• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಎಸ್ ನಟರಾಜ್ ಮಾಡುವ ಹರಿಸ್ಮರಣೆ

By Shami
|

ಇಂದು ಮಧ್ಯಾಹ್ನ ಕಛೇರಿಯಲ್ಲಿ ಕೆಲಸದಲ್ಲಿ ಮಗ್ನನಾಗಿದ್ದಾಗ ಗೆಳೆಯ ಜೋಶಿ ಕರೆದು ಕೆಟ್ಟ ಸುದ್ದಿಯನ್ನು ಮುಟ್ಟಿಸಿದರು. ಅದುವೆಕನ್ನಡದ ಶಾಮಸುಂದರ್ ಸಹ ಮಿಂಚೋಲೆ ಕಳಿಸಿದರು.

ನಂಬಲು ಬಾರದ ಆದರೆ ಕಟು ಸತ್ಯವಾದ ಸುದ್ದಿ ಹೀಗಿತ್ತು: ಗುರುವಾರದ ರಾತ್ರಿ ಭೋಜನವನ್ನು ಮಡದಿಯೊಂದಿಗೆ ಮಾಡಿ ಕೈತೊಳೆದು ಒಂದೇ ಘಳಿಗೆ ಅಗಾಧವಾದ ಹೃದಯಾಘಾತಕ್ಕೆ ತುತ್ತಾಗಿ ಇದ್ದಕ್ಕಿದ್ದಹಾಗಿ ತಮ್ಮ ಇಹಜೀವನದ ಹಂಗನ್ನೆಲ್ಲ ತೊರೆದು ಮಡದಿ ಮಕ್ಕಳನ್ನೂ ಅಪಾರ ಬಂಧುಮಿತ್ರರನ್ನೂ ತೊರೆದು ನಡೆದೇ ಬಿಟ್ಟರು ನಮ್ಮ ಶಿಕಾರಿಪುರ ಹರಿಹರೇಶ್ವರ.

ಅವರು ಇಷ್ಟು ಬೇಗ ನಮ್ಮನ್ನು ತ್ಯಜಿಸುತ್ತಾರೆಂದು ನಮಲ್ಲಿ ಯಾರಿಗೂ ಅನಿಸಿರಲಿಲ್ಲ. ಹರಿಯ ಬಗ್ಗೆ ಅಮೆರಿಕದಲ್ಲಿ ನೆಲಸಿರುವ ಕನ್ನಡಿಗರಿಗೆಲ್ಲ ತಿಳಿದೇ ಇದೆ, ಆದರೂ ಅವರನ್ನು ನೆನೆದು ಎರಡು ಸ್ನೇಹದ ಮಾತುಗಳನ್ನಾಡಿ ಶ್ರದ್ಧಾಂಜಲಿ ಅರ್ಪಿಸುವುದು ನನ್ನ ಕರ್ತವ್ಯವೆಂದು ಭಾವಿಸಿ ಕುಳಿತಿದ್ದೇನೆ. ಎಲ್ಲಿಂದ ಪ್ರಾರಂಭಿಸಬೇಕೋ ತಿಳಿಯುತ್ತಿಲ್ಲ.

ಮೊಟ್ಟ ಮೊದಲು ನಾನವರನ್ನು ಕಂಡಿದ್ದು ಬೆಂಗಳೂರಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ. (ಆಗ ಅವರು ಎಮ್. ಎಸ್. ರಾಮಯ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.) ತಮ್ಮ ಕೆಲವು ಶಿವಮೊಗ್ಗದ ಮಿತ್ರರನ್ನು ಭೇಟಿಯಾಗಲು ಆಗಾಗ್ಗೆ ಅವರು ನಮ್ಮ ವಿದ್ಯಾರ್ಥಿನಿಲಯಕ್ಕೆ ಭೇಟಿಕೊಡುತ್ತಿದ್ದುದುಂಟು.

ಆದರೆ, ಆಗ ಅವರ ಪರಿಚಯ ನನಗಾಗಲಿಲ್ಲ. ನಂತರ ನಾನವರನ್ನು ಕಂಡಿದ್ದು ಮೊದಲನೆಯ ಮತ್ತು ಎರಡನೆಯ ಈಶಾನ್ಯ ಅಮೆರಿಕ ಕನ್ನಡ ಸಮ್ಮೇಳನದಲ್ಲಿ (ನ್ಯೂಯಾರ್ಕ್ ಕನ್ನಡ ಕೂಟ ಮತ್ತು ತ್ರಿವೇಣಿ) ಕಾರ್ಯಕ್ರಮಗಳಲ್ಲಿ. ಆ ಗಲಾಟೆಯಲ್ಲಿ ಹೆಚ್ಚು ಮಾತಾಡುವುದಕ್ಕಾಗಲಿಲ್ಲವಾದರೂ ಈತನೊಬ್ಬ ಕನ್ನಡದ 'ಹುಚ್ಚ' ಎಂಬುದಂತೂ ಖಾತರಿಯಾಯಿತು.

ಅದಾದಮೇಲೆ ನಾನು ಕಾವೇರಿ ಅಧ್ಯಕ್ಷನಾದೆ, ನಾನಾ ಕಾರಣಗಳಿಂದ ಅವರ ಪರಿಚಯ ಬೆಳೆಯಿತು, ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಆಸಕ್ತಿಯಿದ್ದ ದಂಪತಿ --ನಾಗಲಕ್ಷ್ಮಿ-ಹರಿ ಇವರೊಂದಿಗೆ ಹರಟುವುದು ಸಂತಸದ ಚಟವಾಯಿತು.

ಆ ವೇಳೆಗೆ ನಾನು ಹಲವು ಕವನಗಳನ್ನೂ ನಾಟಕಗಳನ್ನೂ ಬರೆದಿದ್ದೆ ಮತ್ತು ಅವುಗಳನ್ನು ಇವರಿಬ್ಬರೊಂದಿಗೆ ಹಂಚಿಕೊಂಡಿದ್ದೆ. ಅವರು ಅವುಗಳನ್ನೋದಿ ಟೀಕಿಸಿ ವಿಮರ್ಶಿಸಿ ಫೋನಿನಲ್ಲಿ ತಮ್ಮ ಅನಿಸಿಕೆಗಳನ್ನು ಯಾವ ಮುಚ್ಚುಮರೆಯಿಲ್ಲದೇ ಹಂಚಿಕೊಳ್ಲಲು ಘಂಟೆಗಟ್ಟಲೆ ಮಾತಾಡುತ್ತಿದ್ದ ಆ ದಿನಗಳನ್ನು ನೆನೆಸಿಕೊಳ್ಳುವುದೇ ಒಂದು ರೀತಿಯ ಬೆಚ್ಚನೆಯ ಖುಷಿಗೆ ಕಾರಣವಾಗುತ್ತದೆ.

ನನ್ನ ಒಂದು ನಾಟಕ -"ಮೀನಿನ ಹೆಜ್ಜೆ"ಯನ್ನು ಅವರು ಎಷ್ಟು ಹಚ್ಚಿಕೊಂಡಿದ್ದರೆಂದರೆ, ಅದು ಪ್ರದರ್ಶನಗೊಂಡಾಗಲೆಲ್ಲ ಅವರಿಬ್ಬರೂ ಬಂದು ಮೊದಲ ಸಾಲಿನಲ್ಲಿ ಕುಳಿತು ನಮ್ಮ ನಟನೆ ನಿರ್ದೇಶನಗಳಬಗ್ಗೆ ಪೋಸ್ಟ್-ಮಾರ್ಟಮ್' ಮಾಡುತ್ತಿದ್ದರು. ಆ ನಾಟಕವನ್ನು ಮುಂದೆ "ಅಭಿವ್ಯಕ್ತಿ" ಪ್ರಕಾಶನದಲ್ಲಿ ಮುದ್ರಿಸಿ ಪ್ರಕಟಿಸಲು ಕಾರಣರಾದವರೂ ಅವರೇ. ಅಂತೂ ನನಗೇ ತಿಳಿಯದಂತೆ, ನಾನು ಅವರ ಸಾಹಿತ್ಯದ ಗುಂಪಿನ ಒಳವೃತ್ತದ ಸದಸ್ಯನಾಗಿಬಿಟ್ಟಿದ್ದೆ.

