದ್ದರು. (ನನ್ನ ಹೆಸರು ನಾಗ ಐತಾಳ ಎಂತಿದ್ದರೂ, ಅವರು ನನ್ನನ್ನು ಎಚ್.ಎನ್. ಐತಾಳ ಎಂದೇ ಸಂಬೋಧಿಸುತ್ತಿದ್ದರು.) ಅಂದು ಅವರೊಡನೆ ಮಾತಾಡುತ್ತ ನಾನು ಆ ಗ್ರಂಥದ ಮೇಲಿನ ಆಸಕ್ತಿಯನ್ನು ವ್ಯಕ್ತಪಡಿಸಿದ್ದೆ. ಹರಿಹರೇಶ್ವರರು ತಟ್ಟನೆ ಎದ್ದು ಮಹಡಿಯಿಂದ ಆ ಗ್ರಂಥದ ಪ್ರತಿಯೊಂದನ್ನು ತಂದು, 'ಐತಾಳ್ರೇ..., ನಿಮಗೆ ಜಾನಪದದ ಮೇಲಿನ ಆಸಕ್ತಿ ಇರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಬಳಿ ಹೆಚ್ಚಿನ ಪ್ರತಿಯೊಂದಿದೆ. ಇಗೊಳ್ಳಿ, ಅದನ್ನು ಅಮೆರಿಕಕ್ಕೆ ಕೊಂಡು ಹೋಗಿ; ಓದಿ ಆನಂದ ಪಡಿರಿ, ಹಾಗೂ ಆ ಬಗ್ಗೆ ಸ್ವಲ್ಪ ಪ್ರಚಾರ ಮಾಡಿ..." ಎಂದು ಹೇಳಿ ಕೊಟ್ಟಿದ್ದರು. ಅದರಲ್ಲಿ ಉಲ್ಲೇಖಿತವಾದ:

“ಸತ್ಯವಂತ ಪಾಂಡವರು ಸತ್ತರೆಂದೆನಬ್ಯಾಡಿ

ಸತ್ತರೆ ಲೋಕ ಉಳಿಯಾವು - ಪಾಂಡವರು

ಬಿತ್ತಿ ಹೋಗವರೆ ಅವರೇಯ"

ಎಂಬ ತ್ರಿಪದಿಯನ್ನು ಉಲ್ಲೇಖಿಸಿದ್ದರು ಅಂದು. ಅದು ನನ್ನ ಮನಸ್ಸಿನಲ್ಲಿ ಕಂತಿ ಹೋಗಿತ್ತು. ಹರಿಹರೇಶ್ವರರು ಸ್ವರ್ಗಸ್ಥರಾದ ವಾರ್ತೆ ಕೇಳಿದ ನನ್ನಲ್ಲಿ ತಟ್ಟನೆ ಈ ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿದ ('ಅಮೆರಿಕನ್ನಡದ ಹರಿಯವ್ರು...") ಸಾಲುಗಳು ಮೂಡಿ ಬಂದುವು. ಅದಕ್ಕೆ ಬಲವಾದ ಕಾರಣವಿದೆ. ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಹರಿಹರೇಶ್ವರರ ಕೊಡುಗೆ ಅಪಾರವಾದದ್ದು. ಎಷ್ಟೋ ಮಂದಿ ಹವ್ಯಾಸಿ ಕನ್ನಡಿಗರನ್ನು ಹುರಿದುಂಬಿಸಿ, ಅವರಲ್ಲಿ ಸಾಹಿತ್ಯಾಸಕ್ತಿ ಹುಟ್ಟಿಸಿದ 'ಹರಿಕಾರ"ರು, ಹರಿಹರೇಶ್ವರರು. ಅದು ತಮ್ಮ ಕರ್ತವ್ಯವೆಂದೇ ತಿಳಿದಿದ್ದರು ಅವರು. ಅವರ ಈ ನಿಸ್ವಾರ್ಥ ಸೇವೆಯನ್ನು ನಾವು ಯಾವ ಕಾರಣಕ್ಕೂ ಮರೆಯುವಂತಿಲ್ಲ. ಅಂಥ ಮಹಾಕಾರ್ಯ, ಹರಿಯವರು ಇಲ್ಲಿ ಬಿಟ್ಟು ಹೋದ, ಬಿತ್ತಿ ಹೋದ ಪರಂಪರೆ, ಉಡುಗೊರೆ, ಬಳುವಳಿ! ಅದಕ್ಕಾಗಿ ಅವರಿಗೆ ಅಮೆರಿಕನ್ನಡಿಗರು ಸದಾ ಕೃತಜ್ಞರೇ!

