• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮನಿಗೊಂದು ಕಾಲ ರಾವಣನಿಗೊಂದು ಕಾಲ!

By * ವಾಣಿ ರಾಮದಾಸ್, ಸಿಂಗಪುರ
|

ರಾವಣನ್ನ ನೋಡೋಣ ಎಂದು ನನ್ನ ರಾಮ ಹೇಳ್ತಾನೇ ಇದ್ದ. ಹೊಡಿ, ಬಡಿ, ಕುತ್ತು, ಕೊಲ್ಲು ಯಾರು ನೋಡ್ತಾರೆ ಎಂದು ನಾನು ದಿನ ದೂಡುತ್ತಲೇ ಬಂದೆ. ಅಲ್ವೋ ರಾಜ, ದಿನ್ ಬೆಳಗಾದ್ರೆ ಪೇಪರ್‍ನಲ್ಲಿ "ಯಾವೋನ್ ಹೆಂಡ್ತಿನಾ ಯೋವೋನೋ ಹೊತ್ಕೊಂಡು ಹೋದ್ನಂತೆ, ಅವ್ಳನ್ನ್ ಹುಡುಕ್ಕಂಡು ಇನ್ಯಾವನೋ ಹೋಗ್ತಾನಂತೆ" ಎಂಬ ಕನಕ-ವಾಣಿಯ ಸುದ್ದಿ ಬರ್ತಾನೇ ಇರುತ್ತೆ ಇನ್ನು "ರಾವಣ" ಪಿಕ್ಚರ್ ಥೀಮ್ ಕೂಡ ಅದೇ, ನೋಡಲೇಬೇಕೇ ಎಂದು ಕೇಳಿದೆ.

ಸಂಪೂರ್ಣ ರಾಮಾಯಣ, ರಾಮಯಣ ಚಿತ್ರಗಳ ಕಾಲ ಮುಗಿದು ಇದೀಗ ಬರುತ್ತಿರುವ ಚಿತ್ರಗಳು ರಾವಣ ಮಹಿಮೆ, ಪ್ರಚಂಡ ರಾವಣ, ರಾಮಾಪುರದ ರಾವಣ, ರಾಮನಿಗೊಂದು ಕಾಲ ರಾವಣನಿಗೊಂದು ಕಾಲ. ರಾವಣ ಬಂದ ಮೇಲೆ ಕುಂಭಕರ್ಣ-ವಿಭೀಷಣರೂ ಬಲು ಬೇಗ ಬಂದಲ್ಲಿ ಅಚ್ಚರಿ ಏನಿಲ್ಲ! ಹೆಸರಿನಲ್ಲೇನಿದೆ ಬಿಡಿ ಎಂದು ನಾನೂ ಹೇಳುತ್ತಿದ್ದೆ. ಆದರೆ...

ಬ್ಯಾಂಕಾಕಿಗೆ ಹೋಗಿದ್ದಾಗ ಅಲ್ಲಿ ಕಂಡೆ ಎಲ್ಲೆಲ್ಲೊ ರಾಮಮಯಂ. ಬೀದಿ, ಅಂಗಡಿ, ಹೋಟೆಲ್, ಸೇತುವೆಯ ಹೆಸರುಗಳು-ರಾಮ-1, ರಾಮ-2, ರಾಮ-3.. ರಾಜನೂ ಕೂಡ ಭೂಮಿಬೋಲ್ ಅದುಲ್ಯತೇಜ-ರಾಮ-9. ರಾಮನಿದ್ದೆಡೆ-ರಾವಣನೂ ಇರಬೇಕಲ್ಲಾ ಎಂದು ಕಣ್ಣಾಡಿಸಿದಂತೆ ಕಂಡದ್ದು "ಹೋಟೆಲ್ ರಾವಣ". ಇನ್ನೂಮ್ಮೆ ಕಾಂಬೋಡಿಯಾದ ರಾಜಧಾನಿ ಹೋಗಿದ್ದಾಗ ನಾಮ್‌ಪೆನ್ನಿನಲ್ಲಿ ಇದ್ದದ್ದು ಹೋಟೆಲ್ ಕುಂತಿ, ಅದರ ಪಕ್ಕದ ಅಂಗಡಿಯ ಹೆಸರು ರಾವಣ ಮಿನಿ-ಮಾರ್ಟ್. ಆಗ ನೆನಪಾದದ್ದು "ಕುಂತಿಸುತೋ ರಾವಣ ಕುಂಭಕರ್ಣಃ!

