ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರದಲ್ಲೊಂದು ಕನ್ನಡ ಅಧ್ಯಯನ ಕೇಂದ್ರ

By Shami
|
Google Oneindia Kannada News

Kannada Foundation launch, Singaara
ಸಿಂಗಾಪುರದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗಳ ಅಭಿವೃದ್ಧಿ ಉದ್ದೇಶದದಿಂದ ಸಿಂಗಾಪುರದ ನವನವೋನ್ಮೇಶಶಾಲಿ ಕರ್ನಾಟಕ ವೈಭವ ಸಂಸ್ಥೆಯು ಕನ್ನಡ ಅಧ್ಯಯನ ಕೇಂದ್ರ ವನ್ನು ಸ್ಥಾಪಿಸಿದೆ.

ಜುಲೈ 17ರಂದು ಈ ಕೇಂದ್ರದ ಉದ್ಘಾಟನೆಯನ್ನು ಗ್ಲೋಬಲ್ ಇಂಡಿಯನ್ ಫೌಂಡೇಶನ್ ಮತ್ತು ಗ್ಲೋಬಲ್ ಇಂಡಿಯನ್ ಇಂಟರ್ನಾಷನಲ್ ಸ್ಕೂಲ್ಸ್ ಸಂಸ್ಥೆಗಳ ಸ್ಥಾಪಕ ಹಾಗೂ ಅಧ್ಯಕ್ಷರಾದ ಅತುಲ್ ತೆಮುರ್ನಿಕರ್ ಅವರು ನೆರವೇರಿಸಿದರು. ಕಾರ್ಯಕ್ರಮ ಸೆರಂಗೂನ್ ರಸ್ತೆಯಲ್ಲಿರುವ ಶ್ರೀನಿವಾಸ ಪೆರುಮಾಳ್ ದೇವಸ್ಥಾನದ ಪಿ.ಜಿ.ಪಿ. ಕಲ್ಯಾಣ ಮಂಟಪದಲ್ಲಿ ಜರುಗಿತು.

ಎಂಟು ವರ್ಷಗಳ ಅವಧಿಯಲ್ಲಿ ಏಳು ದೇಶಗಳಲ್ಲಿ 17 ಶಾಲೆಗಳನ್ನು ಸ್ಥಾಪಿಸಿ ಹದಿನೇಳು ಸಾವಿರ ವಿದ್ಯಾರ್ಥಿಗಳು ಹಾಗೂ ಸಾವಿರದ ಐದುನೂರು ಶಿಕ್ಷಕರನ್ನೂ ಹೊಂದಿರುವ ಈ ಸಂಸ್ಥೆಯ ಯಶಸ್ಸಿಗೆ ಕಾರಣರಾದ ಅತುಲ್ ಅವರು ಕನ್ನಡ ಅಧ್ಯಯನಕ್ಕೆ ಚಾಲನೆ ನೀಡಿದುದು ಅತ್ಯಂತ ಸಮಂಜಸವಾಗಿತ್ತು.

ಈ ಸಂದರ್ಭದಲ್ಲಿ ಕರ್ನಾಟಕ ವೈಭವ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಹೆಗ್ಡೆಯವರು ಮಾತನಾಡಿ ಕನ್ನಡ ಅಧ್ಯಯನ ಯೋಜನೆಗೆ ಸಿಂಗನ್ನಡಿಗರ ಕನ್ನಡಾಭಿಮಾನ ಮತ್ತು ಅವರು ನೀಡಿದ ಎಣಿಕೆಗೂ ಮೀರಿದ ಬೆಂಬಲವೇ ಕಾರಣವೆಂದು ಶ್ಲಾಘಿಸಿದರು.