ನನ್ನ ಮತ್ತು ಹರಿಹರೇಶ್ವರರ ಸಂಪರ್ಕ ಸುಮಾರು 30 ವರ್ಷಗಳಿಗೂ ಮಿಕ್ಕಿದ್ದುದು. ಈ ಕಾಲಾವಧಿಯಲ್ಲಿ ಅವರು ನನಗೆ ನೀಡಿದ ಹಲವು ವಿಧದ ಪ್ರೋತ್ಸಾಹಗಳನ್ನು ನಾನಿಲ್ಲಿ ಕೃತಜ್ಞತಾ ಭಾವನೆಯಿಂದ ನೆನೆದುಕೊಳ್ಳುತ್ತಿದ್ದೇನೆ. ಅವುಗಳಲ್ಲಿ ಒಂದೆರಡು ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನನ್ನಲ್ಲಿ ಲೇಖನಗಳನ್ನು ಬರೆಯಲು ಉತ್ತೇಜಿಸಿದ್ದರು. ನಾನು ಸಂಪಾದಿಸಿದ 'ಕಾರಂತ ಚಿಂತನ..." ಗ್ರಂಥಕ್ಕೆ ತಮ್ಮೆಲ್ಲ ಸಹಕಾರವನ್ನೂ ಕೊಟ್ಟು, ಅದರ ಸಹಸಂಪಾದಕರಾಗಿಯೂ, ಗ್ರಂಥಕ್ಕೆ ಲೇಖಕನವನ್ನು ಒದಗಿಸುವ ಇತರ ಲೇಖಕರನ್ನು ಸೂಚಿಸುವಲ್ಲಿಯೂ ನೆರವಾಗಿದ್ದರು. ಇದು ನನ್ನ ಸಾಹಿತ್ಯ ಸಂಪರ್ಕವನ್ನು ಬೆಳೆಸಿಕೊಳ್ಳಲು ತುಂಬಾ ಸಹಾಯವಾಗಿತ್ತು. ಶಿಕಾಗೋದಲ್ಲಿ ನಾನು ಅಭಿನಯಿಸಿದ ಸಂಸ್ಕೃತ ನಾಟಕ 'ಅಭಿಜ್ಞಾನ ಶಾಕುಂತಲ"ದಲ್ಲಿ ನನ್ನ ಕಣ್ವ ಋಷಿಯ ಪಾತ್ರವನ್ನು ಮೆಚ್ಚಿ ನುಡಿದ ಉತ್ತೇಜಿತ ಮಾತುಗಳನ್ನು ನಾನೆಂದಿಗೂ ಮರೆಯುವಂತಿಲ್ಲ. ಆ ಸಂದರ್ಭದಲ್ಲಿ ಕಾಳಿದಾಸನ ಕೃತಿಯೊಂದನ್ನೂ ಉಡುಗೊರೆಯಾಗಿ ಕೊಟ್ಟಿದ್ದರು. ಒಂದು ವಿಧದಲ್ಲಿ ಅವರು ನನ್ನ ಸಾಹಿತ್ಯ ಕ್ಷೇತ್ರದ mentor ಎಂದರೂ ಸರಿಯೇ.

ಅವರು 'ಅಮೆರಿಕನ್ನಡ" ದ್ವೈಮಾಸಪತ್ರಿಕೆ ಪ್ರಾರಂಬಿಸುವ ಮೊದಲು, ಶಿಕಾಗೋಗೆ ಬಂದು (ಆಗ ನಾನು ಶಿಕಾಕಾಗೋ ನಿವಾಸಿಯಾಗಿದ್ದೆ) ನನ್ನ ಸಹಕಾರ ಕೋರಿದ್ದರು. ನಾನು ಅವರಿಗೆ ಆ ಬಗ್ಗೆ ನನ್ನ ಬೆಂಬಲ ಕೊಟ್ಟುದಲ್ಲದೆ, ಹಲವು ಚಂದಾದಾರರನ್ನೂ ಗಳಿಸಿಕೊಟ್ಟಿದ್ದೆ. ಆ ಪತ್ರಿಕೆಯ 'ಬಿಡುಗಡೆ" ದೇಶದ ವಿವಿಧ ಕಡೆಗಳಲ್ಲಿ ನಡೆದಿದ್ದು, ಮಧ್ಯವಲಯದಲ್ಲಿ ನಮ್ಮ ಮನೆಯಲ್ಲಿ ಆ ಸಮಾರಂಭವನ್ನು ಏರ್ಪಡಿಸಿದ್ದೆ. ಆ ಬಗ್ಗೆ ಈಗಲೂ ನನ್ನಲ್ಲಿ ಹೆಮ್ಮೆ ಹುಟ್ಟಿಸುತ್ತಿದೆ. ಮುಂದೆ ಮೈ.ಶ್ರೀ.ನಟರಾಜ ಅವರ 'ನಾನೂ ಅಮೆರಿಕನಾಗಿಬಿಟ್ಟೆ" ಕವನ ಸಂಗ್ರಹ ಪ್ರಕಟವಾದಾಗ (ಅದು ಅಮೆರಿಕನ್ನಡದ ಪ್ರಕಾಶನವಾಗಿತ್ತು) ನನಗೆ ಕೆಲವು ಪುಸ್ತಕಗಳನ್ನು ಕಳುಹಿಸಿ, ಆ ಗ್ರಂಥದ ಬಗ್ಗೆ ಪ್ರಚಾರ ಮಾಡಲು ಆದೇಶ ಕೊಟ್ಟಿದ್ದರು. ಅದನ್ನು ನಾನು ಸೈಂಟ್ ಲೂಯಿಸ್ ಕನ್ನಡ ಕೂಟದ ಸ್ಥಾಪನೆಯ ಸಮಯದಲ್ಲಿ ಅಲ್ಲಿಗೆ ಕೊಂಡು ಹೋಗಿ ಕೆಲವು ಪ್ರತಿಗಳನ್ನು ಮಾರಾಟ ಮಾಡಿದ ನೆನಪು ಇನ್ನೂ ಹಸಿರಾಗಿ ಉಳಿದಿದೆ.

