ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ನಾವೆಯನ್ನು ಮುನ್ನಡೆಸಿದ 'ಹರಿ'ಗೋಲು

By Rajendra
|
Google Oneindia Kannada News

Harihareshwara
ಈ ಶೀರ್ಷಿಕೆಯನ್ನೇ ಇನ್ನೂ ಅರ್ಥಪೂರ್ಣವಾಗಿ ಹೇಳುವುದಾದರೆ, ಕನ್ನಡ ನಾವೆಯನ್ನು ಮುನ್ನಡೆಸುವುದೊಂದೇ ಆಗಿತ್ತು ಹರಿ ಬದುಕಿನ goalಉ!

* ಶ್ರೀವತ್ಸ ಜೋಶಿ

ಹರಿ (ಎಸ್. ಕೆ. ಶಿಕಾರಿಪುರ ಹರಿಹರೇಶ್ವರ) ನಮ್ಮನ್ನಗಲಿ ಹೊರಟುಹೋಗಿದ್ದಾರೆ. ಹರಿಪಾದ ಸೇರಿದ್ದಾರೆ. ಕನ್ನಡದ ಪ್ರಚಾರಕನಾಗಿ, ಪರಿಚಾರಕನಾಗಿ, ಕನ್ನಡಾಭಿಮಾನದ ಪ್ರೇರಕನಾಗಿ, ಪ್ರೋತ್ಸಾಹಕನಾಗಿ ಹೇಗೆ ಇರಬಹುದು ಮತ್ತು ಇರಬೇಕು ಎನ್ನುವುದನ್ನು ಬರೀ ಮಾತನಾಡಿ ಅಲ್ಲ ಮಾಡಿ ತೋರಿಸಿ ತೆರಳಿದ್ದಾರೆ. ತಾಯ್ನೆಲದಿಂದ ದೂರವಿದ್ದಾಗ ಮಾತ್ರ ಕನ್ನಡ ಕನ್ನಡ ಎಂದು ಹಾತೊರೆಯುವ ಕನ್ನಡಾಭಿಮಾನಿ ಎಂದೆನಿಸದೆ, ಕರ್ಮಭೂಮಿಯಿಂದ ಜನ್ಮಭೂಮಿಗೆ ಮರಳಿದ ಮೇಲೆ ನಾಡು-ನುಡಿಗಾಗಿ ಮತ್ತಷ್ಟು ದುಡಿದು ಈಗ ಚಿರನಿದ್ರೆಗೆ ಜಾರಿದ್ದಾರೆ. ಅವರ ಹೆಸರಿನ 'ಎಸ್.ಕೆ' ಎಂಬೆರಡು ಇನಿಶಿಯಲ್‌ಗಳ ಅರ್ಥ 'ಶುದ್ಧ ಕನ್ನಡಿಗ' ಎಂದು ಒಮ್ಮೆ ವಿಶ್ವೇಶ್ವರ ಭಟ್ ಬಣ್ಣಿಸಿದ್ದರು. ಅದರಲ್ಲೊಂಚೂರೂ ಉತ್ಪ್ರೇಕ್ಷೆಯಿಲ್ಲ. ಏಕೆಂದರೆ ಹರಿ ತಾವೇ ಕನ್ನಡವಾಗಿದ್ದರು; ಕನ್ನಡಪ್ರೀತಿಗೆ ಕನ್ನಡಿಯಾಗಿದ್ದರು. ಅವರ ಕನ್ನಡಪ್ರೇಮ ಘೋಷಣೆಗಳದಲ್ಲ. ಕಂಠಶೋಷಣೆಯದು ಮೊದಲೇ ಅಲ್ಲ. ಅದು ಸಸಿ ನೆಟ್ಟು ನೀರುಣಿಸಿ ಮರವಾಗುಕವವರೆಗೂ ಮಮತೆ ತೋರುವ ಪಾಲನೆ-ಪೋಷಣೆಯ ರೀತಿಯದು.