ಕನ್ನಡಿಗರ ಮಕ್ಕಳಿಗೆ ಕನ್ನಡ ಮಾತಾಡುವ ವಾತಾವರಣವಿಲ್ಲದೆ ಹೆತ್ತವರಿಗೂ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು ದುಸ್ಸಾಧ್ಯವಾದುದನ್ನು ಗಮನಿಸಿ ಮೊದಲಿಗೆ ಕನ್ನಡಿಗರ ಮಕ್ಕಳಿಗೆ ಕನ್ನಡ ಓದುವ, ಬರೆಯುವ ಮತ್ತು ಮಾತನಾಡುವ ಶಿಕ್ಷಣವನ್ನು ಆರಂಭಿಸಲು ನಿರ್ಧರಿಸಿ, ಆರಂಭದಲ್ಲಿಯೇ ಸಿಂಗಾಪುರದಾದ್ಯಂತ 12 ಕೇಂದ್ರಗಳನ್ನು ತೆರೆಯಲಾಗಿದೆ.

ಮಕ್ಕಳಿಗೆ ಶಿಕ್ಷಣದ ಒತ್ತಡ ಹಾಗೂ ಸಮಯದ ಅಭಾವವನ್ನು ಮನಗಂಡು ಮಕ್ಕಳಿರುವ ತಾಣದಲ್ಲಿಯೇ ಶಿಕ್ಷಣದ ಸೌಲಭ್ಯವನ್ನು ಒದಗಿಸಲೆಂದೇ 12 ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಬೇಡಿಕೆಯಿದ್ದಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ಕನ್ನಡ ಕಲಿಸುವ ಕೇಂದ್ರಗಳನ್ನು ತೆರೆಯಲಾಗುವುದೆಂದು ಹೆಗ್ಡೆಯವರು ತಿಳಿಸಿದರು. ಸ್ವಯಂ ಸೇವಕರ ಉತ್ಸಾಹ ಹಾಗೂ ಬೆಂಬಲದಿಂದಾಗಿಯೇ ಕನ್ನಡದ ಕಲಿಕೆಯನ್ನು ಉಚಿತವಾಗಿ ನೀಡಲು ಸಾಧ್ಯವಾಗಿದೆಯೆಂದು ಅವರು ತಿಳಿಸಿದರು.

ಸಿಂಗಾಪುರದಲ್ಲಿ ಬೇಕಾದಷ್ಟು ಸಂಪನ್ಮೂಲ ವ್ಯಕ್ತಿಗಳಿರುವುದರಿಂದ ಸದ್ಯದಲ್ಲಿಯೇ ವಯಸ್ಕರಿಗೆ ಕನ್ನಡ ಶಿಕ್ಷಣ ಮತ್ತು ಕನ್ನಡದಲ್ಲಿ ಉಚ್ಛ ಶಿಕ್ಷಣಕ್ಕೆ ದಾರಿಮಾಡಿಕೊಡುವ ಯೋಜನೆಗಳನ್ನೂ ಹಮ್ಮಿಕೊಳ್ಳಲಾಗುವುದೆಂದವರು ಅವರು ತಿಳಿಸಿದರು.

ಕಾರ್ಯಕ್ರಮದ ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ಅಕ್ಷಯ ಪ್ರಭು ಅವರು ಹಚ್ಚೇವು ಕನ್ನಡದ ದೀಪ ಕವನವನ್ನು ಸುಶ್ರಾವ್ಯವಾಗಿ ಹಾಡಿದರು. ಬೆಂಗಳೂರಿನ ಅರುಣ್ ಅವರ ಸುಪುತ್ರಿ ವಿದುಷಿ ವರ್ಣ ಅರುಣ್ ಅವರು ಭರತ ನಾಟ್ಯದಿಂದ ಕಾರ್ಯಕ್ರಮದ ಅಂದವನ್ನೂ ಔನ್ನತ್ಯವನ್ನೂ ಹೆಚ್ಚಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಎಮ್. ರೇವಣ್ಣ ಮತ್ತು ಸಪ್ನ ಮೋಹನ್ ಅವರು ಅಚ್ಚುಕಟ್ಟಾಗಿ ಮಾಡಿದರು. ನಾಡಗೀತೆಯ ಸಾಮೂಹಿಕ ಗಾಯನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X