ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದ ಪ್ರಸಿದ್ಧ ಸಿಂಹನೃತ್ಯ

By * ವಾಣಿ ರಾಮದಾಸ್, ಸಿಂಗಪುರ
|
Google Oneindia Kannada News

Famous lion dance in Singapore
ಡಂಗ್..ಟಕ್..ಡಂಗ್..ಟಕ್..ಶಬ್ದ ಕೇಳಿ ಬಂತು. ಮನೆಗೆ ಬಂದಿದ್ದ ಅತಿಥೇಯರು ಕಿಟಕಿಯಿಂದ ಬಗ್ಗಿ ನೋಡಿ ಏನಿದು ವ್ಯಾನ್‌ನಲ್ಲಿ ಡಂ..ಡಂ... ಮದುವೆಯೋ-ಮಸಣವೋ ಎಂದರು. ಎರಡೂ ಅಲ್ಲ, ಸಿಂಗಪುರದ ಸಿಂಹನೃತ್ಯದ ತಂಡವದು. ನಮ್ಮೂರಿನಲಿ ಡಂಗ್...ಟಕರ್....ಹುಲಿವೇಷ, ಇಲ್ಲಿ ಡಂ..ಟಕ್...ಸಿಂಹನೃತ್ಯ, ಎರಡಕ್ಕೂ ಬಹಳ ಸಾಮ್ಯತೆ ಇದೆ.

ಸಿಂಗಪುರದಲ್ಲೋ ಕಾಕಾ ಕಾಗೆಯ ಕೂಗು, ವಾಹನಗಳ ಪೀಂ...ಪೋಂ..ಕೇಳೋದು ಬಲು ಅಪರೂಪ. ಲಯನ್‌ಡಾನ್ಸ್ ತಂಡದ ವಾಹನ ಸಂಚರಿಸಿದಾಗ ಪೀಂ..ಪೋಂ.. ಹಾರ್ನ್ ಕೇಳಿಬರದಿದ್ದರೂ ಡಂ..ಟಕ್...ಡಂ..ಟಕ್ ಶಬ್ದ ಕೇಳುತ್ತೆ. ಯಾವುದೇ ಶುಭಕಾರ್ಯಕ್ಕೆ ಮೊದಲು ಲಯನ್‌ಡಾನ್ಸ್‌ಗೆ ಮೊದಲ ಆದ್ಯತೆ. ಚೀನಿಯರ ಹೊಸವರುಷ (ಜನವರಿ-ಫೆಬ್ರವರಿ) ತಿಂಗಳಿನಲಿ 15 ದಿನಗಳ ಕಾಲ ದಿನ ನಿತ್ಯ ಡಂಗ್..ಟಕ್.

ಇತಿಹಾಸ : ಈ ಲಯನ್ ಡಾನ್ಸಿಗೆ ಶತಮಾನಗಳ ಇತಿಹಾಸವಿದೆ. ಬೌದ್ದ ಸನ್ಯಾಸಿಗಳು ಭಾರತದಿಂದ ಶತಮಾನಗಳ ಹಿಂದೆ ಸಿಂಹದ ಪ್ರತಿಮೆಗಳನ್ನು ಭಾಗ್ಯರೂಪದ ಸಂಕೇತವಾಗಿ ಚೀನಕ್ಕೆ ಕೊಂಡೊಯ್ದರೆಂದು ಹೇಳುತ್ತಾರೆ. ಚೀನಿಯರ ದೇಗುಲಗಳು, ಹೋಟೆಲುಗಳು, ಅರಮನೆಗಳ ಮುಂದೆ ಫೂ (ಭಾಗ್ಯ) ಹಾಗೂ ರೊಯಿ-ಶಿಯಿ(ಶುಭಶಕುನ). ಇವೆರಡೂ ಸಿಂಹಗಳು ಶುಭಸಂಕೇತಗಳು. ಗಂಡುಸಿಂಹ ಕಾಲ್ಗೆಳಗೆ ಒಂದು ಚೆಂಡು(ಸ್ಥಿತಪ್ರಜ್ಞತೆ) ಹಾಗೂ ಸಿಂಹಿಣಿಯ ಕಾಲ್ಗೆಳಗೆ ಒಂದು ಸಣ್ಣಮರಿಯ(ಜೀವನ ಚಕ್ರ) ಪ್ರತಿಮೆಗಳನ್ನು ಕಾಣಬಹುದು. ಗಂಡು ಆ ನಿವೇಶನಕ್ಕೆ ಕಾವಲಾದರೆ, ಹೆಣ್ಣು ಅಲ್ಲಿನ ದುಷ್ಟ ಶಕ್ತಿಗಳನ್ನು ದೂರ ಅಟ್ಟುವುದೆಂದು ಚೀನಿಯರ ನಂಬಿಕೆ.