ಮೊನ್ನೆ ಗುರುವಾರ (ಜುಲೈ 22) ತೀವ್ರ ಹೃದಯಾಘಾತಕ್ಕೊಳಗಾಗಿ ಹರಿ ಅಸುನೀಗಿದರೆಂಬ ಸುದ್ದಿ, ಮೈಸೂರಿನಿಂದ ಹೊರಟದ್ದು ಪ್ರಪಂಚಕ್ಕೆಲ್ಲ ಕ್ಷಣಾರ್ಧದಲ್ಲಿ ಹರಡಿತು. ಅಮೆರಿಕನ್ನಡಿಗರಿಗೆ, ಅದರಲ್ಲೂ ಮುಖ್ಯವಾಗಿ ಕನ್ನಡ ಓದು ಬರಹವನ್ನು ಈಗಲೂ ನಿತ್ಯಾನುಷ್ಠಾನದಂತೆ ನಿಷ್ಠೆಯಿಂದ ಮುಂದುವರಿಸಿಕೊಂಡು ಬಂದಿರುವವರಿಗೆ ಅದು ಬರಸಿಡಿಲಿನಂಥ ಸುದ್ದಿಯೇ ಆಗಿತ್ತು. ಅಂತೆಯೇ ಹರಿಯನ್ನು ಹತ್ತಿರದಿಂದ ನೋಡಿ ಬಲ್ಲವರಿಗೆ, ಹರಿಯ ಅಸಂಖ್ಯಾತ ಅಭಿಮಾನಿಗಳಿಗೆ, ಸ್ನೇಹಿತರಿಗೆ ಮತ್ತು ಶಿಷ್ಯವರ್ಗಕ್ಕೆ ಕೂಡ. ದೂರವಾಣಿಯಲ್ಲಿ, ಇಮೇಲ್‌ಗಳಲ್ಲಿ, ಫೇಸ್‌ಬುಕ್ ಟ್ವಿಟರ್‌ಗಳಲ್ಲಿ ದುಃಖ ತೋಡಿಕೊಂಡರು ಅನೇಕರು. ಸಹೃದಯಿ ಸಜ್ಜನ ವ್ಯಕ್ತಿಯ ಗುಣಗಾನ ಮಾಡಿದರು. ತಮ್ಮ ವ್ಯಕ್ತಿತ್ವಕ್ಕೆ ಹರಿ ಕರುಣಿಸಿದ್ದ ಮೆರುಗನ್ನು ಸ್ಮರಿಸಿಕೊಂಡರು. ಹರಿಯವರ ವಿದ್ವತ್ಪೂರ್ಣ ಬರಹಗಳನ್ನು ಅಂಕಣ ರೂಪದಲ್ಲಿ ಪ್ರಕಟಿಸುತ್ತಿದ್ದ thatskannada.com ಮತ್ತು ourkarnataka.com ಮುಂತಾದ ಅಂತರ್ಜಾಲ ಕನ್ನಡಪತ್ರಿಕೆಗಳು ತಡಮಾಡದೆ ನಿಧನವಾರ್ತೆ ಬಿತ್ತರಿಸಿ ಹರಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದವು.

ಹರಿಯವರಿಂದ ಪ್ರೋತ್ಸಾಹಕ್ಕೆ ಭಾಜನರಾದ, ಅವರ ಸ್ನೇಹ ಸಂಪಾದಿಸಿ ಸಾಂಸ್ಕೃತಿಕವಾಗಿ ಸಿರಿವಂತರಾದ ಅನೇಕರಲ್ಲಿ ನಾನೂ ಇದ್ದೇನೆ. ಹಿರಿಯ ಹಿತೈಷಿಯೋರ್ವನನ್ನು ಕಳಕೊಂಡ ದುಃಖ ನನಗೂ ಇದೆ. ಆದ್ದರಿಂದಲೇ ಈ ವಾರದ ಅಂಕಣವನ್ನು ಹರಿಸ್ಮರಣೆ ಮೂಲಕ ಹರಿಸಮರ್ಪಣೆ ಮಾಡುತ್ತಿದ್ದೇನೆ. ತೀರಾ ಭಾವುಕನಾಗದೆ, ನಾನು ಕಂಡಂತೆ ಹರಿ ಹಿರಿಮೆಯ ಕೆಲ ಪ್ರಸಂಗಗಳನ್ನು ಇಲ್ಲಿ ಸವಿನೆನಪುಗಳ ರೂಪದಲ್ಲಿ ದಾಖಲಿಸುತ್ತಿದ್ದೇನೆ.