ಹೀಗಿರುತ್ತ, ಹಿಂದೆ ಯಾರೂ ಮಾಡಿರದಿದ್ದ ಒಂದು ಕೆಲಸಕ್ಕೆ ಅವರು ಕೈಹಾಕಿದರು. ವಿಶ್ವದ ಅತಿ ಶ್ರೀಮಂತದೇಶವಾದ ಅಮೆರಿಕಕ್ಕೂ ಬಡ ಭಾರತದ ಒಂದು ಪ್ರಾಂತ್ಯವಾದ ಕನ್ನಡನಾಡಿಗೂ ಎಂದೆಂದೂ ಬಿಡಿಸಲಾಗದ ಅಕ್ಷರ-ಬೆಸುಗೆಯ ಕೊಂಡಿಯೊಂದನ್ನು ತಯಾರಿಸಲು ಕುಲುಮೆಯನ್ನು ನಿರ್ಮಿಸಿ ಅದರಲ್ಲಿ ಎರಕಹುಯ್ಯುವ ಸಾಹಸದಲ್ಲಿ ತೊಡಗಿದರು.

ನ್ಯೂಯಾರ್ಕ್ ಕನ್ನಡ ಕೂಟದ ಕೈಬರಹದ ಪತ್ರಿಕೆಯಲ್ಲಿ ನಾನು ಬರೆದ "ಅಮೆರಿಕನ್ನಡ ಗಾದೆಗಳು" ಎಂಬ ಲೇಖನವನ್ನು ಬರೆದಾಗ ಯಾವೊಂದು ದೂರಾಲೋಚನೆಯೂ ಇಲ್ಲದೇ ನಾನು ಹೊಸೆದಿದ್ದ ಅಮೆರಿಕನ್ನಡ' ಎಂಬ ಪದಗುಚ್ಚವನ್ನು ಮೆಚ್ಚಿ ತಮ್ಮ ಕೈಕೂಸಾಗಿ ಎತ್ತಿಕೊಂಡು ಸಲಹಿದರು.

'ಅಮೆರಿಕನ್ನಡ' ಎಂಬ ಹೆಸರಿನಲ್ಲಿ ಒಂದು ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ನಾನು ಆವರೆಗೆ ಬರೆದಿದ್ದ ಕವನಗಳನ್ನೆಲ್ಲಾ ಸೇರಿಸಿ ಒಂದು ಕವನ ಸಂಗ್ರಹವನ್ನು ("ನಾನೂ ಅಮೆರಿಕನ್ ಆಗಿಬಿಟ್ಟೆ") ಪ್ರಕಟಿಸುವುದರ ಮೂಲಕ ನನ್ನಂಥ ಸಾಹಿತ್ಯೇತರ ವಿದ್ಯಾರ್ಥಿಯನ್ನು ಕನ್ನಡ ಸಾಹಿತ್ಯದೆಡೆಗೆ ತಳ್ಳಿ'ದರು! ಅದೇ ಸಮಯದಲ್ಲಿ "ಅಮೆರಿಕನ್ನಡ" ದ್ವೈಮಾಸಿಕ ಪತ್ರಿಕೆಯ ಜನನವೂ ಆಯಿತು.

ಮುಂದೆ ನಡೆದದ್ದು ಅಮೆರಿಕನ್ನಡ ಸಾಹಿತ್ಯ ಚರಿತ್ರೆಯ ಮೊದಲ ಅಧ್ಯಾಯ. ನನ್ನಂಥ ಅನೇಕರು, ಬರೆಯುವ ಆಸೆಯಿದ್ದವರು, ಶಕ್ತಿಯಿದ್ದವರು -ಇಲ್ಲದವರು, ಎಲ್ಲರ ಕೈಯಲ್ಲೂ ಹೇಳಿ ಬರೆಸಿ ಪ್ರಕಟಿಸಿದರು. ಅಮೆರಿಕದಲ್ಲಿ ಚದುರಿಹೋಗಿರುವ ಸಹಸ್ರಾರು ಕನ್ನಡ ಕುಟುಂಬಗಳಲ್ಲಿ ಕನ್ನಡದ ಓದು ಬರಹ ನಿಜವಾಗಿ ಪ್ರಾರಂಭವಾದದ್ದು ಆವಾಗಲೇ!