ಮುಂದೆ ಅವರು ವೈ.ಆರ್. ಮೋಹನ್ ಅವರ 'ನೆನಪುಗಳು" ಗ್ರಂಥದ ಪ್ರಕಟಣೆಗೂ ಸಹಾಯ ಮಾಡಿದ್ದರು. ಹೀಗೆ ಅವರು ಹಲವು ಅಮೆರಿಕನ್ನಡಿಗರಿಗೆ ನೀಡಿದ ಪ್ರೋತ್ಸಾಹದ ನೆನಪನ್ನು ಮರೆಯಲು ಸಾಧ್ಯವಿಲ್ಲ. ತಾವು ನಿರ್ವಹಿಸಿದ ಕಾರ್ಯಗಳಲ್ಲಿ ಬೇರೆಯವರನ್ನೂ ಜೊತೆಗೂಡಿಸಿಕೊಂಡು, ಅಂಥವರಲ್ಲಿ ಸಾಹಿತ್ಯ ಸೇವೆಯ ಆಸಕ್ತಿಯನ್ನು ಕೆರಳಿಸುತ್ತಿದ್ದುದು ಹರಿಯವರ ಒಂದು ವಿಶೇಷ ಗುಣ.

ಹರಿಹರೇಶ್ವರರ ಬಗ್ಗೆ ಬರೆಯುತ್ತ ಹೋದಲ್ಲಿ ಪುಟಗಟ್ಟಲೆ ಬರೆಯಬಹುದು. ಎಲ್ಲ ಸೂಚಿಸುವುದೂ ಒಂದನ್ನೇ; ಅವರ ನಿಸ್ವಾರ್ಥ ಸೇವೆ. ಒಂದೇ ಮಾತಿನಲ್ಲಿ 'ಹರಿಹರೇಶ್ವರ, ನೀವೊಬ್ಬ ಆದರ್ಶ ನಿಸ್ವಾರ್ಥ ಕನ್ನಡಿಗ" ಎಂದಿಷ್ಟೇ ಹೇಳಬಹುದು. ಅಷ್ಟೇ ಸಾಕು ಅವರ ವ್ಯಕ್ತಿತ್ವವನ್ನು ಸಂಪೂರ್ಣ ವರ್ಣಿಸಲು. ಅಷ್ಟೇ ಹೇಳಿ ನನ್ನ ಗೌರವವನ್ನು ಈ ಮೂಲಕ ಅವರಿಗೆ ಸಲ್ಲಿಸುತ್ತಿದ್ದೇನೆ.

ಮುಗಿಸುವ ಮುನ್ನ, ಅವರೇ ತಮ್ಮ ಲೇಖನವೊಂದರಲ್ಲಿ ತಿಳಿಸಿದಂತೆ, ನಮ್ಮ ಸಂಸ್ಕೃತಿಯಲ್ಲಿ ಯಾವುದಾದರೂ ಶುಭವನ್ನು ಮೂರು ಬಾರಿ ಹೇಳುವ, ಉದಾಹರಣೆಗೆ ಓಂ ಶಾಂತಿ ಶಾಂತಿ ಶಾಂತಿಃ, ಪದ್ಧತಿಯನ್ನು ಇಲ್ಲಿ ಜ್ಞಾಪಿಸಿಕೊಳ್ಳುತ್ತಿದ್ದೇನೆ. ಅವರ ಹೆಸರೇ ದೇವರನ್ನು ಮೂರು ಬಾರಿ ನೆನೆಯುವಂತಿದೆ. ಆ ಮೂರು ನಾಮವನ್ನು ನೆನೆಸಿಕೊಂಡೇ ಅವರಿಗೆ ವಿದಾಯ ಹೇಳಬಯಸುತ್ತೇನೆ: ಹರಿ ಹರ ಈಶ್ವರಃ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more