ಇಸವಿ 2002, ದಿನಾಂಕ ಅಕ್ಟೋಬರ್ 15 ಮಂಗಳವಾರ, ವಿಜಯದಶಮಿ. ಅವತ್ತು ಬೆಳಿಗ್ಗೆ 7.42 ಕ್ಕೆ ನನ್ನ ಇಮೇಲ್ ಇನ್‌ಬಾಕ್ಸ್‌ಗೆ ಶುಭ ಹಾರೈಕೆಗಳೊಂದಿಗೆ ಅಭಿನಂದನೆ ಎಂಬ ಒಂದು ಇಮೇಲ್ ಬಂದಿತ್ತು (ಅಲ್ಲ, ಬಂದಿದೆ. ಏಕೆಂದರೆ ಅದನ್ನು ಮತ್ತು ಅವತ್ತಿನಿಂದ ನನಗೆ ಬಂದ ಆರೀತಿಯ ಎಲ್ಲ ಇಮೇಲ್‌ಗಳನ್ನೂ ಅತ್ಯಂತ ಜೋಪಾನವಾಗಿ ಕಾಯ್ದುಕೊಂಡು ಬಂದಿದ್ದೇನೆ). ಅದು, ಹರಿಯವರು ನನಗೆ ಕಳಿಸಿದ್ದ ಇಮೇಲ್. ಅವತ್ತು ದಟ್ಸ್‌ಕನ್ನಡ ಅಂತರ್ಜಾಲ ವಾಹಿನಿಯಲ್ಲಿ ನನ್ನ ಸಾಪ್ತಾಹಿಕ ಅಂಕಣ ವಿಚಿತ್ರಾನ್ನದ' ಮೊಟ್ಟಮೊದಲ ಕಂತು ಪ್ರಕಟವಾದದ್ದು. ದಟ್ಸ್‌ಕನ್ನಡದವರು ವಿಚಿತ್ರಾನ್ನ ಲೇಖನದ ಪುಟವನ್ನು ಅಂತರ್ಜಾಲಕ್ಕೇರಿಸಿ ಅರ್ಧಗಂಟೆಯೂ ಕಳೆದಿರಲಿಲ್ಲವೇನೋ, ಹರಿ ಕ್ಯಾಲಿಫೋರ್ನಿಯಾದಿಂದ (ಆಗ ಅಲ್ಲಿ ಸಮಯ ಬೆಳಗಿನ ಜಾವ 4:42) ಅದನ್ನೋದಿ ನನಗೆ ಅಭಿನಂದನೆ ಮತ್ತು ಶುಭಾಶಯ ತಿಳಿಸುತ್ತ ಇಮೇಲ್ ಕಳಿಸಿದ್ದಾರೆ! ಆತ್ಮೀಯ ಶ್ರೀವತ್ಸಜೋಶಿ, ನಮಸ್ಕಾರ. ನಿಮ್ಮ ಹೊಸ ಅಂಕಣದ ಮೊದಲ ಬರಹವನ್ನು ಈಗಷ್ಟೇ ಓದಿದೆ. ಚೆನ್ನಾಗಿದೆ. ವಿಚಿತ್ರಾನ್ನದ ಮೊದಲ ತುತ್ತು ರುಚಿಯಾಗಿದೆ. ಶುಭವಾಗಲಿ. ಸ್ನೇಹದಲ್ಲಿ ನಿಮ್ಮ, ಹರಿ."