ಭೋಜರಾಜನ ಆಸ್ಥಾನದಲ್ಲಿದ್ದ ಕಾಳಿದಾಸನಿಗೆ ಆಗದ ಕೆಲ ಕುಹಕಿಗಳು ಅವನನ್ನು ಸೋಲಿಸಬೇಕೆಂದು ಒಮ್ಮೆ "ಕುಂತೀಸುತೋ ರಾವಣಕುಂಭಕರ್ಣಃ| (ರಾವಣ, ಕುಂಭಕರ್ಣರು ಕುಂತಿಯ ಮಕ್ಕಳು) ಎಂದರಂತೆ. ತ್ರೇತಾಯುಗದ ರಾಮಾಯಣದಲ್ಲಿ ರಾವಣ, ಕುಂಭಕರ್ಣರು. ದ್ವಾಪರದ ಮಹಾಭಾರತದಲಿ ಕುಂತಿ. ಕುಂತಿಯ ಮಕ್ಕಳು ರಾವಣ-ಕುಂಭಕರ್ಣರು ಹೇಗಾದರು? ಆಗ ಕಾಳಿದಾಸ ಅರ್ಥೈಸಿದ್ದು....

ಕಾ ಪಾಂಡುಪತ್ನೀ ಗೃಹಭೂಷಣಂ ಕಿಂ|| ಕೋ ರಾಮಶತ್ರುಃ ಕಿಮಗಸ್ತ್ಯಜನ್ಮಃ|

ಕಃ ಸೂರ್ಯಪುತ್ರೋ ವಿಪರೀತಪೃಚ್ಛಾ|| ಕುಂತೀಸುತೋ ರಾವಣಕುಂಭಕರ್ಣಾಃ||

ಅರ್ಥ: ಪಾಂಡುವಿನ ಹೆಂಡತಿ ಯಾರು? ಕುಂತಿ. ಮನೆಗೆ ಶೋಭಾಯಮಾನವಾದುದು ಯಾವುದು? ಪುತ್ರಸಂತಾನ. ರಾಮನ ವೈರಿ ಯಾರು? ರಾವಣ. ಅಗಸ್ತ್ಯ ಹುಟ್ಟಿದ್ದು ಎಲ್ಲಿ? ಕುಂಭದಲ್ಲಿ. ಸೂರ್ಯಪುತ್ರ ಯಾರು? ಕರ್ಣ. ಅಸಂಬದ್ಧ ವಾಕ್ಯ ಯಾವುದು? ಕುಂತೀಸುತರು ರಾವಣ- ಕುಂಭಕರ್ಣರು! ಎಂದು ಕುಹಕಿಗಳು ನೀಡಿದ ವಾಕ್ಯದಲ್ಲಿರುವ ಒಂದೊಂದು ಪದಕ್ಕೂ ಒಂದೊಂದು ಪ್ರಶ್ನೆ ಸೃಷ್ಟಿಸಿ ಶ್ಲೋಕ ರಚಿಸಿದ ಕಾಳಿದಾಸ.

ರಾಜಕುವರಿ ವಿದ್ಯಾಧರೆಯ ವರಪರೀಕ್ಷೆಯ ಸಮಯದಲ್ಲೂ ನಿರಕ್ಷರಿ (ಕಾಳಿದಾಸ) ರಾವಣನ ಚಿತ್ರ ಕಂಡು "ರಾಭಣಾ" ಎಂದನಂತೆ. "ರಾಭಣಾ" ಇದಕ್ಕೆ ಅರ್ಥವೇನು ವಿವರಿಸಿ ಎಂದ ವಿಧ್ಯಾಧರೆಗೆ ಕುರುಬನನ್ನು ಕರೆತಂದ ಮಂತ್ರಿ- "ರಾವಣ ಸಹೋದರರಾದ ಕುಂಭಕರ್ಣ-ವಿಭೀಷಣರ ಹೆಸರಿನಲ್ಲಿ ಭ-ಕಾರ ಇದೆ. ಇವರೀರ್ವರ ಅಣ್ಣ ರಾವಣನಲ್ಲೊ ಭ-ಕಾರ ಇರಬೇಡವೇ? ಅದಕ್ಕೆ ರಾವಣ ಅಲ್ಲ ಅವನ ಹೆಸರು ರಾಭಣ ಎನ್ನುತ್ತಾರೆ ಈ ಪಂಡಿತರು ಎಂದು ಅರ್ಥೈಸಿದನಂತೆ. "ರಾಭಣಾರ್ಥ" ವಿವರಣೆ ಕೇಳಿ ಸಂತುಷ್ಟಗೊಂಡ ವಿದ್ಯಾಧರೆ ಈತ ಘನಪಂಡಿತನೇ ಸರಿ ಎಂದು ವರಿಸಿದಳು ಎಂಬುದು ದಂತ ಕಥೆ. ಅಂತೂ ಯಾರೋ ಹೇಳಿದ್ದು-ಇನ್ನ್ಯಾರೋ ಅರ್ಥೈಸಿದ್ದು-ದೊರೆತದ್ದು ರಾಜಕುವರಿ. "ರಾಭಣನ" ಮಹತ್ತೇ ಮಹತ್ತು. ಇಂತಹ ದಂಥಕಥೆಗಳ ಗಮ್ಮತ್ತೇ ಗಮ್ಮತ್ತು!