ಲಯನ್ ಡಾನ್ಸ್ ಮಾಡುವವರು ಬಟ್ಟೆಯಲ್ಲಿ ಸಿಂಹದ ಮುಖ ಹಾಗೂ ಮೈ ಹೊಲೆದು ಅದನ್ನು ಧರಿಸುತ್ತಾರೆ. ಇದಕ್ಕೆ ಈರ್ವರು ಪಾತ್ರಧಾರಿಗಳು ಬೇಕು. ಇವರು ಡ್ರಮ್ಮು, ತಾಳಕ್ಕೆ ತಕ್ಕಂತೆ ಸಿಂಹದ ನಡಿಗೆ, ತಲೆ ಆಡಿಸುವಿಕೆ, ಮಲಗಿ, ಕುಳಿತು, ವಿಶ್ರಾಂತಿ ಆಡಿ ಕಡೆಯಲ್ಲಿ ನಾಲಿಗೆ ಹೊರಚಾಚಿ ಹಾಂಗ್‌ಬಾವ್(ಗರಿ ಗರಿ ಸಮ ನೋಟುಗಳ ಕೆಂಪುಪೊಟ್ಟಣ) ಸ್ವೀಕರಿಸುತ್ತಾರೆ. ದಕ್ಷಿಣ ಪೂರ್ವ ಏಶಿಯಾದ ನಾಡುಗಳಲ್ಲಿ ಈ ಸಿಂಹನೃತ್ಯಕ್ಕೆ ತಮ್ಮದೇ ಆದ ಸಂಘವಿದೆ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆಯೂ ಏರ್ಪಡಿಸಲಾಗುತ್ತದೆ. ಹಲವರಿಗೆ ಹವ್ಯಾಸವಾದಲ್ಲಿ ಮತ್ತೆ ಕೆಲವರಿಗೆ ಉದರ ಪೋಷಣೆಯ ಮಾರ್ಗವೂ ಇದು.

ನಮ್ಮೂರ ಹುಲಿವೇಷ : ಲಯನ್ ಡಾನ್ಸ್ ನೋಡಿದಾಗ ಮೈಸೂರಿನ ದಸರಾ ಹಾಗೂ ಮೊಹರಂ ಹಬ್ಬಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಬರುತ್ತಿದ್ದ ಹುಲಿವೇಷದವರು ನೆನಪಗುತ್ತಾರೆ. ಚಿಕ್ಕಂದಿನಲ್ಲಿ "ಡಂಗ್ ಟಕರ್, ಡಂಟ್ ಟಕರ್" ಕೇಳಿದಾಕ್ಷಣ ಆಟ, ಊಟ, ಪಾಠ ಬಿಟ್ಟು ಶಬ್ದ ಬಂದ ಬೀದಿ/ಗಲ್ಲಿಯತ್ತ ಒಂದೇ ಓಟ. ಮೈಪೂರ ಹಳದಿ/ಕಪ್ಪು ಬಣ್ಣದ ಪೇಯಿಂಟ್ ಬಳಿದು ಮುಖಕ್ಕೆ ಹುಲಿಯ ಮುಖವಾಡ ಹಾಕಿದವರ ಕಂಡಾಗ ಹುಲಿಯನ್ನು ಕಂಡಷ್ಟೇ ಕುತೂಹಲ. ಅವರುಗಳು ಸಾಂಪ್ರದಾಯಿಕವಾಗಿ ಹೆಜ್ಜೆ ಹಾಕುತ್ತಾ ಕುಣಿಯುತ್ತಿದ್ದುದನ್ನು ಕಣ್-ಕಣ್ ಬಾಯ್-ಬಾಯ್ಬಿಟ್ಟು ನೋಡುತ್ತಿದ್ದೆವು. ಅವರು ಹತ್ತಿರ ಬಂದರೆ ಹುಲಿಯನ್ನು ಕಂಡಂತೆ ಓಡುವುದು, ಆ ಬಾಲ, ಅವರ ಮೈ ಬೆರಳಂಚಿನ ತುದಿಯಲಿ ಮುಟ್ಟುವುದು, ಹತ್ತಿರ ಬಂದಲ್ಲಿ ಓಡಿ ಹೋಗುವುದು. ಅರಿಯದ ಕುತೂಹಲದ ದಿನಗಳವು. ಆ ಆಟ ನಡೆಯುತ್ತಿದ್ದು ಹತ್ತೇ ನಿಮಿಷ. ಹಣ ಪಡೆದು ಮತ್ತೊಂದು ಗಲ್ಲಿಗೆ ಹೋಗುತ್ತಿದ್ದರು. ಅವರ ಹಿಂದೆ ಮಕ್ಕಳ ಸೈನ್ಯವೇ ಇರುತ್ತಿತ್ತು. ಒಮ್ಮೆ ನಾನು-ನನ್ನಕ್ಕ ಹುಲಿವೇಷದವರ ಹಿಂದೆ ಗಲ್ಲಿ, ಗಲ್ಲಿ ಅಲೆದು ಸಂಜೆ ಮರಳಿ ಮನೆಗೆ ಬಂದಾಗ "ಹುಲಿಯಾಗಿದ್ದಳು ನನ್ನಮ್ಮ". ಅಬ್ಬಾ ಅಂದು ನನ್ನಮ್ಮನ ಹುಲಿವೇಷ ನೋಡಿ ಮತ್ತೆಂದೂ ಹುಲಿವೇಷ ನೋಡುವ ಗೋಜಿಗೆ ಹೋಗಲೇ ಇಲ್ಲ! ಇಂದು ಆ ನೆನಪು ಮಧುರ-ಯಾತನೆ.