ಅವತ್ತಿನಿಂದ ಆರಂಭವಾದ ನನ್ನ ಸಾಪ್ತಾಹಿಕ ಅಂಕಣ ಬರವಣಿಗೆ ಮೊದಲ ಐದು ವರ್ಷ ದಟ್ಸ್‌ಕನ್ನಡದಲ್ಲಿ ವಿಚಿತ್ರಾನ್ನ ರೂಪದಲ್ಲಿ, ಆಮೇಲೆ ಈಗ ವಿಜಯಕರ್ನಾಟಕದಲ್ಲಿ ಪರಾಗ ಸ್ಪರ್ಶ' ರೂಪದಲ್ಲಿ ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ. ಹರಿಯವರ ಆ ಒಂದು ಇಮೇಲ್‌ನಿಂದಾಗಿಯೇ ಇದೆಲ್ಲ ಸಾಧ್ಯವಾಯಿತು ಎನ್ನುವುದಕ್ಕೆ ಹೊರಟಿಲ್ಲ ನಾನು. ಆದರೆ ನನ್ನಮಟ್ಟಿಗೆ ಓದುಗರ ಓಲೆ ಎಂಬ ಪ್ರೀತಿ ಪ್ರೋತ್ಸಾಹ ರಸಧಾರೆಗೆ ಓನಾಮ ಹಾಕಿದವರು, ಶ್ರೀಗುರುಭ್ಯೋನಮಃ ಹರಿಃ ಓಂ ಎಂದೆನಿಸಿದವರು ಹರಿ! ಆಮೇಲೆ ವಿಚಿತ್ರಾನ್ನ ಅಂಕಣ ನೂರು ಕಂತುಗಳನ್ನು ಪೂರೈಸಿದಾಗಲೂ ಹರಿ ಬರೆದು ಹರಸಿದ್ದರು- ಅನ್ನಂ ನ ನಿಂದ್ಯಾತ್; ತದ್ ವ್ರತಮ್ (ಅನ್ನವನ್ನು ಕಡೆಗಣಿಸಬೇಡ; ಹಾಗೆ ನಡೆಯುವ ಪಣ ತೊಡು) ಎಂದ ತೈತ್ತಿರೀಯ ಉಪನಿಷತ್ತಿನ ಋಷಿಗೆ ಈ ವಿಚಿತ್ರಾನ್ನದ ರುಚಿ ಗೊತ್ತಿದ್ದರೆ ಹಾಗೆ ಹೇಳಬೇಕಾದ ಪ್ರಸಂಗವೇ ಬರುತ್ತಿರಲಿಲ್ಲವೇನೋ. ಇದೇರೀತಿ ನಿರಂತರ ನಡೆಯಲಿ, ಭಿನ್ನರುಚಿಯವರಿಗೆ ಒಂದೆಡೆಯೇ ಸಿಗುವ ಈ ಸಂಭ್ರಮದ ಸಮಾರಾಧನೆಯ ಭೂರಿ ಭೋಜನ!

ಹರಿಯವರೊಂದಿಗೆ ನನ್ನ ಮೊದಲ ಭೇಟಿಯಾದದ್ದು 2002 ಸಪ್ಟೆಂಬರ್‌ನಲ್ಲಿ ಅಮೆರಿಕದ ಡೆಟ್ರಾಯಿಟ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ. ಆಗ ಹರಿ, ನಾನು ಮತ್ತು ದಟ್ಸ್‌ಕನ್ನಡ ಸಂಪಾದಕ ಶಾಮ್ ಮೂವರೂ ಉಳಕೊಂಡಿದ್ದ ನಮ್ಮ ಹೊಟೆಲ್ ಕೊಠಡಿಯನ್ನೇ ಪ್ರೆಸ್ ರೂಮ್ ಆಗಿ ಮಾರ್ಪಡಿಸಿಕೊಂಡಿದ್ದೆವು. ಸಮ್ಮೇಳನದ ಪ್ರತ್ಯಕ್ಷ ವರದಿಗಳನ್ನು, ಫೋಟೊಗಳನ್ನು ದಟ್ಸ್‌ಕನ್ನಡ ಬೆಂಗಳೂರು ಕಚೇರಿಗೆ ಇಮೇಲ್ ಮಾಡುವುದರಲ್ಲಿ ಶಾಮ್ ಮತ್ತು ನಾನು ವ್ಯಸ್ತರಾಗಿದ್ದರೆ ಹರಿಯವರು ನಮಗೆ ಅದನ್ನೂ ಬರೀರಿ ಇದನ್ನೂ ಸೇರಿಸಿ... ಎಂದು ಹುರಿದುಂಬಿಸುವರು. ರಾತ್ರೆಯೆಲ್ಲ ನಿದ್ದೆಗೆಟ್ಟು ವರದಿಗಳನ್ನು ಟೈಪ್ ಮಾಡುವಾಗ ಹೊಟೆಲ್‌ರೂಮ್‌ನಲ್ಲೇ ನಮಗೆ ಕಾಫಿ ಮಾಡಿಕೊಡುವರು. ಅಂತೂ ಕನ್ನಡದ ಕೆಲಸ ಎಲ್ಲೋ ನಡೆಯುತ್ತಿದೆ ಅದು ಜಗತ್ತಿಗೆಲ್ಲ ತಿಳಿಯಬೇಕು ಎಂಬ ಅದಮ್ಯ ಉತ್ಸಾಹ ಅವರದು. ಹಾಗಂತ ಅದೇ ಸಮ್ಮೇಳನದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಒಂದು ಕನ್ನಡ ಚಿತ್ರದ ಶೂಟಿಂಗ್ ಸಹ ಮಾಡುತ್ತಿದ್ದರಾದ್ದರಿಂದ ಅದರ ಕುರಿತು ಏನಾದರೂ ಗಾಸಿಪ್ ಐಟಂ ಅಥವಾ ತಮಾಷೆ ನ್ಯೂಸ್‌ಸ್ಟೋರಿ ಸೇರಿಸೋಣ ಎಂದು ಶಾಮ್ ಮತ್ತು ನಾನು ಪಿತೂರಿ ನಡೆಸಿದ್ದರೆ ಅದಕ್ಕೆ ಹರಿಯ ಸಮ್ಮತಿಯಿಲ್ಲ. ಛೆ! ಯಾಕೆ ಸುಮ್ಮನೆ ನಾಗತಿಯವರ ಕಾಲೆಳೀತೀರಾ, ಮಾಡ್ಬೇಡಿ ಹಾಗೆ ಎಂಬ ತಾಕೀತು. ಅದನ್ನವರು ನಾಗತಿಹಳ್ಳಿ ಮೇಲಿನ ಮಮತೆಯಿಂದ ಹೇಳಿದ್ದಂತೇನಲ್ಲ. ಯಾರನ್ನೇ ಆಗಲಿ ಕಿಚಾಯಿಸುವುದು, ಕಾಲೆಳೆಯುವುದು, ಕೆಟ್ಟ ಮಾತಾಡುವುದು ಇತ್ಯಾದಿ ಹರಿಯ ಜಾಯಮಾನವೇ ಅಲ್ಲ. ಆದರೆ ಮುಂದೆ ಹರಿ ಅಮೆರಿಕದಿಂದ ಮೈಸೂರಿಗೆ ಮರಳಿದಾಗ ಅದೇ ನಾಗತಿಹಳ್ಳಿ ಹಾಯ್ ಬೆಂಗಳೂರು ಪತ್ರಿಕೆಯ ಅಂಕಣದಲ್ಲಿ ಹರಿ ಮೈಸೂರಿಗೆ ಬರುತ್ತಿದ್ದಾರೆ ಎಚ್ಚರಿಕೆ! ಎಂಬ ತಲೆಬರಹಕೊಟ್ಟು ಲೇಖನ ಬರೆದಿದ್ದರು. ಕಾಲೆಳೆಯುತ್ತಲೇ ಹರಿಭಕ್ತಿ ತೋರಿದ್ದರು.