ರಾವಣ ಒಬ್ಬ ಮಹಾನ್ ಪಂಡಿತನಾಗಿದ್ದು, ಅನನ್ಯ ಶಿವಭಕ್ತ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಈ ರಾವಣನ ವಂಶಜರು ಇದ್ದದ್ದು ಶ್ರೀಲಂಕೆಯಲ್ಲಿ ಅಲ್ಲ ಭಾರತದ ಜೋಧ್‌ಪುರದಲ್ಲಿ ಎಂದು ಓದಿದಾಗ ಅಚ್ಚರಿಪಟ್ಟೆ. ನೂರಾರು ವರುಷಗಳ ಹಿಂದೆ ಶ್ರೀಲಂಕಾದಿಂದ ಜೋಧಪುರ, ಫಲೋಡಿ ಮತ್ತು ಗುಜರಾತಿನ ಇತರ ಭಾಗಗಳಿಗೆ ವಲಸೆ ಬಂದ ಗೋಧಾ ಮತ್ತು ಶ್ರೀಮಲ್ ಸಮುದಾಯದ ಕುಟುಂಬಗಳು ಜೋಧಪುರದ ಸುತ್ತಮುತ್ತ ವಾಸಿಸುತ್ತಿದ್ದು ತಮ್ಮನ್ನು ರಾವಣ ವಂಶಜರು ಎಂದು ಹೇಳಿಕೊಳ್ಳುತ್ತಾರೆ. ನಾಡಾದ್ಯಂತ ದಸರಾ ಸಂಭ್ರಮ ಆಚರಿಸಿದರೆ ಈ ಇಲ್ಲಿನ ಸುಮಾರು 100 ಕುಟುಂಬಗಳಿಗೆ ಶೋಕಾಚರಣೆ. ವಿಜಯದಶಮಿಯಂದು ರಾವಣ, ಕುಂಭಕರ್ಣ ಹಾಗೂ ಇಂದ್ರಜಿತು ಇವರುಗಳ ಪ್ರತಿಕೃತಿ ದಹನ ಹಾಗೂ ಉತ್ತರಕ್ರಿಯಾದಿಗಳು ಕೈಗೊಳ್ಳುತ್ತಾರೆ!

ಜೋಧ್‌ಪುರದ ಚಾಂದ್‌ಪೋಲ್ ಪ್ರದೇಶದಲ್ಲಿರುವ ಅಮರನಾಥ ಮಂದಿರದ ಆವರಣದಲ್ಲಿ ಶಿವನನ್ನು ಪೂಜಿಸುತ್ತಿರುವ ರಾವಣನ ವಿಗ್ರಹವಿರುವ ರಾವಣ ಮಂದಿರವೂ ಇದೆಯಂತೆ. ಉಜ್ಜಯನಿಯ ಚಿಖಾಲಿ ಎಂಬಲ್ಲಿ ರಾವಣನಿಗೆ ಅವಮಾನ ಮಾಡಿದರೆ ಇಡೀ ಹಳ್ಳಿಗೆ ಅಶುಭ ಶಕುನ ಎಂಬ ನಂಬಿಕೆಯಂತೆ. ಚೈತ್ರ ನವರಾತ್ರಿಯ ಸಂಪ್ರದಾಯದ ಪ್ರಕಾರ, 10ನೇ ದಿನ ದಶಮಿಯಂದು ಹಳ್ಳಿಗರು ಇಲ್ಲಿ ಪೂಜಿಸುವುದು ರಾವಣನನ್ನು. ಇದೇ ಅವಧಿಯಲ್ಲಿ ರಾವಣನ ಗೌರವಾರ್ಥ ಜಾತ್ರೆಯೊಂದೂ ನಡೆಯುತ್ತದೆ. ಆ ದಿನ ಜನರು ರಾಮ-ರಾವಣ ಯುದ್ಧದ ಪ್ರಹಸನವನ್ನೂ ಮಾಡುತ್ತಾರಂತೆ.