ಹುಲಿವೇಷದವರು ಮುಖಕ್ಕೆ ಹುಲಿಯ ಮುಖವಾಡ, ಚಡ್ಡಿ, ಮೈಪೂರ ಹಳದಿ ಹಾಗೂ ಕಪ್ಪು ಪಟ್ಟೆಯ ಪೆಯಿಂಟ್, ಕೆಲವೊಮ್ಮೆ ಚಿರತೆಯ ಬೊಟ್ಟು, ಬಟ್ಟೆಯಲಿ ಸುತ್ತಿದ ದಪ್ಪನೆಯ ಬಾಲ, ಒಂದು ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ. ಕುಣಿತದಲಿ ಡೋಲಿನ ನಾದಕ್ಕೆ ತಕ್ಕಂತೆ ಕುಣಿತ. ಅದಕ್ಕೇ ಆದ ಹಿಮ್ಮೇಳ. ಲಾಗ ಹಾಕುವುದು, ತುಪ್ಪಳ ಅಥವಾ ಬಟ್ಟೆಯಿಂದ ಮಾಡಿದ್ದ ಕುರಿ, ಆಡಿನ ಮುಖವನ್ನು ಹಲ್ಲಿನಲ್ಲಿ ಕಚ್ಚಿ ಆಡಿಸುವುದು, ಕೆಲವೊಮ್ಮೆ ಗೋವಿನ ಹಾಡಿನ ರೂಪಕ ಆಡುತ್ತಿದ್ದರು. ದೊಂಬರಾಟದವರೊಡಗೂಡಿ ಕೆಲವೊಮ್ಮೆ ಬರುತ್ತಿದ್ದರು. ಅದೇನೋ ಕೌತುಕ, ಅದೆಷ್ಟು ಬಾರಿ ನೋಡಿದರೂ ಮತ್ತೆ ಓಡುತ್ತಿದ್ದೆವು.

ಎಲ್ಲೆಲ್ಲಿ ಏನಂತಾರೆ? : ವ್ಯಾಘ್ರಗಳು ಶಕ್ತಿ ದೇವತೆಯ ವಾಹನ ಅವುಗಳಿಗೆ ನಮನ ಸಲ್ಲಿಸುವುದಕ್ಕಾಗೇ ದಸರೆಯಲಿ ಹುಲಿವೇಷ ಹಾಕುವುದು ಕೂಡ ಅವುಗಳಿಗೆ "ನಮನ"ದ ಸಂಕೇತ. ಅಂದಿನ ದಿನಗಳಲ್ಲಿ ಜಾತಿ ಭೇದವಿಲ್ಲದೆ ಹುಲಿವೇಷದ ಹರಕೆಯೂ ಇದ್ದಿತ್ತು. ಹುಲಿವೇಷ, ಪಿಲಿವೇಷಕ್ಕೆ ಮುಖ್ಯವಾಗಿ ತುಳುನಾಡಿನಲಿ ಬಲು ಪ್ರಾಮುಖ್ಯತೆ. ವ್ಯಾಘ್ರ ದುರ್ಗೆಯ ವಾಹನವಾದರೆ, ಅದರ ಚರ್ಮಧಾರಿ ಶಿವ ವ್ಯಾಘ್ರಂಭರನಾದ. ಪುಲಿಕಳಿ (ಹುಲಿವೇಷ) ಇಲ್ಲಿನ ಸಾಂಪ್ರದಾಯಿಕ ಕಲೆ. ಆಂಧ್ರ-ಪುಲಿವೇಷಂ, ಮಹಾರಾಷ್ಟ್ರ-ವಾಘ್‌ಸರಸ್, ಒರಿಸ್ಸಾ-ಭಾಗ್‌ನೃತ್ಯ, ಪುಲಿಕಳಿ-ಕೇರಳಗಳಲ್ಲಿ ಬರುತ್ತಿದ್ದ ಹುಲಿವೇಷ ಈಗ ಉತ್ಸವ ಮತ್ತು ಸಮಾರಂಭಗಳಿಗೆ ಮಾತ್ರ ಮೀಸಲಾಗಿದ್ದು ಮೆರುಗನ್ನು ನೀಡುತ್ತಿದೆ.