ಹಾಗೆ ಪ್ರೀತಿ ಸಲಿಗೆಗಳಿಂದಲೇ ಹರಿಯವರನ್ನು ಕಿಚಾಯಿಸುತ್ತ ಅವರ ಗುಣಗಾನ ಮಾಡಿದ ಇನ್ನೊಬ್ಬ ಹರಿಭಕ್ತ ಇಲ್ಲಿ ವಾಷಿಂಗ್ಟನ್‌ನಲ್ಲಿರುವ ಕನ್ನಡಿಗ ಡಾ.ಮೈ.ಶ್ರೀ.ನಟರಾಜ್. ಮೊನ್ನೆ ಹರಿ ನಿಧನರಾದ ಸುದ್ದಿಯನ್ನು ನಾನು ಅವರಿಗೆ ದೂರವಾಣಿಯಲ್ಲಿ ತಿಳಿಸಿದಾಗ ಅವರೂ ಗದ್ಗದಿತರಾದರು. ಸಾಹಿತ್ಯವಿದ್ಯಾರ್ಥಿಯಲ್ಲದ ತನ್ನನ್ನು ಕನ್ನಡಸಾಹಿತ್ಯ ರಚನೆಗೆ ತಳ್ಳಿದವರು ಹರಿ ಎನ್ನುವ ನಟರಾಜ್ ಹಿಂದೊಮ್ಮೆ ಅಮೆರಿಕದಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನವೊಂದರಲ್ಲಿ ಹರಿಯನ್ನು ಹುರಿಯೋಣ ಎಂಬ ಶೀರ್ಷಿಕೆಯ ಕವನ ಬರೆದು ವಾಚಿಸಿದ್ದರಂತೆ! ಹಾಗೆಯೇ ಹರಿ ಕ್ಯಾಲಿಫೋರ್ನಿಯಾ ಬಿಟ್ಟು ಮೈಸೂರಿಗೆ ಹಿಂತೆರಳಿದಾಗ ಹೋಗ್ಬರ್ತೀರಾ ಹರಿ? ಎಂಬ ಕವಿತೆಯಲ್ಲಿ ಬಂದುಹೋಗಿ ಮಾಡುತ್ತೀರಿ ತಾನೆ? ಕೊನೇಪಕ್ಷ ಸ್ನೇಹದಲಿ ನಿಮ್ಮ... ಪತ್ರವಾದರೂ ಬರೆಯುತ್ತೀರಿ ತಾನೆ? ನಿಮ್ಮನ್ನು ಬಿಟ್ಟು ನಾವು ಇರುವುದಾದರೂ ಹೇಗೆ? ಪದೇಪದೇ ಬರೆಯುತ್ತಿರಿ. ಆಗಾಗ್ಗೆ ಬಂದುಹೋಗುತ್ತಿರಿ ಎಂದು ಪ್ರೀತಿಯ ಆದೇಶ ಕೊಟ್ಟಿದ್ದರು. ಈಗ ಇಹಲೋಕದಿಂದಲೇ ಹೊರಟುಹೋದರಲ್ಲ ಹರಿ! ಅವರಿಗೆ ಅಂಥದೇನಿತ್ತು hurry?