ಮಂದಿರದ ಅರ್ಚಕರ ಹೆಸರೂ ಬಾಬು ಭಾಯಿ ರಾವಣ್. ಹಳ್ಳಿಗೆ ಯಾವುದೇ ಸಮಸ್ಯೆ ಎದುರಾದಾಗ, ಜನರು ಆತನ ಬಳಿ ಬರುತ್ತಾರೆ. ಅವರು ಬೇಡಿಕೆ ಈಡೇರುವವರೆಗೂ ರಾವಣನ ವಿಗ್ರಹದೆದುರು ಉಪವಾಸ ವ್ರತ ಮಾಡಿದರೆ ತೊಂದರೆ ನಿವಾರಣೆ ಆಗುವುದೆಂದು ಹೇಳಿಕೆ. ಹಿಂದೊಮ್ಮೆ ನೀರಿನ ತೀವ್ರ ಕ್ಷಾಮ ಎದುರಿಸಿದ ಸಂದರ್ಭವೊಂದರಲ್ಲಿ ರಾವಣನಲ್ಲಿ ಪಾರ್ಥನೆಗೈದಾಗ ಪವಾಡಸದೃಶವೋ ಎಂಬಂತೆ ಮೂರೇ ದಿನಗಳಲ್ಲಿ ಆ ಪ್ರದೇಶದಲ್ಲಿ ಭರ್ಜರಿ ಮಳೆ ಸುರಿಯಿತಂತೆ.

ಭಾರತದೆಲ್ಲೆಡೆ ತ್ರೇತಾಯುಗದ ರಾಮ ದೇವನೆನಿಸಿಕೊಂಡು ಶಿಲೆಯಾಗಿ ಪೂಜೆಗೊಳ್ಳುತ್ತಿರುವಾಗ- ವೈರಿ, ಸಮಕಾಲೀನ ರಾವಣನಿಗೊಂದು ದೇಗುಲ, ಪೂಜೆ ಬೇಡವೇ? ಈ ಕಲಿಯುಗದೊಳು ತಮ್ಮೊಳಗೇ ರಾವಣ ಅವಗುಣಗಳನ್ನು ಹೊಂದಿರುವ ಜೀವಂತ ರಾಜಕಾರಣಿಗಳಿಗೆ, ಚಿತ್ರತಾರೆಯರಿಗೆ ದೇಗುಲ ಕಟ್ತಾರಂತೆ. ಹಾಗಿದ್ದಲ್ಲಿ ಮಹಾನ್ ಭಕ್ತ, ಪಂಡಿತ, ಜ್ಞಾನಿ, ವೀರ ಹಾಗೂ ಎಂದೋ ಮಡಿದ ರಾವಣನ ಪೂಜೆ ಮಾಡೋದ್ರಲ್ಲಿ ತಪ್ಪೇನಿದೆ ಬಿಡಿ.

ರಾವಣ, ರಾಭಣರ ಬಗ್ಗೆ ಬರೆದು, ರಾವಣ ಪಿಕ್ಚರ್ ಬಗ್ಗೆ ಹೇಳದಿದ್ದರೆ ಹೇಗೆ. ಬಲವಂತ ಮಾಘಸ್ನಾನ ಎಂಬಂತೆ ಅಂತೂ "ರಾವಣ" ನೋಡಿ ಬಂದೆ. ಮನದಲಿ ನಿಂದದ್ದು ರವಿ ಕಾಣದ್ದು ಕ್ಯಾಮರಾಮನ್ ಕಂಡ. ಹಸಿರು, ಬೆಟ್ಟ, ನದಿ, ಝರಿ, ಜಲಪಾತ, ಬೆಟ್ಟ, ಗುಡ್ಡದ ದೃಶ್ಯಗಳು ಮನಸೂರೆಗೊಂಡಂತೆ ನಟ ಗೋವಿಂದ(ಹನುಮ) ನಟನೆಯೂ ಮನದಲಿ ನಿಂದಿತು. ಅಯ್ಯೋ, "ರಾವಣಾನಾ" ಹೊಡಿ, ಬಡಿ, ಕುತ್ತು, ಕೊಲ್ಲು ಎಂಬ ರಾಗ ನನ್ನಂತೆ ನಿಮ್ಮ ಬಾಯಲ್ಲೂ ಹೊರಹೊಮ್ಮೋದು ಮಾತ್ರ ನಿಜ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more