ರಾಜಸ್ಥಾನದ ಭಾಗೇಲ್ ಹಾಗೂ ಬೈಗೇಸ್ ಎಂಬ ಕಾಡುಜನರ ದೇವರು ವ್ಯಾಘ್ರೋದೇವ್. ಪಶ್ಚಿಮ ಬಂಗಾಳದ ಸುಂದರಬನದ ಕಾಡಿಗರಿಗೂ ವಾಘ್ ವನರಾಜ್ ದೇವರು. ಹಾಗೆಯೇ ಬಿಹಾರದ ಹೋಶೇನ್‌ಗಾಬಾದಿನ ಕುರ್ಕು ಪಂಗಡಿಗರೂ ಕೂಡ ಈ ಹುಲಿರಾಯನ ಒಕ್ಕಲು. ನೇಪಾಳಿಯರೂ ಹಿಂದೆ ಬಿದ್ದಿಲ್ಲ. ಅಲ್ಲಿ ಹುಲಿವೇಷ ಹಾಕಿದವರ ವಾಘ್ ಜಾತ್ರೆ ನಡೆಯುವುದಂತೆ. ಕಲ್ಲನಾಗರ ಕಂಡರೆ ಎಂಬಂತೆ ವಾಘ್(ಹುಲಿ)ಜಾತ್ರೆಯಲಿ ನೈಜ ನೋಡಿ ಭಾಗ್ (ಓಡು) ಜಾತ್ರೆ ಆದೀತು. ಥೈಲಾಂಡಿನ ಬ್ಯಾಂಕಾಕ್ ಮತ್ತು ಕಾಂಚನಪುರಿಯ ಬೌದ್ಧ ದೇಗುಲಗಳಲ್ಲಿ ಹುಲಿರಾಯ ಹಸುವಾಗಿದ್ದಾನೆ!

ಬಂದನಾ ಹುಲಿರಾಯನು...: ಈ ಹುಲಿರಾಯನ ಸಂತತಿ ಇದೀಗ ಕ್ಷೀಣಿಸುತ್ತಿದೆ. ನಾವೀಗ ಹುಲಿವೇಷ ನೋಡಿದೀವಿ ಎಂದು ಹೇಳುವಂತೆ ನಿಜವಾಗ್ಲೂ ನಾನು ಹುಲಿ ನೋಡಿದೀನಿ ಎಂದು ನಾವು ಮೊಮ್ಮಕ್ಕಳಿಗೆ ಹೇಳುವ ಕಾಲ ದೂರವೇನಿಲ್ಲ! ಅಂದು ನಮಗೆ ಮನರಂಜನೆ ಹಾಗು ಹಲವರಿಗೆ ಉದರಪೋಷಣೆಯ ಮಾರ್ಗವಾಗಿದ್ದ ಮರಕುಣಿತ, ಕರಡಿ ಕುಣಿತ, ಹುಲಿವೇಷ, ದೊಂಬರಾಟ ಹೀಗೆ ಇನ್ನೂ ಅನೇಕ ಕಲೆಗಳು ಕಾಲದ ಮಾರ್ಪಾಡಿನಲ್ಲಿ, ಆಧುನಿಕತೆಯ ಸೋಗಿನಲ್ಲಿ ಪ್ರೋತ್ಸಾಹ, ಪೋಷಣೆಗಳಿಲ್ಲದೆ ಮುಳುಗಿ ಹೋಗಿದೆ ಎಂಬುದಂತೂ ಕಟುಸತ್ಯ.. ಹೌದು ತಾನೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X