ಇನ್ನೊಂದು ಸ್ವಾರಸ್ಯಕರ ಪ್ರಸಂಗ ನೆನಪಾಗುತ್ತಿದೆ. ಇದೂ ಸಹ ಹರಿ ಹಿರಿಮೆಗೆ ಒಂದು ನಿದರ್ಶನ. ಕೆಲವರ್ಷಗಳ ಹಿಂದೆ ಹರಿ ಒಮ್ಮೆ ವಾಷಿಂಗ್ಟನ್‌ಗೆ ಬಂದಿದ್ದವರು ನಮ್ಮ ಮನೆಯಲ್ಲಿ ಒಂದೆರಡು ದಿನ ಉಳಕೊಂಡಿದ್ದರು. ಇಲ್ಲಿನ ಸ್ನೇಹಿತರ ಮನೆಗಳಿಗೆ, ಶಿವವಿಷ್ಣು ದೇವಸ್ಥಾನಕ್ಕೆ, ನಮ್ಮ ಕಾವೇರಿ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಹೀಗೆ ಎಲ್ಲಕಡೆಗೂ ನನ್ನ ಕಾರ್‌ನಲ್ಲೇ ಅವರನ್ನು ಕರೆದುಕೊಂಡು ಹೋಗಿದ್ದೆ. ಆಗ ನಡೆದ ಘಟನೆಯಿದು. ಅವತ್ತು ಶನಿವಾರ. ಬೆಳಿಗ್ಗೆ ಬ್ರೇಕ್‌ಫಾಸ್ಟ್ ಮುಗಿಸಿ ನಾವಿಬ್ಬರೂ ದೇವಸ್ಥಾನಕ್ಕೆ ಹೊರಟಿದ್ದೆವು. ಸುಮಾರು ಒಂದು ಗಂಟೆ ಕಾರ್‌ಡ್ರೈವಿಂಗ್‌ನ ದೂರ. ಹೊರಟ ಸ್ವಲ್ಪಹೊತ್ತಿನಲ್ಲೇ ನನ್ನ ಸೆಲ್‌ಫೋನ್‌ಗೆ ಒಂದು ಕರೆ ಬಂತು. ಶಿಕಾಗೊದಿಂದ ನನ್ನೊಬ್ಬ ಹಳೇಸಹೋದ್ಯೋಗಿಯ ಕರೆ. ಅವರು ತೆಲುಗಿನವರು. ಅವತ್ತು ಅವರ ಮನೆಯಲ್ಲಿ ನವಗ್ರಹಪೂಜೆ ಇಟ್ಟುಕೊಂಡಿದ್ದರಂತೆ, ಆದರೆ ಕೊನೇಗಳಿಗೆಯಲ್ಲಿ ಪುರೋಹಿತರು ಕೈಕೊಟ್ಟರಂತೆ. ಕ್ಯಾಸೆಟ್ ಹಾಕಿ ಪೂಜೆ ಮಾಡಲು ನಿರ್ಧರಿಸಿದರಂತೆ. ಪೂಜೆಯಲ್ಲಿ ಒಂಬತ್ತು ಗ್ರಹಗಳಿಗೆ ಒಂಬತ್ತು ವಿಧದ ಧಾನ್ಯಗಳನ್ನು ಜೋಡಿಸಿಡುತ್ತಾರಲ್ಲ, ಯಾವ ಧಾನ್ಯಗಳು, ಯಾವ ಕ್ರಮದಲ್ಲಿ ಎಂದು ನಿಮಗೇನಾದರೂ ಗೊತ್ತೇ ಎಂದು ನನ್ನನ್ನು ಕೇಳಲು ಫೋನ್ ಮಾಡಿದ್ದರು! ಹೇಗ್ಹೇಗೋ ಧಾನ್ಯ ಇಟ್ಟು ಸುಮ್ನೆ ಗ್ರಹಾಚಾರ ತಂದುಕೊಳ್ಳುವುದೇಕೆ ಎಂದು ಅವರು ಗಾಬರಿಗೊಂಡಿರಬೇಕು. ಆದರೆ ನನಗೇನು ಗೊತ್ತು ನವಗ್ರಹ ಧಾನ್ಯಗಳ ಕ್ರಮ? ಮನೆಯಲ್ಲಿದ್ದಿದ್ದರೆ ಛಕ್ಕಂತ ಗೂಗಲ್ ಸರ್ಚ್ ಮಾಡಿಯಾದರೂ ಅವರಿಗೆ ಮಾಹಿತಿ ಕೊಡಬಹುದಿತ್ತು. ಕಾರ್‌ಡ್ರೈವಿಂಗ್ ವೇಳೆ ಎಲ್ಲಿಯ ಗೂಗಲ್, ಎಲ್ಲಿಯ ನವಗ್ರಹಗಳು? ಆದರೆ ಅದೃಷ್ಟ ಎನ್ನುವುದು