ಅವರಿಬ್ಬರ ಶ್ರಮ, ತ್ಯಾಗ ಮತ್ತು ನಿಸ್ವಾರ್ಥ ದುಡಿಮೆಯ ಫಲದಿಂದ ಇಂದು ಅಮೆರಿಕದಲ್ಲಿ ಹಲವಾರು ಕನ್ನಡ ಬರಹಗಾರು ಇದ್ದಾರೆ, ಆದರೆ, ಅವರು ಪ್ರಾಂಭಿಸಿದ ಕನ್ನಡ ಪತ್ರಿಕೆಯನ್ನು ಇಲ್ಲಿನ ಕನ್ನಡಿಗರು ಉಳಿಸಿಕೊಳ್ಳಲಿಲ್ಲ. ಪ್ರಾಯಶಃ, ಮಹಾಭಾರತದ ಅಭಿಮನ್ಯು, ಘಟೋತ್ಕಚ ಮುಂತಾದ ಪಾತ್ರಗಳಂತೆ ಆ ಪತ್ರಿಕೆ ತನ್ನ ಪಾತ್ರವನ್ನು ವಹಿಸಿ ಅಲ್ಪಾಯುವಾಗಿ ಕಣ್ಮರೆಯಾಯಿತು.

ಹರಿ ಇತರರಿಗೆ ಪ್ರೋತ್ಸಾಹ ಕೊಡುವ ಗಲಾಟೆಯಲ್ಲಿ ತಮ್ಮ ಸಾಹಿತ್ಯಕೃಷಿಯನ್ನು ಮರೆತಿದ್ದರು, ಆದರೆ, ನಿವೃತ್ತರಾದಮೇಲೆ ತಮ್ಮ ವಿಶ್ರಾಂತಿ(?)ಜೀವನದಲ್ಲಿ ಮೈಸೂರಿನಲ್ಲಿ ಕುಳಿತು ಹಲವಾರು, ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ತಮಗೆ ಅತ್ಯಂತ ಸಮಾಧಾನ ಕೊಡುವ ಕನ್ನಡದ ಕೆಲಸ, ಬಡಬಗ್ಗರಿಗೆ ಸಹಾಯಕವಾಗುವ ಅನೇಕ ಸಾಮಾಜಿಕ, ಧಾರ್ಮಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಡದಿಯೊಂದಿಗೆ ಒಂದಿಷ್ಟು ಖುಷಿಪಡುತ್ತಿರುವಾಗಲೇ ಜವರಾಯ ಅವರನ್ನು ಕಸಿದುಕೊಂಡಿದ್ದು ನಮ್ಮೆಲ್ಲರ ದುರ್ಭಾಗ್ಯ.

"ಸ್ನೇಹದಲ್ಲಿ ನಿಮ್ಮ" ಎಂದೇ ಕೊನೆಗೊಳ್ಳುವ ಮಿಂಚೋಲೆಗಳನ್ನು ಆಗಾಗ್ಗೆ ಕಳುಹಿಸುತ್ತಿದ್ದ ಆ ಸ್ನೇಹಮಯಿ ಇನ್ನಿಲ್ಲ. ಅವರ ಪ್ರತಿಯೊಂದು ಕೆಲಸದಲ್ಲೂ ಅವರಿಗೆ ಸಹಧರ್ಮಿಣಿ ಎಂಬ ಹೆಸರಿಗೆ ಅನ್ವರ್ಥನಾಮವಾಗಿರುವ ನಾಗಲಕ್ಷ್ಮಿ ಅವರಿಗೆ ಮತ್ತು ಅವರ ಪ್ರೀತಿಯ ಮಕ್ಕಳಾದ ನಂದಿನಿ ಮತ್ತು ಸುಮನರಿಗೆ ನಾವು ಏನು ತಾನೇ ಸಮಾಧಾನ ಹೇಳಲು ಸಾದ್ಯ? ದೇವರು ಶಕ್ತಿ ಮತ್ತು ಸ್ಥೈರ್ಯಗಳನ್ನು ಕೊಟ್ಟು ಕಾಪಾಡಲಿ ಎಂದು ನನ್ನ ಪರವಾಗಿ ಮತ್ತು ಸಮಸ್ತ ಅಮೆರಿಕನ್ನಡಿಗರ ಪರವಾಗಿ ಬೇಡಿಕೊಳ್ಳುತ್ತಾ ಶ್ರದ್ಧಾಂಜಲಿ ಅರ್ಪಿಸುತ್ತೇನೆ.

ಸ್ನೇಹದಲ್ಲಿ ನಿಮ್ಮ,

ಮೈ.ಶ್ರೀ. ನಟರಾಜ. ಮೇರಿಲ್ಯಾಂಡ್, ಅಮೆರಿಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X