ಇದನ್ನೇ. ಅದು ನನ್ನ ಅದೃಷ್ಟವೂ ಹೌದು, ಪರೋಕ್ಷವಾಗಿ ನನ್ನ ಆ ಸ್ನೇಹಿತನ ಅದೃಷ್ಟವೂ ಹೌದು. ಕಾರಲ್ಲಿ ನನ್ನ ಪಕ್ಕದಲ್ಲಿದ್ದವರಾರು? ಪ್ರಕಾಂಡಪಂಡಿತ, ನೂರಾರು ಗ್ರಂಥಗಳನ್ನು ಶಾಸ್ತ್ರಗಳನ್ನು ಶಾಸನಗಳನ್ನು ಅರೆದು ಕುಡಿದಿರುವ ಶಿಕಾರಿಪುರ ಹರಿಹರೇಶ್ವರ! ಅವರು ಗೂಗಲಾವಲಂಬಿಯಲ್ಲ. ಧರ್ಮ-ತರ್ಕ-ಶಾಸ್ತ್ರ-ಸಾಹಿತ್ಯ ಎಲ್ಲ ಕರತಲಾಮಲಕವಾಗಿರುವವರು. ಅಮೆರಿಕದಲ್ಲಿರುತ್ತ ನೂರಾರು ಮದುವೆಗಳನ್ನು, ಸತ್ಯನಾರಾಯಣ ಕಥೆಗಳನ್ನು (ಅದೂ ಕನ್ನಡದಲ್ಲಿ) ಮಾಡಿಸಿದ ಸಿವಿಲ್ ಇಂಜನಿಯರ್ ಪುರೋಹಿತ. ಅಂಥ ವ್ಯಕ್ತಿ ನನ್ನ ಪಕ್ಕದಲ್ಲಿರುವಾಗಲೇ ಈ ಧರ್ಮಸಂದೇಹ ಬಂದದ್ದು ಕಾಕತಾಳೀಯ! ಸೆಲ್‌ಫೋನ್ ಹರಿಯವರಿಗೆ ಕೊಟ್ಟೆ, ವಿಷಯ ವಿವರಿಸಿದೆ. ತಗೊಳ್ಳಿ, ಹರಿಯವರು ಫೋನಲ್ಲೇ ಪ್ರತಿಯೊಂದನ್ನೂ ಒಪ್ಪಓರಣವಾಗಿ ವಿವರಿಸಿ ಆ ಶಿಕಾಗೊ ದಂಪತಿಯಿಂದ ನವಗ್ರಹಪೂಜೆ ಮಾಡಿಸಿಯೇಬಿಟ್ಟರು! ವಿದ್ವಾನ್‌ಸರ್ವತ್ರ ಪೂಜ್ಯತೇ" ಎನ್ನುವುದು ಅದಕ್ಕೇ.

ಹರಿ ಇಷ್ಟೊಂದು ಜನಾನುರಾಗಿ, ಜನಹಿತಕಾರಿ ಆಗಿ ಬೆಳೆದುದರ ಹಿಂದಿನ ಶಕ್ತಿ ಅವರ ಪತ್ನಿ ನಾಗಲಕ್ಷ್ಮಿಯವರು. ಇಬ್ಬರು ಮಕ್ಕಳ ಪಾಲನೆಪೋಷಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು, ಹರಿಯವರನ್ನು ಕನ್ನಡದ ಪಾಲನೆಪೋಷಣೆಗೆ ಬಿಟ್ಟುಕೊಟ್ಟ ಕರುಣಾಮಯಿ. ಕೊನೆಗೆ ಹರಿಯವರನ್ನೂ ಮಗು'ವಿನಂತೆ ಅಕ್ಕರೆಯಿಂದ ನೋಡಿಕೊಂಡ ಮಹಾಮಾತೆ. ಈಗ ಶೋಕತಪ್ತೆ. ಅವರೊಬ್ಬರೇ ಅಲ್ಲ, ನಾವೆಲ್ಲರೂ.

ಹರಿಯ ಆತ್ಮ ಶ್ರೀಹರಿಯ ಚರಣಾರವಿಂದಗಳಲ್ಲಿ ಚಿರಶಾಂತಿ ಪಡೆಯಲಿ. ಕನ್ನಡದ ಪಾಲನೆಪೋಷಣೆ ಹರಿ ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲೇ ನಡೆಯಲಿ. (ಸ್ನೇಹಸೇತು: ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X